Ticker

6/recent/ticker-posts

Ad Code

Responsive Advertisement

ಸುರಪುರ ಶ್ರೀ ಆನಂದದಾಸರು (ಕಮಲೇಶವಿಠಲ ದಾಸರು) ಅವರ ಆರಾಧನೆ -18-09-2021

18 ಸೆಪ್ಟೆಂಬರ್ 2021 ರಂದು ಸುರಪುರ ಶ್ರೀ ಆನಂದದಾಸರು (ಕಮಲೇಶವಿಠಲ ದಾಸರು) ಅವರ ಆರಾಧನೆ ಪ್ರಯುಕ್ತ ಒಂದು ಲೇಖನ  

" ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪರಮಾನುಗ್ರ ಪಾತ್ರರಾದ ಶ್ರೀ ಗಾನ ಗಂಧರ್ವ ಸುರಪುರದ ಶ್ರೀ ಆನಂದದಾಸರು " (ಕಮಲೇಶವಿಠ್ಠಲ ದಾಸರು) ರಂಗ ಒಲಿದ ದಾಸರಾಯರಾದ ಶ್ರೀ ಸಹ್ಲಾದಾಂಶ ಶ್ರೀ ಜಗನ್ನಾಥದಾಸರ ಶಿಷ್ಯ ಪರಂಪರೆಯಲ್ಲಿ ಬಂದವರು ಸುರಪುರದ ಶ್ರೀ ಅನಂದದಾಸರು.

ಶ್ರೀ ಜಗನ್ನಾಥದಾಸರು ।

ಶ್ರೀ ಶ್ರೀಶ ವಿಠ್ಠಲರು ।

ಸುರಪುರದ ಶ್ರೀ ಆನಂದದಾಸರು 

" ಸುರಪುರದ ಶ್ರೀ ಆನಂದದಾಸರ ಸಂಕ್ಷಿಪ್ತ ಚರಿತ್ರೆ "

ಹೆಸರು : ಆನಂದ 

ಜನ್ಮಸ್ಥಳ : ಚೀಕಲಪರವಿ 

ತಮ್ಮ : ಶೇಷ 

ವಿದ್ಯಾ ಗುರುಗಳು : ಶ್ರೀ ರಾಜಾಚಾರ್ಯರು 

ಅಂಕಿತೋಪದೇಶ ಗುರುಗಳು : ಶ್ರೀ ಶ್ರೀಶ ವಿಠ್ಠಲರು 

ಅಂಕಿತ : ಕಮಲೇಶವಿಠ್ಠಲ 

ಸ್ವರೂಪೋದ್ಧಾರಕ ಗುರುಗಳು : ಇಭ್ರಾಮಪುರ ಶ್ರೀ ಅಪ್ಪಾರವರು 

ಅಂಶ : ಗಂಧರ್ವ ( ಗಾಯನ ಮಾಡತಕ್ಕವರು )

ಕಕ್ಷೆ : 27 

ಹರಿಪದ ಸೇರಿದ ಸ್ಥಳ : ಸುರಪುರ 

ಆರಾಧನಾ ದಿನ : ಭಾದ್ರಪದ ಶುದ್ಧ ದ್ವಾದಶೀ 

" ಜನನ ಮತ್ತು ವಿದ್ಯಾಭ್ಯಾಸ "

ಶ್ರೀ ವಿಜಯರಾಯರ ತಪೋಭೂಮಿಯಾದ ಚೀಕಲಪರವಿಯಲ್ಲಿ ಜನಿಸಿದ ಆನಂದ; ತನ್ನ 

ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಗಳ ವಿಯೋಗದಿಂದ ವಿದ್ಯಾರ್ಜನೆಗಾಗಿ ತನ್ನ ತಮ್ಮನೊಂದಿಗೆ ಸುರಪುರಕ್ಕೆ ಬಂದು ಪಂಡಿತ ರಾಜಾಚಾರ್ಯರ ಪಾದಕ್ಕೆ ಬಿದ್ದು ಅವರ ನೆರವಿನಿಂದ ಆ ಸಹೋದರರ ಪ್ರೌಢ ವಿದ್ಯಾಭ್ಯಾಸ ಪ್ರಾರಂಭವಾಯಿತು. ಅವರಲ್ಲಿ ದ್ವೈತ ವೇದಾಂತದಲ್ಲಿ ವಿದ್ವತ್ತನ್ನು ಪಡೆದರು. 

" ಗಾನ ಗಂಧರ್ವ "

ಆನಂದ ಶ್ರೀ ರಾಜಾಚಾರ್ಯರಲ್ಲಿ ವೇದಾಂತ ಅಭ್ಯಾಸ ಮಾಡುತ್ತಿದ್ದಾಗ ಇವರ ಕಂಠ ಮಾಧುರ್ಯವನ್ನು ಕೇಳಿ " ಕಂಠ ವೀಣೆಯ " ರೆಂಬ ಖ್ಯಾತಿ ಪಡೆದಿದ್ದ ಶ್ರೀ ವೈಷ್ಣವ ಮತಸ್ಥ ಗಾನ ಪಂಡಿತರು ಆನಂದನಿಗೆ ಬಲವಂತವಾಗಿ ಗಾನ ವಿದ್ಯೆಯನ್ನು ಕಲಿಸಿದರು. ಹೇಳಿ ಕೇಳಿ ಆನಂದನು ಮೊದಲೇ ಗಂಧರ್ವಾಂಶನು. ಆದುದರಿಂದ ಆನಂದನಿಗೆ ಗಾನ ವಿದ್ಯೆ ಕರತಲಾಮಲಕವಾಯಿತು. 

" ರಾಜ ಮರ್ಯಾದೆ "

ಆನಂದನ ವಿದ್ಯಾ ಮತ್ತು ಗಾನ ಪಾಂಡಿತ್ಯವನ್ನು ಕೇಳಿ ಸುರಪುರದ ಮಹಾರಾಜನು ರಾಜ ಮರ್ಯಾದೆಯೊಂದಿಗೆ ಆನಂದನನ್ನು ರಾಜಾಸ್ಥಾನಕ್ಕೆ ಆಹ್ವಾನಿಸಿ ತನ್ನ ಅರಮನೆಯ ಆಸ್ಥಾನ ಸಂಗೀತ ವಿದ್ವಾಂಸನನ್ನಾಗಿ ನೇಮಿಸಿ ಗೌರವಿಸಿದನು. ಅಂದಿನಿಂದ ಆನಂದನು ಸುರಪುರದ ರಾಣಿಯೊಂದಿಗೆ ಅಲ್ಲಿಯ ದಾಸೀ ವರ್ಗಕ್ಕೆ ಸಂಗೀತಾಭ್ಯಾಸವನ್ನು ಮಾಡಿಸಲು ಪ್ರಾರಂಭಿಸಿದನು. ಇದನ್ನು ಕಂಡು ಶ್ರೀ ರಾಜಾಚಾರ್ಯರಿಗೆ ಸಂತೋಷದೊಂದಿಗೆ ಎಲ್ಲಿ ಆನಂದನು ಅಡ್ಡ ದಾರಿ ಹಿಡಿಯುತ್ತಾನೋ ಎಂಬ ಭಯವೂ ಆವರಿಸಿತು. 

" ಶ್ರೀ ಶ್ರೀಶ ವಿಠ್ಠಲರ ಸಮಾಗಮ "

ಶ್ರೀ ಶ್ರೀಶವಿಠ್ಠಲರು ಸಂಚಾರ ಕ್ರಮದಲ್ಲಿ ಸುರಪುರಕ್ಕೆ ದಿಗ್ವಿಜಯ ಮಾಡಿಸಿದರು. ಸುರಪುರದ ಮಹಾರಾಜನು ರಾಜ ಮರ್ಯಾದೆಯೊಂದಿಗೆ ಶ್ರೀ ಶ್ರೀಶವಿಠ್ಠಲರನ್ನು ಬರ ಮಾಡಿಕೊಂಡನು. ರಾಜನ ಆಸ್ಥಾನದಲ್ಲಿ ಅಂದು ನಡೆದ ಶ್ರೀ ದಾಸರ ಕೀರ್ತನೆಗಳು ಆನಂದನ ಮನಸ್ಸಿನ ಮೇಲೆ ಬಹಳ ಪರಿಣಾಮವನ್ನುಂಟು ಮಾಡಿತು. ಶ್ರೀ ಶ್ರೀಶವಿಠ್ಠಲರ ಕೀರ್ತನ ಶ್ರವಣದಿಂದ ಆನಂದನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. 

