ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಸೇರಿರುವ ನೂತನ ಸಚಿವ ವಿ. ಸುನೀಲ್ ಕುಮಾರ್ ಅವರು ತಮಗೆ ಅಭಿನಂದಿಸಲು ಬರುವವರು ಹಾರ ತುರಾಯಿ ತರುವುದು ಬೇಡ, ಅದರ ಬದಲಿಗೆ ಪುಸ್ತಕ ತರಲಿ ಎಂದು ಹೇಳಿರುವುದು ಅತ್ಯಂತ ಶ್ಲಾಘನೀಯ ನಡೆ ಎಂದು ಕೊಂಡಾಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರು ಸಚಿವರ ಈ ನಿಲುವು ಕನ್ನಡದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಒಂದು ಮಹತ್ತರ ಹೆಜ್ಜೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಪುಸ್ತಕೋದ್ಯಮ ಬಿಕ್ಕಟ್ಟಿನಲ್ಲಿ ಇರುವ ಇಂಥ ಸಂದರ್ಭದಲ್ಲಿ ಸಚಿವರು ಆಡಿರುವ ಈ ಮಾತು ಕೇವಲ ಪುಸ್ತಕೋದ್ಯಮಕ್ಕೆ ಚೈತನ್ಯದಾಯಿ ಮಾತ್ರವಲ್ಲ; ಅದು ಗ್ರಂಥಾಲಯ ಚಳವಳಿ ಹಬ್ಬುವುದಕ್ಕೂ ಪೂರಕವಾಗಿದೆ. ತಮ್ಮನ್ನು ಅಭಿನಂದಿಸಲು ಬರುವ ಜನರು ಕೊಡುವ ಪುಸ್ತಕಗಳನ್ನು ತಮ್ಮ ಮತಕ್ಷೇತ್ರವಾದ ಕಾರ್ಕಳದ ಗ್ರಂಥಾಲಯಕ್ಕೆ ಕೊಡುವುದಾಗಿಯೂ ಸಚಿವರು ಹೇಳಿದ್ದಾರೆ. ಇದು ಎಲ್ಲ ಸಚಿವರಿಗೂ ಮಾದರಿಯಾಗಿದ್ದು ಎಲ್ಲ ಸಚಿವರೂ ಇದನ್ನು ಅನುಸರಿಸಬೇಕು ಎಂದು ಬಳಿಗಾರ್ ಅವರು ಕರೆ ಕೊಟ್ಟಿದ್ದಾರೆ.
ಇಂಥ ಕನ್ನಡ0 ಮತ್ತು ಪುಸ್ತಕ ಪ್ರೀತಿಯ ಸಚಿವರಿಗೆ ಕನ್ನಡ ಹಾಗೂ ಸಂಸ್ಕೃತಿ ಖಾತೆಯನ್ನು ವಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಡಾ. ಬಳಿಗಾರ್ ಅಭಿನಂದಿಸಿದ್ದಾರೆ.
ಸುನೀಲ್ ಕುಮಾರ್ ಅವರ ಕಾಲದಲ್ಲಿ ಕನ್ನಡ ಭಾಷೆ, ಕನ್ನಡ ನುಡಿ ಮತ್ತು ಕನ್ನಡ ಪುಸ್ತಕಗಳು ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ ಎಂದು ಅವರು ಹಾರೈಸಿದ್ದಾರೆ. ಮಾನ್ಯ ಸಚಿವರು ಸೂಚಿಸುವ ಗ್ರಂಥಾಲಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಅಮೂಲ್ಯ ಕೃತಿಗಳನ್ನು ಉಚಿತವಾಗಿ ಕಳುಹಿಸಿಕೊಡಲಿದೆ ಎಂದೂ ನಾಡೋಜ ಡಾ. ಮನು ಬಳಿಗಾರ್ ಅವರು ತಿಳಿಸಿದ್ದಾರೆ.

0 Comments