Ticker

6/recent/ticker-posts

Ad Code

Responsive Advertisement

ಗುಣಮುಖರಾದವರು ಲಸಿಕೆ ಪಡೆದರೆ ಏನಾಗುತ್ತದೆ?

 

ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಯೆಂಟೆರಾಲಜಿ (AIG) ಇದರ ಬಗ್ಗೆ ಅಧ್ಯಯನ ನಡೆಸಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕೊರೊನಾ ಲಸಿಕೆ ನೀಡಿದರೆ ರೋಗನಿರೋಧಕ ಶಕ್ತಿಯ ಪ್ರಮಾಣ ಎಷ್ಟಿರುತ್ತದೆ ಎಂಬುದರ ಕುರಿತು ವಿಶ್ಲೇಷಣೆ ನಡೆಸಿದೆ.  
ಪ್ರಸ್ತುತ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಲಸಿಕೆ ನೀಡುವುದೇ ಬೇಡವೇ ಎಂಬ ಕುರಿತು ಚರ್ಚೆ ನಡೆಯುತ್ತಿದ್ದು, ಸೋಂಕಿನಿಂದ ಗುಣಮುಖರಾದವರಲ್ಲಿ ಸಹಜವಾಗಿಯೇ ರೋಗನಿರೋಧಕ ಶಕ್ತಿ ಹೆಚ್ಚಿರುವ ಕಾರಣ ಸದ್ಯಕ್ಕೆ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ಕೆಲವು ತಜ್ಞರು ಸಲಹೆ ನೀಡಿದ್ದಾರೆ. ಆದರೆ ಕೊರೊನಾ ರೂಪಾಂತರ ಸೋಂಕು ಹೆಚ್ಚುತ್ತಿರುವ ಕಾರಣ ಎಲ್ಲರಿಗೂ ಲಸಿಕೆ ನೀಡುವ ಅಗತ್ಯವನ್ನು ಎತ್ತಿ ಹಿಡಿಯಲಾಗಿದೆ. 

ಕೊರೊನಾ ಸೋಂಕಿನಿಂದ ಗುಣಮುಖರಾದವರನ್ನು ಹಾಗೂ ಸೋಂಕು ತಗುಲದಿರುವವರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಕೊರೊನಾ ಸೋಂಕಿಗೆ ಒಳಗಾಗದೇ ಮೊದಲ ಡೋಸ್ ಲಸಿಕೆ ಪಡೆದವರಿಗೆ ಹೋಲಿಕೆ ಮಾಡಿದರೆ, ಕೊರೊನಾ ಸೋಂಕಿನಿಂದ ಗುಣಮುಖರಾಗಿ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.

ಸೋಂಕಿನಿಂದ ಗುಣಮುಖರಾಗಿ ಮೊದಲ ಡೋಸ್ ಲಸಿಕೆ ಪಡೆದ ನಂತರ ಅಂಥವರಲ್ಲಿ ರೋಗ ನಿರೋಧಕ ಶಕ್ತಿಯು ಹತ್ತು ಪಟ್ಟು ಹೆಚ್ಚಳವಾಗುವುದು ಎಂದಿದೆ ಈ ಅಧ್ಯಯನ. ಈ ಶಕ್ತಿಯು ವ್ಯಕ್ತಿಯನ್ನು ಸುಮಾರು ಒಂದು ವರ್ಷಗಳ ಕಾಲ ಸೋಂಕಿನ ವಿರುದ್ಧ ರಕ್ಷಿಸಬಲ್ಲವು. ಸೋಂಕಿನ ವಿರುದ್ಧ ಪ್ರತಿಕಾಯಗಳು ವರ್ಷದವರೆಗೂ ಹೋರಾಡಬಲ್ಲವು ಎಂದು ಹೇಳಿದೆ.

ಐಸಿಎಂಆರ್ ಗುರುತಿಸಿರುವ ಕೊರೊನಾ ಆರೈಕೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ 280 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರೆಲ್ಲರೂ ಜನವರಿಯಿಂದ ಫೆಬ್ರವರಿ ಒಳಗೆ ಕೊರೊನಾ ಲಸಿಕೆ ಪಡೆದಿದ್ದರು. ಅವರಲ್ಲಿ 131 ಕಾರ್ಯಕರ್ತರಿಗೆ ಲಸಿಕೆ ಪಡೆಯುವ ಮುನ್ನ ಕೊರೊನಾ ಸೋಂಕು ದೃಢಪಟ್ಟಿತ್ತು. ಇವರಲ್ಲಿನ ವಿಶ್ಲೇಷಣೆ ಮೂಲಕ ಈ ಫಲಿತಾಂಶವನ್ನು ಕಂಡುಕೊಳ್ಳಲಾಗಿದೆ.

"ಈ ಕಾರ್ಯಕರ್ತರ ದೇಹದಲ್ಲಿ ಪ್ರತಿಕಾಯಗಳು ಹತ್ತು ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ" ಎಂದು ಎಐಜಿ ಸಂಶೋಧಕರು ಹಾಗೂ ಆಸ್ಪತ್ರೆ ಅಧ್ಯಕ್ಷ ಡಾ. ನಾಗೇಶ್ವರ್ ರೆಡ್ಡಿ ತಿಳಿಸಿದ್ದಾರೆ. ಈ ಸಂಶೋಧನೆ ಇಂಟರ್ ನ್ಯಾಷನಲ್ ಜರ್ನಲ್ ಆಫ್ ಇನ್‌ಫೆಕ್ಷನ್ ಡಿಸೀಸ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ದೇಶದಲ್ಲಿ ಲಸಿಕೆಗಳು ಸಾಕಷ್ಟು ಮಟ್ಟದಲ್ಲಿ ಲಭ್ಯವಾದ ನಂತರ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೂ ಲಸಿಕೆ ನೀಡಿದರೆ ಒಳಿತು ಎಂದು ಸಲಹೆ ನೀಡಿದೆ.

Post a Comment

0 Comments

Ad Code

Responsive Advertisement