ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ರಾಜ್ಯ ಕಾಂಗ್ರೆಸ್ ಘಟಕ, "ಮತ್ತೆ ಮತ್ತೆ ಹೇಳುತ್ತೇವೆ, ಕರೋನಾ ಸಾವುಗಳೆಲ್ಲವೂ ಬಿಜೆಪಿ ನಡೆಸುತ್ತಿರುವ ಕಗ್ಗೊಲೆಗಳು. ಅವರ ಸುಳ್ಳು, ಭ್ರಷ್ಟಾಚಾರ, ನಿರ್ಲಕ್ಸ್ಯ, ನಿರ್ಲಜ್ಜತನವೇ ಇಂದಿನ ಈ ಎಲ್ಲಾ ಅನಾಹುತಗಳಿಗೆ ಕಾರಣ. ಜನ ಸಾಯುತ್ತಿದ್ದರೂ ಕರುಣೆ ಇಲ್ಲದಂತೆ ಸುಳ್ಳಿನ ಬಂಡತನದ ಪ್ರಭು ಚೌಹಾಣ್‌ರಂತವರ ಮೂಲಕ ರಾಜ್ಯವನ್ನು ಸ್ಮಶಾನ ಮಾಡಲು ಹೊರಟಿದೆ ಕರ್ನಾಟಕದ ಬಿಜೆಪಿ" ಎಂದು ಆರೋಪಿಸಿದೆ.
ದೇಶದಲ್ಲಿ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕ ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಕೊರೋನಾ ಸೋಂಕು ಪೀಡಿತರಾಗುತ್ತಿದ್ದಾರೆ ಈಗ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಈ ನಡುವೆ ಆಮ್ಲಜನಕ, ರೆಮ್ಡಿಸಿವರ್ ಸೇರಿದಂತೆ ಸರಿಯಾದ ಚಿಕಿತ್ಸೆ ಸಿಗದೆ ಹಲವರು ಸಾವನ್ನಪ್ಪುತ್ತಿದ್ದಾರೆ. ಈ ಕುರಿತು ವ್ಯಾಪಕ ಅಕ್ರೋಶ ಹೊರಹಾಕಿರುವ ಕಾಂಗ್ರೆಸ್, "ಈ ಎಲ್ಲಾ ಸಾವಿಗೂ ಬಿಜೆಪಿ ಪಕ್ಷದ ಸುಳ್ಳು ಮತ್ತು ಭ್ರಷ್ಟಾಚಾರವೇ ಕಾರಣ, ಕರೋನಾ ಸಾವುಗಳೆಲ್ಲವೂ ಬಿಜೆಪಿ ನಡೆಸುತ್ತಿರುವ ಕಗ್ಗೊಲೆಗಳು" ಎಂದು ಆರೋಪಿಸಿದೆ.
ಸಚಿವ ಸುಧಾಕರ್ ವಿರುದ್ದವೂ ಹರಿಹಾಯ್ದಿರುವ ಕಾಂಗ್ರೆಸ್, "ಆರೋಗ್ಯ ಸಚಿವ ಸುಧಾಕರ್ ಜವಾಬ್ದಾರಿ ನಿರ್ವಹಿಸುವುದರಲ್ಲಿ ಸೋತಿದ್ದಾರೆ. ಕೊರೋನಾ ಸೋಂಕು ನಿಯಂತ್ರಿಸುವುದರತ್ತ ಗಮನಿಸದೆ ಸಿಡಿ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಮುಳುಗಿ ಈಗ ಸುಳ್ಳುಗಳ ಸಮರ್ಥನೆಗೆ ಇಳಿದಿದ್ದಾರೆ. ಸಚಿವ ಸ್ಥಾನದಲ್ಲಿರಲು ನಾಲಾಯಕ್, ಹೀಗಾಗಿ ಯಡಿಯೂರಪ್ಪ ಕೂಡಲೇ ಸುಧಾಕರ್ ಅವರ ರಾಜೀನಾಮೆ ಪಡೆದು ಜನರನ್ನು ರಕ್ಷಿಸಿ" ಎಂದು ಮನವಿ ಮಾಡಿದೆ.
0 Comments