Ticker

6/recent/ticker-posts

Ad Code

Responsive Advertisement

ಪ್ರವಾಸೋದ್ಯಮಕ್ಕೆ ಒತ್ತು ನೀಡಿ, ಪ್ರವಾಸಿಗರಿಗೆ ತಂತ್ರಜ್ಞಾನ ಬಳಕೆಯಿಂದ ಉತ್ತೇಜನ ನೀಡಬೇಕಿದೆ

ಕರ್ನಾಟಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿ, ಪ್ರವಾಸಿಗರಿಗೆ ಮೂಲಭೂತ ಸೌಕರ್ಯ, ಸಾರಿಗೆ, ಮಾಹಿತಿ ತಂತ್ರಜ್ಞಾನ ಬಳಕೆಯಿಂದ ಉತ್ತೇಜನವನ್ನು ನೀಡಬೇಕಿದೆ.

ಕರ್ನಾಟಕ ರಾಜ್ಯದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲಿ 500 ಕೇಂದ್ರಗಳನ್ನು ಗುರುತಿಸಬಹುದಾಗಿದೆ. ಈ ಪ್ರದೇಶಗಳು ಅತ್ಯಂತ ಪುರಾತನ, ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಸ್ಥಳಗಳಿವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನಿಸುವ ಪ್ರದೇಶಗಳಿವೆ. ಈ ನಿಟ್ಟಿನಲ್ಲಿ ಹಲವು ಸಾಧ್ಯತೆಗಳ ಬಗ್ಗೆ ಸರ್ಕಾರ ದಾಖಲಿಸಬೇಕಿದೆ.


ಕರ್ನಾಟಕದಲ್ಲಿ 31 ಜಿಲ್ಲೆಗಳಿವೆ. ಪ್ರತಿ ಜಿಲ್ಲೆಗಳ ಬಗ್ಗೆ ಜಿಲ್ಲಾ ಪ್ರವಾಸಿ ಗೈಡ್ ಇಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ 31 ಜಿಲ್ಲಾ ಪ್ರವಾಸಿ ಮಾಹಿತಿಗಳನ್ನೊಳಗೊಂಡ ಕನಿಷ್ಠ 300 ಪುಟಗಳ 31 ಪುಸ್ತಕ ಪ್ರಕಟಿಸಬೇಕಿದೆ. ಇಂತಹದೊಂದು ಪ್ರಯತ್ನವನ್ನು ತುಷಾರ ಮಾಸಿಕ ಹಿಂದೆ ಮಾಡಿತ್ತು. ಪ್ರತಿ ಜಿಲ್ಲೆಗಳ ಸಮಗ್ರ ಪ್ರವಾಸಿ ಮಾಹಿತಿಗಳನ್ನು ಪ್ರಕಟಿಸಿದ ದಾಖಲೆ ಇದೆ. ಇದನ್ನೆ ಅಭಿವೃದ್ಧಿ ಪಡಿಸಿ ಪ್ರತಿ ಜಿಲ್ಲೆಯ ಪ್ರವಾಸೋದ್ಯಮ ಸಾಧ್ಯತೆಗಳನ್ನು ದಾಖಲಿಸಬೇಕಿದೆ. ಜಿಲ್ಲೆಯ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಒಂದು ಸಮಿತಿ ನೇಮಕ. ಪ್ರವಾಸಿ ತಾಣಗಳ ಬಗ್ಗೆ PHOTO ಸಮೇತ ಲೇಖನ ಸಂಗ್ರಹಿಸಿ ಪ್ರಕಟಿಸಬೇಕಿದೆ.

