ಮಧುಗಿರಿ : ಇತಿಹಾಸ ತೆರೆದು ನೋಡಿದರೆ ದೇಶದಲ್ಲಿ ಅನೇಕ ಅಣೆಕಟ್ಟುಗಳನ್ನು ಕಟ್ಟುವುದರ ಮೂಲಕ ರೈತರ ಹಿತ ಕಾಪಾಡಿದ್ದು ಕಾಂಗ್ರೇಸ್ ಪಕ್ಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಧುಗಿರಿಯ ಪಟ್ಟಣದ ಎಂ.ಎನ್.ಕೆ ಸಮುಧಾಯ ಭವನದಲ್ಲಿ ಬುಧವಾರ ಮಧುಗಿರಿ ಉಪವಿಭಾಗ ಮಟ್ಟದ ಮೇಕೆದಾಟು ಪಾದಯಾತ್ರೆ, ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಸದಸ್ಯತ್ವ ನೊಂದಣಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವತಂತ್ರ್ಯ ಬಂದ ನಂತರ ದೇಶದಲ್ಲಿ ನೀರಾವರಿ ವಿಚಾರವಾಗಿ ಅನೇಕ ಕ್ರಮಗಳನ್ನು ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಆದರೆ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷ ಏನನ್ನೂ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಮೇಕೆದಾಟು ಯೋಜನೆಯ ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕಾರ್ಯಕರ್ತನೂ ಇತಿಹಾಸದ ಪುಟ ಸೇರಲಿದ್ದಾನೆ ಎಂದರು, ತುಮಕೂರು ಜಿಲ್ಲೆಯಿಂದ ಕನಿಷ್ಠ 20 ಸಾವಿರ ಜನ ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗವಹಿಸಬೇಕು. ಮೇಕೆದಾಟು ಕೇವಲ ಪಕ್ಷಕ್ಕೆ ಸೀಮಿತವಾಗಿಲ್ಲ. ಇದರಿಂದ ರಾಜ್ಯದ ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೆ ಅನುಕೂಲವಾಗಲಿದ್ದು, 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ ಎಂದರು.
ಸದಸ್ಯತ್ವ ನೊಂದಣಿ ಪಕ್ಷದ ಆಧಾರ ಸ್ಪಂಭವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅಡಿಪಾಯ ಹಾಕಲು ಸಹಕಾರಿಯಾಗಿದೆ. ಮಧುಗಿರಿ ಉಪವಿಭಾಗದ ಪ್ರತೀ ತಾಲೂಕಿನಿಂದ ತಲಾ 70 ಸಾವಿರ ಸದಸ್ಯತ್ವ ನೊಂದಣಿ ಮಾಡಿಸಿದಲ್ಲಿ 4 ತಾಲೂಕುಗಳಲ್ಲಿ ಕಾಂಗ್ರೆಸ್ ಭಾವುಟ ಹಾರಿಸಬಹುದು. ನಾನು ಇಂದನ ಸಚಿವನಾಗಿದ್ದಾಗ ಮಧುಗಿರಿ ಉಪವಿಭಾಗದ ಪಾವಗಡ ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಂಡಿದ್ದು, ಇಡೀ ದೇಶದ ಗಮನ ಸೆಳೆದಿತ್ತು.
ಇದರಿಂದ ರೈತರಿಗೆ ವರ್ಷಕ್ಕೆ 25 ಸಾವಿರ ಆದಾಯ ಬರುವಂತೆ ಮಾಡಿದ್ದು, ಈ ಭಾಗದ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದರು.
ಮಾಜಿ ಡಿಸಿಎಂ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಜನರು ನೆಲೆಸಿದ್ದು, ಬೆಂಗಳೂರು ನಮ್ಮದು. ಇಂತಹ ಜನತೆಗೆ ನೀರು ನೀಡುವುದು ನಮ್ಮಲ್ಲೆರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಅನಿವಾರ್ಯ. ಬೆಂಗಳೂರಿನ ಜನತೆಗೆ 23 ಟಿಎಂಸಿ ನೀರು ನೀಡಬೇಕು ಎಂಬ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಅಷ್ಟರಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋದ ಹಿನ್ನೆಲೆಯಲ್ಲಿ ಮೇಕೆ ದಾಟು ಯೋಜನೆ ನೆನೆಗುದಿಗೆ ಬಿದ್ದಿತು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಪಾದ ಯಾತ್ರೆ ಇಡೀ ದೇಶದ ಗಮನ ಸೆಳೆದಿತ್ತು. ಆದರೆ ಬಿಜೆಪಿ ಸರ್ಕಾರ ಕರೋನಾ ನೆಪವೊಡ್ಡಿ ಪಾದಯಾತ್ರೆ ಗೆ ತಡೆಯೊಡ್ಡಲು ಪ್ರಯತ್ನಿಸಿತ್ತು.