" ಕೀರ್ತನವು ಭಗ್ನ ಮನೋರಥರ ಭಿಕ್ಷಾ ವೃತ್ತಿ " ಎಂಬ ತಪ್ಪು ತಿಳುವಳಿಕೆ ದೂರವಾಯಿತು. ವಿಷಯಾನಂದದಲ್ಲಿ ಹಿಗ್ಗುತ್ತಿದ್ದ ಆನಂದನ ಮನಸ್ಸು ಬ್ರಹ್ಮಾನಂದ, ಆತ್ಮಾನಂದ ಎಂದು ಕರೆಯಿಸಿಕೊಳ್ಳುವ ಭಾಗವನ್ನಾಮಾನಂದವನ್ನು ಹೊಂದುವುದಕ್ಕೆ ಹಾತೊರೆಯತೊಡಗಿತು. ವಿದ್ವಾಂಸರು ಬಯಸಿದಂತೆ ಕೀರ್ತನಕಾರನಾಗಬೇಕು; ಕೀರ್ತನೆ ಮಾಡಬೇಕೆಂಬ ಬಯಕೆ ಆನಂದನಲ್ಲು೦ಟಾಯಿತು. 

" ಶ್ರೀ ಶ್ರೀಶ ವಿಠ್ಠಲರಲ್ಲಿ ಆನಂದನ ಪ್ರಾರ್ಥನೆ "

ಆನಂದನು ತನ್ನ ವಿದ್ಯಾ ಗುರುಗಳಾದ ಶ್ರೀ ರಾಜಾಚಾರ್ಯರ ಮನೆಯಲ್ಲಿ ನಡೆದ ಶ್ರೀ ದಾಸರ ಕೀರ್ತನಕ್ಕೆ ರಾಗ ರಚನೆ ಮಾಡಿದ ಆನಂದನನ್ನು ಕಂಡು ತಂಬೂರಿ ಮೀಟುತ್ತಿದ್ದ ಆನಂದನನ್ನು ಶ್ರೀ ರಾಜಾಚಾರ್ಯರು ಶಿಷ್ಯನನ್ನು ಹೊಗಳುತ್ತಾ ಪದಕ್ಕೆ ಅಂಕಿತವನ್ನು ಪಡೆಯುವಂತೆ ಪ್ರೋತ್ಸಾಹಿಸಲು ಆನಂದನು ಶ್ರೀ ಶ್ರೀಶವಿಠ್ಠಲರಲ್ಲಿ ಅಂಕಿತೋಪದೇಶ ಪ್ರಸಾದವನ್ನು ದಯಪಾಲಿಸಬೇಕೆಂದು ಪ್ರಾರ್ಥಿಸಿಕೊಂಡನು. 

" ಬ್ರಹ್ಮ ವಿದ್ಯೋಪದೇಶ "

ಆನಂದನ ಭಕ್ತಿಗೆ ಅಭಿಮುಕ್ತವಾದ ಮನಃ ಪರಿಪಕ್ವತೆಯನ್ನು ಕಂಡು ಶ್ರೀ ಶ್ರೀಶವಿಠ್ಠಲರು ಆನಂದನಿಗೆ ಬ್ರಹ್ಮ ವಿದ್ಯೋಪದೇಶವನ್ನು ಮಾಡಿದರು. ವೈರಾಗ್ಯ ಮತ್ತು ನಾಮ ಸ್ಮರಣೆಯನ್ನು ಬೋಧಿಸಿದರು. 

" ಅಂಕಿತ ಪ್ರದಾನ "

ಶ್ರೀ ಶ್ರೀಶವಿಠ್ಠಲರು ತಾವು ಸುರಪುರಕ್ಕೆ ಬಂದದ್ದು ಸಫಲವಾಯಿತೆಂಬ ತೃಪ್ತಿಯೊಂದಿಗೆ ಆನಂದನಂಥಾ ಶಿಷ್ಯ ದೊರೆತ ಮೇಲೆ ಶ್ರೀ ದಾಸರು ಬಹಳ ಸಂತೋಷ ಪಟ್ಟು, ಆನಂದನನ್ನು ಪ್ರೀತಿಯಿಂದ ಹರಿಸುತ್ತಾ ಒಂದು ಶುಭ ಮುಹೂರ್ತದಲ್ಲಿ ಅಂಕಿತವನ್ನು ಕೊಡಲು ನಿಶ್ಚಯಿಸಿದರು. 

ಆನಂದನನ್ನು ಭದ್ರ ಪೀಠದ ಮೇಲೆ ಕುಳ್ಳಿರಿಸಿ ತಮ್ಮ ಬಿಂಬಮೂರ್ತಿಯನ್ನು ಆವಾಯಿಸುತ್ತಾ ಶ್ರೀ ದಾಸಾರ್ಯರು ಆನಂದನಿಗೆ " ಕಮಲೇಶವಿಠ್ಠಲ " ಎಂದು ಅಂಕಿತವನ್ನಿತ್ತು; ಅಂದಿನಿಂದಲೇ ಕೀರ್ತನೆ ರಚನೆ ಮತ್ತು ಕೀರ್ತನ ಸೇವೆಯನ್ನು ಪ್ರಾರಂಭಿಸಬೇಕೆಂದು ಆಹ್ವಾನಿಸಿದರು. 

ಅಂದಿನಿಂದ ಈ ಗಾನ ಗಂಧರ್ವನ ಜೀವನದಲ್ಲಿ ಹೊಸ ಅಧ್ಯಾಯವೇ ಪ್ರಾರಂಭವಾಯಿತು. ವೈರಾಗ್ಯವೇ ಅವರ ಸೌಭಾಗ್ಯವಾಯಿತು. ಧ್ಯಾನವೇ ಅವರ ಗಾನವಾಯಿತು. ಸಂತತ ಹರಿಕಥಾ ಕೀರ್ತನವೇ ಅವರ ನಿತ್ಯ ಕರ್ತವ್ಯವಾಯಿತು. 

" ಶ್ರೀ ಕಮಲೇಶವಿಠ್ಠಲಾಂಕಿತದಲ್ಲಿ ಪ್ರಪ್ರಥಮ ರಚನೆ "

ರಾಗ : ಕೇದಾರಗೌಳ ತಾಳ : ಆಟ 

ಬ್ರಹ್ಮಣ್ಯದೇವನೆಂಬುವ ।

ಮಹಾ ಬಿರುದು ನಿನಗೆ ಸಲ್ಲುವುದಯ್ಯ ।

ಬ್ರಹ್ಮ ರುದ್ರಾದ್ಯರುಗಳು ದೈವವೆಂದ । ಹಮ್ಮಿನಿಂ ।

ದ ಹೊಡೆದಾಡುವರು ಬರಿದೆ ।। ಪಲ್ಲವಿ ।।

ಹಿಂದೆ ಸರಯು ತೀರದೋಳ್ ಮಹಾಪುರ ।

ವೃಂದವೆಲ್ಲ ಕೋಡಿ ಸರ್ವೇಶ್ವರ । 

ಸಂದೇಹ ತಿಳಿಸಲು ಭೃಗು ಮುನಿಗಳಿಗ೦ದೆ ಆಜ್ಞೆ ಮಾಡಿ ।। ಚರಣ ।।

ಮಂದಜಾಸನೇಂದು ಧರರ ಪರಿಭಾವದಿಂದ ।

ಬೆಂದು ನಿನ್ನ ಸನ್ನಿಧಾನಕ್ಕೆ ಬಂದು । ಪಾದ ।

ದಿಂದೊದೆಯ ಲಭಿವಂದನಂ ।

ಗೈದು ಘಳಿಸಿದೆ ಪರ ।। ಚರಣ ।।

ರಾಜಸೂಯ ಯಾಗದೊಳ್ ಮಹಾ । ಮಹ ।

ರಾಜ ಸಂದಣಿಯಲಿ । ಆಗ್ರ ।

ಪೂಜಾಯತಾರ್ಥದಿಂದ ಗಾಂಗೇಯ ಸಮ್ಮುಖದಲಿ ।। ಚರಣ ।।

ಆವದೇವಗಿಲ್ಲ ಶಕುತಿ ಬ್ರಹ್ಮ । ಕುಲಾವ ।

ಮಾನದಿಂದ ಪೇಳ್ದುದನು ಕೇಳ್ ।

ಕಾವ ಕಮಲೇಶವಿಠ್ಠಲ ನ । ಪ್ರತ್ಯ ।

ಕ್ಷಾವ ಲೋಕನದಲಿ ಧನ್ಯನಾದೆ ।। ಚರಣ ।।

ಶ್ರೀ ಆನಂದದಾಸರ ಕೀರ್ತನೆಯ ಕಾವ್ಯ ಝರಿ ರಾಜಾಸ್ಥಾನದಲ್ಲಿ ಬಹುಮುಖವಾಗಿ ಶ್ರುತವಾಯಿತು. ಅಂದಿನಿಂದ ಆನಂದನು ಶ್ರೀ ಆನಂದದಾಸರಾಗಿ ಪ್ರಸಿದ್ದರಾದರು. 

