Ticker

6/recent/ticker-posts

Ad Code

Responsive Advertisement

ಮೂರು ವರ್ಷಗಳ ಅವಧಿಗೆ ಜಿ.ಎಸ್.ಟಿ. ಪರಿಹಾರ ಕೊಡಿ -ಬಸವರಾಜ ಬೊಮ್ಮಾಯಿ

 


ಕೊರೊನಾವೈರಸ್, ಲಾಕ್‌ಡೌನ್ ಸಂಕಷ್ಟದಿಂದ ರಾಜ್ಯದ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಸಾಮಾನ್ಯ ಸ್ಥಿತಿಗೆ ಬರಲು ಕೆಲವು ವರ್ಷಗಳೇ ಬೇಕಾಗಬಹುದು. ಕಳೆದ ವರ್ಷ ಜಿಎಸ್‌ಟಿ ಪರಿಹಾರದ ಬದಲು ಜಿಎಸ್‌ಟಿ ಪರಿಹಾರಕ್ಕೆ ಸಾಲ ಒದಗಿಸಲಾಗಿತ್ತು. ಈ ವರ್ಷವೂ ಈ ಸೌಲಭ್ಯ ವಿಸ್ತರಿಸಲಾಗಿದೆ. ಆದರೆ ಅದು ನಮಗೆ ಬೇಡ. ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುವ ವರೆಗೆ ಕೇಂದ್ರದ ನೆರವು ಅತಿ ಅಗತ್ಯವಾಗಿದೆ. ಹೀಗಾಗಿ ಸಾಲದ ಬದಲು ಮೂರು ವರ್ಷಗಳ ಅವಧಿಗೆ ಜಿ.ಎಸ್.ಟಿ. ಪರಿಹಾರ ಕೊಡಿ ಎಂದು ಬಸವರಾಜ ಬೊಮ್ಮಾಯಿ ನಿರ್ಮಲಾ ಸೀತಾರಾಮನ್ ಎದುರು ಬೇಡಿಕೆ ಇಟ್ಟಿದ್ದಾರೆ.

ಖಡಕ್ ಆಗಿ ಮತ್ತೊಂದು ವಬೇಡಿಕೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಕೇಂದ್ರ ಹಣಕಾಸು ಸಚಿವರ ಎದುರು ಇಟ್ಟಿದ್ದಾರೆ. 15ನೇ ಹಣಕಾಸು ಆಯೋಗವು 2021 ರಿಂದ 2026 ರ ಅವಧಿಗೆ ರಾಜ್ಯಗಳಿಗೆ ತೆರಿಗೆ ಹಂಚಿಕೆಗೆ ಶಿಫಾರಸು ಮಾಡಿದೆ. ಅದರಂತೆ ರಾಜ್ಯಕ್ಕೆ 14ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಶೇ. 4.71 ರಿಂದ ಶೇ. 3.64ಕ್ಕೆ ಇಳಿಕೆಯಾಗಿದೆ. ಇದರಿಂದ ಅನುದಾನ ಹಂಚಿಕೆಯಲ್ಲಿ ತೀವ್ರ ಇಳಿಕೆಯಾಗಿದೆ.

ಅನುದಾನ ಹಂಚಿಕೆ ಕುರಿತ ಮಾನದಂಡಗಳನ್ನು ಬದಲಿಸುವಂತೆ ರಾಜ್ಯ ಸರ್ಕಾರವು 15ನೇ ಹಣಕಾಸು ಆಯೋಗಕ್ಕೆ ಈಗಾಗಲೇ ಬೇಡಿಕೆ ಇಟ್ಟಿತ್ತು. ರಾಜ್ಯದ ಮನವಿಯನ್ನು ಆಯೋಗವು ಪರಿಗಣಿಸಿಲ್ಲ. ಇದರಿಂದಾಗಿ ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಿಸಿದ್ದಾರೆ. ತಕ್ಷಣ ಈ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

15ನೇ ಹಣಕಾಸು ಆಯೋಗವು ತನ್ನ ಶಿಫಾರಸಿನಲ್ಲಿ ರಾಜ್ಯ ನಿರ್ದಿಷ್ಟ ಅನುದಾನದಡಿ ರಾಜ್ಯಕ್ಕೆ ಬೆಂಗಳೂರಿನ ಜಲಮೂಲಗಳು ಹಾಗೂ ಪೇರಿಫೆರಲ್ ರಿಂಗ್ ರಸ್ತೆಗೆ 6 ಸಾವಿರ ಕೋಟಿ ರೂ. ನಿಗದಿ ಪಡಿಸಿದೆ. ಆದರೆ ಕೇಂದ್ರ ಸರ್ಕಾರದ ಎಕ್ಸಪ್ಲೆನೇಟರಿ ಮೆಮೊರಂಡಂ ನಲ್ಲಿ ಹಣಕಾಸು ಆಯೋಗ ಈ ಶಿಫಾರಸನ್ನು ಪ್ರಸ್ತಾಪಿಸಿಲ್ಲ.
ಅದರಿಂದ ಮೊದಲೇ ತೆರಿಗೆ ಹಂಚಿಕೆಯಲ್ಲಿ ಇಳಿಕೆಯಾಗಿರುವ ರಾಜ್ಯಕ್ಕೆ ಇನ್ನಷ್ಟು ಹಿನ್ನಡೆಯಾಗಲಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಸ್ಟಾರ್ಟ್ ಅಪ್ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರು ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಯಿಂದ ಹೆಚ್ಚಿನ ಹೂಡಿಕೆ ಆಕರ್ಷಿಸಲು ಸಾಧ್ಯವಾಗುವುದು. ಆದ್ದರಿಂದ 15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬೆಂಗಳೂರು ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ನಿರ್ಮಲಾ ಸೀತಾರಾಮನ್ ಎದುರು ಸಿಎಂ ಬೊಮ್ಮಾಯಿ ಬೇಡಿಕೆ ಇಟ್ಟಿದ್ದಾರೆ.

Post a Comment

0 Comments

Ad Code

Responsive Advertisement