ಕನಿಷ್ಠ 300 ಪುಟಗಳ ಮಾಹಿತಿ ಪ್ರಕಟವಾದರೆ, ಪ್ರತಿ ಜಿಲ್ಲೆಯ ಬಗ್ಗೆ ಪ್ರವಾಸಿ ಸ್ಥಳಗಳ ಅರಿವು ಸಾಧ್ಯ. ಈಗ ಇದನ್ನು ಸ್ವತಃ ಪ್ರವಾಸೋದ್ಯಮ ಇಲಾಖೆ, ಅಭಿವೃದ್ಧಿ ನಿಗಮ ಪ್ರಕಟಿಸಿ, ಕಡಿಮೆ ದರದಲ್ಲಿ ಒದಗಿಸಬೇಕಾದ ಜರೂರಿ ಅವಶ್ಯಕತೆ ಇದೆ. ಕನ್ನಡದ ಇದೇ ಪುಸ್ತಕವನ್ನು ಇಂಗ್ಲೀಷ್‍ನಲ್ಲಿ ಕೂಡಾ ಪ್ರಕಟಿಸಿ ರಾಷ್ಟ್ರ-ಅಂತರರಾಷ್ಟ್ರೀಯ ಪ್ರವಾಸಿ ಪ್ರಿಯರ ಗಮನಸೆಳೆಯಬಹುದು.

ಶಾಲೆ-ಕಾಲೇಜು, ಸಾರ್ವಜನಿಕ ಗ್ರಂಥಾಲಯ, ಗ್ರಾಮೀಣ ಗ್ರಂಥಾಲಯ, ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಇಂತಹ ಪುಸ್ತಕದ ಅವಶ್ಯಕತೆ ಇದೆ. ಇದು ಮೊದಲನೆ ಹೆಜ್ಜೆ. ಸದರಿ ಪುಸ್ತಕದಲ್ಲಿ ಪ್ರವಾಸದ ವಿವರ, ಸಾರಿಗೆ, ವಸತಿ ಹಾಗೂ ಮಾರ್ಗಸೂಚಿಗಳಿದ್ದರೆ ಈ ಪುಸ್ತಕ ಪ್ರವಾಸಿಗರ ಭಗವದ್ಗೀತೆ ಆಗಲು ಸಾಧ್ಯ. ಪ್ರತಿಯೊಬ್ಬರು ಇದನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯ. ಶಾಲಾ-ಕಾಲೇಜುಗಳು ವಾರ್ಷಿಕ ಪ್ರವಾಸಕ್ಕೆ ಈ ಪುಸ್ತಕ ಮಾರ್ಗದರ್ಶಿ.

ಸಾರಿಗೆ ಇಲಾಖೆ : ಈ ನಿಟ್ಟಿನಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯನ್ನು ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳಬೇಕಿದೆ. ರಾಜಧಾನಿ ಹಾಗೂ ಪ್ರಮುಖ ಜಿಲ್ಲೆಗಳಿಂದ ಬರುವ ಬಸ್ಸುಗಳನ್ನು ಇಂತಹ ಪ್ರವಾಸಿ ತಾಣಗಳಿಗೆ ಸಂದರ್ಶಿಸುವ ಹಾಗೆ ಅಥವಾ ವಸತಿಯಾಗುವ ಹಾಗೆ ಮಾಡಬೇಕಿದೆ.

ಈಗಿರುವ 5 ಸೀಟಿನ ಎಲ್ಲ ಸಾರಿಗೆ ಬಸ್ಸುಗಳನ್ನು 2+2 ರೀತಿಯಲ್ಲಿ ಬದಲಾಯಿಸಬೇಕಿದೆ. ಕನಿಷ್ಠ ಒಂದು ಟ್ರಿಪ್ 200 ಕಿ.ಮೀ. ಸಂಚರಿಸುವ ಸಾದಾ ಬಸ್ಸು, ಎಕ್ಸ್‍ಪ್ರೆಸ್ ಬಸ್ಸುಗಳನ್ನು 2+2 ರೀತಿಯಲ್ಲಿ ಬದಲಾಯಿಸಿ, ಅವುಗಳ ಕೊನೆಯ ನಿಲ್ದಾಣವನ್ನು ಪ್ರವಾಸಿ ತಾಣಗಳಿಂದ ಹೊರಡುವ, ತಲುಪುವ ಹಾಗೆ ಮಾಡಿದರೆ ಪ್ಯಾಕೇಜ್ ಪ್ರವಾಸ ಅಭಿವೃದ್ಧಿ ಸಾಧ್ಯ. ಸಾಧ್ಯವಾದರೆ ಬಸ್ಸುಗಳ ಮೇಲೆ ಪ್ರವಾಸಿ ತಾಣಗಳ ಡಿಜಿಟಲ್ ಪ್ರಿಂಟ್ ಮೂಲಕ, ಗಮನ ಸೆಳೆಯಬಹುದಾಗಿದೆ.


ಹೊಟೇಲ್ ಅಂಡ್ ರೆಸಾರ್ಟ್ : ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಹೊಟೇಲ್‍ಗಳಿದ್ದರು, ಪ್ರವಾಸಿ ಸೌಲಭ್ಯಗಳ ಕೊರತೆ ಅಪಾರವಾಗಿದೆ. ಹೊಟೇಲ್‍ಗಳಲ್ಲಿ ವಸತಿ ಇದ್ದರೆ, ಊಟ ತಿಂಡಿಗೆ ಬೇರೆ ಕಡೆಗೆ ಹೋಗಬೇಕಾದ ಸ್ಥಿತಿ ಹೆಚ್ಚಿದೆ. ಎರಡು ಇದ್ದರೆ ಅವುಗಳು ದುಬಾರಿಯಾಗಿದ್ದು ಪ್ರವಾಸಿಗರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ನಾನು ಹೆಚ್ಚು ಪ್ರವಾಸಿ ತಾಣಗಳಲ್ಲಿ ಈ ರೀತಿ ಅನಾನುಕೂಲ ಹಾಗೂ ದುಬಾರಿ ಬೆಲೆಯಿಂದ ತೊಂದರೆ ಅನುಭವಿಸಿದ್ದೇನೆ. ಹೊಟೇಲ್‍ಗಳ ದರ ಪ್ರವಾಸಿ ತಾಣಗಳಲ್ಲಿ ದುಬಾರಿಯಾದರೆ, ಜನ ವಸತಿ ನಿಲಯಗಳಲ್ಲಿ ತಂಗಲು ಹಿಂಜರಿಯುತ್ತಾರೆ. ಅನೇಕ ಕಡೆ ವಾಹನ ನಿಲುಗಡೆ ತೊಂದರೆ, ಎಲ್ಲ ರೀತಿಯ ಆಹಾರ ದೊರೆಯದ ಸಮಸ್ಯೆಗಳಿವೆ. ಸ್ಥಳೀಯ ವಸ್ತುಗಳ ಬಗ್ಗೆ ಮಾಹಿತಿಗಳ ಹಾಗೂ ಶಾಪಿಂಗ್‍ಗಳ ಕೊರತೆಗಳಿವೆ. ಈ ನಿಟ್ಟಿನಲ್ಲಿ ಇದೊಂದು ರೀತಿ ಕರ್ನಾಟಕ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ, ವಿನೂತನವಾದ ಪ್ರವಾಸಿ ಪ್ಯಾಕೇಜ್ ಮಾಡಬೇಕಿದೆ. ಕರ್ನಾಟಕ ಸರ್ಕಾರದ ಮೂರು ಪ್ರಮುಖ ಇಲಾಖೆಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೆ ತರಬಹುದಾಗಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಕೆಎಸ್‍ಆರ್‍ಟಿಸಿ ನಿಗಮಗಳ ಜಂಟಿ ಯೋಜನೆ ಇದು. ಮೂರು ಇಲಾಖೆಗಳ ಸಹಭಾಗಿತ್ವದಲ್ಲಿ ನಾಡಿನ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡಬಹುದಾಗಿದೆ. ಇದೊಂದು ಮೂಲದಿಂದ 3 ನಿಗಮಗಳು ಲಾಭದಾಯಕವಾಗಿ ನಡೆದು, ಇದೊಂದು ಬಾಬ್ತಿನಿಂದ 1 ಲಕ್ಷ ಕೋಟಿ ಆದಾಯವನ್ನು ಸರ್ಕಾರ ಹೊಂದಲಿದೆ. ಕನಿಷ್ಠ 1 ಲಕ್ಷ ಜನರಿಗೆ ಉದ್ಯೋಗ, ವಾಣಿಜ್ಯ ವ್ಯವಹಾರದ ಸಾಧ್ಯತೆ ಹೆಚ್ಚಿದೆ.

