Ticker

6/recent/ticker-posts

Ad Code

Responsive Advertisement

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲು ಎಎಪಿ ಆಗ್ರಹ

1) ಬೆಳೆ ಹಾನಿ

- ಜಿಲ್ಲಾಡಳಿತಗಳ ಅಧಿಕೃತ ವರದಿ ಪ್ರಕಾರ, 2021ರಲ್ಲಿ ರಾಜ್ಯಾದ್ಯಂತ 7.89 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 6,207 ಕೋಟಿ ರೂಪಾಯಿ ಮೊತ್ತದ ಆಹಾರ ಬೆಳೆ, 1.24 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 1,348 ಕೋಟಿ ರೂಪಾಯಿ ಮೊತ್ತದ ತೋಟಗಾರಿಕೆ ಬೆಳೆ ಹಾಗೂ 74,530 ಹೆಕ್ಟೇರ್‌ ಪ್ರದೇಶದಲ್ಲಿ 1,401 ಕೋಟಿ ರೂಪಾಯಿ ಮೊತ್ತದ ವಾಣಿಜ್ಯ ಬೆಳೆ ಮಳೆಯಿಂದ ನಾಶವಾಗಿದೆ.

- ಸರ್ಕಾರದ ಅವೈಜ್ಞಾನಿಕ ಮಾನದಂಡಗಳಿಂದಾಗಿ ಅನೇಕ ಸಂತ್ರಸ್ತ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಕೊಯ್ಲು ಮಾಡಿದ ನಂತರ ಮಳೆಯಿಂದ ಹಾನಿಗೊಂಡ ಬೆಳೆಯನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

- 2015ರಲ್ಲಿ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ನಿಗದಿಯಾದ ಪರಿಹಾರ ಮೊತ್ತವನ್ನೇ ಈಗಲೂ ನೀಡಲಾಗುತ್ತಿದೆ. ದೆಹಲಿ ಸರ್ಕಾರವು ಹೆಕ್ಟೇರ್‌ಗೆ 50,000 ರೂಪಾಯಿ ಪರಿಹಾರ ನೀಡಿದರೆ, ಕರ್ನಾಟಕ ಸರ್ಕಾರವು ಕೇವಲ 6,800 ರೂಪಾಯಿಯಿಂದ 13,500ರವರೆಗೆ ಪರಿಹಾರ ನೀಡುತ್ತಿದೆ.

2 ) ಮನೆಗಳಿಗೆ ಹಾನಿ

- 2021ರಲ್ಲಿ ಅತಿವೃಷ್ಟಿಯಿಂದಾಗಿ ಒಟ್ಟು 20,083 ಮನೆಗಳು ಹಾನಿಗೊಳಗಾಗಿವೆ. ಈ ಪೈಕಿ 7,795 ಮನೆಗಳು ಸಂಪೂರ್ಣ ಹಾನಿಯಾಗಿವೆ.

- 2019ರಲ್ಲಿ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಹಾನಿಗೊಂಡ ಮನೆಗಳಿಗೆ ಹೊಸ ಮನೆ ನಿರ್ಮಾಣಕ್ಕೆ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಇದನ್ನು ನಂಬಿಕೊಂಡು ಮನೆ ಕಟ್ಟಲು ಆರಂಭಿದ ಸಂತ್ರಸ್ತರಿಗೆ ಕೇವಲ ಒಂದು ಲಕ್ಷ ಪರಿಹಾರ ದೊರೆತಿದೆ. ಮನೆ ನಿರ್ಮಾಣ ಅರ್ಧಕ್ಕೆ ಸ್ಥಗಿತಗೊಂಡಿದ್ದರಿಂದ ಶೆಡ್‌ಗಳಲ್ಲಿ ವಾಸವಾಗಿರಬೇಕಾಗಿದೆ.

3) ಕಬ್ಬು ಬೆಳೆಗಾರರಿಗೆ ಬಾಕಿ

- ಕಳೆದ ವರ್ಷ 600 ಕೋಟಿ ರೂ. ಸೇರಿದಂತೆ ಕಬ್ಬು ಬೆಳೆಗಾರರಿಗೆ ಒಟ್ಟು 2,500 ಕೋಟಿ ರೂಪಾಯಿಯನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಉಳಿಸಿಕೊಂಡಿದ್ದಾರೆ.

- ರಾಜ್ಯ ಸರ್ಕಾರವು ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಿಡಿತದಲ್ಲಿದೆ. ಆದ್ದರಿಂದಲೇ ರೈತರಿಗೆ ಹಣ ದೊರಕಿಸಿಕೊಡಲು ನಿರ್ಲಕ್ಷ್ಯ ತೋರುತ್ತಿದೆ.

