ರಾಜ್ಯದ ಸಮಸ್ಯೆಗಳಿಗೆ ಬಿಜೆಪಿ ಸಂಸದರಿಂದ ಸ್ಪಂದನೆ ಇಲ್ಲ; ಜನರ ಧ್ವನಿಯಾಗುವರು ಲೋಕಸಭೆಗೆ ಆಯ್ಕೆಯಾಗಬೇಕು ; ಎಂ.ಎಸ್. ರಕ್ಷಾ ರಾಮಯ್ಯ
ಬೆಳಗಾವಿ, ಏ 14 ; ರಾಜ್ಯದಿಂದ ಆಯ್ಕೆಯಾಗುವ ಸಂಸದರು ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಬೇಕು. ಅಂತಹ ಸಂಸದರು ರಾಜ್ಯಕ್ಕೆ ಅತ್ಯಂತ ಅನಿವಾರ್ಯ ಎಂದು ಪ್ರದೇಶ ಯುವ ಕಾಂಗ್ರಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರವಾಗಿ ಯುವ ಕಾಂಗ್ರೆಸ್ಸಿನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದರು., ಸವದತ್ತಿ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಬೆಳಗಾವಿ ನಗರ ಭಾಗದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿಯಿಂದ ಆಯ್ಕೆಯಾಗಿರುವ 25 ಸಂಸದರ ಸಾಧನೆ ಶೂನ್ಯ. ಇವರು ಆಡಳಿತ ಪಕ್ಷದಿಂದ ಆಯ್ಕೆಯಾಗಿರುವುದು ನಮಗೆ ವರ ಆಗಬೇಕಾಗಿತ್ತು. ಆದರೆ ಶಾಪವಾಗಿದೆ. ರಾಜ್ಯದ ಯಾವುದೇ ಸಮಸ್ಯೆಗಳಿಗೂ ಬಿಜೆಪಿ ಸಂಸದರಿಂದ ಸ್ಪಂದನೆ ದೊರೆಯುತ್ತಿಲ್ಲ. ಯಾವುದೇ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮುಂದೆ ಕೊಂಡೊಯ್ಯುವ ಧೈರ್ಯವನ್ನು ಬಿಜೆಪಿ ಸಂಸದರು ಮಾಡುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದ ಸಂಸದರು ಲೋಕಸಭೆಯಲ್ಲಿ ರಾಜ್ಯದ ವಿಚಾರಗಳ ಬಗ್ಗೆ ಚರ್ಚಿಸುತ್ತಿಲ್ಲ. ಅಭಿವೃದ್ಧಿ ಕುರಿತು ಬಿಜೆಪಿ ಸಂಸದರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವರಿಷ್ಠರ ಕೈಗೊಂಬೆಯಾಗಿ ಕೆಲಸಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಮಹದಾಯಿ ನದಿ ನೀರು ವಿಚಾರದಲ್ಲಿ ಗೋವಾ ರಾಜ್ಯ ಮೇಲುಗೈ ಸಾಧಿಸುತ್ತಿದೆ. ಗೋವಾದ ಅಣತಿಯಂತೆ ಕೇಂದ್ರ ಸರ್ಕಾರ ಮಹದಾಯಿ ನದಿಯ ವಸ್ತುಸ್ಥಿತಿ ಕುರಿತು ಕೇಂದ್ರದಿಂದ ಅದ್ಯಯನ ತಂಡ ಕಳುಹಿಸಿದೆ. ಆದರೆ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಮಹದಾಯಿ ನದಿ ವಿಚಾರದಲ್ಲಿ ರಾಜ್ಯ ಹಿತ ರಕ್ಷಣೆ ಮಾಡಲು ವಿಫಲರಾಗಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಸಹ ರಾಜ್ಯದ ಹಿತ ರಕ್ಷಣೆಗೆ ಆದ್ಯತೆ ನೀಡುತ್ತಿಲ್ಲ. ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯ ಕರ್ನಾಟಕ. ಆದರೆ ಜಿ.ಎಸ್.ಟಿಯಲ್ಲಿ ಅನ್ಯಾಯವಾಗುತ್ತಿದೆ. ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ದು ನ್ಯಾಯ ಕೇಳಲು ಕೇಂದ್ರ ಸಚಿವರು, ರಾಜ್ಯ ಸಂಸದರಿಂದ ಸಾಧ್ಯವಾಗುತ್ತಿಲ್ಲ ಎಂದರು.ಪ್ರತಿವರ್ಷ ಬೆಳಗಾವಿ ಸುತ್ತಮುತ್ತ ಜಿಲ್ಲೆಗಳು ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಸಿಲುತ್ತವೆ. 25 ಹಳ್ಳಿಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವ ಯಾವುದೇ ಗಟ್ಟಿಯಾದ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿಲ್ಲ. ನದಿಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ತಲೆದೋರುತ್ತಿದೆ. ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಹಳ್ಳಿಗಳನ್ನು ಸ್ಥಳಾಂತರ ಮಾಡುವುದಾಗಿ ಮಾಡಿದ್ದ ಘೋಷಣೆ ಘೋಷಣೆಯಾಗಿಯೇ ಉಳಿದಿದೆ ಎಂದು ಹೇಳಿದರು.
