ಬೆಂಗಳೂರು, ಆಗಸ್ಟ್ 26 (ಕರ್ನಾಟಕ ವಾರ್ತೆ): ರಾಜ್ಯದ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ಬ್ಯಾಂಕ್ವೆಟ್ ಹಾಲ್ನಲ್ಲಿ ಹಾಕಿ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಮಾನ್ಯ ಮುಖ್ಯಮಂತ್ರಿಗಳು ಮಾಡಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹ ಪೂರ್ವಕವಾಗಿ ವಿನಂತಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಭಾಪತಿ ಬಸವರಾಜ ಹೊರಟ್ಟಿಯವರು ಪತ್ರ ಬರೆದಿರುತ್ತಾರೆ.
ಹಲವಾರು ಮಾಜಿ ಮುಖ್ಯಮಂತ್ರಿಗಳ ಜನ್ಮ ದಿನ ಹಾಗೂ ನಿಧನರಾದ ದಿನಗಳಲ್ಲಿ ಅವರ ಪ್ರತಿಮೆಗಳು ಇಲ್ಲದ ಕಾರಣ, ಯಾವುದೇ ರೀತಿಯ ಗೌರವ ಸಲ್ಲಿಸುವಂತಹ ವ್ಯವಸ್ಥೆಗಳಿರುವುದಿಲ್ಲ. ಕ್ರಮವಾಗಿ ಕಡಿದಾಳ ಮಂಜಪ್ಪ, ಎಸ್.ಆರ್.ಕಂಠಿ, ಬಿ.ಡಿ.ಜತ್ತಿ, ಗುಂಡೂರಾವ್, ವೀರೇಂದ್ರ ಪಾಟೀಲ, ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ ಮುಂತಾದ ಗಣ್ಯರಿಗೆ ಇಂತಹ ಗೌರವಗಳು ಸಿಗುತ್ತಿರುವುದಿಲ್ಲ.ಈ ಹಿನ್ನೆಲೆಯಲ್ಲಿ, ದಿವಂಗತರಾಗಿರುವ ರಾಜ್ಯದ ಸನ್ಮಾನ್ಯ ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗೂ ಸಮಾನ ಗೌರವ ನೀಡುವ ಹಿನ್ನೆಲೆಯಲ್ಲಿ ಬ್ಯಾಂಕ್ವೆಟ್ ಹಾಲ್ನಲ್ಲಿ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಪೂರ್ಣ ಪ್ರಮಾಣದ ಭಾವ ಚಿತ್ರಗಳನ್ನು ಅವರುಗಳ ಅವಧಿಗಳನ್ನು ನಮೂದಿಸಿ, ಅವರುಗಳಿಗೆ ಸಮಾನ ಗೌರವ ಸಲ್ಲಿಸುವಂತಹ ಕಾರ್ಯವನ್ನು ಇದೇ ತಿಂಗಳ 29 ರಂದು ರಾಮಕೃಷ್ಣ ಹೆಗಡೆಯವರ ಹುಟ್ಟು ಹಬ್ಬದ ದಿನದಂದು ಈ ಕಾರ್ಯಕ್ರಮಕ್ಕೆ ನಾಂದಿ ಹಾಡುವಂತಾಗಲಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿ ಪತ್ರ ಬರೆದಿರುತ್ತಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments