ಬೆಂಗಳೂರು, ಫೆ ೦9: ಹಿಜಾಬ್ ವಿಚಾರಣೆ ವಿಸ್ತ್ರತ ಪೀಠಕ್ಕೆ ವರ್ಗಾವಣೆ ಹಾಗು ರಾಷ್ಟ್ರಧ್ವಜದ ವಿಚಾರವಾಗಿ ಕೂಡ ಮಾತನ್ನಾಡುತ್ತ, ಹಿಜಾಬ್ ಪ್ರಕರಣವನ್ನು ಸರಕಾರ ಸರಿಯಾಗಿ ನಿಭಾಯಿಸಿದ್ದಿದ್ದರೆ ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ದ್ವೇಷದ ಮಟ್ಟಕ್ಕೆ ಹೋಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಹಿಜಾಬ್ ವಿವಾದದ ವಿಚಾರಣೆ ವಿಸ್ತ್ರತ ಪೀಠಕ್ಕೆ ವರ್ಗಾವಣೆಯಾದ ವಿಚಾರಕ್ಕೆ ಸಂಬ0ಧಿಸಿದ0ತೆ ಅವರು ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದರು.
ನಿನ್ನೆಯಿಂದ ನಡೆದ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಪ್ರಕರಣವನ್ನು ವಿಸ್ತ್ರತ ನ್ಯಾಯಪೀಠಕ್ಕೆ ವರ್ಗಾವಣೆ ಮಾಡಿದ್ದಾರೆ. ಅದನ್ನು ಪಕ್ಕಕ್ಕಿಟ್ಟು ನೋಡಿದರೆ ಎಲ್ಲೆಡೆಗೂ ವಿವಾದ ಹಬ್ಬಿ ಉದ್ವಿಗ್ನತೆ ಉಂಟಾದ ಮೇಲೆ ಈಗ ಸರಕಾರ ಶಾಲೆ ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಣೆ ಮಾಡಿದೆ. ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರೆ ಏನು ಪ್ರಯೋಜನ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದರು.
ಆರಂಭದಲ್ಲಿಯೇ ಸರ್ಕಾರವು ಹಿಜಾಬ್ ವಿವಾದವನ್ನು ಸೂಕ್ಷ್ಮವಾಗಿ ಗಮನಿಸಿ ಹತ್ತಿಕ್ಕಬೇಕಿತ್ತು, ತಕ್ಷಣ ಎಚ್ಚೆತ್ತುಕೊಳ್ಳಬೇಕಿತ್ತು. ಹಾಗೆ ಮಾಡಿದ್ದಿದ್ದರೆ ವಿವಾದ ಇಷ್ಟೊಂದು ತೀವ್ರವಾಗಿ ಬೆಳೆಯುತ್ತಿರಲಿಲ್ಲ ಎಂದು ಅವರು ಹೇಳಿದರು.
ಈ ಬೆಳವಣಿಗೆಯ ಹಿಂದೆ ಹಿಂದೂ, ಮುಸ್ಲಿಂ ಎರಡೂ ಸಂಘಟನೆಗಳಿವೆ ಎಂಬ ಮಾಹಿತಿ ಇದೆ. ಸಮಾಜದಲ್ಲಿ ದ್ವೇಷ ಭಾವನೆ ಹುಟ್ಟಲು ಕಾರಣವಾಯಿತು. ಈಗ ವಿಸ್ತ್ರತ ಪೀಠ ತೀರ್ಪು ಕೊಡಲು ಕಾಲಾವಕಾಶ ಆಗಬಹುದು. ಹೀಗಾಗಿ ಸರಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ನಾವೆಲ್ಲರೂ ಕೂಡಿ ಬದುಕಬೇಕಿದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ದಿಕ್ಕು ತಪ್ಪಿಸಬಾರದು. ಶಿವಮೊಗ್ಗದಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಕೆಳಗಿಳಿಸಿದ ಕ್ರಮ ಸರಿಯಲ್ಲ. ನಮ್ಮನ್ನು ಒಗ್ಗೂಡಿಸಿರುವುದು ರಾಷ್ಟ್ರಧ್ವಜ ಎಂಬುದನ್ನು ಯಾರೂ ಮರೆಯಬಾರದು. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಂತ ರೀತಿಯಲ್ಲಿ ಮಕ್ಕಳನ್ನು ಪ್ರಚೋದಿಸಿದ್ದು ಕ್ಷಮಾರ್ಹವಲ್ಲ. ರಾಷ್ಟ್ರಧ್ವಜ ನಾಶ ಮಾಡುವುದು ಎಂದರೆ ದೇಶವನ್ನೇ ನಾಶ ಮಾಡಿದಂತೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
Varthajala Daily, Bengaluru
Contact for advertisements 9448119247
0 Comments