ಬೆಂಗಳೂರು: ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ನಗರದ ಅರಮನೆ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಇಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆದ ರಾಜ್ಯ ಮಟ್ಟದ ಆರೋಗ್ಯ ಸ್ವಯಂಸೇವಕರ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯಾವುದೇ ಸಂಕಷ್ಟ- ಸವಾಲನ್ನು ಎದುರಿಸುವ ಛಾತಿ ಮತ್ತು ಶಕ್ತಿ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಇದೆ. ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಭಕ್ತರ ನವಪೀಳಿಗೆ ದೇಶದಲ್ಲಿ ಸೃಷ್ಟಿಯಾಗಿದೆ. 1980ರಿಂದ ಇಲ್ಲಿನವರೆಗೆ ಉನ್ನತ ಧ್ಯೇಯದ ಕಾರ್ಯಕರ್ತರನ್ನು ಬಿಜೆಪಿ ರೂಪಿಸಿದೆ. ಇಂಥ ಕಾರ್ಯಕರ್ತರು ನಮ್ಮ ಪಕ್ಷದ ಬಹುದೊಡ್ಡ ಆಸ್ತಿ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ನಾಯಕರೇ. ಅಲ್ಲಿ ಸೇವಾ ಮನೋಭಾವವೇ ಇಲ್ಲ. ಪ್ರಧಾನಿಯವರ ಕಠಿಣ, ದಿಟ್ಟ ನಿರ್ಧಾರಗಳಿಂದಾಗಿ ಕೋವಿಡ್ ಹರಡುವಿಕೆ ವೇಗವನ್ನು ತಡೆದು ಅದನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದ ಅವರು, ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿರುವಿಕೆ ಕಾಂಗ್ರೆಸ್ ಪಕ್ಷದ 60 ವರ್ಷಗಳ ಆಳ್ವಿಕೆಯ ಕಾಣಿಕೆ ಎಂದು ತಿಳಿಸಿದರು.
ದೇಶದಲ್ಲಿ ಸ್ವಂತ ಲಸಿಕೆ ಉತ್ಪಾದನೆಗೆ ಪ್ರಧಾನಿಯವರೇ ಪ್ರೇರಕರು. ಅವರ ನಿರ್ಣಯದಲ್ಲಿ ಒಂದು ತತ್ವ, ನೀತಿ, ಗುರಿ ಇರುತ್ತದೆ. ದೂರದೃಷ್ಟಿ ಇರುತ್ತದೆ ಎಂದು ವಿವರಿಸಿದರು. ಸೇವೆ ನಮ್ಮ ಪಕ್ಷದ ಧ್ಯೇಯವಾದರೆ, ಇತರ ಪಕ್ಷದವರಿಗೆ ಸ್ವಾರ್ಥವೇ ಪ್ರಮುಖವಾಗಿರುತ್ತದೆ ಎಂದು ವಿಶ್ಲೇಷಿಸಿದರು.
ಜನರು ಸಂಕಷ್ಟದಲ್ಲಿದ್ದಾಗ ಬಿಜೆಪಿ ಕಾರ್ಯಕರ್ತರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ನೆರವಿಗೆ ಧಾವಿಸುತ್ತಾರೆ. ಜನರ ಆರೋಗ್ಯ, ಸೇವೆ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾನೂ ಶ್ರಮಿಸಲಿದ್ದೇನೆ ಎಂದು ತಿಳಿಸಿದರು.
ಪಾಕಿಸ್ತಾನ, ಚೀನಾದ ಕುರಿತು ಅತ್ಯಂತ ಸಮರ್ಥ ನಿರ್ಧಾರಗಳನ್ನು ನಮ್ಮ ಪ್ರಧಾನಿಯವರು ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಕೋವಿಡ್ ಮಹಾಮಾರಿಯನ್ನು ಎದುರಿಸಲು ಬಿಜೆಪಿ ಕಾರ್ಯಕರ್ತರ ಸೇವಾಪರ ಸೇನೆ ಸಿದ್ಧಪಡಿಸಲು ಜೆ.ಪಿ.ನಡ್ಡಾ, ಅಮಿತ್ ಶಾ ಅವರು ತಿಳಿಸಿದ್ದು, ಅದರಂತೆ ಪಕ್ಷ ಕಾರ್ಯಪ್ರವೃತ್ತವಾಗಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಮಕ್ಕಳಿಗೆ ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. ಇದನ್ನು ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು. ಈ ಕೆಲಸದಲ್ಲಿ ನಮ್ಮ ಕಾರ್ಯಕರ್ತರು ಪಾಲ್ಗೊಂಡಿದ್ದು, ಇದು ಯಶಸ್ವಿಯಾಗಲು ಕಾರಣವಾಗಿದೆ ಎಂದು ವಿವರಿಸಿದರು.
ಜನರ ಆರೋಗ್ಯ ಕಾಪಾಡುವುದು ನಮ್ಮ ಹೊಣೆಗಾರಿಕೆ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರಕಾರವು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದ ಬಗ್ಗೆ ಕಾರ್ಯಕರ್ತರು ಜನರಿಗೆ ತಿಳಿಸಿ ಎಂದು ತಿಳಿಸಿದರು. ದೇಶದೆಲ್ಲೆಡೆ ನಮ್ಮ ಪಕ್ಷದ ಕಾರ್ಯಕರ್ತರ ಸೇವೆ ಅಮೂಲ್ಯ ಎಂದರು.
ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವಾನತಿ ಶ್ರೀನಿವಾಸನ್ ಅವರು ಮಾತನಾಡಿ, ರಾಜ್ಯದ ಬಿಜೆಪಿ ಘಟಕವು ಸೇವೆಯ ವಿಚಾರದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ದೇಶದೊಳಗೆ ಮಾತ್ರವಲ್ಲದೆ ಹಲವು ಅವಶ್ಯವಿರುವ ದೇಶಗಳಿಗೂ ವೈದ್ಯಕೀಯ ನೆರವನ್ನು ನೀಡುವಲ್ಲಿ ಪ್ರಧಾನಿ ಮೋದಿ ಅವರ ಪಾತ್ರ ಮಹತ್ವದ್ದು ಎಂದರು.
ದೇಶದಲ್ಲಿ ಸುಮಾರು 4 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ. ಜನರ ಸಂಕಷ್ಟದ ಸಂದರ್ಭದಲ್ಲಿ ಈ ಕಾರ್ಯಕರ್ತರು ನೆರವಾಗಲಿದ್ದಾರೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಮಾತನಾಡಿ, ಸರಕಾರೇತರ ಸಂಸ್ಥೆಗಳ ಕೆಲಸಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಈ ನಿಟ್ಟಿನಲ್ಲಿ ಪಕ್ಷದ ಪ್ರಯತ್ನ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು.
ಸೇವಾ ಚಟುವಟಿಕೆಗಳಲ್ಲಿ ಕರ್ನಾಟಕವು ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ನಾವೆಲ್ಲರೂ ಮಾದರಿ ಕೆಲಸವನ್ನು ಮಾಡೋಣ ಎಂದು ಅವರು ತಿಳಿಸಿದರು. ದೇಸಿ ಆಹಾರ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳುವುದು, ರೋಗ ಬರದಂತೆ ತಡೆಯುವುದು, ಸೋಂಕಿತರಿಗೆ ನೆರವಾಗುವ ಕಾರ್ಯವನ್ನು ನಾವು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ ಎಂದರು. ಕೋವಿಡ್ ಮುಕ್ತ ಭಾರತ ನಮ್ಮ ಗುರಿಯಾಗಲಿ ಎಂದು ಅವರು ಆಶಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗ ಎನ್. ರವಿಕುಮಾರ್ ಅವರು ಮಾತನಾಡಿ, ದೇಶದಲ್ಲಿ ಪ್ರತಿದಿನ ಪತ್ತೆಯಾಗುವ ಸುಮಾರು 44 ಸಾವಿರ- 45 ಸಾವಿರ ಕೋವಿಡ್ ಪ್ರಕರಣಗಳಲ್ಲಿ ಶೇ 50ರಷ್ಟು ಪ್ರಕರಣಗಳು ಕೇರಳದಲ್ಲಿ ಪತ್ತೆಯಾಗುತ್ತಿವೆ. ಸುಮಾರು 20 ಸಾವಿರಕ್ಕಿಂತ ಹೆಚ್ಚು ಕೇಸ್ ಕೇರಳದಲ್ಲಿ ಪತ್ತೆಯಾದರೆ, ನಂತರದ ಸ್ಥಾನ ಮಹಾರಾಷ್ಟ್ರದ್ದು ಎಂದರು.
ರಾಜ್ಯದಲ್ಲಿ 3.10 ಕೋಟಿ ಜನರಿಗೆ ಮತ್ತು ಬೆಂಗಳೂರಿನಲ್ಲಿ 81 ಲಕ್ಷ ಜನರಿಗೆ ಈಗಾಗಲೇ ವ್ಯಾಕ್ಸಿನೇಶನ್ ಆಗಿದೆ. ಕೊರೊನಾ ನಿಯಂತ್ರಣ- ಲಸಿಕೆ ವಿಚಾರದಲ್ಲಿ ರಾಜ್ಯವು ಅತ್ಯುತ್ತಮ ಸಾಧನೆ ಮಾಡಿದೆ ಎಂದರು.
ರಾಜ್ಯದಲ್ಲಿ 60 ಸಾವಿರ ಬೂತ್‍ಗಳಿದ್ದು, ಎಲ್ಲೆಡೆ ಕೊರೊನಾಮುಕ್ತ ಬೂತ್ ಮಾಡಲು ಪ್ರಧಾನಿಯವರು ತಿಳಿಸಿದ್ದಾರೆ. ಅವರ ಕನಸನ್ನು ನನಸು ಮಾಡಲು ಆರೋಗ್ಯ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ತಿಳಿಸಿದರು.
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‍ಕುಮಾರ್, ರಾಜ್ಯ ವೈದ್ಯರ ಪ್ರಕೋಷ್ಠದ ಸಂಚಾಲಕರಾದ ಡಾ. ಮಹೇಶ್ ನಲವಾಡ್, ಪಕ್ಷದ ರಾಜ್ಯ ಕಾರ್ಯದರ್ಶಿಗಳು ಮತ್ತು ಆರೋಗ್ಯ ಸ್ವಯಂಸೇವಕರ ಅಭಿಯಾನದ ಸಂಚಾಲಕರೂ ಆದ ವಿನಯ್ ಬಿದರೆ, ಪಕ್ಷದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



0 Comments