Ticker

6/recent/ticker-posts

Ad Code

Responsive Advertisement

ಕೊರೋನಾ ಮೂರನೇ ಏಳಿಸಲು ಜನರಲ್ಲಿ ಪೈಪೋಟಿ; ಲಾಕ್‌ಡೌನ್ ಸಡಿಲಿಕೆಗೂ ಮೊದಲೇ ಬೀದಿಗಿಳಿದ ಜನರು


 ಬೆಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ಜನಸಂಚಾರ ಹೆಚ್ಚಾಗಿತ್ತು. ಪೀಣ್ಯ, ಟಿ. ದಾಸರಹಳ್ಳಿ, ಮೆಜೆಸ್ಟಿಕ್, ಚಾಮರಾಜಪೇಟೆ, ಶಿವಾಜಿನಗರ, ಕೋರಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೂ ಸಂಚಾರ ದಟ್ಟಣೆ ಕಂಡುಬಂತು.

‘ಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿ ಹೆಸರಿನಲ್ಲಿ ಜನರು ಹೊರ ಬರುತ್ತಿದ್ದಾರೆ. ನಂತರ ಕೋವಿಡ್ ಲಸಿಕೆ ಪಡೆಯುವ ಕಾರಣ ನೀಡಿ ಇಡೀ ದಿನ ಓಡಾಡುತ್ತಿದ್ದಾರೆ. ವಾಹನಗಳ ಸಂಖ್ಯೆ ಜಾಸ್ತಿ ಇದ್ದಾಗ ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸದೇ ಕಳುಹಿಸುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲೂ ಶುಕ್ರವಾರ ಬೆಳಿಗ್ಗೆಯಿಂದ ದೈನಂದಿನ ವ್ಯಾಪಾರ, ವಹಿವಾಟು ಬಿರುಸಾಗಿತ್ತು. ಕೆಲವೆಡೆ ಜನರು ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೇ ಖರೀದಿಗೆ ಮುಗಿಬಿದ್ದಿದ್ದರು. ಕಲಬುರ್ಗಿ ಮತ್ತು ಕೊಪ್ಪಳ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಹೋಟೆಲ್, ಖಾನಾವಳಿಗಳಲ್ಲಿ ಜನರು ಕುಳಿತು ಊಟ ಮಾಡುತ್ತಿದ್ದರು. ಚಹಾ, ಪಾನ್ ಅಂಗಡಿಗಳೂ ತೆರೆದಿದ್ದವು. ಬಿಗಿ ಕ್ರಮ ಕೈಗೊಳ್ಳುವತ್ತ ಪೊಲೀಸರು ಆಸಕ್ತಿ ತೋರಲಿಲ್ಲ.

ಧಾರವಾಡ, ಗದಗ, ವಿಜಯಪುರ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲೂ ಶುಕ್ರವಾರ ಹೆಚ್ಚಿನ ಸಂಖ್ಯೆಯ ಜನರು ರಸ್ತೆಗಿಳಿದಿದ್ದರು. ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ವಾಹನಗಳ ಸಂಚಾರದಲ್ಲಿ ಏರಿಕೆಯಾಗಿತ್ತು. ಕೆಲ ಸಮಯ ತಪಾಸಣೆ ನಡೆಸಿದ ಪೊಲೀಸರು, ಬಳಿಕ ಸುಮ್ಮನಾದರು. ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೂ ಅಂಗಡಿಗಳು ತೆರೆದಿದ್ದವು. ಕೆಲವೆಡೆ ಪೊಲೀಸರು ಅರ್ಧದಷ್ಟು ಬ್ಯಾರಿಕೇಡ್‌ಗಳನ್ನು ತೆರೆವು ಮಾಡಿದ್ದರು. 