ಲೋಕೋಪಯೋಗಿ ಇಲಾಖೆಯಲ್ಲಿ, ಬ್ರಿಟಿಷ್ ಕಾಲದ ಪ್ರವಾಸಿ ಮಂದಿರ ಅಥವಾ ಇನ್‍ಸ್ಪೆಕ್ಷನ್ ಬಂಗ್ಲಾಗಳಿವೆ. ಇವು ಇಂದಿಗೂ ಬ್ರಿಟೀಷ್ ಪಳೆಯುಳಿಕೆಗಳೆಂದರೆ ತಪ್ಪಾಗಲಾರದು. ಇವು ಸರ್ಕಾರ ಸಾಕಿಕೊಂಡ ಬಿಳಿಯಾನೆಗಳು. ಸೌಲಭ್ಯ ಹಾಗೂ ಸೇವಾ ಕೊರತೆಗಳಿಂದ ಇವು ಇದ್ದರೂ ಇಲ್ಲದಂತಿವೆ ಎಲ್ಲೋ ಕೆಲವು ಕಡೆ ಚೆನ್ನಾಗಿದ್ದರೂ ಪ್ರವಾಸಿಗರಿಗೆ ಇವು ದೊರೆಯುವುದೇ ಇಲ್ಲ. ಇವುಗಳಿಗೆ ಪುಕ್ಸಟ್ಟೆ ಅಪ್ಪಂದಿರು ಜಾಸ್ತಿ.

ಈ ಪ್ರವಾಸಿ ಮಂದಿರಗಳಲ್ಲಿ ಸಾಮಾನ್ಯವಾಗಿ ಹೇರಳವಾದ ಜಾಗವಿದೆ. ಕೆಲವು ಕಡೆ ಎಕರೆಗಟ್ಟಲೆ ಭೂಮಿ ಉಪಯೋಗವಿಲ್ಲದೆ ಕೊಳಕಾಗಿರುತ್ತದೆ.

ಲೋಕೋಪಯೋಗಿ ಇಲಾಖೆಗಳಲ್ಲಿ ಗುತ್ತಿಗೆದಾರರ ಒಂದು ತಂಡವೇ ಇದೆ. ಸಾಮಾನ್ಯವಾಗಿ ಇವರುಗಳನ್ನು ಬಳಸಿಕೊಂಡು, ಕರ್ನಾಟಕ ಪ್ರವಾಸೋದ್ಯಮಕ್ಕೆ ಹೊಸ ಇತಿಹಾಸ ಬರೆಯಬೇಕಿದೆ.

ಲೋಕೋಪಯೋಗಿ ಇಲಾಖೆಯ ಇಂತಹ ಪ್ರವಾಸಿ ತಾಣಗಳ ಆಧುನೀಕರಣದ ಮೂಲಕ, ಕರ್ನಾಟಕದ ಗುತ್ತಿಗೆದಾರರನ್ನು ಬಳಸಿಕೊಂಡು, ಸರ್ವ ಋತುವಿಗೆ ತಕ್ಕಂತೆ ಎಲ್ಲ ಸೌಲಭ್ಯಗಳ ಪ್ರವಾಸಿ ಹೊಟೇಲ್ ನಿರ್ಮಿಸಬೇಕಿದೆ.

* ಕನಿಷ್ಠ 100x100 ಅಡಿ ವ್ಯಾಸದ ಸ್ಥಳ ಹಾಗೂ ಅಷ್ಟೆ ಪ್ರಮಾಣದ ಪಾರ್ಕಿಂಗ್ ಪ್ರದೇಶವನ್ನೊಳಗೊಂಡ ಒಂದು ಸ್ಥಳ ಗುರುತಿಸಬೇಕಿದೆ.

* ಇಂತಹ ಸ್ಥಳಗಳು ಹುಡುಕಿದರೆ ಹೋಬಳಿ, ತಾಲ್ಲೂಕು ಜಿಲ್ಲಾ ಕೇಂದ್ರ ಹಾಗೂ ಪ್ರವಾಸಿ ತಾಣಗಳಲ್ಲಿ 500 ಕೇಂದ್ರಗಳು ಸಿಗುತ್ತವೆ.

* ಈ ಸ್ಥಳಗಳಲ್ಲಿ ಕನಿಷ್ಠ 50 ಕೊಠಡಿಗಳ ಒಂದು ಲಾಡ್ಜ್. ಕೆಳಗಡೆ ಸಸ್ಯಹಾರಿ ಹಾಗೂ ಮಾಂಸಾಹಾರಿ ಪ್ರತ್ಯೇಕ ಹೊಟೇಲ್ ಮತ್ತು ವೈನ್‍ಸ್ಟೋರ್ ಹೊಂದಿರುವ ಬಾರ್ ಸೌಲಭ್ಯಗಳ  ಸೌಲಭ್ಯಗಳ ಒಂದು ಹೊಟೇಲ್ ನಿರ್ಮಿಸಬೇಕಿದೆ.

* ಕರ್ನಾಟಕದ ಗುತ್ತಿಗೆದಾರರಿಗೆ ಒಂದು ಅವಕಾಶ ನೀಡಿದರೆ ಕನಿಷ್ಠ 500 ಜನ ಮುಂದೆ ಬರಲಿದ್ದಾರೆ.

* ಇಲ್ಲಿ 3 ರಿಂದ 5 ಮಹಡಿಯ ಕಟ್ಟಡದಲ್ಲಿ ವಿಶಾಲವಾದ ಪಾರ್ಕಿಂಗ್ ಲಾಟ್ ಹಾಗೂ ಕೆಳ ಅಂತಸ್ತಿನಲ್ಲಿ ಪ್ರತ್ಯೇಕ ಹೊಟೇಲ್‍ಗಳ ಜೊತೆಗೆ ಸ್ಥಳೀಯ ವಸ್ತುಗಳ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಸಾಧ್ಯ.

* 50 ರಿಂದ 99 ವರ್ಷದ ಸ್ಥಳ ಗುತ್ತಿಗೆ ಅಥವಾ ಬಾಡಿಗೆ ರೂಪದಲ್ಲಿ, ಗುತ್ತಿಗೆದಾರನಿಗೆ ಪ್ರವಾಸೋದ್ಯಮ ನೀತಿಗೆ ಅನುಕೂಲವಾಗುಂತೆ  ನೀಡಬೇಕಿದೆ.

* ಅರ್ಹ ಗುತ್ತಿಗೆದಾರ ಈ ಸ್ಥಳಕ್ಕೆ 1 ರಿಂದ 5 ಕೋಟಿ ಠೇವಣಿ (ಹಿಂತಿರುಗಿಸಲಾಗದ, ಬದಲಾಯಿಸಬಹುದಾದ) ಇಡಬೇಕು.

* ಸ್ವಂತ ಖರ್ಚಿನಲ್ಲಿ ಲಾಡ್ಜ್ ನಿರ್ಮಾಣ ಮಾಡಬೇಕು. ಅದಕ್ಕೆ ಬ್ಯಾಂಕ್ ಗ್ಯಾರಂಟಿ ನೀಡಬೇಕು.

* ಲಾಡ್ಜ್ ಕನಿಷ್ಠ 50 ಕೊಠಡಿ ಹೊಂದಿರಬೇಕು.

* ಅವಶ್ಯಕತೆ ಇರುವೆಡೆ ಹೆಚ್ಚಿನ ಕೊಠಡಿ ನಿರ್ಮಿಸಬೇಕು.

* ಸಾಮಾನ್ಯ-30, ಫಸ್ಟ್ ಕ್ಲಾಸ್-10, ವಿಐಪಿ -10 ರಂತೆ ನಿರ್ಮಿಸಬೇಕು

* ಲಿಫ್ಟ್ ಸೌಲಭ್ಯವಿರಬೇಕು.

* ವೆಜಿಟೆರಿಯನ್ ಹೊಟೇಲ್

* ನಾನ್ ವೆಜಿಟೆರಿಯನ್ ಹೊಟೇಲ್ ಪ್ರತ್ಯೇಕವಿರಬೇಕು

* ಪ್ರತ್ಯೇಕ ಬಾರ್ ಸೌಲಭ್ಯವನ್ನು ಲಾಡ್ಜ್ ಹೊಂದಿರಬೇಕು.

* ಕನಿಷ್ಠ 10 ಅಂಗಡಿಗಳ ಶಾಪಿಂಗ್ ಮಾಲ್ ನೆಲಮಹಡಿದಲ್ಲಿರಬೇಕು.

* ವಿಶಾಲವಾದ ಪಾರ್ಕಿಂಗ್ ಲಾಟ್ ಹೊಂದಿರಬೇಕು.

* ಸ್ವಂತ ಸಾರಿಗೆ ಅಥವಾ ಬಾಡಿಗೆ ವಾಹನ ಸೌಲಭ್ಯ, ರೈಲು-ಬಸ್ಸು-ವಿಮಾನಗಳ ಬುಕ್ಕಿಂಗ್ ಕೌಂಟರ್ ಹೊಂದಿರಬೇಕು.

* ಈ ಹೊಟೇಲ್‍ಗೆ ಒಬ್ಬ ಸರ್ಕಾರಿ ನೋಡಲ್ ಅಧಿಕಾರಿ ನೇಮಿಸಬೇಕು.

* ಹೊಟೇಲ್‍ನಿಂದ ಬರುವ ಆದಾಯದಲ್ಲಿ ಈತ ಶೇಕಡ ಲಾಭದ 30 ಪರ್ಸೆಂಟ್ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕು.

* ತೆರಿಗೆಯಿಂದ ಈ ಹೊಟೇಲ್‍ಗೆ ವಿನಾಯಿತಿ ನೀಡಬೇಕು.

* ಈ ವ್ಯವಸ್ಥೆಗೆ ಬಂಡವಾಳವನ್ನು ಸದರಿ ಗುತ್ತಿಗೆದಾರನೆ ಹೊಂದಿಸಿಕೊಳ್ಳಬೇಕು.

* ಬ್ಯಾಂಕ್‍ಗಳಿಗೆ ಪ್ರತ್ಯೇಕವಾದ ಜಾಮೀನು ನೀಡಿ ಸಾಲ ಪಡೆಯಬಹುದು.

* ಸರ್ಕಾರಿ ಇಲಾಖೆಗಳಿಗೆ ಇಲ್ಲಿ ಕೊಠಡಿ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಬೇಕು. ಆಯಾ ಇಲಾಖೆಗಳಿಂದ ಬಾಡಿಗೆ ಪಡೆಯಬೇಕು.

* ಕಮರ್ಷಿಯಲ್ ಕಾಂಪ್ಲೆಕ್ಸ್‍ನಲ್ಲಿ ಸ್ಥಳೀಯ ಉತ್ಪನ್ನಗಳ ಮಾರಾಟ ಹಾಗೂ ಸರ್ಕಾರಿ ಉತ್ಪನ್ನಗಳಿಗೆ ಅವಕಾಶ ನೀಡಬೇಕು.

* ತರಕಾರಿ ಅಂಗಡಿ, ದೋಬಿ ಅಂಗಡಿ, ಫ್ರೂಟ್ ಸಲಾಡ್ ಅಂಗಡಿ, ಐಸ್‍ಕ್ರೀಂ ಅಂಗಡಿ ಹಾಗೂ ಕಾಂಡಿಮೆಂಟ್ಸ್ ಅಂಗಡಿಗೆ ಜಾಗ ನೀಡಬೇಕು.

* ಸಾರಿಗೆ ಇಲಾಖೆ ಬಸ್ಸು ಇಲ್ಲಿಗೆ ಪ್ಯಾಕೇಜ್ ಪ್ರವಾಸಿಗರನ್ನು ಇಳಿಸುವ, ಕರೆದೊಯ್ಯುವ ಕಾಯ್ದಿರಿಸಿದ ಆಸನ ವ್ಯವಸ್ಥೆ ಮತ್ತು ಊಟ-ತಿಂಡಿಗೆ ನಿಲ್ಲಿಸುವ ಹಾಗೆ ಅವಕಾಶ ಕಲ್ಪಿಸಬೇಕು.

