ಕರ್ನಾಟಕದ ಸುರಪುರವೆಂಬ ಪಟ್ಟಣದಲ್ಲಿ ಸದಾಚಾರ ಸಂಪನ್ನರೂ ಹಾಗು ಕೌಶಿಕಗೋತ್ರೋತ್ಪನ್ನರಾದ ಗಿರಿದಾಸರು ಮತ್ತು ಶೆಷಮ್ಮವೆಂಬ ದಂಪತಿಗಳಿಗೆ ರಾಘವೇಂದ್ರದಾಸರು, ಸೀತಾರಾಮದಾಸರು ಮತ್ತು ಗೋವಿಂದದಾಸರೆಂಬ ಮೂವರು ಗಂಡುಮಕ್ಕಳು ಮತ್ತು ಗಿರೆಮ್ಮವೆಂಬ ಹೆಣ್ಣುಮಗಳ ಜನನವಾಯಿತು. ಅವರಲ್ಲಿ ಗೋವಿಂದದಾಸರೇ ನಮ್ಮ ಇಂದಿನ ಕಥಾನಾಯಕರು. ಚಿಕ್ಕತನದಿಂದಲೇ ಹರಿನಾಮದಕಡೆಗೆ ಒಲವಿದ್ದ ಗೋವಿಂದದಾಸರು, ಧಾರ್ಮಿಕಚಿಂತನದಲ್ಲೇ ಸದಾ ಮಗ್ನರಾಗುತ್ತಿದ್ದರು. ಬಾಲ್ಯದಲ್ಲೇ ತಂದೆತಾಯಿಗಳನ್ನು ಕಳೆದುಕೊಂಡ ಇವರನ್ನು ಚಿಕ್ಕಪ್ಪ ಶ್ರೀವೆಂಕಟದಾಸರೇ ಪೋಷಿಸಿದರು.
ಶ್ರೀಮನ್ಮಂತ್ರಾಲಯ ಪ್ರಭುಗಳ ದರ್ಶನಾರ್ಥ ಎಲ್ಲರೂ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಹೋಗಿದ್ದರು. ಉತ್ಸವಾಂತ್ಯದಲ್ಲಿ ಚಿಕ್ಕ ಮಗುವಾಗಿರುವ ಇಂದಿನ ಕಥಾನಾಯಕರನ್ನು ಶ್ರೀರಾಯರ ದರ್ಶನದಿಂದ ಆನಂದಭರಿತರಾದ ಕುಟುಂಬೀಕರೆಲ್ಲರೂ ಶ್ರೀರಾಯರ ಸನ್ನಿಧಾನದಲ್ಲೇ ಬಿಟ್ಟು ಬರಲು, ಈವಿಷಯವನ್ನರಿಯದ ಅರ್ಚಕರು ಮಠದ ಬಾಗಿಲನ್ನು ಮುಚ್ಚಿಬಿಟ್ಟರು. ಮರುದಿನ ಪುಟ್ಟ ಗೋವಿಂದದಾಸರನ್ನು ಪ್ರಶ್ನಿಸಲಾಗಿ, "ಕರಿತಾತ ಕರೆದು ತಂದ" ಎಂದು ಹೇಳಿದ ಮಾತುಗಳೆಲ್ಲವೂ ಶ್ರೀಮನ್ಮಂತಾಲಯ ಪ್ರಭುಗಳನ್ನು ಹೋಲುವಂತಿತ್ತು. ಸುರಪುರದ ಯಳಮೇಲಿ ಶ್ರೀವಿಠಲಾಚಾರ್ಯರಿಂದ ಇವರ ಉಪನಯನವಾಗಿತು. ಸತತ ಶ್ರೀಹರಿಗಾನಾಮೃತದಲ್ಲೇ ಕಾಲಕಳೆದ ಇವರು ದೇವದುರ್ಗ ತಾಲೂಕಿನ ಮದರಕಲ್ ಗ್ರಾಮವಾಸಿಗಳಾದ ವೆಂಕೋಬರಾಯರ ಮಗಳಾದ ತುಳಸಾಬಾಯಿಜೊತೆ ಲಗ್ನವಾದರು. ಆನಂದಸಾಗರಲ್ಲಿ ಮಗ್ನವಾದ ಈ ದಂಪತಿಗಳಿಗೆ ಲಕ್ಷ್ಮೀನಾರಾಯಣನೆಂಬ ಮಗುವಿನ ಜನನವೂ ಆಗಿತು. ಎರಡನೇ ತಿಂಗಳಿನಲ್ಲಿ ಆ ಮಗುವು ನಂದಿಹೋಗಿತು. ಇದಕ್ಕೆ ಬೇಸರ ಪಡದೇ ಇಂದಿನ ಕಥಾನಾಯಕರು, "ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ" ಎಂದು ಹೇಳಿದರು.
