ಚಿತ್ರದುರ್ಗ, ಡಿಸೆಂಬರ್ 18: ಸರ್ಕಾರ ನಿರ್ಗತಿಕರಿಗೆ, ಬಡವರಿಗೆ, ಆಶ್ರಯ ಇಲ್ಲದವರಿಗೆ, ಆಶ್ರಯ ಕಲ್ಪಿಸಲು ಕೋಟ್ಯಂತರ ಹಣ ಮೀಸಲಿಡುತ್ತದೆ. ಆದರೆ ಅಧಿಕಾರಿಗಳ ಹಾಗು ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ನಿಜವಾದ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿಲ್ಲ, ಅದೆಲ್ಲ ನೆಪಮಾತ್ರಕ್ಕೆ ಅನ್ನಬಹುದು.
ನಾಲ್ಕು ವರ್ಷ ಕಳೆದರೂ ಸ್ಲಂ ಬೋರ್ಡ್ ಫಲಾನುಭವಿಗಳ ಜೋಪಡಿಯ ಕನಸು. ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ೪೦೦ಕ್ಕೂ ಹೆಚ್ಚು ಜನರಿಂದ ಇಷ್ಟು ಹಣ ಕಟ್ಟಿದರೆ ನಾವು ಉಳಿದ ಸರ್ಕಾರದ ಹಣ ಸೇರಿಸಿ ಮನೆ ಕಟ್ಟಿ ಕೊಡಲಾಗುತ್ತದೆ ಎಂದ ಅಧಿಕಾರಿಗಳು.
ನಾಲ್ಕು ವರ್ಷ ಕಳೆದರೂ ಯೋಗ್ಯ ಮನೆಯಿಲ್ಲ: ೨೦೧೮ರಲ್ಲಿ ಹಿರಿಯೂರು ನಗರದ ವಿವಿಧ ಭಾಗಗಳ ಸ್ಲಂಗಳಲ್ಲಿ ವಾಸಿಸುತ್ತಿದ್ದ ಬಡವರು, ದಲಿತರು, ನಿರ್ಗತಿಕರು ಹಾಗೂ ಸೂರಿಲ್ಲದ ನಿವಾಸಿಗಳಿಗೆ ಸ್ಲಂ ಬೋರ್ಡ್ನಿಂದ ವಸತಿ ಕಲ್ಪಿಸಲು ಸುಮಾರು ೪೫೩ ಮನೆಗಳು ಮಂಜೂರಾಗಿದ್ದು, ಅದರಂತೆ ಅರ್ಹ ಫಲಾನುಭವಿಗಳಿಂದ ೫೦ ಸಾವಿರ ರೂ. ಡಿಡಿ ಪಡೆದು ೫ ಲಕ್ಷ ರೂ.ಗಳ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲು ಪ್ರಾರಂಭಿಸಿದ್ದಾರೆ. ೪ ವರ್ಷ ಕಳೆದರೂ ನಿವಾಸಿಗಳಿಗೆ ಮನೆಯ ಭಾಗ್ಯ ಸಿಗುವ ಕನಸು ಮರೀಚಿಕೆಯಾಗಿದೆ.
ಸರ್, ನಾವು ಹೇಗೋ ಗುಡಿಸಲಿನಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೆವು. ಆದರೆ ಸರಕಾರದಿಂದ ಮನೆ ಕಟ್ಟಿಕೊಡುತ್ತೇವೆಂದು ಹೇಳಿ ನಮ್ಮನ್ನು ನಂಬಿಸಿ ನಮ್ಮಿಂದ ಹಣ ಕಟ್ಟಿಸಿಕೊಂಡು ನಾಲ್ಕು ವರ್ಷ ಕಳೆದರೂ ಯೋಗ್ಯವಾದ ವಾಸಕ್ಕೆ ಮನೆಯಿಲ್ಲ. ಕಟ್ಟಿರುವ ಮನೆಗಳು ಸಂಪೂರ್ಣ ಕಳಪೆಯಾಗಿ ಸೋರುತ್ತಿವೆ. ಇದರಿಂದ ನಮ್ಮ ಜೀವನ ಬೀದಿಗೆ ಬಂದಿದ್ದು, ಆದರೂ ಶಾಸಕರು, ಕೇಂದ್ರ ಸಚಿವರು, ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನಂಜಯ್ಯನ ಕೊಟ್ಟಿಗೆ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮನೆಗಳಿಗೆ ಶೌಚಾಲಯ ವ್ಯವಸ್ಥೆಯೇ ಇಲ್ಲ: ಸ್ಲಂ ಮಂಡಳಿಯಿ0ದ ಕಟ್ಟಿರುವ ಬಹುತೇಕ ಮನೆಗಳು ನೆನೆಗುದಿಗೆ ಬಿದ್ದಿದ್ದು, ಅವುಗಳು ಸಂಪೂರ್ಣ ಕಳೆಪೆ ಕಾಮಗಾರಿ ಕೂಡಿದ್ದು, ಯಾವುದೇ ಗುಣಮಟ್ಟದ ವಸ್ತುಗಳನ್ನು ಬಳಸುತ್ತಿಲ್ಲ ಹಾಗೂ ಬಳಸಿಲ್ಲ. ಅದರಲ್ಲಿಯೂ ಮರಳು, ಸಿಮೆಂಟ್, ಇಟ್ಟಿಗೆ, ಕಬ್ಬಿಣ ಮುಂತಾದ ವಸ್ತುಗಳು ಕಡಿಮೆ ಗುಣಮಟ್ಟದಿಂದ ಕೂಡಿದ್ದು, ಮನೆಗಳೆಲ್ಲವೂ ಕಳಪೆ ಕಾಮಗಾರಿಯಿಂದ ಕೂಡಿದೆ. ಕೆಲವು ಮನೆಗಳಿಗೆ ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆಯೇ ಇಲ್ಲ. ಇದ್ದರೂ ಅವುಗಳು ಬೀಳುವ ಸ್ಥಿತಿಯಲ್ಲಿವೆ. ಡಿಡಿ ಕಟ್ಟಲಿಲ್ಲವೆಂದರೂ ಕೆಲವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಡಿಡಿ ಹಣ ಕಟ್ಟಿದ್ದರೂ ಮನೆ ಪೂರ್ಣಗೊಳಿಸಿಲ್ಲ ಎಂದು ಕೆಲವು ಫಲಾನುಭವಿಗಳು ಆರೋಪಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಡಿಡಿ ಕಟ್ಟಲಿಲ್ಲವೆಂದರೂ ಕೆಲವರಿಗೆ ಮನೆ ಕೊಟ್ಟಿದ್ದಾರೆ: ಅಂದು ಸ್ವಂತ ಸೂರು ಹೊಂದುವ ಕನಸು ಕಟ್ಟಿದ್ದ ಫಲಾನುಭವಿಗಳು, ಗುಡಿಸಲು ತೆರವುಗೊಳಿಸಿದರು. ಬಾಡಿಗೆ ಮನೆಯಲ್ಲಿದ್ದುಕೊಂಡು ಸಾಲ ಮಾಡಿ ೫೦ ಸಾವಿರ ರೂ. ಹಣ ಕಟ್ಟಿದ್ದಾರೆ. ಅಂದಿನಿ0ದ ೬ ತಿಂಗಳೊಳಗೆ ಮನೆ ಕಟ್ಟಿ ನಿವಾಸಿಗಳಿಗೆ ಬೀಗದ ಕೀ ನೀಡುತ್ತೇವೆಂದು ಹೇಳಿ ಮನೆ ಕಟ್ಟಲು ಪ್ರಾರಂಭಿಸಿದ್ದರು. ನಾಲ್ಕು ವರ್ಷಗಳು ಕಳೆದರೂ ಆಗಿಲ್ಲ. ಕೆಲವು ಮನೆಗಳನ್ನು ಪೂರ್ಣಗೊಳಿಸಿ ವಾಸಕ್ಕೆ ಅವಕಾಶ ನೀಡಿದ್ದಾರೆ. ಅದರಲ್ಲೂ ಅವು ಕಳಪೆ ಕಾಮಗಾರಿ ಮಾಡಿರುವುದರಿಂದ ಮೇಲ್ಛಾವಣೆಯಿಲ್ಲದೇ ಮಳೆಗಾಲದಲ್ಲಿ ನಿರಂತರವಾಗಿ ಸೋರುತ್ತಿವೆ. ನಾವುಗಳು ಗುಡಿಸಲಿನಲ್ಲಿ ಇದ್ದರೂ ಒಂದು ದಿನಕ್ಕೂ ಸೋರುತ್ತಿರಲಿಲ್ಲ. ಆದರೆ ಇಂದು ಸೋರುವ ಮನೆಗಳಲ್ಲಿ ವಾಸ ಮಾಡಬೇಕಾಗಿದೆ.
ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ: ಇಲ್ಲಿ ವಾಸಿಸುತ್ತಿರುವವರು ಬಡವರಾಗಿದ್ದು, ಸಾಲ ಮಾಡಿ ಹಣ ಕಟ್ಟಿ ೪ ವರ್ಷಗಳು ಕಳೆದರೂ ಅವರಿಗೆ ಮನೆಯ ಭಾಗ್ಯವಿಲ್ಲ. ಬಾಡಿಗೆ ಕಟ್ಟಲಾಗದೇ ಅವರು ಈ ಮನೆಗಳಲ್ಲಿಯೇ ವಾಸಿಸುತ್ತಿದ್ದು, ಅವುಗಳೂ ಸೋರುತ್ತಿವೆ. ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಈ ಬಗ್ಗೆ ಇಂಜಿನಿಯರ್ಗೆ ಹೇಳಲು ಅವರು ಬರುವುದೇ ಇಲ್ಲ. ಫೋನ್ ಮಾಡಿದರೂ ಸ್ವೀಕರಿಸುವುದಿಲ್ಲ. ಈ ಬಗ್ಗೆ ಶಾಸಕರು, ಸಂಸದರ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ. ೬ ತಿಂಗಳಿಗೆ ಕಟ್ಟಿಕೊಡುವ ಮನೆ ೪ ವರ್ಷವಾದರೂ ಇಲ್ಲವಾದರೆ ಬಡವರು ಬದುಕುವುದು ಹೇಗೆ? ಎಂದು ನಗರಸಭೆ ಸದಸ್ಯೆ ಪ್ರಶ್ನೆ ಮಾಡಿದ್ದಾರೆ.
ಇನ್ನು ಸ್ಲಂ ನಿವಾಸಿಗಳು ಮಾತನಾಡಿ, ೨೦೧೮ರಲ್ಲಿ ನಾವು ಮೊದಲು ಡಿಡಿ ಕಟ್ಟಿದ್ದೇವೆ. ೪ ವರ್ಷವಾದರೂ ಮನೆ ಪೂರ್ಣಗೊಂಡಿಲ್ಲ. ನಮಗೆ ಕಟ್ಟಿಕೊಟ್ಟಿರುವ ಮನೆ ಮಳೆಗೆ ಸೋರುತ್ತಿದೆ. ನಮಗೆ ಯಾವುದೇ ಸೌಲಭ್ಯ ನೀಡಿಲ್ಲ. ನಾವೇ ಹಣ ಖರ್ಚು ಮಾಡಿ ಮನೆಗೆ ಕಿಟಕಿ, ಬಾಗಿಲು ಹಾಕಿಸಿಕೊಂಡಿದ್ದೇವೆ. ಮನೆಯಲ್ಲಿ ನಮಗೆ ಗಂಡು ಮಕ್ಕಳಿಲ್ಲ. ಎಲ್ಲದಕ್ಕೂ ನಾನೇ ಅಲೆದಾಡಬೇಕು. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮಂತಹ ಬಡವರಿಗೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟರು.
ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ: ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರಸಭೆ ಪೌರಾಯುಕ್ತರು, ಸ್ಲಂ ಬೋರ್ಡ್ನಿಂದ ನಿರ್ಮಿಸಿರುವ ಮನೆಗಳ ಕೆಲಸ ಅಪೂರ್ಣಗೊಂಡಿರುವುದು ಹಾಗೂ ಅಲ್ಲಿನ ನಿವಾಸಿಗಳ ದೂರುಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಜೊತೆಗೆ ಶಾಸಕರ ಜತೆಯು ಚರ್ಚಿಸಿದ್ದು, ಅವರು ಕೂಡಾ ಸಂಬ0ಧಪಟ್ಟವರಿಗೆ ಮಾತನಾಡುತ್ತೇನೆ. ಮನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಕಣ್ತೆರೆಯಬೇಕಿದೆ: ತಾತ್ಕಾಲಿಕವಾಗಿ ಮಂಡಳಿ ಇಂಜಿನಿಯರ್ ಜತೆಯೂ ಚರ್ಚಿಸಿದ್ದು, ಅವರು ಎರಡ್ಮೂರು ದಿನಗಳಲ್ಲಿ ಬರಲಿದ್ದು, ಅವರೊಂದಿಗೆ ಜಂಟಿ ಸಮೀಕ್ಷೆ ನಡೆಸಿ ನಿವಾಸಿಗಳಿಗೆ ಸರಕಾರದಿಂದ ಕೊಡುವ ಸೌಲಭ್ಯಗಳನ್ನು ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಒಟ್ಟಾರೆ ಗುಡಿಸಿಲಿನಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದ ಬಡ ಕುಟುಂಬಗಳಿಗೆ ಹಣ ಕಟ್ಟಿಸಿಕೊಂಡು ೬ ತಿಂಗಳು ಎಂದು ಹೇಳಿ ಆಸೆ ತೋರಿಸಿ, ನಿರಾಸೆ ಮೂಡಿಸಿದಂತೆ ಮಾಡಲಾಗಿದೆ. ಇನ್ನಾದರೂ ಸಂಬ0ಧಪಟ್ಟ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹಾಗೂ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮತ್ತು ಮೇಲ್ಮಟ್ಟದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಆದೇಶಿಸಿ ಬಡ ಫಲಾನುಭವಿಗಳಿಗೆ ನ್ಯಾಯ ಒದಗಿಸಿ ಕೊಡ್ತಾರಾ ಕಾದು ನೋಡಬೇಕಿದೆ.
Varthajala Daily, Bengaluru
0 Comments