ಬೆಂಗಳೂರು: ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ನಾಯಕ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ|| ಅಶ್ವತ್ಥನಾರಾಯಣ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ವತಿಯಿಂದ ಇಂದು ಅರಮನೆ ರಸ್ತೆಯ “ಕೊಂಡಜ್ಜಿ ಬಸಪ್ಪ ಹಾಲ್”ನಲ್ಲಿ ಏರ್ಪಡಿಸಿದ ಡಾ|| ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬಾಬಾ ಸಾಹೇಬ ಅವರು ಜ್ಞಾನ, ತಿಳಿವಳಿಕೆಯ ಅಧಾರದಲ್ಲಿ ಅವರು ಅತ್ಯುತ್ತಮ ಸಂವಿಧಾನವನ್ನು ನೀಡಿದರು. ದಲಿತರಿಗೆ ನಾಯಕತ್ವ, ಶಾಸನ ತಜ್ಞ, ವಕೀಲ- ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಅವರು ನಾಯಕತ್ವ ವಹಿಸಿದವರು ಎಂದರು. ಡಾ. ಅಂಬೇಡ್ಕರರ ತತ್ವ ಸಿದ್ಧಾಂತಕ್ಕೆ ಬದ್ಧವಾಗಿ ಬಿಜೆಪಿ ಸರ್ವರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.
ಉತ್ತಮ ಉದ್ದೇಶ, ಛಲ ಮತ್ತು ಗುರಿ ಇದ್ದರೆ ಹಾಗೂ ಅವಕಾಶವನ್ನು ಬಳಸಿಕೊಂಡರೆ ಸಮೃದ್ಧಿಯ ಜತೆ, ದೃಢವಾಗಿ ಬೆಳೆಯಲು ಸಾಧ್ಯವಿದೆ ಎಂದ ಅವರು, ಅತ್ಯಂತ ಶಿಸ್ತುಬದ್ಧವಾಗಿ ಕಾರ್ಯಕ್ರಮ ನೆರವೇರಿಸಿದ್ದಕ್ಕೆ ಎಸ್‍ಸಿ ಮೋರ್ಚಾ ಪದಾಧಿಕಾರಿಗಳನ್ನು ಅವರು ಅಭಿನಂದಿಸಿದರು.
ಉತ್ತಮ ಶಿಕ್ಷಣ, ಗುಣಮಟ್ಟದ ಜ್ಞಾನ, ತಿಳಿವಳಿಕೆಯಿಂದ ಉತ್ತಮ ವ್ಯಕ್ತಿತ್ವವನ್ನು ಹೊಂದಬಹುದು. ಈ ಮೂಲಕ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಸಾಧ್ಯವಿದೆ. ಡಾ. ಅಂಬೇಡ್ಕರರಿಗೆ ಅವರ ಜ್ಞಾನದಿಂದ ವಿಶ್ವಮನ್ನಣೆ ಲಭಿಸಿದೆ ಎಂದು ವಿಶ್ಲೇಷಿಸಿದರು.
ನಮ್ಮ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರು ದೇಶಕ್ಕೆ ಮಾದರಿ ಎನಿಸುವ ನಾಯಕತ್ವ ನೀಡಿದ್ದು, ದೇಶವನ್ನು ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದರು. ಎಲ್ಲರಿಗೂ ಉತ್ಕøಷ್ಟ ಗುಣಮಟ್ಟದ ಶಿಕ್ಷಣ ಕೊಡುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವರು ಜಾರಿಗೊಳಿಸಿದ್ದಾರೆ ಎಂದು ಶ್ಲಾಘಿಸಿದರು. ಗುಣಮಟ್ಟದ ಶಿಕ್ಷಣದ ವಿಚಾರದಲ್ಲಿ ರಾಜ್ಯವು ಮುಂಚೂಣಿಯಾಗಿ ನಿಂತಿದೆ. ಶಿಕ್ಷಣದ ಮೂಲಕ ಸದೃಢತೆ ಸಾಧನೆಯತ್ತ ರಾಜ್ಯ ಮುಂದಕ್ಕೆ ಸಾಗಿದೆ ಎಂದು ವಿವರಿಸಿದರು.