" ಮಾನ ಸಮ್ಮಾನಗಳು " 

ಸಂಗೀತದಲ್ಲಿ ಘನ ಪಂಡಿತರೂ, ದ್ವೈತ ವೇದಾಂತದಲ್ಲಿ ಅಪ್ರತಿಮ ವಿದ್ವಾಂಸರೂ ಆದ ಶ್ರೀ ಆನಂದದಾಸರ ಬೋಧನವೂ ಭಾವಪೂರ್ಣವೂ, ಭಕ್ತಿ ಭರಿತವೂ ಆದ ಹರಿಕಥೆಗಳಿಗೆ ಅವರ ಕಿನ್ನರ ಕಂಠದ ಮಧುರ ನಾದಶ್ರೀಯೂ ಸೇರಿ ಅದೊಂದು ನಾಟಕದಂತೆ ಜನರಿಗೆ ರಂಜಕ ರೋಚಕವಾಗಿರುತ್ತಿತ್ತು.  

ಶ್ರೀ ಆನಂದದಾಸರ ಅಭಿವೃದ್ಧಿಯನ್ನು ನೋಡಿ ಸಂತೋಷ ಪಟ್ಟು ಸುರಪುರದ 

ಮಹಾರಾಜನು ಕನಕಾಭಿಷೇಕ ಮಾಡಿದನು. 

ವನಪರ್ತಿ, ಗದ್ವಾಲ, ಕೊಲ್ಹಾಪುರ ಮತ್ತು ಮೈಸೂರು ಮಹಾರಾಜಾಸ್ಥಾನಗಳು ಹಾಗೂ ಸಂಗೀತ ಪ್ರವಚನಗಳು ರಾಜ ಮಹಾರಾಜರ, ಪಂಡಿತ ಪಾಮರರ, ಮಾನ್ಯ ಸಾಮಾನ್ಯರೆಲ್ಲರ ಮನಸ್ಸನ್ನು ಸೂರೆಗೊಂಡಿದ್ದವು. ಶ್ರೀ ಆನಂದದಾಸರಿಗೆ ಭಕ್ತಿ ಶ್ರದ್ದೆಗಳಿಂದ ಗೌರವ ಸಮರ್ಪಣೆ ಮಾಡಿದರು.

ಕೊಲ್ಹಾಪುರ ಮಹಾರಾಜನಿಂದ ಸನ್ಮಾನಿತರಾಗಿ ನೇರವಾಗಿ ಜಗನ್ಮಾತೆಯಾದ ಮಹಾಲಕ್ಷ್ಮೀಯ ದರ್ಶನಾಕಾಂಕ್ಷಿಗಳಾಗಿ ಅಮ್ಮನ ಪರಮಾನುಗ್ರದಿಂದ ಆದ ಈ ರಾಜ ಸನ್ಮಾನಗಳನ್ನು ಕಂಡು ಹರ್ಷ ಪುಳಕಿತರಾಗಿ ಶ್ರೀ ಮಹಾಲಕ್ಷ್ಮಿಯ ಮುಂಭಾಗದಲ್ಲಿ ನಿಂತು..

ರಾಗ : ಅರಭಿ ತಾಳ : ಆದಿ

ರಾಮಾ ಸಮುದ್ರನ ಕುಮಾರಿ ನಿನ್ನಯ ।

ಸಮಾನರ್ಯಾರಮ್ಮಾ ।। ಪಲ್ಲವಿ ।।

ಸುಮಾಸ್ತ್ರನಯ್ಯನೆದೆ ಸತತ । ಬ ।

ಹುಮಾನದಲಿ ಮೆರೆವ ಮಹಾ ಮಹಿಮಳೆ ।। ಅ. ಪ ।।

ಕನಕ ಮಂಡಿತ ಕುಟಿಲಾಳಕ ಜಾಲೇ । ಶ್ರೀ ಚಂ ।

ದನ ಕುಂಕುಮ ಕಸ್ತೂರಿ ತಿಲಕಾಂಕಿತ ಫಾಲೇ ।

ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ । ಚಂಪಕ ।

ನನೆ ನಾಸಾಗ್ರದೊಳೊಗುವ ಮೌಕ್ತಿಕ ಲೋಲೇ ।। ಚರಣ ।।

ಮಿನುಗುವ ಮಾಣಿಕಮಣಿಧರ । ಪುಟದೊ ।

ಳಿನಿವರ ವಜ್ರದಿ ಕಣಿಗಳ ರಾಜಿ । ದ ।

ಶನಯುತ ಸ್ಮೇರಾನನ ಶುಭ ಕಾಂತಿಯಿಂ ।

ವನಜ ಭವನ ಮನೆಗೆ ಮಂಗಳಗರೆವ ।। ಚರಣ ।।

ಕೊರಳೊಳು ಪರಿಮಳ ಪರಿಪರಿ ಪುಷ್ಪದ ಮಾಲೆ । ಒಪ್ಪುವ ।

ರರಿರಾಜನ ಕರಡಿರುವಿಕೆ ಕರಗಳ ಲೀಲೇ ।

ಶರಣಾಗತ ಜನ ಪರಿಪಾಲನರತ ಶೀಲೇ । ಗಂಡನ ।

ಪರಿರಂಭಣ ಸಾಮ್ರಾಜ್ಯದ ಸುಖದನುಕೂಲೇ ।। ಚರಣ ।।

ಕರುಣಿಸಮ್ಮ ತಮ ಕರುಣಕಟಾಕ್ಷದ ।

ಸಿರಿಯ ಬೆಳಗಿನೊಳ್ ಪರಿಚಯಿಸುವ । ಸುಜ ।

ನಾರಾ ಚರಣಾಂಬುಜ ಪರಿಮಳದೊಳು । ಮನ ।

ವೆರಗಿಸುವುದು ಸೌಂದರ್ಯ ಶಿಕಾಮಣಿ ।। ಚರಣ ।।

ರಮಣೀಯ ವಿಮಲಾ ಕಮಲಾಯತದಳ ನೇತ್ರೇ । ಚಂಪಕ ।

ಸುಮದ ಸುವರ್ಣ ಪರಿಮಳದ ಸುಂದರ ಗಾತ್ರೇ ।

ಕಮಲಭವೇಂದ್ರಾದ್ಯಮರ ಮುನಿಗಣ ಸ್ತೋತ್ರೇ । ಶ್ರೀ ।

ಕಮಲೇಶವಿಠ್ಠಲರಾಯನ ಕರುಣಕೆ ಪಾತ್ರೇ ।। ಚರಣ ।।

" ಸಂಗೀತ ಸರಸ್ವತೀ "

ಹಿಂದೂಸ್ತಾನೀ, ಕರ್ನಾಟಕೀ ಸಂಗೀತ ಪದ್ಧತಿಗಳ ಮಧುರ ಸಂಗಮವು, ಅವರ ಕೀರ್ತನೆಗಳನ್ನು ಹೃದಯಂಗಮವಾಗಿಸುತ್ತಿದ್ದವು. ಭರತ ನಾಟ್ಯಕ್ಕೆ ಅನುಕೂಲವಾದ ಅನೇಕ ಭಾವ್ಯಾಭಿವ್ಯಂಜಕ ಮಟ್ಟು ಗಟ್ಟುಗಳನ್ನು ಅವರು ತಮ್ಮ ವಿವಿಧ ಜಾವಡಿಗಳಲ್ಲಿ ಸಂಗ್ರಹಿಸಿದ್ದರು. 

ಶ್ರೀ ಆನಂದದಾಸರ ಜಾವಡಿಗಳ ಜಾಡಿನಲ್ಲಿ ಹಾಡುವವರೂ, ಸರಿಯಾದ ಅಭಿನಯ ನೀಡುವವರೂ ಆ ಕಲೆಯೇ ಲುಪ್ತವಾಗಿ ಹೋಗಿರುವುದರಿಂದ ಯಾರೂ ಈಗ ದೊರಕುವದಿಲ್ಲ. 

