ದ ಕ, ಫೆ 12: ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಸಂಗ್ರಹಣೆ ಮಾಡುವ ಒಕ್ಕೂಟಗಳಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು ಹಾಲು ಒಕ್ಕೂಟವು ಕಳೆದ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ನಿರಂತರ ನಷ್ಟ ಅನುಭವಿಸುತ್ತಾ ಬಂದಿದ್ದು, ಅಕ್ಟೋಬರ್‌ನಿಂದೀಚೆಗೆ ಸುಧಾರಿಸಿಕೊಳ್ಳುತ್ತಿದೆ. ಆದರೆ ಈಗಲೂ ಬೆಂಗಳೂರು ಒಕ್ಕೂಟ 58.34 ಕೋಟಿ ರೂ. ನಿವ್ವಳ ನಷ್ಟದಲ್ಲಿದೆ. ಕೋಲಾರ ಹಾಲು ಒಕ್ಕೂಟವೂ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ನಷ್ಟ ಅನುಭವಿಸಿದ್ದು, ಪ್ರಸ್ತುತ 21.65 ಕೋಟಿ ರೂ. ನಷ್ಟದಲ್ಲಿದ್ದರೆ, ಮಂಡ್ಯ ಹಾಲು ಒಕ್ಕೂಟ 31.81 ಕೋಟಿ ರೂ. ನಷ್ಟದಲ್ಲಿದೆ.
ದೇಶದ ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕದ ಹೈನುಗಾರರು ಸಂಕಷ್ಟಕ್ಕೆ ಸಿಲುಕುವ ಆತಂಕ ಸೃಷ್ಟಿಯಾಗಿದೆ. ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ಸರಕಾರ ಜಾರಿ ಮಾಡಿದ ಲಾಕ್‌ಡೌನ್, ವಾರಾಂತ್ಯದ ಕರ್ಫ್ಯೂ, ಹಾಲು ಒಕ್ಕೂಟಗಳಲ್ಲಿ ವ್ಯವಸ್ಥಿತ ನಿರ್ವಹಣೆಯ ಲೋಪದಿಂದಾಗಿ ರಾಜ್ಯದ 14 ಹಾಲು ಒಕ್ಕೂಟಗಳ ಪೈಕಿ 9 ಒಕ್ಕೂಟಗಳು ನಷ್ಟದಲ್ಲಿದ್ದರೂ, ದಕ್ಷಿಣ ಕನ್ನಡ ಹಾಲು ಒಕ್ಕೂಟ ಲಾಭದಲ್ಲಿದೆ.
ಮೈಸೂರು ಹಾಲು ಒಕ್ಕೂಟವು 5.30 ಕೋಟಿ ರೂ. ನಷ್ಟ ಅನುಭವಿಸಿದ್ದರೆ, ತುಮಕೂರು ಒಕ್ಕೂಟ 10.11 ಕೋಟಿ ರೂ., ಶಿವಮೊಗ್ಗ ಒಕ್ಕೂಟ 9.70 ಕೋಟಿ ರೂ. ನಷ್ಟ ಅನುಭವಿಸಿದೆ. ಹೀಗೆ 10 ಹಾಲು ಒಕ್ಕೂಟಗಳು ನಷ್ಟದಲ್ಲಿ ಸಾಗಿವೆ.
ದ.ಕ.: 2.38 ಕೋಟಿ ಲಾಭ
ಬಹುಪಾಲು ಒಕ್ಕೂಟಗಳು ನಷ್ಟದಲ್ಲಿ ಸಾಗಿದ್ದರೆ ಐದು ಒಕ್ಕೂಟಗಳು 2-3 ತಿಂಗಳು ನಷ್ಟಕ್ಕೆ ಸಿಲುಕಿದರೂ ಅನಂತರ ಸುಧಾರಿಸಿಕೊಂಡು ಲಾಭದ ಹಾದಿಗೆ ಮರಳಿವೆ. ದಕ್ಷಿಣ ಕನ್ನಡ ಹಾಲು ಒಕ್ಕೂಟ 2.38 ಕೋಟಿ ರೂ. ಲಾಭದಲ್ಲಿದ್ದರೆ, ಕಲಬುರಗಿ ಹಾಲು ಒಕ್ಕೂಟ 2.05 ಕೋಟಿ ರೂ., ಧಾರವಾಡ – 1.02 ಕೋಟಿ ರೂ., ಹಾಸನ ಹಾಲು ಒಕ್ಕೂಟ 87 ಲಕ್ಷ ರೂ, ಬೆಳಗಾವಿ ಹಾಲು ಒಕ್ಕೂಟವು 31.47 ಲಕ್ಷ ರೂ. ಲಾಭದಲ್ಲಿವೆ.
0 Comments