ಎಸ್.ಸಿ. ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕದ ಪ್ರಭಾರಿಗಳಾದ ಎಸ್. ಕುಮಾರ್ ಅವರು ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ದೇಶಕ್ಕೆ ವಿಶ್ವದ ಸರ್ವಶ್ರೇಷ್ಠ ಸಂವಿಧಾನವನ್ನು ನೀಡಿದವರು. ಆದರೆ, ಅವರಿಗೆ ಭಾರತರತ್ನ ನೀಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿಯ ಕೇಂದ್ರ ಸರಕಾರವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಡಾ. ಅಂಬೇಡ್ಕರ್ ಅವರಿಗೆ ಗರಿಷ್ಠ ಗೌರವ ನೀಡುವ ಕಾರ್ಯ ಮಾಡಿದೆ ಎಂದು ಮೆಚ್ಚುಗೆ ಸೂಚಿಸಿದರು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, 2015ರವರೆಗೆ ಕಾನೂನು ದಿನಾಚರಣೆ ನಡೆಯುತ್ತಿತ್ತು. ಆದರೆ, ನಮ್ಮ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಂದಾಗಿ 2015ರಿಂದ ನವೆಂಬರ್ 26ರಂದು ಸಂವಿಧಾನ ದಿನಾಚರಣೆ, ಡಾ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯತೊಡಗಿತು. ಅವತ್ತಿನಿಂದ ಇಂದಿನವರೆಗೆ ಡಾ. ಅಂಬೇಡ್ಕರ್ ಅವರಿಗೆ ಮತ್ತು ಸಂವಿಧಾನಕ್ಕೆ ಹೆಚ್ಚಿನ ಗೌರವ ಸಿಗುತ್ತಿದೆ. ಈ ವರ್ಷದಲ್ಲಿ ಬಿಜೆಪಿ ವತಿಯಿಂದ ಸಂವಿಧಾನಕ್ಕೆ ಗೌರವ ನೀಡುವ 10 ದಿನಗಳ ಅಭಿಯಾನ ಗ್ರಾಮ ಗ್ರಾಮಗಳಲ್ಲಿ ನಡೆದಿದೆ ಎಂದು ವಿವರಿಸಿದರು. ನಮ್ಮ ಎಸ್‍ಸಿ ಮೋರ್ಚಾ ವತಿಯಿಂದ ದೇಶವ್ಯಾಪಿ ಅಭಿಯಾನ ನಡೆದಿದೆ ಎಂದರು.
ಆರು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ದೇಶವನ್ನಾಳಿತ್ತು. ಆದರೆ, ಅದು ಅಂಬೇಡ್ಕರರನ್ನು ನಿಂದಿಸಿತು. ಅಪಮಾನ ಮಾಡಿತ್ತು. ಅವರನ್ನು ಸೋಲಿಸಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವು ಮತಬ್ಯಾಂಕ್‍ಗಾಗಿ ದಲಿತರನ್ನು ಗೌರವಿಸುವ ರಾಜಕಾರಣ ಮಾಡಿದೆ ಎಂದು ಟೀಕಿಸಿದರು. ಅಂಬೇಡ್ಕರರಿಗೆ ಗೌರವ, ಸಂವಿಧಾನಕ್ಕೆ ಗೌರವ ಮತ್ತು ದಲಿತರಿಗೆ ಗೌರವ ಕೊಡುವ ಕಾರ್ಯವನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಡಾ. ಅಂಬೇಡ್ಕರರ ದಾರಿಯಲ್ಲಿ ನಾವೀಗ ನಡೆಯುತ್ತಿದ್ದೇವೆ. ಅಂಬೇಡ್ಕರರಿಗೆ ಅವಮಾನ ಮಾಡುವ ಕಾಂಗ್ರೆಸ್ ಪಕ್ಷದಿಂದ ನಾವು ದೂರವಾಗಿದ್ದೇವೆ. ಆದರೆ, ಅವರ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಎನ್.ಶಂಕರಪ್ಪ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಮುನಿರಾಜು, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಹೂಡಿ ಮಂಜುನಾಥ, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
0 Comments