ರಾಜ್ಯದಲ್ಲಿ ರೆಮ್ಡೆಸಿವಿರ್ (Remdesivir Injection) ಚುಚ್ಚುಮದ್ದು ಕೊರತೆ ಇದೆ ಎಂಬ ಕೂಗು ಕೇಳಿಬಂದ ಬೆನ್ನಲ್ಲೇ ಇದೀಗ ಆಕ್ಸಿಜನ್ ಕೊರತೆ ಇದೆ ಎಂದು ಅನೇಕ ಖಾಸಗಿ ಆಸ್ಪತ್ರೆಗಳು ಅಲವತ್ತುಕೊಳ್ಳುತ್ತಿವೆ. ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ರೋಗಿಗಳಿಗೆ ಆಕ್ಸಿಜನ್ ಅತ್ಯಗತ್ಯವಾಗಿದ್ದು, ತಮಗೆ ಎಲ್ಲೂ ಆಕ್ಸಿಜನ್ ಸಿಗುತ್ತಿಲ್ಲ. ಹ ಣ ಪಾವತಿ ಮಾಡಿದರೂ ಸಿಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಹೇಳುತ್ತಿವೆ. ಆದರೆ, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಅಕ್ಸಿಜನ್ ಸರಬರಾಜು ಇಲ್ಲ ಎಂಬ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಆಗಿರಬಹುದು. ಆದರೆ, ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಖಾಸಗಿ ಅವರು ಹಣ ಪಾವತಿ ಮಾಡದೇ ಇರುವುದರಿಂದ ಆಮ್ಲಜನಕ ಸಿಕ್ಕಿಲ್ಲದೇ ಹೋಗಿರಬಹುದು. ಹಾಗಂತ ಆಕ್ಸಿಜನ್ ಕೊರತೆ ಇದೆ ಎನ್ನೋದು ಸರಿ ಅಲ್ಲ ಎಂದು ಸಚಿವರು ಹೇಳಿದ್ದಾರೆ.
ನಾನು ಫನಾ (PHANHA – Private Hospitals and Nursing Homes Association) ಸಂಘಟನೆಯವರ ಜೊತೆ ಮಾತನಾಡಿದ್ದೇನೆ. ಕಡಿಮೆ ಆಕ್ಸಿಜನ್ ಇರುವ ಕಡೆ ಜಂಬೋ ಆಕ್ಸಿಜನ್ ಕೊಟ್ಟಿದ್ದೇನೆ. ಸದ್ಯಕ್ಕೆ ನಮ್ಮಲ್ಲಿ ಆಕ್ಸಿಜನ್ ಕೊರತೆ ಇಲ್ಲ. ದಯವಿಟ್ಟು ತಪ್ಪು ಮಾಹಿತಿ ಕೊಡಬೇಡಿ. ಮನಸೋ ಇಚ್ಛೆ ಬರೆಯಬೇಡಿ ಎಂದು ಅರೋಗ್ಯ ಸಚಿವ ಡಾ. ಸುಧಾಕರ್ ಅವರು ಮಾಧ್ಯಮಗಳಿಗೆ ತಾಕೀತು ಮಾಡಿದ್ದಾರೆ.
800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಶಕ್ತಿ ನಮ್ಮಲ್ಲಿ ಇದೆ. ನಮಗೆ ಈಗಿನ ಪರಿಸ್ಥಿತಿಯಲ್ಲಿ ಆಕ್ಸಿಜನ್ ಅಗತ್ಯ ಇರುವುದು 200 ಮೆಟ್ರಿಕ್ ಟನ್. ಆದರೆ ನಮ್ಮ ಬಳಿ 300 ಮೆಟ್ರಿಕ್ ಟನ್ ಆಮ್ಲಜನಕ ಇದೆ. ಕೇಂದ್ರದಿಂದ ನಮಗೆ 300 ಮೆಟ್ರಿಕ್ ಟನ್ ಅಲಾಟ್ ಆಗಿದೆ. ಇನ್ನೂ ಹೆಚ್ಚು ಅಕ್ಸಿಜನ್ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದ್ದರಿಂದ ಆಕ್ಸಿಜನ್ ಕೊರತೆ ಸದ್ಯಕ್ಕೆ ಎದುರಾಗುವುದಿಲ್ಲ ಎಂದು ಡಾ. ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಮ್ಮ ಜನರ ತಪ್ಪಿನಿಂದ ಇವತ್ತು ಇಷ್ಟು ಸೋಂಕು ಹೆಚ್ಚಳ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತಮ್ಮಲ್ಲೂ ಕೆಲ ನ್ಯೂನತೆಗಳಿದ್ದು, ಅದನ್ನು ಸರಿ ಪಡಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ನಿತ್ಯ ದಾಖಲಾಗುತ್ತಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಐದಂಕಿ ಮೊತ್ತ ದಾಟುತ್ತಿವೆ. ನಿನ್ನೆ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಹೋದ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅದು ಬೆಂಗಳೂರಿನ ಸದ್ಯದ ಪರಿಸ್ಥಿತಿಗೆ ಕೈಗನ್ನಡಿಯಂತಿದೆ. ಹಾಗೆಯೇ, ಇಲ್ಲಿ ಅನೇಕ ಕಡೆ ರೆಮ್ಡೆಸಿವಿರ್ ಇಂಜೆಕ್ಷನ್, ಐಸಿಯು ಬೆಡ್ ಕೊರತೆ ವಿಪರೀತವಾಗಿ ಕಾಡುತ್ತಿದೆ. ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರಿರುವ ವಿಚಾರವನ್ನು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡ ಒಪ್ಪಿಕೊಂಡಿದ್ದಾರೆ.
ಇಂದು ಮಣಿಪಾಲ ಆಸ್ಪತ್ರೆಯ ಕೋವಿಡ್ ಘಟಕದಲ್ಲಿ ದಾಖಲಾಗಿರುವ ಸಿಎಂ ಅವರನ್ನು ಭೇಟಿ ಮಾಡಲಿರುವ ಡಾ. ಸುಧಾಕರ್ ಅವರು ಬೆಂಗಳೂರಿನಲ್ಲಿ ಬಿಗಿ ಕ್ರಮ ಕೈಗೊಳ್ಳುವುದರ ಕುರಿತು ಚರ್ಚೆ ನಡೆಸಲಿದ್ದಾರೆ. ನಿನ್ನೆ ಕೂಡ ಸುಧಾಕರ್ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಕೋವಿಡ್ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು. ಆಗ ರಾಜ್ಯಪಾಲರು ಕಠಿಣ ಕ್ರಮಗಳನ್ನ ಕೈಗೊಳ್ಳುವುದರ ಕುರಿತು ಸುಧಾಕರ್ ಅವರಿಗೆ ಒಂದಷ್ಟು ಸಲಹೆಗಳನ್ನ ನೀಡಿರುವುದು ತಿಳಿದುಬಂದಿದೆ. ಈ ವಿಚಾರಗಳನ್ನೂ ಸಚಿವರು ಸಿಎಂ ಜೊತೆ ಇಂದು ಚರ್ಚಿಸಲಿದ್ದಾರೆ. ನಾಳೆ ಸಭೆಯಲ್ಲಿ ಮುಂದಿನ ನಡೆಗಳನ್ನ ನಿರ್ಧರಿಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ವೀಕೆಂಡ್ ಲಾಕ್ ಡೌನ್ ಇತ್ಯಾದಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.

0 Comments