ಬೆಂಗಳೂರು, ಆಗಸ್ಟ್ 26 (ಕರ್ನಾಟಕ ವಾರ್ತೆ): ಮಂಡ್ಯ ಜಿಲ್ಲೆಯ, ಜಿಲ್ಲಾಡಳಿತದ ಸಂಪೂರ್ಣ ಸಹಕಾರದೊಂದಿಗೆ “ರಾಷ್ಡ್ರ ಮಟ್ಟದ ಮಲ್ಟಿ ಕ್ಲಾಸ್ ಯೂತ್ ಸೇಲಿಂಗ್ ಚಾಂಪಿಯನ್ಶಿಪ್ ಸ್ವರ್ಧೆ”ಯನ್ನು ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಜನರಲ್ ತಿಮ್ಮಯ್ಯ ರಾಷ್ಡ್ರೀಯ ಸಾಹಸ ಅಕಾಡೆಮಿಯ ಸಂಯುಕ್ತ ಸಹಾಭಾಗಿತ್ವದಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದ ಹಿನ್ನೀರಿನಲ್ಲಿ ಆಗಸ್ಟ್ 26 ರಿಂದ 31 ರವರೆಗೆ ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ: 27/೦8/2021 ರಂದು ಸಂಜೆ 05:00 ಗಂಟೆಗೆ ಕೃಷ್ಣರಾಜ ಸಾಗರದ ಹಿನ್ನೀರಿನಲ್ಲಿ ನಡೆಯಲಿದೆ.
ಈ ಸ್ವರ್ಧೆ ಯಾಚಿಂಗ್ ಅಸೋಸಿಯೇಶನ್ ಆಫ್ ಕರ್ನಾಟಕ ಹಾಗೂ ಯಾಚಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಇವರಿಂದ ಮಾನ್ಯತೆ ಪಡೆದಿರುತ್ತದೆ. ಕೃಷ್ಣರಾಜ ಸಾಗರದ ಹಿನ್ನೀರಿನಲ್ಲಿ ರಾಷ್ಡ್ರೀಯ ಪ್ರಮಾಣತೆಯನ್ನು ಪಡೆದಿರುವ ಮೊದಲ ಸೇಲಿಂಗ್ ಚಾಂಪಿಯನ್ ಶಿಪ್ ಇದಾಗಿರುತ್ತದೆ. ಕಾರ್ಯಕ್ರಮದಲ್ಲಿ ದೇಶದಾದ್ಯಂತ ನಾವಿಕರು ಹಾಗೂ ತರಬೇತುದಾರರು ಸೇರಿದಂತೆ 2೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.
ನಾವಿಕರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸರ್ಕಾರದ ಕೋವಿಡ್-19 ರ ಮಾರ್ಗಸೂಚಿಯನ್ವಯ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಮತ್ತು ಆಹ್ವಾನಿತರಿಗೆ ಹಾಗೂ ನಾವಿಕರಿಗೆ, ಸಹಾಯಕ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಯನ್ನು ನಡೆಸಿದ ನಂತರವೇ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗುವುದು.
ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ದಶಕಗಳಿಂದಲೂ ಭಾರತೀಯ ಸೇನೆಗೆ ಹಾಗೂ ದೇಶಕ್ಕಾಗಿ ಕ್ರೀಡಾಪಟುಗಳನ್ನು ಸಜ್ಜುಗೊಳಿಸುತ್ತಾ ಬಂದಿರುತ್ತದೆ. ಮುಂದಿನ ಮಿಷನ್ ಒಲಂಪಿಕ್ ದೃಷ್ಠಿಯಿಂದ ಈ ಕ್ರೀಡಾಕೂಟವು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಹಾಗೆಯೇ 1989 ರಲ್ಲಿ ಸ್ಥಾಪನೆಗೊಂಡ ಜನರಲ್ ತಿಮ್ಮಯ್ಯ ರಾಷ್ಡ್ರೀಯ ಸಾಹಸ ಅಕಾಡೆಮಿಯು ಸಾಹಸ ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಒಲಂಪಿಕ್ ಕ್ರೀಡೆಗಳಾದ ಸ್ಪೋರ್ಟ್ಸ್ ಕ್ಲೈಬಿಂಗ್, ಕಯಾಕಿಂಗ್ ಮತ್ತು ಕೆನೋಯಿಂಗ್ ಕ್ರೀಡೆಗಳಲ್ಲಿ ರಾಷ್ಡ್ರೀಯ ಮತ್ತು ಅಂತರಾಷ್ಡ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸಜ್ಜುಗೊಳಿಸಿದ್ದು, ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗಳಿಸಿರುತ್ತಾರೆ. ಆದ್ದರಿಂದ “ರಾಷ್ಟ್ರ ಮಟ್ಟದ ಮಲ್ಟಿ ಕ್ಲಾಸ್ ಯೂತ್ ಸೇಲಿಂಗ್ ಚಾಂಪಿಯನ್ಶಿಪ್ ಸ್ವರ್ಧೆ”ಯಿಂದ ಸೇಲಿಂಗ್ ಬಗ್ಗೆ ಯುವಜನರಿಗೆ ಸೂಕ್ತ ತರಬೇತಿಯನ್ನು ನೀಡಿ ರಾಷ್ಟ್ರ ಮತ್ತು ಅಂತರಾಷ್ಡ್ರೀಯ ಮಟ್ಟದ ಸ್ಫರ್ಧೆಗೆ ಸಜ್ಜುಗೊಳಿಸಲು ನೆರವಾಗುವುದು.
ಈ ಸ್ವರ್ಧಾಕೂಟದಲ್ಲಿ ವಿವಿಧ ರೀತಿಯ 29er Class, 420 Class, Laser Radial Class, Laser 4.7 Class, RS: One class, Optimist Class ಸ್ವರ್ಧೆಗಳನ್ನು ಆಯೋಜಿಸಲಾಗವುದು. ಈ ಗೂಗಲ್ ಲಿಂಕ್ ನಲ್ಲಿ https://drive.google.com/ drive/folders/ 1pzanT2dtbZwLW7g91frCsNjwvF3Em 6Z1?usp=sharing ವೀಡಿಯೋ ಮತ್ತು ಛಾಯಾಚಿತ್ರಗಳನ್ನು ಪಡೆಯಬಹುದಾಗಿರತ್ತದೆ.
0 Comments