ಶ್ರೀನೇಮಕಲ್ ರಾಯರ ಮಾರ್ಗದರ್ಶನದಲ್ಲಿ ಬೆಳೆದ 22-23 ವರ್ಷಗಳಿರುವ ಶ್ರೀಗೋವಿಂದದಾಸರನ್ನು ಉದ್ಧಾರ ಮಾಡಲು, ಸ್ವಪ್ನಸೂಚನದಂತೆ "ಯಜಮಾನರಾಯರೆಂದೇ" ಖ್ಯಾತರಾದ "ದಿನ್ನಿ ರಾಘಪ್ಪ"ನವರು ಇವರಿಗೆ ಉಪದೇಶಮಾಡಿದ್ದಲ್ಲದೇ ಶಿಷ್ಯನ ಕಕಲಾತಿಯಮೇರೆ ಕೆಲಕಾಲ ಅಸ್ಕಿಹಾಳದಲ್ಲಿಯೇ ವಾಸಮಾಡುವರಾದರು. ಗುರುಗಳ ಮಾರ್ಗದರ್ಶನದಲ್ಲಿ ಇಂದಿನ ಕಥನಾಯಕರ ಜೀವನದಲ್ಲಿ ಹೊಸದೊಂದು ಆಯಾಮ ಪ್ರಾರಂಭವಾಗುವದಲ್ಲದೇ ಅಸ್ಕಿಹಾಳಗ್ರಾಮದ ಮುಖಚಿತ್ರವೇ ಬದಲಾಗಿತು. ಗುರುಗಳಾದ ಯಜಮಾನರಾಯರ ಅಮೃತಸಿಂಚನದಿಂದ ಗೋವಿಂದದಾಸರ ಸಹಚರರೆಲ್ಲರೂ ದಾಸಪಂಥಹಿಡಿದರು. ಗುರು ಶಿಷ್ಯರ ಸಮಾಗಮದ ಸತ್ರಕ್ಕೆ "ಶ್ರೀರಘುವೀರ ಮಂದಿರ"ವೆಂಬ ಹೆಸರಿಟ್ಟು ಪ್ರತೀನಿತ್ಯವೂ ಹರಿಭಜನೆಯಲ್ಲಿ ಬ್ರಾಹ್ಮಣೇತರರ ಜೊತೆ ತಾವೂ ಭಾಗವಹಿಸುತ್ತಿದ್ದರು.
