ಪತ್ರಿಕಾ ವಿತರಕರನ್ನು ಕೊರೋನಾ ಯೋಧರೆಂದು ಪರಿಗಣಿಸಬೇಕೆಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರಹಾಲಪ್ಪ ಸರಕಾರವನ್ನು ಒತ್ತಾಯಿಸಿದರು.
ಪಟ್ಟಣದ ಶನಿಮಹಾತ್ಮ ದೇವಸ್ಥಾನದ ಆವರಣದಲ್ಲಿ ಹಾಲಪ್ಪ ಫೌಂಡೇಶನ್ ಹಾಗೂ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು, ಕೊರೋನಾ ಸಂಧರ್ಭದಲ್ಲೂ ಮಾಧ್ಯಮದವರು ಸುದ್ದಿ ಸಂಗ್ರಹದಲ್ಲಿ ತೊಡಗಿದ್ದರು. ನಸುಕಿನಲ್ಲಿ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಪತ್ರಿಕಾ ವಿತರಕರ ಕೆಲಸ ಅತ್ಯಂತ ಕಷ್ಟಕರವಾದುದು. ಕೊರೋನಾ ಹೊಡೆತ, ಲಾಕ್ ಡೌನ್ ಪರಿಣಾಮದಿಂದಾಗಿ ಪತ್ರಿಕಾ ವಿತರಕರು ಸಂಕಷ್ಟದಲ್ಲಿದ್ದಾರೆ. ಹತ್ತಾರು ವಿತರಕರು ಸೋಂಕಿನಿಂದಾಗಿ ಮೃತ ಪಟ್ಟಿದ್ದು ಅವರ ಕುಟುಂಬಗಳಿಗೆ ಸರಕಾರ 5 ಲಕ್ಷ ರೂ. ಗಳ ಪರಿಹಾರ ಘೋಷಿಸಬೇಕೆಂದು ತಿಳಿಸಿದರು.
ತಾ.ಪಂ.ಇ.ಒ ದೊಡ್ಡಸಿದ್ದಯ್ಯ ಮಾತನಾಡಿ, ಕರೋನಾ ನಿಯಂತ್ರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಮನೆಯಲ್ಲಿ ಬಡತನವಿರುವ ಕಾರಣ ಪತ್ರಿಕೆ ವಿತರಿಸುವ ಕಾರ್ಯದಲ್ಲಿ ತೊಡಗಿರುವ ಹುಡುಗರು ತಮ್ಮ ಆರೋಗ್ಯದತ್ತ ಗಮನ ಹರಿಸುವಂತೆ ತಿಳಿಸಿದರು.
ಸಿ.ಪಿ.ಐ ಎಂ.ಎಸ್.ಸರ್ದಾರ್ ಮಾತನಾಡಿ, ಸಂಕಷ್ಟ ಕಾಲದಲ್ಲಿ ನಿಮ್ಮನ್ನು ಗುರುತಿಸಿ ಕಿರುಕಾಣಿಕೆ ನೀಡಿ ಗೌರವಿಸಿರುವ ಸೇವಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ.ಶೇಷಾನಾಯ್ಕ್ ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಪತ್ರಿಕಾ ವಿತರಕರಿಗೆ ಜರ್ಕಿನ್ ಗಳನ್ನು ನೀಡುವಂತೆ ಮನವಿ ಮಾಡಿದರು.
ತಗ್ಗೀಹಳ್ಳಿ ರಾಮಕೃಷ್ಣಾಶ್ರಮದ ರಾಮನಂದಜೀ, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್, ಕ.ಸಾ.ಪ.ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಮುಖಂಡ ಸಂಕಾಪುರ ಜಯರಾಮ್, ರಕ್ತದಾನಿ ಶಿಕ್ಷಕರ ಬಳಗದ ಅಧ್ಯಕ್ಷ ಎಚ್.ಆರ್. ಶಶಿಕುಮಾರ್, ದಿಲೀಪ್ ಇದ್ದರು.
ವರದಿ: ನಾಗೇಶ್ ಜೀವಾ ಮಧುಗಿರಿ

0 Comments