" ಮೈಸೂರು ಸಂಸ್ಥಾನದಲ್ಲಿ ಕನಕಾಭಿಷೇಕ "

ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀ ಅನಂದದಾಸರನ್ನು ಅರಮನೆಗೆ ರಾಜ ಮರ್ಯಾದೆಯಿಂದ ಆಹ್ವಾನಿಸಿ ಆಸ್ಥಾನದಲ್ಲಿ ಅವರಿಂದ ಹರಿಕಥೆಗಳನ್ನು ಮಾಡಿಸಿ ಪರಮಾನಂದ ಪಟ್ಟು ಶ್ರೀ ದಾಸರ ಜ್ಞಾನ - ಭಕ್ತಿ - ಗಾನಗಳಿಗೆ ಮನಸೋತು ಶ್ರೀ ಆನಂದದಾಸರಿಗೆ ಸ್ವತಃ ಮಹಾರಾಜರೇ ಕನಕಾಭಿಷಕ ಮಾಡಿದರು. 

" ಶ್ರೀ ಇಭರಾಮಪುರದ ಅಪ್ಪಾವರ ಸನ್ನಿಧಿಯಲ್ಲಿ ಶ್ರೀ ಆನಂದದಾಸರು "

ಶ್ರೀ ದಾಸಾರ್ಯರಿಗೆ ಎಲ್ಲಾ ಲೌಕಿಕ ಭೋಗ ಭಾಗ್ಯಗಳಲ್ಲಿ ಎಂದೋ ಉಪರತಿ ಹುಟ್ಟಿತ್ತು. ವೈರಾಗ್ಯವು ಭಗವನ್ನಿಷ್ಠೇಯೊಂದಿಗೆ ಅವರ ಅಂತರಂಗದ ಕದ ಕಟ್ಟಿತ್ತು. ಎಲ್ಲಾ ಲೌಕಿಕ ವೈಭವ ಗೌರವಗಳನ್ನು ತೊರೆದು ಶ್ರೀ ಇಭರಾಮಪುರದ ಅಪ್ಪಾವರ ಸನ್ನಿಧಿಗೆ ಬಂದರು. ಶ್ರೀ ಆಚಾರ್ಯರು ದಾಸರಿಗೆ ಏಕಾಂತ ಭಕ್ತಿಯ ರಹಸ್ಯ ಮಾರ್ಗವನ್ನು ತಿಳಿಸಿಕೊಟ್ಟರು.  

" ಪಂಚ,ಪಂಚಮುಖಿ ಶ್ರೀ ಪ್ರಾಣದೇವರ ಸನ್ನಿಧಿಯಲ್ಲಿ ಶ್ರೀ ಆನಂದದಾಸರು "

ರಾಗ : ದೇವಗಾಂಧಾರಿ ತಾಳ : ಆದಿ 

ವಾಯುನಂದನ ವಾರಿಧಿ ಬಂಧನ ।। ಪಲ್ಲವಿ ।।

ಸಿರಿಯರಸನ ಗುಣ ಗಾಯನಲೋಲ । ತದೀ ।

ಯರ ಸೇವೆ ದಯವನು ಸೂಸಿ ।। ಚರಣ ।।

ಮರ್ಕಟವರ ತರುಣಾರ್ಕನಿಭಾನನ ।

ಶರ್ಕರಾಕ್ಷ ದೇವರ್ಕಳ ವಂದ್ಯನ ।। ಚರಣ ।।

ರಾಕ್ಷಸರೊಳಗಧ್ಯಕ್ಷ ಕುಮಾರನ ।

ಮೋಕ್ಷಗೈದು ಬಲಾದಕ್ಷ ನೆನಿಸಿದ ।। ಚರಣ ।।

ದುರ್ಯೋಧನನ ಕಾರ್ಯಾವ ಮಾಡಿಸಿ ।

ವೀರ್ಯವಂತರೊಳು ವರಯ ನೆನಿಸಿದ ।। ಚರಣ ।।

ಅದ್ವೈತಿಗಳ ಧ್ವಂಸ ಮಾಡಿದ ।

ಮಧ್ವ ಮತಾಬ್ಧಿ ವಿವರ್ಧನ ಚಂದ್ರ ।। ಚರಣ ।।

ಈಶಾದ್ಯಮರರ ಮಹಾ ಸುಖದ । ಶ್ರೀ ಕಮ ।

ಲೇಶವಿಠ್ಠಲ ದಾಸೋತ್ತಮ ।। ಚರಣ ।।

ಶ್ರೀ ಆನಂದದಾಸರಿಗೆ ಶ್ರೀ ಪರಮಾತ್ಮನನ್ನು ಕಾಣಬೇಕೆಂಬ ಹಂಬಲದಿಂದ ಅವನ ಮಗನ ಪರಮ ಪವಿತ್ರವಾದ ಸನ್ನಿಧಾನಕ್ಕೆ ಬಂದು ಸೇವೆಯನ್ನು ಪ್ರಾರಂಭಿಸಿದರು. ಪ್ರತಿದಿನವೂ ಶ್ರೀ ಮುಖ್ಯಪ್ರಾಣದೇವರನ್ನು ಮಧು ಅಭಿಷೇಕದಿಂದ ಅರ್ಚಿಸಿ, ಪೂಜಿಸಿ, ಸೇವೆಗೈದು, ಶ್ರಾವಣ ಮಾಸವಾದ್ದರಿಂದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ದರ್ಷನಾಕಾಂಕ್ಷಿಗಳಾಗಿ ಶ್ರೀ ಆನಂದದಾಸರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದರು. 

" ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಕಾರುಣ್ಯ "

ಶ್ರೀ ಕ್ಷೇತ್ರ ಮಂತ್ರಾಲಯದ ಕ್ಷೇತ್ರ ದೇವತೆ ಸಾಕ್ಷಾತ್ ಶ್ರೀ ಹರಿಯ ಮಡದಿ, ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮೀ. ಕ್ಷೇತ್ರಪಾಕಲ ಸಾಕ್ಷಾತ್ ಶ್ರೀ ನೃಸಿಂಹದೇವರು. ಮಂತ್ರಾಲಯದಲ್ಲಿ ನೆಲೆಯಾಗಿನಿಂತ ಜಗನ್ಮಾತೆಯನ್ನು ಲಕ್ಷ್ಮೀಯೆಂತಲೂ, ದುರ್ಗೆಯಂತಲೂ, ಮಂತ್ರಾಲಯಾಂಬಿಕೆಯಂತಲೂ ಮಂಚಾಲಮ್ಮಯೆಂತಲೂ ಕರೆಯುವುದುಂಟು. 

ಪೂರ್ವದಲ್ಲಿ ಈ ಗ್ರಾಮಕ್ಕೆ " ಮಂಚಾಲೆ " ಎಂಬ ಹೆಸರಿದ್ದಿತು. ಮುಂದೆ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು ಮಂಚಾಲೆ ಗ್ರಾಮದಲ್ಲಿ ನೆಲೆಸಿದ್ದು, ಅಲ್ಲಿ ನಿತ್ಯ ವೇದ ಮಂತ್ರಗಳಿಂದ - ವಾದ್ಯ ವೈಭವಗಳಿಂದ ಶ್ರೀ ಹರಿಯ ಆರಾಧನೆಯು ನಡೆಯುವ ಕ್ಷೆತ್ರವಾದ್ದರಿಂದ ಇದು ಮಂತ್ರಾಲಯ ಕ್ಷೇತ್ರವೆಂದು ಪ್ರಸಿದ್ಧವಾಯಿತು. 

ಜಾತಿ, ಮತ, ಕುಲ, ದೇಶ ಪಂಥಗಳ ಭೇದವಿಲ್ಲದೇ ತಮ್ಮನ್ನು ನಂಬಿ ಬಂದ ಭಕ್ತರಿಗೆ ಮನಃ ಶಾಂತಿ, ಸಮಾಧಾನ, ಸಂತೃಪ್ತಿ, ಸೌಭಾಗ್ಯಗಳನ್ನು ನೀಡುತ್ತಿರುವ ಕಲಿಯುಗದ ಕಲ್ಪವೃಕ್ಷ - ಕಾಮಧೇನುವೆಂದೇ ಜಗತ್ಪ್ರಸಿದ್ಧವಾದ ಮಂತ್ರಾಲಯ ಪ್ರಭುಗಳ ನೆಲೆಬೀಡು. ಅಂತೆಯೇ " ದೇವರೆಂದರೆ ತಿರುಪತಿ ತಿಮ್ಮಪ್ಪ - ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂದೇ ಪ್ರಸಿದ್ಧಿ!!