ಯಜಮಾನರಾಯರು ಮತ್ತು ಕೋಸಿಗಿ ಶ್ರೀಸ್ವಾಮಿರಾಯಾಚಾರ್ಯರಜೊತೆ ಕಲ್ಲೂರಿನ ಬೆಟ್ಟದಮೇಲಿನ ಶ್ರೀಪ್ರಾಣದೇವರ ಸನ್ನಿಧಿಯಲ್ಲಿ ರಾತ್ರಿ ತಂಗಿರಲು, ಇಂದಿನ ಕಥನಾಯಕರಿಗೆ ಶ್ರೀವಾಯುದೇವರ ಅನುಗ್ರಹ ವಾಗಲು, ಎರಡು ಬೆರಳುಗಳ ಸಂಕೇತದಿಂದ ಪೂಜ್ಯ ಕೋಸಿಗಿ ಸ್ವಾಮಿರಾಯಾಚಾರ್ಯರು ಗೋವಿಂದದಾಸರನ್ನು ಸಂಬೋಧಿಸುತ್ತಾ, ಇನ್ನೆಷ್ಟುದಿನ ಮುಚ್ಚಿಡುವೆ ತೆಗೆ ಅವುಗಳನ್ನು" ಎಂದರ. ಕಥಾನಾಯಕರಿಗೆ ಗುರುಗಳಿಂದ, "ಸಿರಿ ಗೋವಿಂದವಿಠಲ"ವೆಂಬ ಅಂಕಿತ ಪಡೆದನಂತರ ನಿತ್ಯ ಭಜನೆಗಾಗಿ ಸ್ವಂತ ದೇವರ ನಾಮಗಳನ್ನು ರಚಿಸಿದರು...
ಇವರ ಕೀರ್ತಿ ಪ್ರವರ್ಧವಾಗುತ್ತಿರಲು, ಸಹಿಸಲಾಗದವರು ಇವರ ಮೇಲೆ ಇಲ್ಲಸಲ್ಲದ್ದನ್ನು ಹೇಳಿ ಅಂದಿನ ಉತ್ತರಾದಿಮಠಾಧೀಶರಾದ ಶ್ರೀಸತ್ಯಧ್ಯಾನತೀರ್ಥರಿಂದ ಬಹಿಷ್ಕಾರ ತರಿಸಿದರು.
ಖಿನ್ನರಾದ ಗೋವಿಂದದಾಸರು, ಸ್ವಾಮಿಗಳ ಆಜ್ಞಾಪತ್ರದಂತೆ ರಾಯಚೂರಿನ ಪೂಜಾರ ಶ್ರೀಭೀಮಚಾರ್ಯರ ಮನೆಯಲ್ಲಿ ಶ್ರೀರಾಮದೇವರ ಪೂಜಾದಲ್ಲಿ ಮಗ್ನರಾದಾಗ, " ಏನೇನು ಭಯವಿಲ್ಲ ನಮಗೆ | ಪವಮಾನ ಸೇವಕ ಗುರು ರಘುಪತಿ ದಯವಿರೆ" ವೆಂಬ ಕೀರ್ತನೆಯನ್ನು ಭಾವೋದ್ರೇಕದಿಂದ ಉರಿಬಿಸಿಲಿನಲ್ಲೇ ನಿಂತು ಹಾಡುತ್ತಿರಲು,
ಪೂಜಾ ಮುಗಿಸಿ, ಭಿಕ್ಷಾ ಸ್ವೀಕಾರ ಮಾಡಿ ಹೊರಗೆ ಬಂದ ಸ್ವಾಮಿಗಳು, ಗೋವಿಂದದಾಸರ ಜೊತೆ,
ಏನೋ ದಾಸನಾಗಿರುವದಲ್ಲದೇ ಇತರರಿಗೂ ದಾಸದೀಕ್ಷೆ ಕೊಡುವಷ್ಟು ಮುಂದುವರೆದಯಾ? ಎಂದು ಪ್ರಶ್ನಿಸಲು, "
