ಬೆಂಗಳೂರು: ವಿಶ್ವದಾದ್ಯಂತ ಕೋವಿಡ್-19ರಿಂದ ಉದ್ಭವಿಸಿದ್ದ ಸಂಕಷ್ಟ ಇನ್ನೂ ದೂರಾಗಿಲ್ಲ. ಕರೋನಾದಿಂದ ಮುಕ್ತರಾಗಲು ಲಸಿಕೆ ಒಂದೇ ಮಾರ್ಗ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿ ಸಾರಿ ಹೇಳುತ್ತಿದ್ದರೂ ಸಹ ಕಾರ್ಮಿಕ ಸಂಘಟನೆಯೊAದರ ಸ್ವಪ್ರತಿಷ್ಠೆ ಕಾರಣದಿಂದ ಕಾರ್ಮಿಕ ವಲಯಕ್ಕೆ ಲಸಿಕೆ ನೀಡುವ ಯೋಜನೆ ನೆನೆಗುದಿದೆ ಬಿದ್ದಿರುವ ಬಗ್ಗೆ ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾ ಯೂನಿಯನ್ ಆಕ್ಷೇಪ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಕ್ಕೆ ಸೇರಿದ ಒಂದು ಕೋಟಿಗೂ ಅಧಿಕ ಕಾರ್ಮಿಕರು ವಿವಿಧ ವಲಯಗಳಲ್ಲಿ ಇದ್ದಾರೆ. ಈ ಕಾರ್ಮಿಕರಿಗೆ ಕೋವಿಡ್ ಲಸಿಕೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರ ಕಾಳಜಿಯಿಂದಾಗಿ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡುವ ಬೃಹತ್ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಆದರೆ, ರಾಜ್ಯದಲ್ಲಿ ಇರುವ ಹತ್ತು ಹಲವು ಕಾರ್ಮಿಕ ಸಂಘಟನೆ ಪೈಕಿ ಒಂದೇ ಒಂದು ಕಾರ್ಮಿಕ ಸಂಘಟನೆ ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿತು. ಈ ಹೋರಾಟವನ್ನು ಕೂಡಲೇ ಪರಿಗಣಿಸಿದ ಸರ್ಕಾರವು ಕಾರ್ಮಿಕ ಲಸಿಕೆ ಅಭಿಯಾನವನ್ನು ಕೈಬಿಟ್ಟಿರುವುದು ಎಷ್ಟು ಸರಿ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ ಎಂದು ಸಂಘಟನೆ ಅಧ್ಯಕ್ಷ ಡಿ.ಸಿ. ಪಾಪಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬAಧ ಸರ್ಕಾರಕ್ಕೆ ಮನವಿ ಸಲ್ಲಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂದು ಕರೋನಾ ಲಸಿಕೆಗಾಗಿ ಕಾರ್ಮಿಕ ವರ್ಗ ಮೂರು ದಿನ ವ್ಯರ್ಥ ಮಾಡಬೇಕಾದ ಪರಿಸ್ಥಿತಿ ಇದೆ. ಕಾರ್ಮಿಕ ಕಲ್ಯಾಣ ನಿಧಿಯಿಂದ ಕಾರ್ಮಿಕರಿಗೆ ಲಸಿಕೆ ಕೊಡಿಸುವುದು ಬೇಡ ಎಂಬುದು ಲಸಿಕೆ ಅಭಿಯಾನವನ್ನು ವಿರೋಧಿಸುತ್ತಿರುವ ಒಂದು ಸಂಘಟನೆಯ ವಾದವಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಕೊರತೆ ಕಾರಣ ನೀಡುತ್ತಿರುವ ಲಸಿಕೆ ಪ್ರಮಾಣ ಅತ್ಯಲ್ಪ ಮತ್ತು ಲಸಿಕೆಗಾಗಿ ಟೋಕನ್ ಪಡೆಯಲು ಒಂದು ದಿನ, ಲಸಿಕೆ ಪಡೆಯಲು ಒಂದು ದಿನ, ನಂತರ ಜ್ವರದಿಂದ ಬಳಲಿದರೆ ಒಂದು ದಿನ ಹೀಗೆ ಕಾರ್ಮಿಕರು ಲಸಿಕೆಗಾಗಿ ಮೂರು ದಿನಗಳ ಕೂಲಿ ಬಿಟ್ಟು ಲಸಿಕೆ ಪಡೆಯಲು ಶಕ್ತರೇ ಎಂಬುದನ್ನು ಲಸಿಕೆ ಅಭಿಯಾನ ವಿರೋಧಿಸುತ್ತಿರುವ ಸಂಘಟನೆಗೆ ಚಿಂತಿಸದಿರುವುದು ಶೋಚನೀಯವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಲಸಿಕೆಗಾಗಿ ಯಾವುದೇ ಹಣ ಬಳಸಿದರೂ ಅದು ಸರ್ಕಾರದ ಹಣವೇ, ತೆರಿಗೆ ಸೇರಿದಂತೆ ವಿವಿಧ ಸೆಸ್‌ಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವೇ ಅಲ್ಲವೆ? ಅಲ್ಲದೆ ಕಟ್ಟಡ ಕಾರ್ಮಿಕರ ಸೆಸ್ ಹಣವನ್ನು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬಳಸಿದರೆ ತಪ್ಪೇನು? ಎಂಬುದು ಈ ಸಂಘಟನೆಗಳಿಗೆ ಗೊತ್ತಿಲ್ಲದ ವಿಷಯವೇವನಲ್ಲ. ಹೀಗಿದ್ದರೂ ಲಸಿಕೆ ಅಭಿಯಾನವನ್ನು ವಿರೋಧಿಸುತ್ತಿರುವುದು ಸ್ವಪ್ರತಿಷ್ಟೇಯಲ್ಲದೆ ಮತ್ತೇನು? ಎಂದು ಪ್ರಶ್ನಿಸಿರುವ ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾ ಯೂನಿಯನ್ ಕೆಲ ಸಂಘಟನೆಗಳ ಕಾರ್ಮಿಕ ವಿರೋಧಿ ನೀತಿಯನ್ನು ಸರ್ಕಾರ ಮತ್ತು ಶ್ರಮಿಕ ವರ್ಗ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಾಗಿ ಹಣ ನೀಡಲಾಗುತ್ತಿದೆ ಎಂಬ ವಾದವನ್ನು ಮುಂದಿಟ್ಟುಕೊAಡು ಕಾರ್ಮಿಕ ಸಂಘಟನೆಯೊAದು ಲಸಿಕೆ ಅಭಿಯಾನವನ್ನು ವಿರೋಧಿಸುತ್ತಿರುವುದು ಅಸಮಂಜಸವಾಗಿದೆ. ಏಕೆಂದರೆ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಮೊತ್ತವನ್ನು ಸರ್ಕಾರಿ ದರದಲ್ಲಿ ಮಾತ್ರ ನೀಡಲಾಗುತ್ತಿದೆ. ಹೀಗಿದ್ದಾಗ ಕಾರ್ಮಿಕ ಸಂಘಟನೆಯ ತಕರಾರು ಏಕೆ? ಎಂಬುದೇ ಸಂಶಯಾಸ್ಪದವಾಗಿದೆ. ಕಟ್ಟಡ ಕಾರ್ಮಿಕರು ಹಾಗೂ ಸಾಕಷ್ಟು ಪ್ರಮಾಣದ ವಲಸೆ ಕಾರ್ಮಿಕರಿಗೆ ಲಸಿಕೆ ಕುರಿತು ತಿಳುವಳಿಕೆ ಮೂಡಿಸಬೇಕಿದೆ. ಆಸ್ಪತ್ರೆಗಳ ಮಾಹಿತಿ, ಲಸಿಕೆ ಪಡೆದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಎರಡು ಡೋಸ್ ಪಡೆಯುವ ಅನಿವಾರ್ಯತೆ ಇತ್ಯಾದಿಗಳ ಕುರಿತು ಮಾಹಿತಿ ಒದಗಿಸಬೇಕಿದೆ. ಹೊರ ರಾಜ್ಯದ ಕಾರ್ಮಿಕರಿಗೆ ಈ ರಾಜ್ಯದ ಆರೋಗ್ಯ ವ್ಯವಸ್ಥೆಯ ಬಗ್ಗೆ ಮಾಹಿತಿ ಕೊರತೆಯೂ ಕಾಡುತ್ತಿದೆ. ಈ ಎಲ್ಲ ಕಾರ್ಮಿಕರು ಈವರೆಗೂ ಪಡೆದ ಲಸಿಕೆ ಪ್ರಮಾಣ ಶೇ.5ಕ್ಕಿಂತ ಕಡಿಮೆ ಎಂಬುದು ಇಲಾಖೆಯ ಮಾಹಿತಿಯೇ ತಿಳಿಸುತ್ತದೆ. ಹೀಗಿದ್ದಾಗಲೂ ಸೆಸ್ ಉಳಿತಾಯದ ನೆಪದಲ್ಲಿ ಕಟ್ಟಡ ಮತ್ತು ವಲಸೆ ಕಾರ್ಮಿಕರ ಜೀವನದ ಜತೆ ಚೆಲ್ಲಾಟವಾಡುತ್ತಾ, ಸಮಾಜದಲ್ಲಿ ಕೋವಿಡ್ ಸರಪಳಿಯನ್ನು ಮುರಿಯದೆ ಈ ರೀತಿ ವರ್ತಿಸುತ್ತಿರುವ ಕಾರ್ಮಿಕ ಮುಖಂಡರಿಗೆ ತಿಳಿದಿಲ್ಲವೆ ಎಂದು ಪಾಪಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಕರೋನಾ ಮೂರನೇ ಅಲೆ ಭೀತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ದಿನ ನಿತ್ಯದ ಅನ್ನಕ್ಕಾಗಿ ಕೂಲಿ ನಾಲಿ ಮಾಡುವ ಕಾರ್ಮಿಕರಿಗೆ ಲಸಿಕೆ ಅನಿವಾರ್ಯ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಎಷ್ಟು ಪ್ರಮಾಣದ ಕಾರ್ಮಿಕರು ಮುಂದಾಗುತ್ತಾರೆ? ಮತ್ತು ಎಷ್ಟು ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ದೊರಕಲಿದೆ? ಎಂಬ ಚಿಂತೆ ಇಲ್ಲದೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿದ್ದೆಡೆಗೆ ತೆರಳಿ ಲಸಿಕೆ ಹಾಕುವ ಅಭಿಯಾನವನ್ನು ವಿರೋಧಿಸುತ್ತಿರುವ ಸಂಘಟನೆಗಳ ಉದ್ದೇಶವಾದರೂ ಏನು? ಎಂಬುದು ಅಸ್ಪಷ್ಟವೇನಲ್ಲ!.
ಮೂರನೇ ಅಲೆ ಭೀತಿಯಿಂದ ಕಾರ್ಮಿಕ ವರ್ಗವನ್ನು ಕಾಪಾಡಬೇಕಿದ್ದರೆ ಲಸಿಕೆ ಅಭಿಯಾನ ಅನಿವಾರ್ಯ. ಹೀಗಾಗಿ ಸರ್ಕಾರವು ಯಾವುದೇ ಸಂಘಟನೆಗಳ ಆಟಾಟೋಪಕ್ಕೆ ತಲೆಬಾಗದೆ ಕಾರ್ಮಿಕರ ಲಸಿಕೆ ಅಭಿಯಾನವನ್ನು ಮುಂದುವರೆಸುವ ದಿಟ್ಟ ನಿರ್ಧಾರಕ್ಕೆ ಮುಂದಾಗುವ ಮೂಲಕ ದೇಶವನ್ನು ಮೂರನೇ ಅಲೆಯಿಂದ ಮುಕ್ತವಾಗಿಸಬೇಕು ಎಂದು ಪಾಪಣ್ಣ ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ..
-VARTHAJALA, BENGALURU.
ADVT:
0 Comments