ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸರ್ಕಾರದಿಂದ ಪ್ರಾರಂಭಿಸುವ ಕುರಿತು ಸದಸ್ಯರುಗಳ ಸಭೆ ಕರೆದು ಚರ್ಚಿಸಿದ ನಂತರ ಸಲಹೆಗಳನ್ನು ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನ ಪರಿಷತ್‍ನ ಪ್ರಶ್ನೋತರ ವೇಳೆಯಲ್ಲಿ ಸದಸ್ಯ ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.
2,28,188 ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ
ಕಳೆದ ಮೂರು ವರ್ಷಗಳಿಂದ ಈ ವರೆಗೆ ಸುಮಾರು 2,28,188 ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದುಪಡಿಸಲಾಗಿದೆ ಹಾಗೂ ರೂ.3,07,36,170 ಗಳ ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವ ಉಮೇಶ ವಿ. ಕತ್ತಿ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಪಿ.ಆರ್. ರಮೇಶ್ ಅವರ ಪ್ರಶ್ನೆಗೆ ಉತ್ತರ ನೀಡಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅಂತ್ಯೋದಯ ಅನ್ನ ಪಡಿತರ ಚೀಟಿ ಹಾಗೂ ಆದ್ಯತಾ ಪಡಿತರ ಚೀಟಿ ಸೇರಿ ಒಟ್ಟು 1,27,74,496 ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು, ಆದ್ಯತಾ ಪಡಿತರ ಚೀಟಿಗಳಿಗೆ ಪ್ರತಿ ಮಾಹೆ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ 2 ಕೆ.ಜಿ. ಗೋಧಿ ಮತ್ತು ಅಂತ್ಯೋದಯ ಅನ್ನ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 35 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.
9 ಗೃಹ ನಿರ್ಮಾಣ ಸಹಕಾರಿ ಸಂಘಗಳ ವಿರುದ್ಧ ವಿಚಾರಣೆಗೆ ಆದೇಶ
ಬೆಂಗಳೂರು ನಗರ ಜಿಲ್ಲೆಯಲ್ಲಿ 492 ಗೃಹ ನಿರ್ಮಾಣ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಪೈಕಿ ಅವ್ಯವಹಾರವೆಸಗಿರುವ 9 ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.ಅವರು ವಿಧಾನಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎನ್. ಅಪ್ಪಾಜಿಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಸಂಘದಿಂದ ಈ ಮೊದಲು ರಂಗನಾಥ್ ಎಂಬುವರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ತದನಂತರ ಅದನ್ನು ಸಿದ್ದಾರೆಡ್ಡಿ ಎನ್ನುವವರಿಗೆ ಕಾನೂನು ಬಾಹಿರವಾಗಿ ನೋಂದಣಿ ಮಾಡಲಾಗಿದೆ. ಈ ಪ್ರಕರಣವು ಸದ್ಯ ಹೈಕೋರ್ಟ್‍ನಲ್ಲಿದ್ದು, ಪ್ರಕರಣವನ್ನು ಇತ್ಯರ್ಥಪಡಿಸಿ ರಂಗನಾಥ್ ಅವರಿಗೆ ನಿವೇಶನ ಕೊಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸದನದಲ್ಲಿ ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಿಗಧಿತ ಅವಧಿಯೊಳಗೆ ಪೂರ್ಣ
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದರು.ಸದಸ್ಯ ಕವಟಗಿಮಠ ಮಹಾಂತೇಶ ಅವರ ಪ್ರಶ್ನೆಗೆ ಉತ್ತರ ನೀಡಿ, ಸರ್ಕಾರದ ಮುಖ್ಯ ಕಾರ್ಯರ್ಶಿಗಳು, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ವ್ಯವಸ್ಥಾಪಕ ನಿರ್ದೇಶಕರು, ಕೆಯುಐಡಿಎಫ್‍ಸಿ ಮತ್ತು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿ, ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಸದನದಲ್ಲಿ ತಿಳಿಸಿದರು.
