ಬಾಗಲಕೋಟೆ: ಬಾದಾಮಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಕೆಲಸ ಮಾಡುವುದು ಬಿಟ್ಟು ಕುರ್ಚಿ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಅವರ ಪುತ್ರ ಭ್ರಷ್ಟಾಚಾರದ ಮೂಲಕ ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ. ವರ್ಗಾವಣೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಸಬ್‌ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೂ ಒಂದು ಗ್ಯಾಂಗ್ ಮಾಡಿಕೊಂಡಿದ್ದಾರೆ. ಇದನ್ನು ಅಧಿಕಾರಿಯೊಬ್ಬರು ನನಗೆ ಹೇಳಿದರು. ಇದರಲ್ಲಿ ನೂರಾರು ಕೋಟಿ ಅವ್ಯವಹಾರ ನಡೆಯುತ್ತಿದೆ ಎಂದರು.
’ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿ ಅಲುಗಾಡಲು ಶುರುವಾಗಿ ಬಹಳ ದಿನವಾಗಿದೆ. ಅಪ್ಪನಿಗೆ ಕುರ್ಚಿ ಉಳಿಸಿಕೊಳ್ಳುವುದು. ಮಗನಿಗೆ ದುಡ್ಡು ಹೊಡೆಯುವುದು ಇವೆರಡೇ ಕೆಲಸ ಸರ್ಕಾರದಲ್ಲಿ ನಡೆಯುತ್ತಿದೆ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ರಾಜ್ಯದಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ಶುರುವಾಗಿದೆ. ಶಿಕಾರಿಪುರ, ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲೂ ಅವ್ಯಾವಹತವಾಗಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅದನ್ನು ನಿಲ್ಲಿಸುವ ಜವಾಬ್ದಾರಿ ಸರ್ಕಾರದ್ದು ಎಂದರು.

0 Comments