Ticker

6/recent/ticker-posts

Ad Code

Responsive Advertisement

ಅವೈಜ್ಞಾನಿಕ, ಅಸಂವಿಧಾನಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡಲೇ ವಾಪಸು ಪಡೆಯಬೇಕು: ಎಸ್.ಡಿ.ಪಿ.ಐ

ಬೆಂಗಳೂರು ಸೆ.14: ರಾಜ್ಯದಲ್ಲಿ ತರಾತುರಿಯಲ್ಲಿ ಯಾವುದೇ ಚರ್ಚೆ ಗಳಿಲ್ಲದೆ ಜಾರಿಗೊಳಿಸಲು ಉದ್ದೇಶಿಸಿರುವ ಅಸಂವಿಧಾನಿಕ, ಅವೈಜ್ಞಾನಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮುಕ್ತವಾಗಿ ಚರ್ಚಿಸಿ ಹಿಂಪಡೆಯಬೇಕೆಂದು ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸಮಿತಿಯು ಒತ್ತಾಯಿಸಿದೆ.
ಮೂರು ದಶಕಗಳ ನಂತರ ಜಾರಿಗೊಳಿಸಲು ಉದ್ದೇಶಿಸಿರುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಹೊಸ ಬದಲಾವಣೆಯ ನಿರೀಕ್ಷೆಯಲ್ಲಿದ್ದರು, ಆದರೆ ಈ ನಿರೀಕ್ಷೆಗೆ ತದ್ವಿರುದ್ದವಾಗಿ ವಾಸ್ತವ್ಯತೆಯಿಲ್ಲದ ಜನರನ್ನು ಕನಸಿನ ಲೋಕದಲ್ಲಿ ತೇಲಾಡಿಸುವ ಅಸಮರ್ಪಕ ಹಾಗೂ ಅವೈಜ್ಞಾನಿಕವಾದ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ ರೀತಿಯಲ್ಲಿ ಕ್ಯಾಬಿನೆಟ್ ಸಭೆ ಕರೆದು ಲೋಕಸಭೆಯಲ್ಲಾಗಲಿ, ವಿಧಾನಸಭೆಯಲ್ಲಾಗಲಿ ಚರ್ಚೆಗೆ ಒಳಪಡಿಸದೆ ಹಿಂಬಾಗಿಲಿನ ಮುಖಾಂತರ ಜಾರಿಗೊಳಿಸಿರುವುದರ ಹಿಂದಿರುವ ದುರುದ್ದೇಶವನ್ನು ಎಸ್.ಡಿ.ಪಿ.ಐ ಪ್ರಶ್ನಿಸಿದೆ.
        ಈ ನೀತಿಯು ಶಿಕ್ಷಣವನ್ನು ಕೇಂದ್ರೀಕರಿಸುವುದರೊಂದಿಗೆ ಖಾಸಗೀಕರಣಕ್ಕೆ ಒತ್ತು ನೀಡುತ್ತದೆ ಹಾಗೂ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರವನ್ನು ಹೊಂದಿದೆ. 2016 ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸುಗೊಳಿಸಿದ ಸುಭ್ರಮಣ್ಣಿಯನ್ ನೇತೃತ್ವದ ಸಮಿತಿಯ ವರದಿಯನ್ನು ಯಾಕಾಗಿ ಸಾರ್ವಜನಿಕಗೊಳಿಸಲಿಲ್ಲ? ಹಾಗೂ ಅವರ ವರದಿಯ ಅಭಿಪ್ರಾಯಗಳನ್ನು ಯಾಕಾಗಿ ಪರಿಗಣಿಸಲಿಲ್ಲ? ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ, ತದನಂತರ ಕಸ್ತೂರಿ ರಂಗನ್ ರವರ ನೇತೃತ್ವದಲ್ಲಿ ರೂಪಿಸಲಾದ ನೀತಿಯಲ್ಲಿರುವ ತೊಡಕುಗಳ ಕುರಿತು 2019 ರಲ್ಲಿಯೇ ಎಸ್ಡಿಪಿಐ ವಿರೋಧ ವ್ಯಕ್ತಪಡಿಸಿತ್ತು. ಆದರೆ ಹಲವಾರು ಶಿಕ್ಷಣ ತಜ್ಞರು ನೀಡಿದ ಯಾವ ಅಭಿಪ್ರಾಯಗಳನ್ನು ಸಹ ಪರಿಗಣಿಸದೆ ಸರ್ವಾಧಿಕಾರಿಯಾಗಿ ಕೈಗೊಂಡ ತೀರ್ಮಾನವಾಗಿದೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ. ಈ ನೀತಿಯನ್ನು ಜುಲೈ 29 , 2020 ರಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಜಾರಿಗೊಳಿಸುವುದರ ಕುರಿತು ಕೇಂದ್ರ ಸರ್ಕಾರ ಹೇಳಿಕೆ ನೀಡಿತ್ತು.  
          ಈ ನೀತಿಯು ಕನ್ನಡ ವಿರೋಧಿಯಾಗಿದೆ, ಅಂಗನವಾಡಿಗಳನ್ನು ನಾಶ ಮಾಡುವ ಹುನ್ನಾರ ಹೊಂದಿದೆ, ಬಡ ಮಕ್ಕಳನ್ನು ಶಿಕ್ಷಣದಿಂದ ವಂಚಿಸುತ್ತದೆ, ಶಿಕ್ಷಣದ ಖಾಸಗೀಕರಣಕ್ಕೆ ದಾರಿಮಾಡಿಕೊಡುತ್ತದೆ, ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದೆ, ಮೌಢ್ಯತೆಗೆ ಒತ್ತು ನೀಡುತ್ತದೆ, ಅಲ್ಪಸಂಖ್ಯಾತರನ್ನು, ದಲಿತರನ್ನು, ಹಿಂದುಳಿದ ವರ್ಗಗಳನ್ನು ಉನ್ನತ ಶಿಕ್ಷಣದಿಂದ ವಂಚಿಸುತ್ತದೆ.
          ಈ ಎಲ್ಲಾ ಕಾರಣಗಳನ್ನು ಮನಗಂಡು ತಮಿಳುನಾಡು ಸರ್ಕಾರ ಈ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಹಾಗೂ ಕೇರಳ ಸರ್ಕಾರವು ಇದರ ವಿರುಧ್ದ ಅಭಿಪ್ರಾಯದ ಶಿಫಾರಸ್ಸು ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ ಅದಲ್ಲದೆ ಪಶ್ಚಿಮ ಬಂಗಾಳ ಸರ್ಕಾರವು ತಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ ಇದರೊಂದಿಗೆ ದೆಹಲಿಯ ಉಪನ್ಯಾಸಕರು ಕೂಡ ಇದರ ವಿರುದ್ದ ಪ್ರತಿಭಟಿಸಿದ್ದಾರೆ.
 ಇಂತಹ ಗೊಂದಲದ ಗೂಡಾಗಿರುವ ಈ ನೀತಿಯನ್ನು ಇದೀಗ ಕರ್ನಾಟಕದಲ್ಲಿ ಯಾವುದೇ ಚರ್ಚೆ ನಡೆಸದೆ ತರಾತುರಿಯಲ್ಲಿಜಾರಿಗೊಳಿಸಿರುವುದು ಖಂಡನೀಯ. ಇದೀಗಾಗಲೇ ಕರ್ನಾಟಕದಲ್ಲಿ ಇದರ ವಿರುಧ್ದ ಹೋರಾಟಗಳು ನಡೆಯುತ್ತಿದ್ದು ಒಂದು ವೇಳೆ ಹಠಮಾರಿ ಧೋರಣೆಯೊಂದಿಗೆ ರಾಜ್ಯ ಸರಕಾರ ಈ ನೀತಿಯನ್ನು ವಾಪಸ್ ಪಡೆಯದೇ ಇದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷರಾದ ಅಡ್ವೊಕೇಟ್ ಮಜೀದ್ ಖಾನ್ ಎಚ್ಚರಿಕೆ ನೀಡಿದ್ದಾರೆ.

Post a Comment

0 Comments

Ad Code

Responsive Advertisement