ವಿದ್ಯುತ್ತನ್ನು ಬ್ಯಾಚ್‍ಗಳಲ್ಲಿ ಪೂರೈಸಲಾಗುತ್ತಿದೆ
ರಾಜ್ಯದಲ್ಲಿ ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ತಾಂತ್ರಿಕ ಸಾಧ್ಯವಿರುವೆಡೆ ದಿನವಹಿ 7 ಗಂಟೆಗಳ 3 ಫೇಸ್ ವಿದ್ಯುತ್ತನ್ನು ಹಗಲು ವೇಳೆಯಲ್ಲಿಯೇ ಪೂರೈಸಲಾಗುತ್ತಿದ್ದು, ಬಾಕಿ ಉಳಿದ ಪ್ರದೇಶಗಳಲ್ಲಿ 7 ಗಂಟೆಗಳ 3 ಫೇಸ್ ವಿದ್ಯುತ್ತನ್ನು ಬ್ಯಾಚ್‍ಗಳಲ್ಲಿ ಪೂರೈಸಲಾಗುತ್ತಿದೆ ಎಂದು ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದರು.ಶಾಸಕ ಬಂಡೆಪ್ಪ ಖಾಶೆಪ್ಪನವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಸ್ತುತ, ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ಪೂರೈಸಲಾಗುತ್ತಿರುವ 07 ಗಂಟೆಗಳ ಅವಧಿಯ ವಿದ್ಯುಚ್ಛಕ್ತಿ ಪ್ರಮಾಣಕ್ಕೆ ಏಇಖಅ ರವರು ನಿಗದಿಪಡಿಸಿರುವ ದರಗಳಂತೆ ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು
ತೀರ್ಥಹಳ್ಳಿ ತಾಲ್ಲೂಕು ಕ್ರೀಡಾಂಗಣ ಕಾಮಗಾರಿಗಳಿಗೆ ಕೇಂದ್ರಕ್ಕೆ ಪ್ರಸ್ತಾವನೆ
ತೀರ್ಥಹಳ್ಳಿ ಕ್ರೀಡಾಂಗಣ ಕಾಮಗಾರಿಗಳಿಗೆ ಮಂಜೂರಾತಿ ಹಾಗೂ ಅನುದಾನ ಬಿಡುಗಡೆ ಕೋರಿ, ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ. ನಾರಾಯಣ ಗೌಡ ಅವರು ತಿಳಿಸಿದರು.ಇಂದು ವಿಧಾನ ಸಭೆಯಲ್ಲಿ ಶಾಸಕ ಅರಗ ಜ್ಞಾನೇಂದ್ರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯುವಕರು ಹಾಗೂ ಕ್ರೀಡಾಸಕ್ತರ ಹಿತಾಸಕ್ತಿಗೋಸ್ಕರ ತಾಲ್ಲೂಕು ಕ್ರೀಡಾಂಗಣವನ್ನು ಅಭಿವೃದ್ದಿಪಡಿಸಲು ತೀರ್ಥಹಳ್ಳಿ ತಾಲ್ಲೂಕು ಕ್ರೀಡಾಂಗಣದಲ್ಲಿ ರೂ. 450 ಲಕ್ಷ ವೆಚ್ಚದಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಹಾಗೂ ರೂ. 350 ಲಕ್ಷ ವೆಚ್ಚದಲ್ಲಿ ವಿವಿದೋದ್ದೇಶ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲು ಅಂದಾಜು ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಎಂದು ತಿಳಿಸಿದರು.
