Ticker

6/recent/ticker-posts

Ad Code

Responsive Advertisement

ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿ ಪ್ರದಾನ

15 ಏಪ್ರಿಲ್ 2021ರ ಗುರುವಾರ ಸಂಜೆ 4.30 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ “ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭ”ವನ್ನು ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಲಾಗಿತ್ತು. 


ಹಿರಿಯ ಕವಿಗಳಾದ ಪ್ರೊ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಖ್ಯಾತ ವಿದ್ವಾಂಸರಾದ ಡಾ. ಎ.ವಿ. ನಾವಡ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಂಶೋಧಕ ಡಾ. ಎ.ವಿ. ನಾವಡ ಅವರು ಕನ್ನಡ ಸಾಹಿತ್ಯ ಪರಿಷತ್ತು 45 ವರ್ಷ ಶ್ರಮಿಸಿ ಹೊರತಂದಿರುವ ಎಂಟು ಸಂಪುಟಗಳ ಕನ್ನಡ - ಕನ್ನಡ ಏಕಭಾಷಾ ನಿಘಂಟಿಗೆ ಹೋಲಿಸುವಂತಹ ಇನ್ನೊಂದು ಶಬ್ದಕೋಶ ಇಡೀ ಭಾರತದಲ್ಲಿಲ್ಲ ಎಂದರು. ಮುಂದುವರೆದ ಅವರು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು 12 ವರ್ಷ ದಾಟಿದರೂ ಇನ್ನೂ ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನಮಾನ ದಕ್ಕಿಲ್ಲ. ಅದು ಭಾರತೀಯ ಭಾಷಾ ಸಂಸ್ಥಾನದ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತಿರುವುದರಿಂದ ತಮಿಳಿನಲ್ಲಿ ಆದಷ್ಟು ಪ್ರಗತಿ ಇಲ್ಲಿ ಆಗಿಲ್ಲ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು. ಶಾಸ್ತ್ರೀಯ ಭಾಷೆ ಎಂಬುದನ್ನು ಕ್ರಿ.ಶ. 1750ರವರೆಗೆ ಮಾತ್ರ ಸೀಮಿತಗೊಳಿಸದೆ ವರ್ತಮಾನಕ್ಕೂ ಇದನ್ನು ಸಂಗತವಾಗಿಸಬೇಕು. ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದ್ರ ಕನ್ನಡಿಗರ ಸ್ವಾಭಿಮಾನದ, ಅಸ್ಮಿತೆಯ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು. 

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರು ಮಾತನಾಡಿ ಟಿ.ವಿ. ವೆಂಕಟಾಚಲಶಾಸ್ತ್ರೀ ಅವರಂತಹ ಘನ ವಿದ್ವಾಂಸರಿಗೆ ತಮ್ಮ ಅವಧಿಯಲ್ಲಿ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ನೀಡಿದ ಸಂತೃಪ್ತಿ ಇದೆ. ಇಡೀ ಭಾರತದಲ್ಲಿ ಅವರಂತಹ ಬಹುಶ್ರುತ ವಿದ್ವಾಂಸರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದೆ ಎಂದರು. 

ಇದೇ ತಿಂಗಳ 22 ರಂದು ತಾವು ಮೈಸೂರಿಗೆ ಭೇಟಿ ನೀಡಿ ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದ್ರದ ನಿರ್ದೇಶಕರೊಂದಿಗೆ ಈ ಕುರಿತ ಏಳನೆಯ ಸುತ್ತಿನ ಸಭೆ ನಡೆಸಲಾಗುವುದೆಂದರು. 12 ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸಿದರೂ ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಲ್ಲವೆಂದು ಅವರು ವಿಷಾದಿಸಿದರು. 

ಈ ಸಮಾರಂಭದಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಶ್ರೀ ಕೆ. ರಾಜಕುಮಾರ್, ಡಾ. ಪದ್ಮರಾಜ ದಂಡಾವತಿ ಹಾಗೂ ಗೌರವ ಕೋಶಾಧ್ಯಕ್ಷರಾದ ಶ್ರೀ ಪಿ. ಮಲ್ಲಿಕಾರ್ಜುನಪ್ಪ ಅವರು ಉಪಸ್ಥಿತರಿದ್ದರು. 


Post a Comment

0 Comments

Ad Code

Responsive Advertisement