ಮಧುಗಿರಿ - ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದೆ ಕಲಾಪ ವ್ಯರ್ಥ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ತಿಳಿಸಿದರು.
ಪಟ್ಟಣದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 5 ದಿನಗಳಿಂದ ವಿಧಾನ ಮಂಡಲ ಅಧಿವೇಶನವನ್ನು ನಡೆಸಲು ಬಿಡದೆ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ರಾಜ್ಯದ ಜನತೆಗೆ ಬೇಸರವಾಗಿದ್ದು, ಮುಂದಿನ ಚುನಾವಣೆಗೆ ಯಾವುದೇ ಪ್ರಸ್ತಾಪವಿಲ್ಲದೆ ಈಶ್ವರಪ್ಪನವರ ವಿಷಯವನ್ನು ಮುಂದಿಟ್ಟುಕೊಂಡು ಕಲಾಪ ನಡೆಯಲು ಬಿಡುತ್ತಿಲ್ಲ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿ ಅವರು ಉತ್ತಮ ಆಡಳಿತ ನೀಡುತ್ತಿದ್ದು, ಇದನ್ನು ಸಹಿಸದೆ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ 3 ಗುಂಪಾಗಿದೆ. ಜಿಲ್ಲೆಯಲ್ಲೂ ಕೂಡ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಹಾಗೂ ಟಿ.ಬಿ.ಜಯಚಂದ್ರ ರವರ ಗುಂಪುಗಳು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದು, ಜಿಲ್ಲೆಯಲ್ಲಿ ಈ ಬಾರಿ 8ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಪಕ್ಷ ವಶಪಡಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ಅದೇಶದಂತೆ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವುದು ಖಡ್ಡಾಯವಾಗಿದ್ದು, ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಭಾಗಬೇಕು. ನಮ್ಮ ಪಕ್ಷ ಯಾವುದೇ ಧರ್ಮದ ವಿರುದ್ದ ಇಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ನಮ್ಮ ರಾಜ್ಯ ಭಾವೈಕ್ಯತೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ಶಾಂತಿ ಕದಡಲು ಕಾಂಗ್ರೆಸ್ ವಿಷ ಬೀಜ ಬಿತ್ತುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡುತ್ತಿದೆ ಎಂದರು.
ಹಿಂದೂ ಪರ ಹೋರಾಟಗಾರ ಹರ್ಷ ಅವರ ಹತ್ಯೆ ಖಂಡನೀಯ. ಅವರ ಆತ್ಮಕ್ಕೆ ಶಾಂತಿ ಕೋರಿ ಪಂಜಿನ ಮೆರವಣಿಗೆ ನಡೆಸಲಾಗವುದು ಎಂದರು.
ಮೇಕೆದಾಟು ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷದವರಿಗೆ ಕಾಳಜಿ ಇದ್ದಿದ್ದರೆ ಸಿದ್ದರಾಮಯ್ಯನವರ 5 ವರ್ಷದ ಆಡಳಿತದಲ್ಲಿ ಅಥವಾ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದ ಕಾಲದಲ್ಲಿ ಜಾರಿಗೊಳಿಸಬಹುದಾಗಿತ್ತು. ಆದರೆ ಇದೀಗ ಜನರ ದಿಕ್ಕು ತಪ್ಪಿಸಲು ಪಾದಯಾತ್ರೆ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ತಿಮ್ಮಜ್ಜ, ಪಾವಗಡ ರವಿ, ಜಯಣ್ಣ, ಮಧುಗಿರಿ ಮಂಡಲದ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ, ಜಿಲ್ಲಾ ಕಾರ್ಯದರ್ಶಿ ಸುರೇಶ್, ಯುವ ಮೊರ್ಚಾ ಜಿಲ್ಲಾಧ್ಯಕ್ಷ ಮಾಲಿ ಭರತ್, ಪದಾಧಿಕಾರಿಗಳಾದ ಆದಿಶೇಷ ಗುಪ್ತ, ಕೊತ್ತೂರು ಹನುಮಂತರಾಯಪ್ಪ, ರವಿ, ಶ್ರೀನಿವಾಸ್, ಶಿವಣ್ಣ, ಮಂಜುನಾಥ್ ಹಾಗೂ ಮುಂತಾದವರಿದ್ದರು.
ವರದಿ: ನಾಗೇಶ್ ಜೀವಾ ಮಧುಗಿರಿ
0 Comments