ಸತ್ಯ ಲೋಕಾಧಿಪತಿಗಳ ಭಕ್ತರೂ, ಪರಿಶುದ್ಧ ಭಾಗವತಾಧರ್ಮರತರೂ ಆದ ಶ್ರೀ ವಾಯುದೇವರ ನಿತ್ಯಾsವೇಶಯುಕ್ತರೂ, ಶ್ರೀ ಲಕ್ಷ್ಮೀನಾರಾಯಣರ ನಿತ್ಯ ಸನ್ನಿಧಾನಯುಕ್ತರಾಗಿ ಮಹಾ ಮಹಿಮಾನ್ವಿತರಾದ ಶ್ರೀ ರಾಘವೇಂದ್ರತೀರ್ಥರು ಇರುವ ಸ್ಥಳದಲ್ಲಿ ಮಹಿಮೆಗಳು ( ಪವಾಡಗಳು ) ನಡೆದಿವೆ, ನಡೆಯುತ್ತಿದೆ ಮತ್ತು ನಡೆಯುತ್ತಲೇ ಇರುತ್ತದೆ. 

ಇದಕ್ಕೆ ಕಾರಣ ಶ್ರೀ ವಾಯುದೇವರ ನಿತ್ಯಾವೇಶಯುಕ್ತರಾದ್ದರಿಂದ ಶ್ರೀ ಹರಿಯು ರಾಮ, ನರಹರಿ, ಕೃಷ್ಣ, ವೇದವ್ಯಾಸ, ನಾರಾಯಣನೆಂಬ ಪಂಚರೂಪಗಳಲ್ಲಿ ಶ್ರೀ ರಾಯರ ವೃಂದಾವನದಲ್ಲಿ ನಿತ್ಯ ಸನ್ನಿಹಿತನಾಗಿದ್ದಾನೆ. ಅಂದಮೇಲೆ ಈ ಮಂತ್ರಾಲಯ ಕ್ಷೇತ್ರವು " ಸುರಪನಾಲಯ " ( ಇಂದ್ರಲೋಕವನ್ನು ಅಂದರೆ ಸ್ವರ್ಗವನ್ನು ) ವನ್ನು ನಾಚಿಸುವಂತೆ ಮಾಡಿ ಮೆರೆಯುತ್ತಿದೆ. 

ಶ್ರೀ ಆನಂದದಾಸರು ಶ್ರೀ ಪಂಚಮುಖಿ ಕ್ಷೇತ್ರದಿಂದ ಹೊರಟು ಮಂತ್ರಾಲಯದ ತುಂಗಭದ್ರಾ ನದಿಯ ಆಚೆಯ ದಡದಲ್ಲಿ ನಿಂತು ಶ್ರೀ ರಾಯರನ್ನು ಪ್ರಾರ್ಥಿಸುತ್ತಿದ್ದಾರೆ. ಶ್ರಾವಣ ಮಾಸದ ಮಳೆಗಾಲವಾದ್ದರಿಂದ ತುಂಗಭದ್ರೆಯು ತುಂಬಿ ಹರಿಯುತ್ತಿದ್ದಾಳೆ. ಮೇಲಾಗಿ ಮಳೆಯ ರಭಸ ಹೆಚ್ಚಾಗಿತ್ತು. ಆದರೆ ಶ್ರೀ ದಾಸರು ಮಾತ್ರ ಶ್ರೀರಾಯರ ದರ್ಶನಕ್ಕೆ ಹೋಗಲೇ ಬೇಕೆಂದು ದೃಢ ನಿಶ್ಚಯ ಮಾಡಿದ್ದರು. ಹಾಗಾದರೆ ಹೋಗುವುದೆಂತು ಎಂದು ನೋಡುತ್ತಾ ಅಲ್ಲಿಯೇ ಇದ್ದ ಅಂಬಿಗರನ್ನು ಕರೆದು ಈ ರೀತಿ ನುಡಿದರು. 

ಶ್ರೀ ಆನಂದ ದಾಸರು :

ಅಯ್ಯಾ! ನಾವು ಶ್ರೀ ರಾಯರ ದರ್ಶನಕ್ಕೆ ಹೋಗಬೇಕಾಗಿದೆ. ಹರಿಗೋಲನ್ನು ಹಾಕಿವಿರಾ..?

ಅಂಬಿಗರು :

ದಾಸರೇ! ಈಗ ಹರಿಗೋಲು ಹಾಕುವುದು ಸುಲಭವಲ್ಲ! ಸ್ವಲ್ಪ ಮಳೆ ಕಡಿಮೆ ಆಗಲಿ ನೋಡೋಣ. ಸ್ವಲ್ಪ ಹೊತ್ತಿನಲ್ಲಿಯೇ ಮಳೆಯು ಕಡಿಮೆಯಾಯಿತು. 

ಶ್ರೀ ದಾಸರು :

ಅಯ್ಯಾ! ಮಳೆ ನಿಂತಿತು ಹೋಗೋಣವೇ?

ಅಂಬಿಗರು :

ಸ್ವಾಮೀ! ನೀವು ಬ್ರಾಹ್ಮಣರು. ನೀರಿನ ಪ್ರವಾಹ ಅತಿಯಾಗಿದ್ದು, ಅಕಸ್ಮಾತ್ತಾಗಿ ಹರಿಗೋಲಿಗೆ ಏನಾದರೂ ಆದರೆ ನಿಮಗೆ ಈಜಲು ಬರುವುದಿಲ್ಲ. ಆದ್ದರಿಂದ ಮಂತ್ರಾಲಯದ ಆಚೆ ದಡಕ್ಕೆ ಹೋಗಲು ಸಾಧ್ಯವಿಲ್ಲ ಎಂದರು. 

ಶ್ರೀ ದಾಸರು :

ಶ್ರೀ ರಾಯರ ದರ್ಶನ ಮಾಡಲೇಬೇಕು ಎಂದು ನಿರ್ಧಾರ ಮಾಡಿ, ಅಂಬಿಗರನ್ನು ಕರೆದು ಹರಿಗೋಲನ್ನು ಹತ್ತಿಯೇ ಬಿಟ್ಟರು. ನೀರಿನ ಪ್ರವಾಹದ ವೇಗಕ್ಕೆ ಹರಿಗೋಲು ಮುಳುಗುವ ಸಂಭವ ಹೆಚ್ಚಾಗಿದೆ. ಅದನ್ನು ಕಂಡು ಭಕ್ತಿಯಿಂದ ಶ್ರೀ ದಾಸರು ಶ್ರೀ ರಾಯರನ್ನು ಕರೆಯುತ್ತಿದ್ದಾರೆ. 

ರಾಗ : ಕಮಾಚ್ ತಾಳ : ಆದಿ 

ಕರೆದರೆ ಬರಬಾರದೇ ।। ಪಲ್ಲವಿ ।।

ವರ ಮಂತ್ರಾಲಯ ಪುರ ಮಂದಿರ ತವ ।

ಚರಣ ಸೇವಕರು ಕರವ ಮುಗಿದು ।। ಚರಣ ।।

ಹರಿದಾಸರು ಸುಸ್ವರ ಸಮ್ಮೇಳದಿ ।

ಪರವಶದಲಿ ಬಾಯ್ತೆರೆದು ಕೂಗೀ ।। ಚರಣ ।।

ಪೂಶರಪಿಟಾ ಕಮಲೇಶವಿಠ್ಠಲನ ।

ದಾಸಾಗ್ರೇಸರರು ಈ ಸಮಯದಿ ।। ಚರಣ ।।

ಎಂದು ಕೂಗಿದಾಗ ಸಾಕ್ಷಾತ್ ಶ್ರೀ ರಾಯರು ಮತ್ತು ಶ್ರೀ ವಾದೀಂದ್ರರು ಪುಟ್ಟ ಬಾಲಕರ ರೂಪದಲ್ಲಿ ಬಂದು ಹರಿಗೋಲನ್ನು ಮತ್ತು ಶ್ರೀ ದಾಸರನ್ನು ರಕ್ಷಿಸಿದರು. ಆಗ ದಾಸರು ಬಾಲಕರನ್ನು ಉದ್ಧೇಶಿಸಿ " ಯಾರಪ್ಪಾ! ನೀವುಗಳು.. " ಎಂದು ಕೇಳಿದರೆ.. 

ಅದಕ್ಕೆ ಶ್ರೀ ರಾಯರು " ಮಂಚಾಲೆ ರಾಘಪ್ಪಾ! ವಾದಪ್ಪಾ ಮಂಚಾಲೆ..! ಎಂದು ಹೇಳಿ ಹರಿಗೋಲಿನಿಂದ ಇಳಿದು ಹೊರಟು ಹೋದರು. 

ಶ್ರೀ ಆನಂದದಾಸರು ತುಂಗಭದ್ರೆಯಲ್ಲಿ ಮಿಂದು ಭಕ್ತಿಭಾವದಿಂದ ಬಾಲಕರನ್ನು ಹುಡುಕುತ್ತಾ ಶ್ರೀರಾಯರ ಸನ್ನಿಧಿಗೆ ಬಂದರು. ಅಲ್ಲಿ ಬಾಲಕರು ಕಾಣಲಿಲ್ಲ. ನೇರವಾಗಿ ಶ್ರೀ ರಾಯರ ವೃಂದಾವನದ ಮುಂಭಾಗದಲ್ಲಿ ಬಂದು ನಿಂತು ತದೇಕ ದೃಷ್ಟಿಯಿಂದ ನೋಡುತ್ತಾ ನಿಂತಿದ್ದಾರೆ. ಆ ಸಂದರ್ಭದಲ್ಲಿ ಶ್ರೀ ವೃಂದಾವನದಲ್ಲಿ ಅಚ್ಛರಿಯಾದ ಚಿತ್ರಗಳು ಕಂಡು ಬಂದವು. ಬಾಲಕನ ರೂಪದಲ್ಲಿ ಶ್ರೀ ರಾಯರು ಕಂಡು ಬಂದದ್ದನ್ನು ನೋಡಿ ಶ್ರೀ ರಾಯರ ಭಕ್ತರ ಮೇಲಿರುವ ಕಾರುಣ್ಯವನ್ನು ನೆನೆದು ನೆನೆದು ಧಾರಾಕಾರವಾಗಿ ಕಣ್ಣಿನಲ್ಲಿ ನೀರು ಹರಿಯುತ್ತಿದೆ. ಶ್ರೀ ರಾಯರ ದಯಾಳುತ್ವವನ್ನು ಆನಂದಾತಿಶಯದಿಂದ ಶ್ರೀ ರಾಯರನ್ನು ಈ ರೀತಿ ಸ್ತುತಿಸಿದರು.

ರಾಗ : ಬೇಹಾಗ್ ತಾಳ : ಆದಿ

ಶರಣರ ಸುರಭೂಜ ಗುರುರಾಜ ।। ಪಲ್ಲವಿ ।।

ವರ ಮಂತ್ರಾಲಯ ಪುರ ಮಂದಿರ । ಸುಂ ।

ದರ ಮುನೀಂದ್ರ ಭಾಸ್ಕರ ಸಮ ತೇಜಾ ।। ಚರಣ ।।

ಕಾಮಿತಾರ್ಥಗಳ ಕಾಮಧೇನುವಿನ ।

ಸೀಮೆ ಮೀರಿ ಕೊಡುವ ಮಹರಾಜಾ ।। ಚರಣ ।।

ಭೇಷಕೋಟಿ ಸಂಕಾಶನಾದ । ಕಮ ।

ಲೇಶ ವಿಠ್ಠಲನ ದಾಸನೆ ಸಹಜಾ ।। ಚರಣ ।।

ಎಂದು ಕೊಂಡಾಡಿ ಮೈಮನಗಳು ದಣಿಯುವವರೆಗೂ ಶ್ರೀ ಆನಂದದಾಸರು " ಓಂ ಶ್ರೀ ರಾಘವೇಂದ್ರಾಯ ನಮಃ ಓಂ " ಎಂದು ಅಷ್ಟಾಕ್ಷರ ಮಂತ್ರವನ್ನು ಉಚ್ಛರಿಸುತ್ತಾ ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಿದರು.ಅಷ್ಟರಲ್ಲೇ ಅಲ್ಲಿಗೆ ಬಂದ ಇಭರಾಮಪುರ ಶ್ರೀ ಕೃಷ್ಣಾಚಾರ್ಯರು..

ಏನೋ ಆನಂದಾ! ಪ್ರವಾಹದಿಂದ ಪಾರಾದೆಯಾ? ಶ್ರೀ ರಾಯರ ದರ್ಶನವಾಯಿತಾ? ಎಂದು ಕೇಳಿದಾಗ..ಪರಮಾಶ್ಚರ್ಯ ದಾಸರಿಗೆ! ದಾಸರು ಸತ್ಪುರುಷರ ಚರಣಗಳಿಗೆ ವಂದಿಸುತ್ತಾ ಎಲ್ಲವೂ ಶ್ರೀ ರಾಯರ ಮತ್ತು ತಮ್ಮ ಚರಣಾನುಗ್ರಹದಿಂದ ಆಯಿತು ಎಂದು ವಿನೀತರಾಗಿ ನುಡಿದರು.

" ಶ್ರೀ ಇಭರಾಮಪುರ ಕೃಷ್ಣಾಚಾರ್ಯರಿಂದ ಸ್ವರೂಪ ಜ್ಞಾನ "

ಶ್ರೀ ರಾಯರ ವೃಂದಾವನ ಸನ್ನಿಧಾನದಲ್ಲಿ ನಾದಾನುಸಂಧಾನ ಸುಖದಲ್ಲಿ ಶ್ರೀ ಆನಂದದಾಸರು ತಮ್ಮನೇ ತಾವು ಮರೆತು ಭಾವ ಸಮಧಿಯಲ್ಲಿದ್ದಾಗ; ಅಲ್ಲಿಗೆ ಶ್ರೀ ಇಭರಾಮಪುರ ಕೃಷ್ಣಾಚಾರ್ಯರು ಆಗಮಿಸಿದರು. ಆಚಾರ್ಯರನ್ನು ಗೌರವ ಪೂರ್ವಕ ಮತ್ತು ಪ್ರೀತಿಯಿಂದ " ಅಪ್ಪಾವರು " ಎಂದು ಕರೆಯಲು ವಾಡಿಕೆ.

ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ದಾಸರಿಗೆ ಗಾನ ಗಂಧರ್ವನ ಸ್ವರೂಪದ ಅರಿವನ್ನುಂಟು ಮಾಡಲು..

ಶ್ರೀ ಅಪ್ಪಾವರು :

ಅಹುದೋ ಆನಂದಾ! ಗಾನ ಮಾಡುವುದು ನಿನ್ನ ಸ್ವರೂಪಕ್ಕೆ ಹತ್ತಿದ್ದು; ಇಲ್ಲೂ ಗಂಧರ್ವ! ಲೋಕದ ಗಂಧರ್ವನೇ ನೀನು ಎಂದು ಬೆನ್ನು ಚಪ್ಪರಿಸಿದಾಗಲೇ; ಬಹಿರ್ಮುಖರಾದ ದಾಸರನ್ನು ಶ್ರೀ ಅಪ್ಪಾವರು ಪುನಃ " ಈಗ ಆಯಿತೇ ನಿನ್ನ ಸ್ವರೂಪ ಜ್ಞಾನ! " ಎಂದರು.

ಶ್ರೀ ಆನಂದದಾಸರು :

ಎಚ್ಚೆತ್ತು, ದಾಸರು ತನ್ನ ಸ್ವರೂಪವನ್ನು ತೋರಿಸಿದ ಆಚಾರ್ಯರ ಕಾಲಿಗೆ ಬಿದ್ದವರೇ ಆನಂದಾಶ್ರುಗಳಿಂದ ತನ್ನನ್ನು ಉದ್ಧರಿಸಬೇಕೆಂದು ಪ್ರಾರ್ಥಿಸಿಕೊಂಡರು.

ಶ್ರೀ ಅಪ್ಪಾವರು :

ನಿನ್ನ ಸ್ವರೂಪವೇ ಅಂಥಾದ್ದೆಂದರೆ ನಿನ್ನ ಭಾಗ್ಯ ಎಲ್ಲರ ಪಾಲಿಗಿಲ್ಲ. ಎಲ್ಲಾರ ಶ್ರಮ ನಿನಗಿಲ್ಲ. ನಿನಗೆ ಇದೇ ದಾರಿಯಲ್ಲೇ ಕ್ಷಿಪ್ರದಲ್ಲೇ ಭಗವದ್ದರ್ಶನವಾಗುವುದೆಂದರು.

