Ticker

6/recent/ticker-posts

Ad Code

Responsive Advertisement

ಬೆಡ್ ಬ್ಲಾಕಿಂಗ್ ದಂಧೆ: ಶಾಸಕ ಸತೀಶ್ ರೆಡ್ಡಿ ಬಂಧಿಸಿ ವಿಚಾರಣೆಗೊಳಪಡಿಸಿ- ನಂಜಪ್ಪ ಕಾಳೇಗೌಡ ಆಗ್ರಹ

ಕೊರೋನಾ ಎರಡನೇ ಅಲೆಯ ಮಹಾದುರಂತದ ಸಮಯದಲ್ಲಿ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಬೆಡ್ ಬ್ಲಾಕಿಂಗ್ ದಂಧೆಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸಾಕಷ್ಟು ಕುಮ್ಮಕ್ಕು ನೀಡಿರುವುದು ಮೇಲ್ನೋಟಕ್ಕೆ ತಿಳಿದುಬರುವ ವಿಷಯ. ಈ ಕೂಡಲೇ ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು. 

ಹಲವು ವರ್ಷಗಳಿಂದ ಇವರ ಬಳಿ ಆಪ್ತ ಸಹಾಯಕನಾಗಿರುವ ಬಾಬು ಎಂಬಾತನನ್ನು ಹಾಗೂ ಇನ್ನಿತರರನ್ನು  ಈಗಾಗಲೇ ಕೇಂದ್ರ ಅಪರಾಧ ದಳ ಬಂಧಿಸಿ ವಿಚಾರಣೆಗೊಳಪಡಿಸಿದೆ.ಈ ಬಗ್ಗೆ 200ಕ್ಕೂ  ಹೆಚ್ಚು ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಹ ಈಗಾಗಲೇ ಸಲ್ಲಿಸಿದೆ. ಈ ಹಿಂದೆ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವಾರ್ ರೂಂಗೆ ನುಗ್ಗಿ ಶಾಸಕರ ಬೆಂಬಲಿಗರು ಬೆಡ್  ಬ್ಲಾಕಿಂಗ್ ದಂಧೆಗೆ ಬೆಂಬಲ ನೀಡುತ್ತಿಲ್ಲವೆಂಬ ಕಾರಣಕ್ಕಾಗಿ  ಕಿರಿಯ ಐ ಎ ಎಸ್ ಅಧಿಕಾರಿಯೊಬ್ಬರಿಗೆ ಹಲ್ಲೆಯನ್ನು ಸಹ ನಡೆಸಲು ಪ್ರಯತ್ನಿಸಿ ಧಾಂದಲೆ ನಡೆಸಿದ್ದರು.

ಶಾಸಕರ ಆಪ್ತ ಸಹಾಯಕ ಶಾಸಕರ ಬೆಂಬಲವಿಲ್ಲದೆ ಇಂತಹ  ದುಷ್ಕೃತ್ಯಗಳಲ್ಲಿ ತೊಡಗುವುದು ಖಂಡಿತ ಸಾಧ್ಯವಿಲ್ಲ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ವಿಷಯ.ಈ ಪ್ರಕರಣದಲ್ಲಿ ಶಾಸಕರ ಪಾತ್ರ ಏನು ಎಂಬುದನ್ನು ಸರ್ಕಾರ ಹಾಗೂ ತನಿಖಾ ಸಂಸ್ಥೆಯು ರಾಜ್ಯದ ಜನತೆಗೆ  ಬಹಿರಂಗಗೊಳಿಸಬೇಕಿದೆ. ಕೇವಲ ಸಣ್ಣಪುಟ್ಟ ವ್ಯಕ್ತಿಗಳನ್ನು ಮಾತ್ರ ಬಂಧಿಸಿ ಪ್ರಭಾವಿ ಶಾಸಕರನ್ನು ಕರೆದು ವಿಚಾರಣೆಯನ್ನೂ ಸಹ ಮಾಡಿಲ್ಲ . ಬಿ ಜೆ ಪಿ ಸರ್ಕಾರವು ಅವರದೇ ಪಕ್ಷದ ಶಾಸಕನ ಪರ ನಿಂತಿರುವುದು ದೇಶದ ನ್ಯಾಯದಾನ ವ್ಯವಸ್ಥೆಗೆ ಅಪಮಾನ  ತರುವ ವಿಷಯವಾಗಿದೆ.

ಬೆಡ್  ಬ್ಲಾಕಿಂಗ್ ನಂತಹ ಘೋರಾತಿಘೋರ ಅಪರಾಧ ಕೃತ್ಯ ದಿಂದ ಈಗಾಗಲೇ ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ.ಇವರುಗಳ ಸಾವಿಗೆ  ಸೂಕ್ತ ನ್ಯಾಯವನ್ನು ಒದಗಿಸುವ ಇರಾದೆ ಹಾಗೂ ಕಿಂಚಿತ್ ಕಾಳಜಿ ಏನಾದರೂ ಸರ್ಕಾರಕ್ಕೆ ಇದ್ದಲ್ಲಿ ಈ ಕೂಡಲೇ ಶಾಸಕ  ಸತೀಶ್ ರೆಡ್ಡಿ ಅವರನ್ನು ಬಂಧಿಸಿ ಸೂಕ್ತ ತನಿಖೆ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಪ್ರಕರಣವು ಪ್ರಭಾವಿಗಳ ಒತ್ತಡದಿಂದ  ಸಂಪೂರ್ಣ ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂದು ನಂಜಪ್ಪ ಕಾಳೇಗೌಡ ಕಳವಳ ವ್ಯಕ್ತಪಡಿಸಿದರು.


Post a Comment

0 Comments

Ad Code

Responsive Advertisement