ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಪರ ಅಲೆ ಇದೆ. ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ 15ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ತೋರಿಸಲಿದೆ. ಜನಸ್ವರಾಜ್ ಯಾತ್ರೆಯಲ್ಲಿ ಬಿಜೆಪಿ ರಾಜ್ಯದೆಲ್ಲೆಡೆ ಅಭೂತಪೂರ್ವ ಬೆಂಬಲ ಲಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆದ ಯೋಗಾ ರಮೇಶ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಗಾದಿಗೆ ಸಂಗೀತ ಕುರ್ಚಿ ಆರಂಭವಾಗಿದೆ. ಟವೆಲ್ ಹಾಕುವ ಸ್ಥಿತಿ ಮುಂದುವರಿದಿದೆ. ಕಾಂಗ್ರೆಸ್‍ನವರು ನಿರುದ್ಯೋಗಿಗಳಾಗಲಿದ್ದಾರೆ ಎಂದು ತಿಳಿಸಿದರು. ಇಂದಿರಾ ಗಾಂಧಿಯವರ ಕಾಲಘಟ್ಟದಲ್ಲಿ ಲೈಟ್ ಕಂಬವನ್ನು ಕಾಂಗ್ರೆಸ್‍ನಿಂದ ನಿಲ್ಲಿಸಿದರೂ ಗೆಲ್ಲುತ್ತದೆ ಎನ್ನುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿಯೇ ಸ್ಪರ್ಧಿಸಿದರೂ ಲೋಕಸಭೆಯಲ್ಲಿ ಗೆಲುವು ಕಷ್ಟ ಎಂಬ ಸ್ಥಿತಿ ಕಾಂಗ್ರೆಸ್‍ಗೆ ಬಂದಿದೆ. ಹಾಗಾಗಿ ಉತ್ತರ ಪ್ರದೇಶದಿಂದ ಕೇರಳಕ್ಕೆ ಬರುವ ಸ್ಥಿತಿ ಬಂದಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಲೋಕಸಭೆಯ ವಿರೋಧ ಪಕ್ಷವಾಗಿರಲೂ ನಾಲಾಯಕ್ ಎಂಬ ದುಸ್ಥಿತಿ ಈಗ ಬಂದಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಅಭಿವೃದ್ಧಿ ಕಾರ್ಯಗಳು, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಕೈಗೊಂಡ ಜನಪರ- ಅಭಿವೃದ್ಧಿ ಕಾಮಗಾರಿಗಳಿಂದ ಪಕ್ಷವು ಜನಮೆಚ್ಚುಗೆ ಪಡೆದಿದೆ. ಯಡಿಯೂರಪ್ಪ ಅವರ ಯೋಜನೆಗಳು ಜನಮಾನಸದಲ್ಲಿ ನೆಲೆಯಾಗಿವೆ ಎಂದು ವಿವರಿಸಿದರು. ಇದರಿಂದ ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಸಾಮಥ್ರ್ಯ ಗಮನಿಸಿ ಬೇರೆ ಪಕ್ಷಗಳಿಂದ ಹತ್ತಾರು ಜನ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ನಾವೇ ತಡ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಜಾತ್ರೆ ನಡೆಯುತ್ತಿಲ್ಲ. ಅದು ಅಂತಿಮ ಯಾತ್ರೆಗೆ ಸಿದ್ಧವಾಗುತ್ತಿದೆ ಎಂದರು.
ಯೋಗಾ ರಮೇಶ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಕೆಲವೆಡೆ ಅಭ್ಯರ್ಥಿಗಳೇ ಸಿಕ್ಕಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಈಗ ಮುಳುಗುವ ಹಡಗಾಗಿದೆ ಎಂದು ನುಡಿದರು. ಕಾಂಗ್ರೆಸ್ ಬೀದಿಜಗಳ ಮುಂದುವರಿದಿದೆ; ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗದ ಸ್ಥಿತಿ ಬಂದಿದೆ ಎಂದು ತಿಳಿಸಿದರು. ಆದರೆ, ಬಿಜೆಪಿ ಬೂತ್ ಕಮಿಟಿ, ಪೇಜ್ ಸಮಿತಿ ರಚಿಸಿ ದೃಢಗೊಳ್ಳುತ್ತಿದೆ ಎಂದರು.
ವೃತ್ತಿ ರಾಜಕಾರಣ ಬಿಜೆಪಿ ನಂಬಿಕೆಯಲ್ಲ. ಪ್ರವೃತ್ತಿ, ರಾಜಕೀಯ ವೃತ ಬಿಜೆಪಿಯದು. ನಮ್ಮಲ್ಲಿ ಅಧಿಕಾರವೇ ಪ್ರಾಮುಖ್ಯವಲ್ಲ. ಪಕ್ಷ ನಿಷ್ಠೆಯ ಜೊತೆ ವ್ಯಕ್ತಿ ಬೆಳೆಯಬೇಕಿದೆ. ಬಿಜೆಪಿ ವಿಭಿನ್ನ, ವಿಶಿಷ್ಟ ಮತ್ತು ಜಗತ್ತಿನ ಅತಿದೊಡ್ಡ ಪಕ್ಷವೆನಿಸಿದೆ. ಕಮ್ಯುನಿಸ್ಟ್ ಪಕ್ಷವನ್ನು ಮೀರಿದ ಸದಸ್ಯತ್ವ ಬಿಜೆಪಿಯದು ಎಂದರು.
ರಾಜ್ಯದ ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ಮೈಸೂರಿನ ಶಾಸಕ ನಾಗೇಂದ್ರ, ಹಾಸನ ಜಿಲ್ಲಾಧ್ಯಕ್ಷರಾದ ಎಚ್.ಕೆ.ಸುರೇಶ್, ಚನ್ನರಾಯಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವನಂಜೇಗೌಡ, ಮುಖಂಡರು ಭಾಗವಹಿಸಿದ್ದರು.
0 Comments