ಶ್ರೀ ಆನಂದ ದಾಸರು ಉತ್ತರಿಸದೇ ಮನದಲ್ಲೇ ಶ್ರೀ ಅಪ್ಪವರ ಮಾತನ್ನು ಪುನಃ ಪುನಃ ಮನನ ಮಾಡಿಕೊಂಡರು. ಏಕಾಂತವನ್ನು ಬಯಸಿದವರೇ ಕೆಲವು ಕಾಲ ಏಕಾಂತದಲ್ಲಿರಲು ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿಯನ್ನು ಸೇರಿ ಅಲ್ಲಿ ತಮ್ಮ ಇಷ್ಟದೇವತೆ; ಕುಲದೇವತೆ; ಗುರೂಪದಿಷ್ಟ ದೇವತೆಯಾದ ಶ್ರೀ ನೃಸಿಂಹ ಮಂತ್ರೋಪಾಸನೆಯನ್ನು ಮಾಡಿದರು. ನೆನಸಿದಂತೆ ರೂಪ ದರ್ಶನ; ಗುಣ ಕ್ರಿಯಾನುಭಾವಗಳು ಶ್ರೀ ಆನಂದದಾಸರಿಗೆ ಆದವು.

ಆಗ ತಮ್ಮ ಸ್ವರೂಪೋದ್ಧಾರಕ ಗುರುಗಳನ್ನೂ, ಶ್ರೀ ರಾಯರ ದಯಾಳುತ್ವವನ್ನು ಸ್ಮರಿಸುತ್ತಾ..

ರಾಗ : ಭೂಪಾಲಿ ತಾಳ : ಅಟ್ಟ

ಶ್ರೀ ರಾಘವೇಂದ್ರರಾಯರ ಪಾದಾಂಬುಜ ।

ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।

ನಾರಾಯಣ ನಾಮ ಪಾರಾಯಣರ । ಪಾ ।

ದಾರವಿಂದ ಸುಧಾ ರಸವ ಬೀರುವಾ ।। ಅ. ಪ ।।

ಅಲವಬೋಧ ಸತ್ಕುಲ ದೀಪರೆನಿಸಿದ ।

ಹುಲುಗಿಯ ನರಸಪ್ಪಾಚಾರ್ಯರ ।

ಕಲಿಯೊಳು ಕಲಿಕೃತ ಕಲ್ಮಶ ಕಳೆವೆ । ನಿ ।

ರ್ಮಲ ರಾಯ್ಚೂರು ಕೃಷ್ಣಾಚಾರ್ಯರ ।।

ಇಳೆಯೊಳು ಚುಷಷ್ಠಿ ಕಳದಿ ನಿಪುಣರಾದ ।

ಯಳಮೇಲಿ ಹಯಗ್ರೀವಾಚಾರ್ಯರ ।

ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।

ಬಲವಂತ ಯೋಗಿ ನಾರಾಯಣಾರ್ಯರ ।। ಚರಣ ।।

ಧರಣಿದೇವರಿಗೆ ನಿರುತಾನ್ನವನೀವ ।

ವರ ಹರಿಹರ ಭೀಮಾಚಾರ್ಯರ ।

ಹರಿದಾಸರಿಗೆ ಮಂದಿರವಾದ । ಇಭರಾಂ ।

ಪುರದಲ್ಲಿ ಮೆರೆವ ಕೃಷ್ಣಾಚಾರ್ಯರ ।।

ಶಿರಿಪಾದ ಪುತ್ರ ಪಂಡಿತರೊಳಗಗ್ರೇ ।

ಸರ ಶ್ರೀ ರಂಗದ ರಾಮಾಚಾರ್ಯರ ।

ಸುರಪುರ ಶ್ರೀ ನರಹರಿಯ ಪಾದಾಂಬುಜ ।

ಸಿರಿಯೊಳ್ಮೆರೆವ ಅಸ್ಮದ್ಗುರು ರಾಜಾಚಾರ್ಯರ ।। ಚರಣ ।।

ಶ್ರೀ ರಾಘವೇಂದ್ರರಾಯರ ಭೂಮಿಯೊಳವ ।

ಮಾಡಿದ ಆರಂಭದಿಂ ।

ದಾರಾರು ಬೃಂದಾವನ ಪೂಜಾ ಸ್ತೋತ್ರದಿಂ ।

ದಾರಾಧಿಸುವರಾನಂದದಿ ।।

ಸಾರ ಭಕ್ತರ ಪಾದಾರವಿಂದಕೆ । ನಮ ।

ಸ್ಕಾರ ಮಾಡಿರೋ ಸಾಷ್ಟಾಂಗದಿ ।

ಧೀರ ಶ್ರೀ ಕಮಲೇಶವಿಠ್ಠಲ ವಲಿದು ತನ್ನ ।

ಸಾರೂಪ್ಯವ ಕೊಟ್ಟು ಸಲಹುವ ಸಂತತಾ ।। ಚರಣ ।।

ಎಂದು ತಮ್ಮ ಉದ್ಧಾರಕ ಗುರುಗಳನ್ನೂ, ಸ್ವರೂಪೋದ್ಧಾರಕ ಗುರುಗಳನ್ನೂ, ತಮ್ಮ ವಿದ್ಯಾ ಗುರುಗಳನ್ನೂ, ಅಂದಿನ ಕಾಲದ ಜ್ಞಾನಿಗಳನ್ನೂ ಮತ್ತು ತಮ್ಮ ಉಪಾಸ್ಯಮೂರ್ತಿಯಾದ ಶ್ರೀ ನರಸಿಂಹನನ್ನು ಸ್ತೋತ್ರ ಮಾಡಿದ ದಾಸರನ್ನು ಕುರಿತು..

ಶ್ರೀ ಅಪ್ಪವರು :

ಏನು ಆನಂದಾ! ನಮ್ಮ ಹಾಡನ್ನೇ ಹಾಡಿಬಿಟ್ಟಿಯಲ್ಲಾ?

ಶ್ರೀ ಆನಂದದಾಸರು :

ಪುಣ್ಯ ಶ್ಲೋಕರು ತಾವಾದ್ದರಿಂದ ನಾಮ ಸ್ಮರಣೆ ಮಾತ್ರ ಮಾಡಿದೆ ಅಷ್ಟೇ! ಎಂದ ದಾಸರನ್ನು ಪುನಃ ..

ಶ್ರೀ ಅಪ್ಪಾವರು :

ನೀನೆನಪ್ಪಾ ಗಂಧರ್ವ! ಎಂದರು.ತುಂಗಭದ್ರೆಯ ಪ್ರವಾಹದಿಂದ ಪಾರಾಗಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ಪ್ರತ್ಯಕ್ಷ ದರ್ಶನ ಮಾಡಿದ ದಿನದಿಂದ ಅನುಭವಿಸುವ ಧ್ಯಾನಾನಂದವು ಬಿಂಬಾಪರೋಕ್ಷದ ಆನಂದವಾಯಿತು.

ಶ್ರೀ ಆನಂದದಾಸರು ಅಪರೋಕ್ಷ ಜ್ಞಾನಿಗಳಾದರು. ಸಕಲ ಅವರಿಗೆ ಕರತಲಾಮಲಕವಾಯಿತು. ಅಧಿಕಾರ ವಾಣಯಿಂದಾಡುವ ಮಾತುಗಳೆಲ್ಲಾ ಸತ್ಯವಾದವು! ಹಿಂದಿನ ಕೀರ್ತನೆಗಳಲ್ಲಿ ಗಾನ ಬಹಳವಾಗಿದ್ದರೆ, ಇಂದಿನ ಕೀರ್ತನೆಗಳಲ್ಲಿ ತತ್ತ್ವಜ್ಞಾನ ಬಹಳವಾಗಿದೆ.

