ಬಳ್ಳಾರಿ ಸೆ 11. ವಿ. ರವಿಕುಮಾರ್, ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಇವರ ರಾಜಿನಾಮೆ ಇಂದ ತೆರವಾದ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಇಂದು ವಿಶೇಷ ಕಾರ್ಯಕಾರಿ ಸಮಿತಿ ಸಭೆಯನ್ನು ನಿರ್ವಹಿಸಿ ಕಾರ್ಯಕಾರಿ ಸಮಿತಿ ಸದಸ್ಯರ ಸರ್ವಾನುಮತದ ಒಪ್ಪಿಗೆಯ ಮೇರೆಗೆ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಸಿ. ಶ್ರೀನಿವಾಸ್‌ರಾವ್ ಅವರನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
ಇದೇ ವೇಳೆ ನಿರ್ಗಮಿತ ಅಧ್ಯಕ್ಷರಾದ ವಿ. ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿ. ರವಿಕುಮರ್ ಅವರು ಮಾತನಾಡಿ ತಮ್ಮ ಆಡಳಿತಾವಧಿಯಲ್ಲಿ ಸಹಕರಿಸಿದ ಸಂಸ್ಥೆಯ ಪದಾಧಿಕಾರಿಗಳು, ಉಪಸಮಿತಿಗಳ ಚೇರ್‌ಮನ್‌ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಮತ್ತು ಅಜೀವ ಸದಸ್ಯರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.
ನೂತನ ಅಧ್ಯಕ್ಷರಾದ ಸಿ. ಶ್ರೀನಿವಾಸ್ ರಾವ್ ಅವರು ಮಾತನಾಡಿ ತಮ್ಮನ್ನು ಆಯ್ಕೆ ಮಾಡಿದ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ತಮ್ಮ ಆಡಳಿತದಲ್ಲಿ ಸಮಸ್ತ ಸದಸ್ಯರು ಸಹಕರಿಸಬೇಕಾಗಿ ಕೋರಿದರು. ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಕಾರ್ಯಕಾರಿ ಸಮಿತಿ ಸದಸ್ಯರು ನೂತನ ಅಧ್ಯಕ್ಷರು ಹಾಗು ನಿರ್ಗಮಿತ ಅಧ್ಯಕ್ಷರನ್ನು ಸನ್ಮಾನಿಸಿ ಶುಭ ಕೋರಿದರು.
0 Comments