ಸಣ್ಣ ಕಿಂಡಿ ಅಣೆಕಟ್ಟುಗಳನ್ನು ರೈತರೆ ನಿರ್ವಹಣೆ ಮಾಡುತ್ತಿದ್ದಾರೆ-ಸಚಿವ ಜೆ.ಸಿ.ಮಾಧುಸ್ವಾಮಿ
ಸಣ್ಣ ನೀರಾವರಿ ಇಲಾಖೆಯಡಿ ಕಿಂಡಿ ಅಣೆಕಟ್ಟುಗಳು ಸೇರಿದಂತೆ ಎಲ್ಲಾ ಸಣ್ಣ ನೀರಾವರಿ ನಿರ್ಮಿತಿಗಳನ್ನು ಪ್ರತಿ ವರ್ಷ ಇಲಾಖೆಗೆ ಒದಗಿಸಲಾಗುವ ಆಯವ್ಯಯದ ಮಿತಿಯೊಳಗೆ ಅವಶ್ಯಕತೆಯನ್ನಾಧರಿಸಿ ಆಧ್ಯತೆಯ ಮೇರೆಗೆ ಹಂತ ಹಂತವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಜೆ. ಸಿ. ಮಾಧುಸ್ವಾಮಿ ಅವರು ತಿಳಿಸಿದರು.ಇಂದು ವಿಧಾನ ಸಭೆಯಲ್ಲಿ ನಡೆದ ಕಾರ್ಯಕಲಾಪದಲ್ಲಿ ಶಾಸಕ ಸುಕುಮಾರ್ ಶೆಟ್ಟಿ ಬಿ.ಎಂ. ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೆಲವು ಕಿಂಡಿ ಅಣೆಕಟ್ಟುಗಳನ್ನು ಸಣ್ಣ ಸಣ್ಣ ತೋಡು, ಹಳ್ಳ ನಾಲಾಗಳಿಗೆ ನಿರ್ಮಿಸಿದ್ದು, ಸದರಿ ಸಣ್ಣ ಕಿಂಡಿ ಅಣೆಕಟ್ಟುಗಳನ್ನು ರೈತರೆ ನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಎತ್ತಿನಹೊಳೆ: ರಾಷ್ಟ್ರೀಯ ಯೋಜನೆಯೆಂದು ಪರಿಗಣಿಸಲು ಕೇಂದ್ರಕ್ಕೆ ಪತ್ರ - ಉಪಮುಖ್ಯಮಂತ್ರಿ
ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಪರಿಗಣಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಸೇರ್ಪಡೆಗೊಳಿಸುವ ಉದ್ದೇಶವಿದೆಯೆ ಎಂದು ಶಾಸಕ ಶಿವಲಿಂಗೇಗೌಡ ಕೆ. ಎಂ. ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿಗಳು ಸದರಿ ವಿಷಯದ ಬಗ್ಗೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗಿದ್ದು, ತದನಂತರ, ಪ್ರಸ್ತಾವನೆಯನ್ನು ಸಲ್ಲಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವೃಷಭಾವತಿ ವ್ಯಾಲಿ ಯೋಜನೆ ವಿಸ್ತøತ ಯೋಜನಾ ವರದಿ ಸಿದ್ದಪಡಿಸಲಾಗಿದೆ-ಸಚಿವ ಜೆ.ಸಿ.ಮಾಧುಸ್ವಾಮಿ
ಹೆಬ್ಬಾಳ ನಾಗವಾರ ವ್ಯಾಲಿ ಯೋಜನೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಬಂಧಿಸಿದ 65 ಕೆರೆಗಳಿಗೆ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ತುಂಬಿಸುವ ಯೋಜನೆಯು ಪ್ರಗತಿಯಲ್ಲಿರುತ್ತದೆ. ಸದರಿ ಯೋಜನೆಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಒಟ್ಟು 9 ಕೆರೆಗಳಿಗೆ ನೀರನ್ನು ತುಂಬಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.ಇಂದು ವಿಧಾನ ಸಭೆಯಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಎಲ್.ಎನ್. ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ವೃಷಭಾವತಿ ವ್ಯಾಲಿ ಯೋಜನೆಯ ವಿಸ್ತøತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದ್ದು, ಈ ಯೋಜನೆಯಲ್ಲಿ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಒಟ್ಟು 234 ಕೆರೆಗಳಿಗೆ ತುಂಬಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಒಟ್ಟು 10 ಕೆರೆಗಳಿಗೆ ನೀರನ್ನು ತುಂಬಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸಚಿವರು ತಿಳಿಸಿದರು.