" ದಾಸರ ಶಿಷ್ಯ ಸಂಪತ್ತು "

ಶ್ರೀ ಮಡಕಶಿರದ ಭೀಮದಾಸರು - ಭೀಮೇಶವಿಠ್ಠಲ

ಶ್ರೀ ಕಮಲಾಪತಿದಾಸರು - ಕಮಲಾಪತಿವಿಠ್ಠಲ

ಶ್ರೀ ಜೋಶಿ ವೆಂಕಪ್ಪಾಚಾರ್ಯರು - ವೆಂಕಟೇಶವಿಠ್ಠಲ

ಶ್ರೀ ಹರಪನಹಳ್ಳಿ ರಾಮಾಚಾರ್ಯರು - ಇಂದಿರೇಶ

ಶ್ರೀ ಗುಂಡಾಚಾರ್ಯರು

ಶ್ರೀ ಬೇಲೂರು ವೆಂಕಟ ಸುಬ್ಬದಾಸರು

ಶ್ರೀ ಸುರಪುರದ ಪ್ರೇಮದಾಸರು

ಸಾಧ್ವೀ ತಂಗಮ್ಮನವರು ( ಇವರು ಶ್ರೀ ಆನದದಾಸರ ಮಗಳು )

" ನಿರ್ಯಾಣ "

ಅನಾಯಾಸೇನ ಮರಣಂ ವಿನಾ ದೈನ್ನೇನ ಜೀವನಂ ।

ಅನಾರಾಧಿತ ಗೋವಿಂದ ಚರಣಸ್ಯೋ ಭಯಂಕುತಃ ।।

ಎಂಬ ಶ್ಲೋಕವು ಶ್ರೀ ಆನಂದದಾಸರಿಗಾಗಿಯೇ ರಚಿತವಾಯಿತೋ ಎಂಬಂತೆ ಶ್ರೀ ಆನಂದದಾಸರ ಅಂತಿಮ ಕಾಲವೂ ಆನಂದಮಯವಾಗಿತ್ತಂತೆ.

ಸುರಪುರದ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ನೂರಾರು ಜನರ ಸಮ್ಮೇಳನದಲ್ಲಿ ಶ್ರೀ ಆನಂದದಾಸರು ಕೀರ್ತನೆ ಮಾಡುತ್ತಿದ್ದಾಗ " ಭಾದ್ರಪದ ಶುದ್ಧ ದ್ವಾದಶೀ ". ಅಂದಿನ ಕಥಾ ವಸ್ತುವು " ವಾಮನಾವತಾರ " ವಾಗಿತ್ತು.

ಬಲಿರಾಜನಿಗೆ ಸುತಲ ಲೋಕ ಕೊಟ್ಟು ಪಟ್ಟಾಭಿಷೇಕವಾಗಿದೆ. " ಮುಂದಿನ ಮನ್ವಂತರದಲ್ಲಿ ಆಶ್ರಯದಿಂದ ನೀನೇ ಇಂದ್ರನಾಗುವಿ; ಈಗ ಮತ್ತೇನು ಬೇಡುವೆ ಬೇಡು " ಎಂದು ತ್ರಿವಿಕ್ರಮನ ಆಜ್ಞೆಯಾಯಿತು.

ಭಕ್ತ ಬಲಿರಾಜನು " ಇನ್ನು ಬೇಡುವುದೇನಿದೆ ಮಹಾ ಪ್ರಭೋ " ಎಂದು...

ರಾಗ : ಬೇಹಾಗ್ ತಾಳ : ಆದಿ

ಬೇಡುವುದೇನ ಭಾವ ವಿಮೋಚನ ।। ಪಲ್ಲವಿ ।।

ಆವ ಸಾಧನಕೆ ಆವುದು ಕಡೆ ತವ ।

ಪಾವನ ಪಾದವ ಸೇವೆ ದೊರೆತ ಮೇಲೆ ।। ಚರಣ ।।

ಅಮರೇಶನ ಪದ ಭ್ರಮಿಸಿದುದಕೆ । ಸಿರಿ ।

ಕಮಲೇಶವಿಠ್ಠಲನೆ ನಮಗೆ ದೊರೆತ ಮೇಲೆ ।। ಚರಣ ।।

ಎಂದು ಪ್ರಾರ್ಥಿಸಿದನೆಂದು ಶ್ರೀ ಆನಂದದಾಸರು ಹಾಡುತ್ತಿದ್ದಾರೆ. ಆ ಆನಂದ ಪರವಶರಾಗಿ ಹಾಡುತ್ತಿದ್ದ ಸಂದರ್ಭದಲ್ಲೇ ಶ್ರೀ ಆನಂದದಾಸರ ಇಹಲೋಕ ವ್ಯಾಪಾರ ನಿಂತು ಹೋಯಿತು. ಸುಖವಾಗಿ ಯಾವುದೇ ಸಂಕಟಗಳನ್ನು ಅನುಭವಿಸದೇ ದೇವ ಸ್ತುತಿಯೊಂದಿಗೆ ನಿರ್ಯಾಣ ಹೊಂದಿದ ಸುದೈವಿಗಳು ಶ್ರೀ ಸುರಪುರದ ಆನಂದದಾಸರು!!

" ಉಪ ಸಂಹಾರ "

ಶ್ರೀ ಆನಂದದಾಸರ ಕೀರ್ತನೆಗಳಲ್ಲಿ ದೇವತಾ ವರ್ಣನೆಯು ಶ್ರೀ ಹರಿಯ ಮಹಾ ಮಹಿಮೆಯೊಡನೆ ಒಳ್ಳೇ ಕಲಾತ್ಮಕವಾಗಿ ಆವಿಷ್ಕಾರವನ್ನು ಪಡೆದಿದೆ. 

ಭಗವದ್ಗೀತೆಯ ೧೮  ಅಧ್ಯಾಯಗಳನ್ನೂ ಮೂರು ಷಟ್ಕವಾಗಿ ವಿಂಗಡಿಸಿ " ಕೀರ್ತನಗೀತೆ " ಎಂಬ ಹೆಸರಿನಿಂದ ಶ್ರೀ ಆನಂದದಾಸರು ಬರೆದಿದ್ದಾರೆ. ಈ ಕೀರ್ತನ ಗೀತೆಯ ಕನ್ನಡೀಕರಣದ ಕ್ರಮವೂ ಕೂಡಾ ತೀರಾ ಹೊಸ ರೀತಿಯಲ್ಲಿ ಆಗಿದೆಯೆಂದು ಹೇಳಬಹುದು. 

ಸಂಸ್ಕೃತ ಭಗವದ್ಗೀತೆಯ ಪ್ರತಿ ಅಧ್ಯಾಯದ ಸಾರವನ್ನು ಮೊದಲು " ಎರಡು ಪದಗಳು ಅನಂತರ ಕೆಲವು ಆರ್ಯ ವೃತ್ತದ ಪದ್ಯಗಳು. ಅದಾದ ಬಳಿಕ ಉಳಿದ ಭಾಗದಲ್ಲಿ ಕನ್ನಡದ ದೇಶಿ ಛಂಧಸ್ಸಾದ ಷಟ್ಪದಿಗಳು ". ಈ ಕ್ರಮದಿಂದ ಸುಂದರ ಬಂಧುರವಾಗಿ ನಿರೂಪಿಸುತ್ತಾ ಹೋಗುತ್ತಾರೆ. 

ಈ ಕೀರ್ತನೆಗಳಲ್ಲಿ ಬರುವ ಶ್ರೀ ಹರಿಯ ವಿಶ್ವರೂಪ ವರ್ಣನೆಯಂತೂ ಪ್ರೌಢ ಕನ್ನಡದ ಲಲಿತ ದಂಡಕದಲ್ಲಿ ಶ್ರೀ ರಾಮಾನುಜಾಚಾರ್ಯರ ವೈಕುಂಠ ಗದ್ಯದಂತೆ ಪ್ರಸನ್ನ ಮನೋಹರವಾಗಿ ಮೊಳಗಿದೆ. 

ಶ್ರೀ ದಾಸರಲ್ಲಿ ನಾದಿಷ್ಠತೆ, ಛಾ೦ದಿಷ್ಟತೆ, ರಾಗಿಷ್ಠತೆಗಳು ಭಗವನ್ನಿಷ್ಟೆಯೊಡನೆ ಬೆರೆತು ಮಿಶ್ರ ಮಾಧುರಿಯ ಅಪೂರ್ವ ಮಾದರಿಯನ್ನು ಒದಗಿಸಿದೆ. 

ಲೇಖನ: ಆಚಾರ್ಯ ನಾಗರಾಜು ಹಾವೇರಿ 

ಸಂಗ್ರಹ : 

ಶ್ರೀ ಜಯರಾಜ್ ಕುಲಕರ್ಣಿ

Post a Comment

0 Comments

Ad Code

Responsive Advertisement