ಬೆಳಗಾವಿಯ ವರ್ತುಲ ರಸ್ತೆ ನಿರ್ಮಾಣ ಮಾಡುವ ಯೋಜನೆ ಪ್ರಗತಿ ಕಂಡಿಲ್ಲ. ರೈತರಿಗೆ ನ್ಯಾಯವಾದ ಬೆಲೆ ನೀಡಿ ಭೂಮಿ ಸ್ವಾಧೀನಪಡಿಸಿಕೊಳ್ಳುವ, ರೈತರ ಜತೆ ಸೂಕ್ತ ರೀತಿಯಲ್ಲಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವ ಕೆಲಸ ಆಗಿಲ್ಲ. ಇದರಿಂದ ಬೆಳಗಾವಿಯಲ್ಲಿ ಸಂಚಾರಿ ಒತ್ತಡ ಸಮಸ್ಯೆ ನಿವಾರಣೆಯಾಗಿಲ್ಲ. ಬೆಳಗಾವಿ ನಗರದಲ್ಲಿ ಓವರ್ ಬ್ರಿಡ್ಜ್ ನಿರ್ಮಿಸುವ ಕಾಮಗಾರಿ ಪೂರ್ಣಗೊಂಡಿಲ್ಲ. ಸಾಕಷ್ಟು ಕಡೆ ಓವರ್ ಮತ್ತು ಅಂಡರ್ ಬ್ರಿಡ್ಸ್ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ಸುವರ್ಣ ಸೌಧ ಭೂತ ಬಂಗಲೆಯಂತಾಗಿದೆ. ಇಲ್ಲಿಗೆ ಬೇರೆ ಬೇರೆ ಇಲಾಖೆಗಳನ್ನು ಸ್ಥಳಾಂತರ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಬೆಳಗಾವಿ ಜನ ಸಣ‍್ಣ ಸಣ್ಣ ಸಮಸ್ಯೆಗಳಿಗೂ ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಈ ವಿಚಾರದಲ್ಲಿ ಉತ್ತರ ಕರ್ನಾಟಕದ ಜನತೆಯಲ್ಲಿ ಭಾರೀ ಅಸಮಾಧಾನವಿದೆ ಎಂದು .ಎಂಎಸ್. ರಕ್ಷಾ ರಾಮಯ್ಯ ಆರೋಪಿಸಿದರು.
ಕರ್ನಾಟಕ – ಮಹಾರಾಷ್ಟ್ರ – ಗೋವಾ ರಾಜ್ಯಗಳ ಗಡಿಗಳಿಗೆ ಹೊಂದಿಕೊಂಡಿರುವ ಬೆಳಗಾವಿ ನಿರೀಕ್ಷೆಯಂತೆ ಕೈಗಾರಿಕೆ, ವಾಣಿಜ್ಯ ಚಟುವಟಿಕೆಯಲ್ಲಿ ಅಭಿವೃದ‍್ದಿ ಸಾಧಿಸಿಲ್ಲ. ಬೆಳಗಾವಿಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ಸೂಕ್ತ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ವಿಚಾರದಲ್ಲಿ ಬಿಜೆಪಿ ಸಂಸದರಲ್ಲಿ ನಿರಾಸಕ್ತಿ ಇದೆ ಎಂದು ಎಂ.ಎಸ್. ರಕ್ಷಾ ರಾಮಯ್ಯ ಹೇಳಿದರು.



0 Comments