ಬಳ್ಳಾರಿ,ಏ.25-ಮಹಾನಗರ ಪಾಲಿಕೆ ಚುನಾವಣೆಗೆ 19ನೇ ವಾರ್ಡ್‍ನಿಂದ ಸ್ಪರ್ಧಿಸಿರುವ ಬಿಜೆಪಿಯ ಡಾ.ಕೆ.ಎಸ್.ಅಶೋಕ್ ಕುಮಾರ್ ಬಳ್ಳಾರಿಗರ ಪುತ್ರರಾಗಿದ್ದಾರೆ. ಅವರು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಎನ್ನುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ನಿಶ್ಚಿತಾ ಅಭಿಪ್ರಾಯ ಪಟ್ಟಿದ್ದಾರೆ.
ಅಶೋಕ್ ಪರವಾಗಿ 19ನೇ ವಾರ್ಡ್‍ನ ಹಲವು ಬಡಾವಣೆಗಳಿಗೆ ತೆರಳಿ ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಮತದಾರರಲ್ಲಿ ವಿನಂತಿಸಿಕೊಳ್ಳುವ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಅಶೋಕ್ ಪಕ್ಷದಲ್ಲಿರುವುದೇ ಅಭಿಮಾನ ಪಡುವ ಸಂಗತಿ. ಅವರು ಸಮಾಜ ಸೇವೆ ಮಾಡಲು ರಾಜಕೀಯ ಪಕ್ಷಗಳ ಅಗತ್ಯವೇ ಇಲ್ಲ. ಮೋದಿ, ಯಡಿಯೂರಪ್ಪ ಮತ್ತು ಬಿ.ಶ್ರೀರಾಮುಲು ಅವರ ಸಮಾಜ ಸೇವಾ ಕೈಂಕರ್ಯ ಗಮನಿಸಿ ಪಕ್ಷಕ್ಕೆ ದುಡಿಯುತ್ತಿದ್ದಾರೆ. ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಅಶೋಕ್ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಆಹ್ವಾನ ಮಾಡಿದ್ದಾರೆ ಎಂದರು.ಕುಡಿಯುವ ನೀರು, ನೈರ್ಮಲ್ಯ, ಚರಂಡಿ ಸ್ವಚ್ಛತೆ, ಪ್ರಾಣಿಗಳ ರಕ್ಷಣೆ, ಮಹಿಳೆಯರ ರಕ್ಷಣೆಗೆ ಕಂಕಣ ಬದ್ಧರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ತಮ್ಮ ವಾರ್ಡಿನಲ್ಲಿ ಮನೆಯ ಮಗನಂತೆ ಸೇವೆ ಮಾಡುತ್ತಿದ್ದಾರೆ. ಪ್ರತಿ ಮನೆ ಮನೆಗೂ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಮೆಚ್ಚುವಂತದ್ದು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅತ್ಯಂತ ಪ್ರೀತಿ ಪಾತ್ರರಾಗಿದ್ದಾರೆ. ಅಶೋಕ್‍ರಂತಹ ಯುವಕರು ಪಕ್ಷಕ್ಕೆ ತುಂಬಾ ಅಗತ್ಯವಿದ್ದಾರೆ. ಕಳೆದ ವರ್ಷ ಕೋವಿಡ್ ಅವಧಿಯಲ್ಲಿ ಮನೆ ಮನೆಗೂ ತೆರಳಿ ಆಹಾರ ಕಿಟ್, ಆರೋಗ್ಯ ಸೇವೆ, ಔಷಧಿ, ಕುಡಿವ ನೀರು ಸೇರಿದಂತೆ ಅತಿ ಜರೂರಿನ ಸೇವೆ ಮಾಡಿದ್ದಾರೆ. ಪ್ರತಿ ವಾರ್ಡಿನಲ್ಲೂ, ಪ್ರತಿ ಕ್ಷೇತ್ರದಲ್ಲೂ ಅಶೋಕ್ ಅಂತಹ ಸಮಾಜ ಸೇವಾದುರಂಧರರ ಬೇಕಾಗಿದ್ದಾರೆ. ಅವರ ಸೇವೆ ಗುರುತಿಸಿ ಪಕ್ಷ ಹೆಮ್ಮೆ ಪಡುತ್ತದೆ. ವಾರ್ಡಿನಲ್ಲಿ ನಾನು ಮತ ಯಾಚಿಸಲು ತೆರಳಿದಾಗ ಜನರೇ ಖುದ್ದು ಹೇಳುತ್ತಿದ್ದಾರೆ. ಅಶೋಕ್ ನಮ್ಮ ಮನೆಯ ಮಗ. ನೀವು ಮತಪ್ರಚಾರಕ್ಕೆ ಬರಬೇಡಿ. ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ನಾವೇ ಸ್ಪರ್ಧಿಸಿರೋದು ಎನ್ನುವ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಲ್ಲ ತ್ಯಾಗಕ್ಕೂ ಸಿದ್ಧರಿರುವ ಅಶೋಕ್ ಖಂಡಿತವಾಗಿಯೂ ಹೆಚ್ಚಿನ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದರು.ಬಿಜೆಪಿ ಅಭ್ಯರ್ಥಿ ಡಾ.ಕೆ.ಎಸ್.ಅಶೋಕ್ ಕುಮಾರ್ ಮಾತನಾಡಿ, ಮೊದಲಿಂದಲೂ ನನಗೆ ಬಿ.ಶ್ರೀರಾಮುಲು ಆದರ್ಶ. ರೆಡ್ಡಿ ಅವರ ಸಾಮಾಜಿಕ ಸೇವೆ ನನ್ನನ್ನು ರಾಜಕೀಯಕ್ಕೆ ಬರಲು ಸ್ಫೂರ್ತಿ ನೀಡಿದೆ. ನಮ್ಮ ತಂದೆ ಮತ್ತು ಸೋದರರ ಸಾಮಾಜಿಕ ಕಳಕಳಿ ನನಗೆ ಜನರೊಂದಿಗೆ ಬೆರೆಯಲು ಅವಕಾಶ ಮಾಡಿಕೊಟ್ಟಿದೆ. ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಪಕ್ಷಕ್ಕಾಗಿ ದುಡಿಯುತ್ತಿರುವೆ. ಜನರಿಗೂ ನನ್ನ ಕೈಲಾದ ಸೇವೆ ಮಾಡುತ್ತಿರುವೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವೆ. ನನ್ನ ವಾರ್ಡಿನ ಜನತೆಗೆ ಏನು ಬೇಕಾಗಿದೆಯೋ ಅದೆಲ್ಲವನ್ನೂ ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಜನರು ನನ್ನನ್ನು ಮಗನಂತೆ ಪ್ರೀತಿಸುತ್ತಿದ್ದಾರೆ. ಅವರ ಪ್ರೀತಿಗೆ ನಾನು ಎಲ್ಲ ತ್ಯಾಗಕ್ಕೂ ಸಿದ್ಧನಿದ್ದೇನೆ. ವಾರ್ಡಿನಲ್ಲಿ ಮತ ಯಾಚಿಸಲು ತೆರಳಿದಾಗ ಜನರೇ ಖುದ್ದಾಗಿ ಆದರಿಸಿ ಹಾರೈಸುತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ಜನರಿಗೆ ಅಭಿಮಾನ ಇದೆ. ಆದರೆ, ನಮ್ಮ ಅಶೋಕ್ ಅವರನ್ನೇ ನಾವು ಗೆಲ್ಲಿಸುವುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದರು.

0 Comments