ಬೆಂಗಳೂರಿನ ಬಿನ್ನಿಮಿಲ್ ರಸ್ತೆಯಲ್ಲಿರುವ ಮಾರ್ಕಂಡೇಯ ಛತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗಾಂಧಿನಗರ ವಿಧಾನಸಭಾ ಕ್ಷೇತ್ರ ಎಎಪಿ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ, “ಇತರೆ ಪಕ್ಷಗಳ ನಾಯಕರಿಗೆ ಜನರ ದುಡ್ಡು ಹೊಡೆದಾಗ ತೃಪ್ತಿ ಸಿಕ್ಕರೆ, ಆಮ್ ಆದ್ಮಿ ಪಾರ್ಟಿ ನಾಯಕರಿಗೆ ಜನರ ಸೇವೆ ಮಾಡಿದಾಗ ತೃಪ್ತಿ ಸಿಗುತ್ತದೆ. ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು ಮುಂತಾದ ಸೌಲಭ್ಯಗಳನ್ನು ಉಚಿತವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರೈಸುವ ಮೂಲಕ ಜನಸೇವೆ ಮಾಡುತ್ತಿದೆ. ನಾವಿಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ನಮ್ಮಿಂದ ಸಾಧ್ಯವಾದಷ್ಟು ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇವೆ” ಎಂದು ಹೇಳಿದರು.
ಬಿನ್ನಿಪೇಟೆ ವಾರ್ಡ್ ಎಎಪಿ ಅಧ್ಯಕ್ಷರಾದ ಪುಷ್ಪ ಕೇಶವ್‌ರವರು ಮಾತನಾಡಿ, “ಉಚಿತ ಆರೋಗ್ಯ ತಪಾಸಣೆ ಶಿಬಿರವು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು, ಸಾವಿರಕ್ಕೂ ಹೆಚ್ಚು ಜನರು ಫಲಾನುಭವ ಪಡೆದುಕೊಂಡಿದ್ದಾರೆ. ನುರಿತ ವೈದ್ಯರ ತಂಡವು ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ಜನರ ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ಭವಿಷ್ಯದಲ್ಲಿ ಇಂತಹ ಶಿಬಿರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲು ಚಿಂತನೆ ನಡೆಸುತ್ತಿದ್ದೇವೆ” ಎಂದು ಹೇಳಿದರು.
ಬೆಂಗಳೂರು ನಗರ ಎಎಪಿ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಜ್ಯೋತಿಷ್ ಕುಮಾರ್, ಮಹೇಶ್ ಬಾಬು ಹಾಗೂ ಇತರೆ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.
0 Comments