ಹೆಚ್.ಎನ್.ವ್ಯಾಲಿ ಯೋಜನೆಯು ಬೆಂಗಳೂರು ನಗರ ಜಿಲ್ಲೆಯಿಂದ ಪ್ರಾರಂಭವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಖಾಂತರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊನೆಗೊಳ್ಳುತ್ತದೆ. ವೃಷಭಾವತಿ ವ್ಯಾಲಿ ಯೋಜನೆಯು ಬೆಂಗಳೂರು ಗ್ರಮಾಂತರ ಜಿಲ್ಲೆಯಿಂದ ಪ್ರಾರಂಭವಾಗಿ ತುಮಕೂರು ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊನೆಗೊಳ್ಳುತ್ತದೆ ಎಂದು ಸಚಿವರು ಹೇಳಿದರು.
ಹೆಚ್.ಎನ್. ವ್ಯಾಲಿ ಯೋಜನೆಯಲ್ಲಿ 6 ತಾಲ್ಲೂಕುಗಳು ಒಳಪಟ್ಟಿದ್ದು, ಸದರಿ ತಾಲ್ಲೂಕುಗಳಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ವೃಷಾಭಾವತಿ ವ್ಯಾಲಿ ಯೋಜನೆಯಲ್ಲಿ ಒಟ್ಟು 8 ತಾಲ್ಲೂಕುಗಳ ಕೆರೆಗಳಿಗೆ ನೀರು ತುಂಬಿಸಲು ವಿನ್ಯಾಸಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಸಭೆಯಲ್ಲಿ ಅಗಲಿತ ಗಣ್ಯರಿಗೆ ಸಂತಾಪ
ವಿಧಾನ ಸಭೆಯಲ್ಲಿ ಇತ್ತೀಚಿಗೆ ಅಗಲಿದ ನ್ಯಾಯಮೂರ್ತಿ ರಾಮಾ ಜೋಯಿಸ್, ಕೃಷಿ ವಿಜ್ಞಾನಿ ಡಾ: ಎಂ.ಮಹದೇವಪ್ಪ, ಖ್ಯಾತ ಕವಿ ಡಾ: ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಇವರುಗಳು ನಿಧನ ಹೊಂದಿರುವುದಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚಿಸಿದರುನ್ಯಾಯಮೂರ್ತಿ ಶ್ರೀ ರಾಮಾ ಜೋಯಿಸ್ ಅವರು ದಿನಾಂಕ: 27-07-1931 ರಂದು ಶಿವಮೊಗ್ಗ ಜಿಲ್ಲೆಯ ಅರಗ ಗ್ರಾಮದಲ್ಲಿ ಜನಿಸಿದ್ದು, ಬಿ.ಎ. ಹಾಗೂ ಕಾನೂನು ಪದವೀಧರರಾಗಿದ್ದರು. ಆಗುಂಬೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುನ್ಸಿಪಲ್ ಕಛೇರಿಯ ಕ್ಲರ್ಕ್ ಆಗಿ, ಹಲವು ಕಾಲೇಜುಗಳಲ್ಲಿ ಕಾನೂನು ಪ್ರಾಧ್ಯಾಪಕರಾಗಿ, ಬೆಂಗಳೂರಿನಲ್ಲಿ ವಿಕ್ರಮ್ ವಾರ ಪತ್ರಿಕೆಯಲ್ಲಿ ತಾತ್ಕಾಲಿಕ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಪಂಜಾಬ್ ಮತ್ತು ಹರಿಯಾಣ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ, ಸರ್ವೋಚ್ಛ ನ್ಯಾಯಾಲಯದ ವಕೀಲರಾಗಿ ಸೇವೆ ಸಲ್ಲಿಸಿದ್ದ ಶ್ರೀಯುತರು ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 2008 ರಲ್ಲಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿ, ಸಂಸತ್ ಕಲಾಪದಲ್ಲಿ ಭಾಗವಹಿಸುವಿಕೆ, ಹಾಜರಾತಿ ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ರೀತಿ ಸ್ಮರಣೀಯವಾಗಿದೆ. ನ್ಯಾಯಮೂರ್ತಿಯಾಗಿ ಬಹಳ ಉತ್ತಮ, ನಿರ್ಭಯ ತೀರ್ಪುಗಳನ್ನು ಕೊಟ್ಟು, ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಸೇವಾ ಕಾನೂನು ತಜ್ಞರಾಗಿದ್ದ ಶ್ರೀಯುತರು ಸೇವಾ ಕಾನೂನಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪುಗಳು ಹೊಸ ಪೀಳಿಗೆಯ ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ಮಾರ್ಗದರ್ಶಕವಾಗಿದೆ. ಕಲಬುರಗಿ ಜಿಲ್ಲೆಯ ವಿಜ್ಞಾನೇಶ್ವರ ಪತ್ರಿಷ್ಠಾನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ ಭಾರತೀಯ ವಿಕಾಸ್ ಪರಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಶ್ರೀಯುತರು ಮರತೂರಿನಲ್ಲಿ ವಿಜ್ಞಾನೇಶ್ವರ ಭವನ, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ವಿಜ್ಞಾನೇಶ್ವರ ಪೀಠ, ಭಾರತೀಯ ನ್ಯಾಯದರ್ಶನ ಮತ್ತು ರಾಜಧರ್ಮ ಎಂಬ ಸ್ನಾತಕೋತ್ತರ ಕೋರ್ಸ್ ಸ್ಥಾಪನೆಗೆ ಕಾರಣೀಭೂತರಾಗಿದ್ದರು. ರಾಜ್ಯಸಭಾ ಸದಸ್ಯರಾಗಿದ್ದಾಗ ಸಂಸತ್ತಿನಲ್ಲಿ ಹಲವು ಬಾಗಿಲುಗಳ ಮೇಲೆ ದೇವನಾಗರಿ ಲಿಪಿಯಲ್ಲಿದ್ದ ವೇದ, ಉಪನಿಷತ್ತು, ಭಗವದ್ಗೀತೆಯ ಹಲವಾರು ಶ್ಲೋಕಗಳನ್ನು ಗಮನಿಸಿ ಅವುಗಳನ್ನು ಸಂಗ್ರಹಿಸಿ ಕನ್ನಡ ಮತ್ತು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ಪುಸ್ತಕ ರೂಪದಲ್ಲಿ ಹೊರತಂದಿದ್ದರು. ಕಾನೂನಿನ ಆಳವಾದ ಜ್ಞಾನ ಹೊಂದಿದ್ದ ಶ್ರೀಯತರು ಲೀಗಲ್ ಆ್ಯಂಡ್ ಕಾನ್‍ಸ್ಟಿಟ್ಯೂಷನ್ ಆಫ್ ಇಂಡಿಯಾ, ಸೀಡ್ಸ್ ಆಫ್ ಮಾಡರ್ನ್ ಪಬ್ಲಿಕ್ ಲಾ ಇನ್ ಏನ್ಶಿಯೆಂಟ್ ಇಂಡಿಯನ್ ಜುರಿಸ್‍ಪ್ರುಡೆನ್ಸ್, ಸರ್ವಿಸ್ ಲಾ, ಕಾನ್‍ಸ್ಟಿಟ್ಯೂಷನ್ ಲಾ, ಹಿಸ್ಟಾರಿಕ್ ಲೀಗಲ್ ಬ್ಯಾಟಲ್, ಧರ್ಮ ದಿ ಗ್ಲೋಬಲ್ ಎಥಿಕ್, ಸರ್ವೀಸ್ ಅಂಡರ್ ಸ್ಟೇಟ್, ನೀಡ್ ಫಾರ್ ಅಮೆಂಡಿಂಗ್ ದಿ ಕಾನ್‍ಸ್ಟಿಟ್ಯೂಷನ್, ರಾಜಧರ್ಮ ವಿತ್ ದಿ ಲೆಸೆನ್ಸ್ ಆಫ್ ರಾಜನೀತಿ, ಕಾನೂನು ಮತ್ತು ಸಾಂವಿಧಾನಿಕ ಭಾರತದ ಇತಿಹಾಸ, ಪ್ರಾಚೀನ ಭಾರತದ ಕಾನೂನು; ಮನುಸ್ಮøತಿಯಲ್ಲಿರುವ ಶಾಶ್ವತ ಮೌಲ್ಯಗಳು, ತ್ರಿವರ್ಗ ಸಿದ್ಧಾಂತ, ಕೋಡ್ ಆಫ್ ಕಂಡಕ್ಟ್ ಫಾರ್ ರೂಲರ್ಸ್ ಮುಂತಾದ ಪ್ರಮುಖ ಕೃತಿಗಳನ್ನು ರಚಿಸಿದ್ದರು. ಕರ್ನಾಟಕ ಉಚ್ಛ ನ್ಯಾಯಾಲಯ ಪೂರ್ಣಪೀಠದ ನೇತೃತ್ವ ವಹಿಸಿ ಗೋಕಾಕ್ ವರದಿ ಕುರಿತು 1989 ರಲ್ಲಿ ನೀಡಿದ ತೀರ್ಪು ಪ್ರೌಢಶಾಲಾ ಹಂತದವರೆಗೆ ಕನ್ನಡವು ಒಂದು ಭಾಷೆಯಾಗಿ ಕಡ್ಡಾಯವಾಗಲು ಕಾರಣವಾಯಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸವನ್ನು ಅನುಭವಿಸಿದ್ದ ಶ್ರೀಯುತರು ಬದುಕಿನುದ್ದಕ್ಕೂ ಮೌಲ್ಯಾಧಾರಿತ ಜೀವನ ನಡೆಸಿದ್ದರು. ಕುವೆಂಪು ವಿಶ್ವವಿದ್ಯಾಲಯದಿಂದ ‘ಡಾಕ್ಟರ್ ಆಫ್ ಲಾ’ ಪದವಿ ನೀಡುವ ಮೂಲಕ ಶ್ರೀಯುತರನ್ನು ಗೌರವಿಸಲಾಗಿತ್ತು.
ನ್ಯಾಯಾಂಗ ವಿದ್ವಾಂಸ, ಕಾಯಕ ಶ್ರದ್ಧೆ, ಸೇವಾ ಮನೋಭಾವದ ಸಾಕಾರ ಮೂರ್ತಿಯಾಗಿದ್ದ ರಾಮಾ ಜೋಯಿಸ್ ಅವರು ದಿನಾಂಕ: 16-02-2021 ರಂದು ನಿಧನ ಹೊಂದಿರುತ್ತಾರೆ.