ಆದರೆ ಜನತೆಯ ಹಿತದೃಷ್ಟಿಯಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ತಾತ್ಕಾಲಿಕವಾಗಿ ತಡೆ ನೀಡಿದ್ದು, ಫೆ.27 ರಂದು ಮತ್ತೆ ಪಾದಯಾತ್ರೆ ಗೆ ಚಾಲನೆ ನೀಡುತ್ತಿದ್ದು, ಜಿಲ್ಲೆಯಿಂದ ಸುಮಾರು 10 ಸಾವಿರ ಜನ ಪಾದ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಮಧುಗಿರಿ ಉಪವಿಭಾಗದ ಜನ ಸಹೃದಯಿಗಳು ಉಪವಿಭಾಗದ ಶಿರಾ, ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕುಗಳು ಬರಪೀಡಿತ ಪ್ರದೇಶವಾಗಿದ್ದು, ಈ ಭಾಗದಲ್ಲಿ ಹೆಚ್ಚು ಬಡವರಿದ್ದಾರೆ. ಆದರೆ ಈ ಭಾಗದ ಜನ ಅತ್ಯಂತ ಸಹೃದಯಿಗಳಾಗಿದ್ದು, ಪ್ರಾಮಾಣಿಕರಾಗಿದ್ದಾರೆ. ಒಮ್ಮೆ ಮಾತು ಕೊಟ್ಟರೆ ಬದಲಾಯಿಸುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಧುಗಿರಿ ಯಲ್ಲಿ ರಾಜಣ್ಣ ಭದ್ರಕೋಟೆ ನಿರ್ಮಿಸಿಕೊಂಡಿದ್ದು, ಅವರಿಗೆ ಸಮಸ್ಯೆಯೇ ಇಲ್ಲ. ಮುಂಬರುವ ಚುನಾವಣೆಯಲ್ಲಿ ಮಧುಗಿರಿಯಿಂದ ನಿಲ್ಲುವುದೂ ಅವರೇ ಗೆಲ್ಲುವುದೂ ಅವರೇ ಎಂದರು.
ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, 2023 ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 11 ರಲ್ಲಿ 9 ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿಷ್ಠಾಪನೆ ಮಾಡುವುದು ನಮ್ಮ ಗುರಿ. ಆದರೆ ಚುನಾವಣೆ ಸಂದರ್ಭದಲ್ಲಿ ನಾನು ಮುಖಂಡ ಎಂದು ಹೇಳಿಕೊಂಡು ಕೆಲ ಡೊಂಗಿಗಳು ಬರುತ್ತಾರೆ. ಅಂತಹ ವಿಷದ ಚೇಳುಗಳನ್ನು ದೂರವಿಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದರು.
ಶಿರಾ ಕ್ಷೇತ್ರದ ಬಗ್ಗೆ ಈಗಾಗಲೇ ಅಧ್ಯಕ್ಷರು ಮತ್ತು ಸಿದ್ದರಾಮಯ್ಯನವರು ಸಭೆ ಸೇರಿ ಸಮರ್ಪಕ ತೀರ್ಮಾನಕ್ಕೆ ಬಂದಿದ್ದು, ಟಿ.ಬಿ.ಜಯಚಂದ್ರ ಅವರೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ.ಬಿ.ಜಯಚಂದ್ರ, ಶಾಸಕ ವೆಂಕಟರವಣಪ್ಪ, ಮಾಜಿ ಸಂಸದ ಚಂದ್ರಪ್ಪ, ಕೆಪಿಸಿಸಿ ಕಾರ್ಯಧ್ಯಕ್ಷ ಸಲಿಂ ಅಹಮದ್, ಜಿ.ಪಂ ಮಾಜಿ ಸದಸ್ಯರಾದ ಕೆಂಚಮಾರಯ್ಯ, ಜಿ.ಜೆ. ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಜಿ.ಎನ್.ಮೂರ್ತಿ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ರಾಜ್ಯ ಸಹಕಾರ ಮಹಾ ಮಂಡಲ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ನಂಜುಂಡಯ್ಯ, ಕೆ.ಪ್ರಕಾಶ್, ಎಂ.ವಿ.ಗೋವಿಂದರಾಜು, ಮಹಮ್ಮದ್ ಅಯುಬ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷೆ ಇಂದಿರದೇನಾನಾಯ್ಕ, ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಸುವರ್ಣಮ್ಮ, ಪುರಸಭೆ ಸದಸ್ಯರಾದ ಎಂ.ಎಸ್. ಚಂದ್ರಶೇಖರ್, ಮಂಜುನಾಥ್ ಆಚಾರ್, ಪಿ.ಸಿ. ಕೃಷ್ಣ ರೆಡ್ಡಿ, ಮಧುಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಜಗೋಪಾಲ್, ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷ ಶಶಿಹುಲೀಕುಂಟೆ, ತಾಲೂಕು ಅಧ್ಯಕ್ಷ ಎಸ್.ಡಿ.ವೆಂಕಟೇಶ್ ಸೇರಿದಂತೆ ಪಾವಗಡ, ಸಿರಾ, ಕೊರಟಗೆರೆ ತಾಲೂಕುಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ಪದಾದಿಕಾರಿಗಳು ಇದ್ದರು.
ವರದಿ: ನಾಗೇಶ್ ಜೀವಾ ಮಧುಗಿರಿ
0 Comments