ಇದೇ ಪೇಳಿ ಪೋದರು ವಿಧು ವದನೆ ನಮ್ಮ | ಬುಧನುತ ಪದದ ನಾರದರು ಈ ಜಗದಿ ಬಂದು | ವೆಂಬ ಪದವನ್ನೇ ಆಲಾಪಿಸಲು, ಇವರ ಶಬ್ದ ಲಾಲಿತ್ಯಕ್ಕೆ ಮನೆ ಸೋತ ಸ್ವಾಮಿಗಳು ತಮ್ಮ ಗುರುಗಳಾದ ಶ್ರೀಸತ್ಯಜ್ಞಾನತೀರ್ಥರ ಮೇಲೆ ಒಂದು ಕೀರ್ತನೆಯನ್ನು ಹಾಡೆಂದು ಹೇಳಲು, ಹಾಗೇ ಮಾಡಿದ ಗೋವಿಂದದಾಸರಿಗೆ ತಾವೇ ಅಕ್ಷತೆಯನ್ನು ಹಚ್ಚಿ, ತೀರ್ಥಪ್ರಸಾದಕ್ಕೆ ಅನುಕೂಲ ಮಾಡಿಕೊಡುವುದಲ್ಲದೇ ಮರುದಿವಸವೂ ಬರಲು ಹೇಳಿದರು. ಅದರಂತೇ ಪೂಜಾವೇಳೆಗೆ ಬಂದ ಗೋವಿಂದದಾಸರು, " ಸತ್ಯಧ್ಯಾನರ ಕಾಟ ತಾಳಲಾರೆವೋ ಎಂದು " ಎಂದು ಎರಡುಸಲ ಹಾಡಲು, "
ಬಹಿಷ್ಕಾರ ತೆಗೆದು ಹಾಕಿದೆಂದು ಈ ರೀತಿ ಪ್ರಾರಂಭಿಸಿದೆಯಲ್ಲೋ" ಎಂದು ಪೂಜ ಮಾಡುತ್ತಿದ್ದ ಶ್ರೀಸತ್ಯಧ್ಯಾನರು ಗುಡುಗಿದರೊಳಗೆ
ದಾಸರು ಸಮಾಧಾನದಿಂದ ಸತ್ಯಧ್ಯಾನರ ಕಾಟ ತಾಳಲಾರೆವೋ ಎಂದು | ಸತ್ಯಧ್ಯಾನರ ಕಾಟ ತಾಳಲಾರೆವೋ ಎಂದು | ಸತ್ಯಧ್ಯಾನರ ಕಾಟ ತಾಳಲಾರೆವೋ ಎಂದು | ನಿತ್ಯ ದಿತಿಜರು ಕಲಿಗೆ ದೂರುತಿಹರು || ಎಂದು ಹೇಳುತ್ತಾ ಪದವನ್ನು ಮುಂದುವರಿಸಲು ಸ್ವಾಮಿಗಳು ಶಾಂತಚಿತ್ತದಿಂದ ಶ್ರೀರಾಮದೇವರ ಪೂಜ ಮಾಡಿ ದಾಸರನ್ನು ಅನುಗ್ರಹಿಸಿದರು.
ತಮ್ಮ ಅಪ್ಪಣೆ ಇಲ್ಲದೇ ತಮ್ಮ ದರ್ಶನಕ್ಕೆ ಬರಬಾರದೆಂದ ಗುರುಗಳ ಮಾತಿಗೆ ಬೆಲೆಕೊಟ್ಟು, ಅರಣ್ಯ ಇಲಾಖೆಯಲ್ಲಿ ರೇಂಜ ಆಫೀಸರಾಗಿ ಮಹಬೂಬನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಗುರುಗಳಾದ ಯಜಮಾನರಾಯರನ್ನು ನೋಡದೇ ಒಂದು ವರ್ಷ ಕಳೆಯಲು ಪೂಜ್ಯದಾಸರಿಗೆ ಅದು ಒಂದು ಯುಗದಂತಿತ್ತು...
ಗುರುಗಳ ದರ್ಶನಾಕಾಂಕ್ಷಿಗಳಾಗಿ, ಗುರುಗಳ ಕಟ್ಟಾಜ್ಞೆಯನ್ನು ಮೀರಿ, ಗುರುಗಳ ಅಗಲಿಕೆ ಅಸಹನೀಯವಾಗಿ, ದು:ಖವು ಉಕ್ಕುಕ್ಕಿ ಬರುತಿರಲು,
ಅಸ್ಕಿಹಾಳದಿಂದ ದೇವರಕದ್ರ ವರೆಗೆ ಪಾದಚಾರಗಳಾಗಿಯೇ ಹೊರಟರು.
