ಪ್ರಕಾಶ್ ರಾನಡೆ, (71 ವರ್ಷ) ಎ.ಇ.ಸಿ.ಎಸ್.ಲೇಔಟ್‍ನ 7ನೇ ಮುಖ್ಯರಸ್ತೆಯಲ್ಲಿ ವಾಕಿಂಗ್ ಮಾಡುವಾಗ, 18-20 ವರ್ಷದ ಇಬ್ಬರು ಯುವಕರು ಹೋಂಡಾ ಡಿಯೋ ಬೈಕಿನಲ್ಲಿ ಬಂದು ಮೊಬೈಲ್ ಫೋನ್ ಅನ್ನು ಕಿತ್ತು ಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಮೊಬೈಲ್ ಫೋನ್ ಮತ್ತು ಆರೋಪಿಗಳ ಪತ್ತೆಗಾಗಿ ಸಂಜಯನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಶ್ರೀ ಶಿವಮೂರ್ತಿ ಎನ್.ಜಿ., ಮತ್ತು ಪಾಂಡುರಂಗ ಗಸ್ತಿನಲ್ಲಿದ್ದಾಗ ಏ. 16ರ ಸಂಜೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದಾಗಿ ಭಾತ್ಮೀದಾರರು ನೀಡಿದ ಮಾಹಿತಿಯ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರ ಮಾಡಲಾಗಿ, ಆರೋಪಿ ಮೊಬೈಲ್ ಕಳವು ಮಾಡಲು ಬಂದಿರುವುದಾಗಿ ತಿಳಿಸಿರುತ್ತಾನೆ.
ಆರೋಪಿ ಧನುಷ್ ಚಿನ್ನಪ್ಪ ಗಾರ್ಡನ್, ಬೆನ್‍ಸನ್ ಟೌನ್, ಜೆ.ಸಿ.ನಗರ, ಬೆಂಗಳೂರು ಎಂಬುವನನ್ನು ದಸ್ತಗಿರಿ ಮಾಡಿ ಆರೋಪಿಯು ನೀಡಿದ ಮಾಹಿತಿ ಮೇರೆಗೆ ಸುಮಾರು 4.5 ಲಕ್ಷ ಮೌಲ್ಯದ ಆಪಲ್ ಐ ಫೋನ್-1, ಹಾನರ್-1, ರಿಯಲ್ ಮಿ-2, ಕೂಲ್ ಪ್ಯಾಡ್-1, ಇನ್‍ಪಿನಿಕ್ಸ್-1, ಸ್ಯಾಮ್ ಸಾಂಗ್-5, ಲೆನೋವಾ-1, ವಿವೋ-7, ಷಯೋಮಿ, ಎಂಐ-13 ಒಟ್ಟು 32 ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 1-ಹೋಂಡಾ ಡಿಯೋ ಸ್ಕೂಟರ್ ಅನ್ನು ವಶಪಡಿಸಿಕೊಳ್ಳುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿ ಧನುಷ್ ಚಿಕ್ಕ ವಯಸ್ಸಿನಲ್ಲಿಯೇ ಮಾದಕ ವಸ್ತುಗಳ ವ್ಯಸನದಲ್ಲಿ ತೊಡಗಿದ್ದು, ಈತನಿಗೆ ಮಧ್ಯಪಾನ, ಧೂಮಪಾನದಂತಹ ದುಶ್ಚಟಗಳ ಖರ್ಚಿನ ಹಣಕ್ಕಾಗಿ ಮತ್ತು ಸುಲಭ ಮಾರ್ಗದಲ್ಲಿ ಹಣ ಸಂಪಾದನೆ ಮಾಡಬಹುದೆಂದು ಸಂಜಯನಗರ, ಕೊಡಿಗೆಹಳ್ಳಿ, ಸದಾಶಿವನಗರ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಹೆಬ್ಬಾಳ, ಆರ್.ಟಿ.ನಗರ, ಕೆ.ಆರ್.ಪುರಂ, ದೊಮ್ಮಲೂರು, ಹೆಚ್.ಎ.ಎಲ್, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗಿನ ಮತ್ತು ಸಂಜೆ ವೇಳೆಯಲ್ಲಿ ಒಂಟಿಯಾಗಿ ಮೊಬೈಲ್ ಫೋನಿನಲ್ಲಿ ಮಾತನಾಡಿಕೊಂಡು ಹೋಗುವ ಸಾರ್ವಜನಿಕರ ಮೊಬೈಲ್ ಫೋನ್‍ಗಳನ್ನು ಬೈಕಿನಲ್ಲಿ ಹಿಂದಿನಿಂದ ಬಂದು ಕಿತ್ತುಕೊಂಡು ಹೋಗುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಪ್ರಕರಣದಲ್ಲಿ ಶ್ರೀಮತಿ ರೀನಾ ಎನ್ ಸುವರ್ಣ, ಎಸಿಪಿ, ಜೆ.ಸಿ.ನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಕಾತ್ಯಾಯಿನಿ ಆಳ್ವ ಎಸ್., ಪೊಲೀಸ್ ಇನ್ಸ್‍ಪೆಕ್ಟರ್, ಸಂಜಯನಗರ ಪೊಲೀಸ್ ಠಾಣೆ ಮತ್ತು ಪಿಎಸ್‍ಐಗಳಾದ ಕುಃ ರೂಪ ಕೆ.ಎಸ್., ರಘುಪತಿ ಹೆಚ್.ಎಸ್., ಲೋಕೇಶ್ ಕೆ.ಹೆಚ್. ಹಾಗೂ ಶಿವಮೂರ್ತಿ, ಮಂಜಣ್ಣ, ಪ್ರದೀಪ್ ಕುಮಾರ್ ಪಾಂಡುರಂಗ, ಅರುಣ್ ಕುಮಾರ್, ಪ್ರದೀಪ ಎಂ., ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
0 Comments