 ಲಾಕ್‌ಡೌನ್ ಸಡಿಲಿಕೆ ಘೋಷಣೆಗೆ ಕಾಯುತ್ತಾ ಕುಳಿತಂತಿದ್ದ ಜನರು ನಿರ್ಬಂಧ ತೆರವು ಅಧಿಕೃತವಾಗಿ ಜಾರಿಯಾಗುವ ಮುನ್ನವೇ ತಂಡೋಪತಂಡವಾಗಿ ರಸ್ತೆಗೆ ಇಳಿದಿದ್ದು  ರಾಜ್ಯದ ಹಲವು ಕಡೆಗಳಲ್ಲಿ ಕಂಡು ಬಂತು. ಎಲ್ಲ ದಿಕ್ಕುಗಳಲ್ಲಿ ವಾಹನಗಳ ದಟ್ಟಣೆ ಕಾಣಿಸಿದ್ದು ಜನರು ಪೈಪೋಟಿಗೆ ಬಿದ್ದವರಂತೆ ಓಡಾಟ ಆರಂಭಿಸಿದ್ದು, ಕೋವಿಡ್ ನಿಯಂತ್ರಣಕ್ಕೆ ಹಿನ್ನಡೆಯಾಗುವ ಆತಂಕಕ್ಕೆ ಕಾರಣವಾಗಿದೆ.

ಹೆಚ್ಚಿನ ಸಂಖ್ಯೆಯ ಸೋಂಕಿತರಿರುವ 11 ಜಿಲ್ಲೆಗಳಲ್ಲಿ ಇದೇ 21ರವರೆಗೆ ಲಾಕ್‌ಡೌನ್ ವಿಸ್ತರಿಸಿ, 20 ಜಿಲ್ಲೆಗಳಲ್ಲಿ ಇದೇ 14ರಿಂದ ಲಾಕ್‌ಡೌನ್ ಸಡಿಲಿಸುವ ತೀರ್ಮಾನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಪ್ರಕಟಿಸಿದ್ದರು. ಈ ಸಂಬಂಧ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಯಾಗಿದೆ. ಆದರೆ, ಪ್ರಮುಖ ನಗರಗಳೂ ಸೇರಿದಂತೆ ಹಲವು ಕಡೆ ಶುಕ್ರವಾರವೇ ಲಾಕ್‌ಡೌನ್ ಸಡಿಲಿಕೆಯ ವಾತಾವರಣ ಕಂಡುಬಂತು.

ಹೊಸ ಮಾರ್ಗಸೂಚಿ ಜಾರಿಗೆ ಇನ್ನೂ ಎರಡು ದಿನ ಬಾಕಿ ಇದೆ. ಅದಕ್ಕೆ ಮುನ್ನವೇ ಹಲವು ಜಿಲ್ಲೆಗಳಲ್ಲಿ ಮಧ್ಯಾಹ್ನದವರೆಗೂ ವ್ಯಾಪಾರ ವಹಿವಾಟು ನಡೆದಿದೆ. ಲಾಕ್‌ಡೌನ್ ನಿರ್ಬಂಧಗಳನ್ನು ಲೆಕ್ಕಿಸದೆ ಜನರು ಸಂಚರಿಸಿದ್ದಾರೆ. ಜನರ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಂತಿದ್ದ ಪೊಲೀಸರು, ಜನರನ್ನು ನಿರ್ಬಂಧಿಸುವುದಕ್ಕೆ ಮುಂದಾಗಲಿಲ್ಲ. ಎಲ್ಲಿಯೂ ತಪಾಸಣೆ ಕಂಡುಬರಲಿಲ್ಲ. ಕೆಲವು ಮೇಲ್ಸೇತುವೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಕಂಡುಬಂತು. 

ಇವೆಲ್ಲವೂ ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಏರಿಕೆಗೆ ಕಾರಣವಾಗಬಹುದು ಎಂಬ ಭೀತಿ ಹುಟ್ಟಿಸಿವೆ.

Post a Comment

0 Comments

Ad Code

Responsive Advertisement