- ಬಾಕಿಯಿರುವ ಎಲ್ಲ ಮೊತ್ತವನ್ನು ಶೇ. 15 ಬಡ್ಡಿಯೊಂದಿಗೆ ತಕ್ಷಣವೇ ಪಾವತಿ ಮಾಡುವಂತೆ ರಾಜ್ಯ ಸರ್ಕಾರವು ಕಾರ್ಖಾನೆಗಳಿಗೆ ಆದೇಶಿಸಬೇಕು.

4) ರೈತರ ಅತ್ಯಂತ ಅಗತ್ಯವಾಗಿರುವ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಸಂಪೂರ್ಣ ಚರ್ಚೆಯಾಗಬೇಕು

5 ) ಬೆಂಗಳೂರು ರಸ್ತೆ

- ಬೆಂಗಳೂರಿನ ರಸ್ತೆಗಳ ದುರಸ್ತಿಗೆ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 20,000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿಯವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

- ಅಷ್ಟು ಹಣ ಖರ್ಚು ಮಾಡಿದ ನಂತರವೂ ಬೆಂಗಳೂರಿನ ರಸ್ತೆಗಳ ತುಂಬಾ ಗುಂಡಿಗಳಿವೆ. ಗುಂಡಿಗಳಿಗೆ ಹಾಕಲಾಗಿದ್ದ ತೇಪೆಯು ಸಣ್ಣ ಮಳೆಗೆ ಕಿತ್ತುಹೋಗಿದೆ. ವಾಹನ ಸವಾರರು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಕೆಲವರ ಪ್ರಾಣವೇ ಹೋಗಿದೆ.

- ಆ ಬೃಹತ್‌ ಮೊತ್ತವು ಯಾರ ಜೇಬು ಸೇರಿದೆ. ಯಾವ್ಯಾವ ಸಚಿವರು, ಶಾಸಕರು, ಅಧಿಕಾರಿಗಳ ಪಾಲೆಷ್ಟು ಎಂಬುದು ಜನರಿಗೆ ತಿಳಿಯಬೇಕು. ರಸ್ತೆ ಕಾಮಗಾರಿ ಕುರಿತು ಖರ್ಚುವೆಚ್ಚಗಳ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು.

6)   40% ಕಮಿಷನ್‌

- ಗುತ್ತಿಗೆ ಕಾಮಗಾರಿಗಳ ಮೊತ್ತದಲ್ಲಿ 40% ಅಕ್ರಮವಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣರವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಸಚಿವರಿಗೆ 5%. ಸಂಸದರಿಗೆ 2%, ಸ್ಥಳೀಯ ಜನಪ್ರತಿನಿಧಿಗಳಿಗೆ 10%, ಬಿಲ್‌ ಪಾವತಿಸುವ ಅಧಿಕಾರಿಗಳಿಗೆ 6% ಹೀಗೆ ಶೇ. 40ರಷ್ಟು ಹಣವು ಲೂಟಿ ಆಗುತ್ತಿರುವುದು ಬಿಚ್ಚಿಟ್ಟಿದ್ದಾರೆ.

- ಸಿಎಂ ಬೊಮ್ಮಾಯಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ತನಿಖೆಗೆ ಆದೇಶಿಸಿದ್ದಾರೆ. ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಅವರ ನೇತೃತ್ವದಲ್ಲೇ ತನಿಖೆ ನಡೆದರೆ ಸತ್ಯ ಹೊರಬರುವುದಿಲ್ಲ.

- ಇದೊಂದು ಗಂಭೀರ ವಿಚಾರವಾಗಿದ್ದು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರು ಗಳಿಂದ ನ್ಯಾಯಾಂಗ ತನಿಖೆಯಾಗಬೇಕು. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸರ್ಕಾರದಲ್ಲಿ ನಡೆದ ಗುತ್ತಿಗೆಗಳ ತನಿಖೆಯಾಗಬೇಕು.

7)  ಮಹಿಳೆಯರ ರಕ್ಷಣೆಯಲ್ಲಿ ಗೃಹ ಇಲಾಖೆ ವೈಫಲ್ಯ

- ರಾಜ್ಯದಲ್ಲಿ ತಿಂಗಳಿಗೆ ಸರಾಸರಿ 42 ಅತ್ಯಾಚಾರ ನಡೆಯುತ್ತಿದೆ. ಅಂದರೆ ಪ್ರತಿದಿನ ಒಂದಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. 2021ರ ಮೊದಲ ಏಳು ತಿಂಗಳಿನಲ್ಲಿ ರಾಜ್ಯದಲ್ಲಿ 307 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2018ರ ಜನವರಿಯಿಂದ 2021ರ ಜುಲೈ ತನಕ ರಾಜ್ಯದಲ್ಲಿ 1,759 ಅತ್ಯಾಚಾರ ಪ್ರಕರಣಗಳು ನಡೆದಿವೆ. ಅದೇ ಅವಧಿಯಲ್ಲಿ 1,300 ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ ಶಿಕ್ಷೆಯಾಗಿರುವುದು 6 ಆರೋಪಿಗಳಿಗೆ ಮಾತ್ರ.

- ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ, 2020ರಲ್ಲಿ ರಾಜ್ಯದಲ್ಲಿ 3,246 ಮಹಿಳೆಯರ ಮೇಲೆ ಹಲ್ಲೆ ಹಾಗೂ 47 ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. 8 ಮಹಿಳೆಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ. 178 ಮಹಿಳೆಯರು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಮಾನಸಿಕ ಕಿರುಕುಳ ಹಾಗೂ ಬೆದರಿಕೆಗೆ ಹೆದರಿ 263 ಮಹಿಳೆಯರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. 6 ಮಹಿಳೆಯರ ಮೇಲೆ ಆಸಿಡ್‌ ದಾಳಿ ನಡೆದಿದೆ. ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ 55 ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗಿದೆ.

8)   79 A ಮತ್ತು B ಕಾಯ್ದೆಯನ್ನು ಪುನರ್ ಸ್ಥಾಪಿಸುವುದು

ಕೊರೋನಾ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಸುಗ್ರೀವಾಜ್ಞೆ ಮೂಲಕ ಭೂ ಪರಿಮಿತಿ ಕಾಯ್ದೆಯ 79 A ಮತ್ತು B ತಿದ್ದುಪಡಿ ಮಾಡಿ ಈ ಅಕ್ರಮ ಕಪ್ಪುಹಣದಿಂದ ಖರೀದಿಸಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಭೂಸಂಪತ್ತನ್ನು ಸಕ್ರಮಗೊಳಿಸಿರುವ ಪರಿ ನಿಜಕ್ಕೂ ಖೇದಕರ. ಈ ಕೂಡಲೇ ಸುಗ್ರೀವಾಜ್ಞೆಯನ್ನು ಹಿಂಪಡೆದುಕೊಂಡು ನ್ಯಾಯಾಲಯಗಳಲ್ಲಿ ಅಂತಿಮ ಹಂತದಲ್ಲಿರುವ ಈ ಎಲ್ಲಾ ದಾವೆಗಳನ್ನು ನ್ಯಾಯಾಲಯದ ಆದೇಶದ ಪ್ರಕಾರ ನಡೆದುಕೊಳ್ಳುವುದು.

9) ಸದನ ಸಮಿತಿಯ ವರದಿ ಮಂಡನೆ

ಕೊರೋನಾ ಸಂದರ್ಭದಲ್ಲಿನ ಔಷಧಿ ಮತ್ತು ಉಪಕರಣಗಳ  ಖರೀದಿ ಹಗರಣಗಳ ಸದನ ಸಮಿತಿಯ ವರದಿಯನ್ನು ಮಂಡಿಸಿ  ಸದನದಲ್ಲಿ ಚರ್ಚೆ ಮಾಡಲೇಬೇಕು.

10) ಎ ಪಿ ಎಂ ಸಿ ಕಾಯ್ದೆಗೆ ತಿದ್ದುಪಡಿ ರದ್ದತಿಗೆ 

ಕಾಳಸಂತೆ ಕೋರರಿಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಶೈತ್ಯ ಗೃಹಗಳನ್ನು ನಿರ್ಮಿಸಲು  ಮೀಸಲಿಟ್ಟಿರುವ 50 % ಸ್ಥಳಾವಕಾಶದ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು.ಈ ಮೂಲಕ ಕೃಷಿ ಉತ್ಪನ್ನಗಳನ್ನು ಸರ್ಕಾರಿ ಜಾಗದಲ್ಲಿ ಸಂಗ್ರಹಿಸಿಟ್ಟುಕೊಂಡು  ಬೆಲೆ ಏರಿಸುವ  ಕಾಳಸಂತೆಕೋರರ ಸಂಚನ್ನು  ತಡೆಗಟ್ಟಬೇಕು 

ಈ ಎಲ್ಲಾ ಪ್ರಮುಖ ಅಂಶಗಳನ್ನು ಚಳಿಗಾಲದ ಅಧಿವೇಶನದಲ್ಲಿ ಸರಕಾರವು ಮಂಡಿಸಿ ಮಾನ್ಯ ಸದಸ್ಯರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ  ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್  ಆಗ್ರಹಿಸಿದರು.

Post a Comment

0 Comments

Ad Code

Responsive Advertisement