12 ಮೈಲು ದೂರದಲ್ಲಿರುವ ಗುರುಗಳ ದರ್ಶನಕ್ಕೆ ಕಾತುರರಾಗಿದ್ದ ದಾಸರು ರೈಲ್ ನಲ್ಲಿ ಮಹಬೂಬನಗರಕ್ಕೆ ತೆರಳಿದರು.
ಅದೇ ಸಮಯಕ್ಕೆ, ಮಂಗಳಸ್ನಾನತುರರಾಗಿ ಯಜಮಾನರಾಯರು ತೈಲವನ್ನು ಲೇಪಿಸಿಕೊಳ್ಳುತ್ತಿರಲು,
ತಮಗೆ ಮಕ್ಕಳಾಗಲಿಲ್ಲವಲ್ಲಾ ಎಂಬ ಕೊರಗನ್ನು ಪತ್ನಿಯು ತೋಡಿಕೊಳ್ಳಲು, ಕೂಡಲೇ ಯಜಮಾನರಾಯರು, "ನಮಗೆ ಗೋವಿಂದದಾಸನೇ ಮಗನು. ನಮಗೆ ಮಕ್ಕಳಿಲ್ಲವೆಂದು ಯಾಕೆ ಹೇಳುತ್ತಿ?" ಎಂದು ಹೇಳುತ್ತಿರಲು ಇವರ ಮನೆಯ ತಲಬಾಗಿಲು ಸಪ್ಪಳವಾಗಿತು. ಕೂಡಲೇ ಯಜಮಾನರಾಯರು ಇವರನ್ನು ನೋಡಿ, "ಬೇಡವೆಂದರೂ ಬಂದು ಬಿಟ್ಟೆಯಾ!" ಎಂದು ಉದ್ಗರಿಸಲು,
ದಾಸರಿಗೆ ಗುರುಗಳಬಗ್ಗೆ ಇರುವ ಭಕ್ತಿಯ ಪ್ರವಾಹವು ಭೋರ್ಗರೆದು ಹರಿಯತೊಡಗಲು, ಕಂಠವು ಗದ್ಗದವಾಗಿ, ಹೃದಯಾಂತರಾಳದಿಂದ ನುಡಿವೊಂದು ಹೊರಹೊಮ್ಮಿತು.
ಇಷ್ಟು ಮಾಡಿ ಕೈಬಿಟ್ಟು ಕೂಡುವುದು ಶಿಷ್ಯರ ನಡತಲ್ಲೋ ಗುರುವೆ | ಬಲು ಕಷ್ಟದೊಳಗೆ ನಾ ಮುಳುಗಿರುವೆ |
ನೀ ಕೊಟ್ಟ ಅಭಯದಿಂ ಬದುಕಿರುವೆ | ಸಿಟ್ಟು ಮಾತ್ರ ನೀನಾಗಬೇಡ ಪೊರೆ | ಜಿಷ್ಣುಸಾರಥಿಯ ಪ್ರಿಯ ಮಗುವೆ ಬಾ ಬಾ ಗುರುವೆ | ....................
ಕಡೆ ನುಡಿಯನ್ನದು ಭಿಡೆಯ ಇಡದೆ | ನಾನುಡಿವೆ ಎನ್ನ ಮರೆತರೆ ಮಂಗನು ನೀ ನಿಜವೆ | ಎಂದು ಹೇಳುತ್ತಾ ತಮ್ಮ ಗುರುಗಳಾದ ಯ...ಜ...ಮಾ...ನ...ರಾ...ಯ...ರ...ಚ...ರ...ಣ...ಕ...ಮ...ಲ...ಗ...ಳ...ಮೇ...ಲೆ...ತ...ಲೆ...ಇ...ಟ್ಟ...ರು... ಪುನ: ಏಳಲೇ ಇಲ್ಲ....