* ಇಲಾಖೆಯು ಸ್ಥಳೀಯ ಪ್ರವಾಸಿ ಮಾಹಿತಿ ಕೇಂದ್ರ ಹಾಗೂ ಮಾಹಿತಿ ಒದಗಿಸಬೇಕಿದೆ.

* ಲೋಕೋಪಯೋಗಿ ಇಲಾಖೆಯ ಹಳೆಯ ಐ.ಬಿ.ಗಳನ್ನು ಆಧುನಿಕಗೊಳಿಸಿ, ಸರ್ಕಾರಿ ನೌಕರರಿಗೆ ಸೌಲಭ್ಯಗಳನ್ನು ನೀಡಿ ಸೇವೆ ಪಡೆಯಬೇಕು.

* ಇದಕೆ ತಗಲುವ ಬಂಡವಾಳವನ್ನು ಸದರಿ ವ್ಯಕ್ತಿ ಭರಿಸುವುದರಿಂದ, ರಾಜ್ಯದಲ್ಲಿ ಕನಿಷ್ಠ 1 ರಿಂದ 5 ಕೋಟಿ ಠೇವಣಿ ರೂಪದಲ್ಲಿ 1000 ಸಾವಿರ ಕೋಟಿ ಠೇವಣಿ ಸಂಗ್ರಹವಾಗಲಿದೆ. 

* ಇದು ನಾನ್ ರಿಟರ್ನನೇಬಲ್ ಫಂಡ್ ಆಗಿದೆ.

* ಠೇವಣಿಗಳಿಂದ ಸರ್ಕಾರಕ್ಕೆ ಹೇರಳವಾದ ಬಡ್ಡಿ ಬರಲಿದೆ.

* ಉದ್ಯೋಗ ಸೃಷ್ಟಿ ಹಾಗೂ ವ್ಯಾಪಾರದಿಂದಾಗಿ ಇವು ಚೆನ್ನಾಗಿ ನಡೆದು, ಆಯಾ ಪ್ರದೇಶದಲ್ಲಿ ಒಂದು ವಾಣಿಜ್ಯ ಕೇಂದ್ರಗಳಾಗುವುದರಿಂದ, ಬೇರೆ ಬೇರೆ ರೀತಿಯ ಲಾಭಗಳಿಂದ ಸರ್ಕಾರಕ್ಕೆ ಹೆಚ್ಚಿನ ಪ್ರಯೋಜನವಿದೆ.

ಇದೊಂದು ಬಾಬ್ತಿನಿಂದಲೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿ ಪಾಲು ಸಾಧ್ಯವಿದೆ. ಈ ಯೋಜನೆಯ ಕರಡು ಸಿದ್ಧಪಡಿಸಿ, ಸಚಿವ ಸಂಪುಟ ಸಭೆಯ ಅನುಮತಿ ಪಡೆದರೆ, ಒಂದು ರೂ. ಬಂಡವಾಳವಿಲ್ಲದೆ, ರಾಜ್ಯ ಸರ್ಕಾರ 1 ಲಕ್ಷ ಕೋಟಿ ರೂ.ಗಳ ಲಾಭವನ್ನು ಪ್ರವಾಸೋದ್ಯಮ ಇಲಾಖೆಯ ಮೂಲದಿಂದಲೇ ಗಳಿಸಬಹುದಾಗಿದೆ.

ಈ ಬಗ್ಗೆ ಒಂದು ಸಮತಿಯನ್ನು ನೇಮಿಸಿ, ಒಂದು ವರದಿಯನ್ನು ಸಿದ್ಧಪಡಿಸಿದರೆ, ಕೇವಲ ಖಾಲಿ ಇರುವ ಜಾಗದಲ್ಲಿ ಈ ಯೋಜನೆಯನ್ನು ಜಾರಿಗೆ ತರಬಹುದು.


-ರಮೇಶ ಸುರ್ವೆ, ಹಿರಿಯ ಪತ್ರಕರ್ತ


Post a Comment

0 Comments

Ad Code

Responsive Advertisement