ಖ್ಯಾತ ಕವಿ ಡಾ: ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಅವರು ದಿನಾಂಕ: 29-10-1936 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದ್ದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಭಾಷಾ ಶಾಸ್ತ್ರ ಸಂಶೋಧಕರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಾಪಕ, ರೀಡರ್, ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಹಾಗೂ ಆಟ್ರ್ಸ್ ಫ್ಯಾಕಲ್ಟಿ ಡೀನ್ ಆಗಿ ಕಾರ್ಯ ನಿರ್ವಹಿಸಿದ್ದರು. ಆರು ವಿಮರ್ಶಾ ಗ್ರಂಥಗಳು, ನಾಲ್ಕು ನಾಟಕಗಳು, ಎಂಟು ಸಂಪಾದಿತ ಕೃತಿಗಳು, ಮೂರು ಶಾಸ್ತ್ರ ಸಹಿತ 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಶ್ರೀಯುತರು ಇಂಗ್ಲೀಷಿನ ಮಹಾನ್ ಸಾಹಿತಿಗಳಾದ ಯೇಟ್ಸ್, ಷೇಕ್ಸ್‍ಪೀಯರ್ ಮತ್ತು ಎಲಿಯಟ್ ಅವರುಗಳ ಕಾವ್ಯಗಳನ್ನು ಹಾಗೂ ಕಾಳಿದಾಸನ ‘ಮೃಚ್ಛಕಟಿಕಾ’ ವನ್ನು ಅರ್ಥಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿದ್ದರು. ಮುನ್ನೂರಕ್ಕೂ ಹೆಚ್ಚು ಭಾವಗೀತೆಗಳನ್ನು ಬರೆಯುವ ಮೂಲಕ ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದ ಶ್ರೀಯುತರು ಮಕ್ಕಳಿಗಾಗಿ ನಂದನ, ಕಿಶೋರಿ, ಸತ್ಯವೇ ನಮ್ಮ ತಾಯಿತಂದೆ, ಕಿನ್ನರ ಲೋಕ ಮುಂತಾದ ಕೃತಿಗಳನ್ನು ರಚಿಸಿದ್ದರು. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಬಾಲ ಸಾಹಿತ್ಯ ಪುರಸ್ಕಾರ, ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರಾಗಿದ್ದರು.
ಭಾವಗೀತೆಗಳ ಕವಿ ಡಾ: ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಅವರು ದಿನಾಂಕ: 06-03-2021 ರಂದು ನಿಧನ ಹೊಂದಿರುತ್ತಾರೆ.
ಕೃಷಿ ವಿಜ್ಞಾನಿಯಾಗಿದ್ದ ಡಾ: ಎಂ.ಮಹದೇವಪ್ಪ ಅವರು ದಿನಾಂಕ: 04-08-1937 ರಂದು ಚಾಮರಾಜನಗರ ಜಿಲ್ಲೆಯ ಮಾದಾಪುರ ಗ್ರಾಮದಲ್ಲಿ ಜನಿಸಿದ್ದು, ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದರು. ಜೆ.ಎಸ್.ಎಸ್. ಮಹಾವಿದ್ಯಾಪೀಠದ ಗ್ರಾಮೀಣಾಭಿವೃದ್ಧಿ ವಿಭಾಗದ ನಿರ್ದೇಶಕರಾಗಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದರು. ರಾಷ್ಟ್ರದಲ್ಲೇ ಮೊದಲ ಬಾರಿಗೆ ಹೈಬ್ರಿಡ್ (ಮಿಶ್ರ) ಭತ್ತದ ತಳಿ ಸಂಶೋಧನೆ ಮಾಡಿ ಕೃಷಿಗೆ ಅಪಾರ ಕೊಡುಗೆ ನೀಡಿದ್ದ ಶ್ರೀಯುತರು ನಂತರ ಸತತ ಸಂಶೋಧನೆ ಕೈಗೊಂಡು ಅನೇಕ ಭತ್ತದ ತಳಿಗಳನ್ನು ಸಂಶೋಧಿಸಿ ಕೃಷಿಕರಿಗೆ ನೀಡಿದ್ದರು. ಭತ್ತದ ಕುರಿತು 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಶ್ರೀಯುತರ ಸಾಧನೆಗಳನ್ನು ಗುರುತಿಸಿ ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.
‘ಭತ್ತದ ಮಹದೇವಪ್ಪ, ಭತ್ತದ ಮಾಹಿತಿ ಕಣಜ” ಎಂದು ಪ್ರಸಿದ್ಧರಾಗಿದ್ದ ಡಾ: ಎಂ.ಮಹದೇವಪ್ಪ ಅವರು ದಿನಾಂಕ: 06-03-2021 ರಂದು ನಿಧನ ಹೊಂದಿರುತ್ತಾರೆ.

0 Comments