ಪೂಜ್ಯ ಗುರ್ವಂತರ್ಯಾಮಿ ಭಾರತೀರಮಣ ಶ್ರೀಮುಖ್ಯಪ್ರಾಣಾಂತರ್ಗತ ಸಿರಿಗೋವಿಂದನ ಪಾದಾರವಿಂದಗಳಲ್ಲಿ ರಮಿಸುತ್ತಾ, ಆನಂದಮಕರಂದವನ್ನು ದುಂಬಿಯಂತೆ ಹೀರುತ್ತಾ, ಇಂದಿನ ಕಥಾನಾಯಕರ ಮರಣದಲ್ಲಿಯೂ ಚರಿತ್ರೆಯನ್ನು ಮೀರಿಸಲಾಗಲಿಲ್ಲ....
ಅರ್ಜುನನು ತನ್ನ ಮಗ ಅಭಿಮನ್ಯುವಿನ ವೀರಸ್ವರ್ಗವನ್ನು ಕಂಡಂತೆ, ಗುರುಗಳ ಸನ್ನಿಧಿಯಲ್ಲಿ ಪ್ರಿಯ ಶಿಷ್ಯನಾದ ಗೋವಿಂದದಾಸರೂ ಸಹ ಗೋವಿಂದನ ಪಾದಾರವಿಂದಗಳನ್ನು ಸೇರಿಕೊಂಡರು...
ನೀ ಮಾಡುವ ಕಾರ್ಯ ನಾ ಮಾಡಬೇಕಾಯಿತೇ ಎಂದು ಮರುಗುತ್ತಾ, ಗುರುಗಳಾದ ಶ್ರೀಯಜಮಾನರಾಯರ ಕಣ್ಣಲ್ಲಿ ಧಾರಾಕಾರದಂತೆ ನೀರು ಹರಿಯುತ್ತಿರಲು", ಶಿಷ್ಯೋತ್ತಮನಾದ ಗೋವಿಂದದಾಸರ ಸಂಸ್ಕಾರವು ಗುರುಗಳಿಂದೇ ನಡೆದು ಹೋಯಿತು...
ಹೀಗೆ ಅಲ್ಪ ಜೀವಿತಾವಧಿ ಕಾಲದಲ್ಲಿ ಮಹತ್ತರ ಸಾಧನೆ ಮಾಡಿ ಅತೀ ಸಮಾಜದ ಎಲ್ಲ ಸ್ತರದ ಜನ ಮಾನಸದಲ್ಲಿ ಭಕ್ತಿಯನ್ನು ಮೂಡಿಸಿ ಭಗವಂತನ ಅನುಗ್ರಹವನ್ನು ಕೊಡಿಸಿದ ಮಹಾನುಭಾವರ ಪುಣ್ಯಾರಾಧನೆ ಇಂದು .
ಅವರು ರಚಿಸಿದ ಈ ಕೃತಿಯ ಸಾಲುಗಳು ತುಂಬಾ ಮಾರ್ಮಿಕವಾಗಿ ಮನ ಮುಟ್ಟುವಂತಿವೆ.
ಕೇಳುವದರೊಳಗೆ ಕಳೆದೆಯಲ್ಲ ದಿನ ಮಾಡುವದೆಂದ್ ಹೇಳೆಲೆ ಮನವೇ..
ಮನನ ಮಾಡಿ ಮಾಧವನ ಮಹಿಮೆ ಅನುಭವಕ್ಕೆ ತಾರದೆ ಈ ಪರಿಯಲಿ ಬರೇ.....
- ರಾಯಚೂರು ಶೇಷಗಿರಿ ದಾಸ್

0 Comments