ಮಧುಗಿರಿ : ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರನ್ನು ಯಾರೂ ಮರೆಯಬಾರದು ಎಂದು ಪುರಸಭೆ ಅಧ್ಯಕ್ಷ ತಿಮ್ಮರಾಜು ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹೂದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ಮಹಾತ್ಮ ಗಾಂಧಿ ಮಾಡಿದ ಹೋರಾಟವನ್ನು ಯಾರು ಕೂಡ ಮರೆಯುವಂತಿಲ್ಲ. ಅವರ ಹೋರಾಟದ ಪ್ರತಿಫಲದಿಂದಾಗಿ ನಮ್ಮ ದೇಶಕ್ಕೆ ಸ್ವಾಂತಂತ್ರ್ಯ ದೊರೆತಿದೆ. ಪ್ರತಿಯೊಬ್ಬರು ಗಾಂಧಿ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತಿ ಮಲನ ಮೂರ್ತಿ ಮಾತನಾಡಿ, ಗಾಂಧೀಜಿಯವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ನಡೆದಂತಹ ಮಹಾನ್ ವ್ಯಕ್ತಿ, ಅವರು ಹಾಕಿಕೊಟ್ಟ ಅಂಹಿಸಾ ಮಾರ್ಗದಲ್ಲಿ ಇಂದಿನ ಯುವ ಜನತೆ ನಡೆದರೆ ದೇಶದ ಅಭಿವೃದ್ದಿ ಸಾಧ್ಯವಾದೀತು ಎಂದರು.
ಪುರಸಭಾ ಸದಸ್ಯ ಎಂ.ಎಲ್.ಗಂಗರಾಜು ಮಾತನಾಡಿ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ತರಲು ಗಾಂಧೀಜಿ ಯವರು ಹೋರಾಟ ನಡೆಸಿದರೆ, ಲಾಲ್ ಬಹೂದ್ದೂರ್ ಶಾಸ್ತ್ರಿ ಯವರು ದೇಶ ಕಟ್ಟಲು ಹೋರಾಡಿದರು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ನಜ್ಮಾ , ಉಪಾಧ್ಯಕ್ಷೆ ರಾಧಿಕಾ ಆನಂದಕೃಷ್ಣ , ಸದಸ್ಯರಾದ ಎಂ.ಆರ್.ಜಗನ್ನಾಥ, ಅಲೀಮ್, ಕೆ.ನಾರಾಯಣ್, ನರಸಿಂಹಮೂರ್ತಿ, ಎಂ.ಎಸ್.ಚಂದ್ರಶೇಖರ್, ಎಂ.ಎಸ್.ಚಂದ್ರಶೇಖರ್ ಬಾಬು, ನಟರಾಜು, ನಾಗಲತಾ ಲೋಕೇಶ್, ಹಿರಿಯ ಆರೋಗ್ಯ ನಿರೀಕ್ಷಕ ಬಾಲಾಜಿ, ಸಮುದಾಯ ಸಂಘಟಕರಾದ ವರಲಕ್ಷ್ಮೀ, ಮುಖಂಡರಾದ ಎಂ.ವಿ.ಮಂಜುನಾಥ್, ಆನಂದಕೃಷ್ಣ, ಎಸ್.ಬಿ.ಟಿ ರಾಮು, ಆನಂದ್ ಇದ್ದರು.

0 Comments