ಕೋಲಾರ: ಭಾಷೆ ಎಂಬುದು ಸಂವಹನ ವಸ್ತು. ಭಾಷೆಯ ಜ್ಞಾನ ಇಲ್ಲದಿದ್ದರೆ ಸಂವಹನ ನಡೆಸಲು ಅಸಾಧ್ಯ. ರಾಜ್ಯದ ಮಾತೃ ಭಾಷೆಯಲ್ಲಿ ಆಡಳಿತ ಭಾಷೆ ಇರಬೇಕು. ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಅಂಗಡಿಗಳ ನಾಮಫಲಕಗಳಲ್ಲಿ ಮೊದಲು ಕನ್ನಡ ಭಾಷೆ ಇರಬೇಕು. ನಂತರ ಇತರೆ ಭಾಷೆ ಇರಬಹುದು. ಫೆಬ್ರುವರಿ ತಿಂಗಳಿನಲ್ಲಿ ನಾಮಫಲಕ ಅಭಿಯಾನವನ್ನು ಪ್ರಾರಂಭಿಸಲಾಯಿತು. ಬ್ಯಾಂಕ್‍ಗಳ ಚಲನ್‍ಗಳಲ್ಲಿ ಹಾಗೂ ಎಟಿಎಂಗಳಲ್ಲಿ ಕನ್ನಡವನ್ನು ಬಳಸುವಂತೆ ಮಾಡಲಾಗಿದೆ. ಏಪ್ರಿಲ್ 24 ರಂದು ಡಾ.ರಾಜ್‍ಕುಮಾರ್ ಹುಟ್ಟುಹಬ್ಬದ ದಿನ ಅಭಿಮಾನಿ ದಿನ ಅಭಿಯಾನ ಆಚರಿಸಲಾಗುತ್ತದೆ. ಗ್ರಾಹಕರ ಬಳಕೆಯಲ್ಲಿ ಕನ್ನಡ ಅಭಿಯಾನ ದಿನ ಆಚರಿಸಲಾಗುತ್ತದೆ. ಮೇ 1 ರಂದು ಕಾರ್ಮಿಕರಲ್ಲಿ ಕನ್ನಡ ಬಳಕೆ, ಜೂನ್ 1 ರಂದು ವ್ಯೆದ್ಯರಲ್ಲಿ ಕನ್ನಡ ಬಳಕೆ ಅಭಿಯಾನ ನಡೆಸಲಾಗುತ್ತದೆ ಎಂದು ತಿಳಿಸಿದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಗವಿಸಿದ್ದಯ್ಯ ಮಾತನಾಡಿ, ಕನ್ನಡವೇ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಬೇಕು. ಗಡಿನಾಡು ಹೊರನಾಡು ಎನ್ನದೆ ಎಲ್ಲಾ ಕಡೆ ಕನ್ನಡ ಬಳಕೆಯಾಗಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಈ ವರ್ಷ ಕನ್ನಡ ಕಾಯಕ ವರ್ಷ ಎಂಬ ಘೋಷವಾಕ್ಯವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆಡಳಿತದಲ್ಲಿ ಕನ್ನಡ ಬಳಕೆ ಮಾಡಬೇಕು. ಪ್ರತಿ ಇಲಾಖೆಯ ಅಂತರ್ಜಾಲ ತಾಣದಲ್ಲಿ ಕಡ್ಡಾಯವಾಗಿ ಕನ್ನಡ ಇರಬೇಕು. ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿಗಳ ನಾಮಫಲಕಗಳು ಕನ್ನಡದಲ್ಲಿರಬೇಕು, ಇಲ್ಲದಿದ್ದರೆ ಲೈಸೆನ್ಸ್ ರದ್ದುಪಡಿಸಬೇಕು. 500 ರೂ.ವರೆಗೆ ದಂಡವಿಧಿಸಲು ಅವಕಾಶವಿರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಮೇಲೆ ಇರುವ ಗ್ರೂಪ್ ಸಿ ಹಾಗೂ ಡಿ ಗುಂಪಿನ ನೌಕರರು ಕಡ್ಡಾಯವಾಗಿ ಸ್ಥಳೀಯರು ಇರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಮಾತನಾಡಿ, ಕೆಲವು ಅಂಗಡಿಗಳ ನಾಮಪಲಕಗಳಲ್ಲಿ ಕನ್ನಡವನ್ನು ಚಿಕ್ಕದಾಗಿ ಹಾಕಿ, ಇತರೆ ಭಾಷೆಯನ್ನು ದೊಡ್ಡದಾಗಿ ಹಾಕಿಕೊಂಡಿರುತ್ತಾರೆ. ಇದನ್ನು ಬದಲಾಯಿಸಿ ಕನ್ನಡದಲ್ಲಿ ನಾಮಫಲಕ ದೊಡ್ಡದಾಗಿರಬೇಕು. ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲು ಸೂಚನೆ ನೀಡಲಾಗಿದೆ. ಗ್ರೂಪ್ ಡಿ ಹುದ್ದೆಗಳಲ್ಲ್ಲಿ ಶೇ.100 ರಷ್ಟು ಉದ್ಯೋಗಗಳು ಸ್ಥಳೀಯರಿಗೆ ಇರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿ ಪಂ ಸಿಇಒ ಎನ್.ಎಂ.ನಾಗರಾಜ್ ಮಾತನಾಡಿ, ಜಿಲ್ಲೆಯ ಗಡಿ ಭಾಗದಲ್ಲಿಯೂ ಕನ್ನಡ ಸರ್ಕಾರಿ ಶಾಲೆಗಳಿವೆ. ಗಡಿ ಭಾಗದಲ್ಲಿಯೂ ಕನ್ನಡ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಇಲಾಕ್ಕಿಯಾ ಕರುಣಾಕರನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ವೀರಶೆಟ್ಟಿ, ಸದಸ್ಯರಾದ ಡಾ. ಕಿಶೋರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕರಾದ ರವಿಕುಮಾರ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

0 Comments