Ticker

6/recent/ticker-posts

Ad Code

Responsive Advertisement

ನವ ದೆಹಲಿ: ಬೆಲೆ ಏರಿಕೆ ಬಿಸಿಗೆ ಸಂಸತ್ ಕಲಾಪ ಬಲಿ

 ನವ ದೆಹಲಿ (ಮಾರ್ಚ್​ 09): ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬಿಸಿ ಮಂಗಳವಾರದ ಸಂಸತ್ ಅಧಿವೇಶನವನ್ನು ಬಲಿ ಪಡೆದುಕೊಂಡಿದೆ. ದೇಶದಲ್ಲಿ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಲಾಗುತ್ತಿದೆ.  ಜೀವನಾವಶ್ಯಕ ವಸ್ತುಗಳ ಬೆಲೆ ಗಣನೀಯವಾಗಿ ಏರುತ್ತಿದೆ. ಈ ಬಗ್ಗೆ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಆದರೆ, ಆಡಳಿತಾರೂಢ ಬಿಜೆಪಿ ಸರ್ಕಾರ ಈ ಚರ್ಚೆಗೆ ಅವಕಾಶ ನೀಡಿಲ್ಲ. ಇದರಿಂದ ಉಂಟಾದ ಗದ್ದಲದಿಂದ ಸದನವನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಮೊದಲಿಗೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿತ್ತು. ಬಳಿಕ ಇತರೆ ಪ್ರತಿ ಪಕ್ಷಗಳು ಈ ಆಗ್ರಹಕ್ಕೆ ಕೈ‌ ಜೋಡಿಸಿದವು.

ಆದರೆ, ಸಂಸತ್ತಿನ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಸರ್ಕಾರ ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ. ಇದರಿಂದ ಕೆರಳಿದ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಆದರೂ ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶ ನೀಡಲಿಲ್ಲ. ಪ್ರತಿ ಪಕ್ಷಗಳ ಪ್ರತಿಭಟನೆ ಮುಂದುವರೆದ ಹಿನ್ನೆಲೆಯಲ್ಲಿ ಎರಡೂ ಸದನದಲ್ಲಿ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ಕೊರೋನಾ ನಂತರ ಮಂಗಳವಾರ ಇದೇ ಮೊದಲ ಬಾರಿಗೆ ಸಂಸತ್​ ಕಲಾಪಗಳು ಈ ಹಿಂದಿನಂತೆ ಬೆಳಿಗ್ಗೆ 11ಗಂಟೆಗೆ ಆರಂಭವಾದವು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿಷಯದಲ್ಲಿ ಪ್ರತಿ ಪಕ್ಷಗಳು ಮತ್ತು ಸರ್ಕಾರದ ನಡುವೆ ಜಟಾಪಟಿ ಶುರುವಾದದ್ದರಿಂದ ಮೊದಲಿಗೆ ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಲಾಗಿತ್ತು. ಆ ನಂತರ ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಲಾಗಿತ್ತು. ಊಟದ ವಿರಾಮದ ಬಳಿಕವೂ ಪ್ರತಿಭಟನೆ ಮುಂದುವರೆದ ಹಿನ್ನೆಲೆಯಲ್ಲಿ ಬುಧವಾರಕ್ಕೆ ಕಲಾಪ ಮುಂದೂಡಿಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ಸ್ವಲ್ಪ ವ್ಯತ್ಯಾಸ ಆಗಿದ್ದನ್ನೇ ನೆಪ ಮಾಡಿಕೊಂಡಿರುವ  ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ. ತಿಂಗಳ ಆರಂಭದಲ್ಲಿ ಶುರುವಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ಅಭಿಯಾನ ತಿಂಗಳ ಕೊನೆಯಲ್ಲೂ ನಿಂತಿಲ್ಲ.
ಫೆಬ್ರವರಿ ತಿಂಗಳಲ್ಲಿ 16ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಕಳೆದ 16ದಿನಗಳಿಂದ  4.97 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫೆಬ್ರವರಿ 4ರಂದು ತಾರೀಖು ತಲಾ 37 ಪೈಸೆ, ಫೆಬ್ರವರಿ 5ರಂದು 37 ಪೈಸೆ, ಫೆಬ್ರವರಿ 9ರಂದು 42 ಪೈಸೆ, ಫೆಬ್ರವರಿ 10ರಂದು 31 ಪೈಸೆ, ಫೆಬ್ರವರಿ 11ರಂದು 38 ಪೈಸೆ, ಫೆಬ್ರವರಿ 12ರಂದು 38 ಪೈಸೆ, ಫೆಬ್ರವರಿ 13ರಂದು 39 ಪೈಸೆ, ಫೆಬ್ರವರಿ 14ರಂದು 34 ಪೈಸೆ, ಫೆಬ್ರವರಿ 15ರಂದು 30 ಪೈಸೆ, ಫೆಬ್ರವರಿ 16ರಂದು 38 ಪೈಸೆ, ಫೆಬ್ರವರಿ 17ರಂದು 27 ಪೈಸೆ, ಫೆಬ್ರವರಿ 18ರಂದು 36 ಪೈಸೆ ಹೆಚ್ಚಳ, ಫೆಬ್ರವರಿ 19ರಂದು 36 ಪೈಸೆ, ಫೆಬ್ರವರಿ 20ರಂದು 41 ಪೈಸೆ, ಫೆಬ್ರವರಿ 23ರಂದು 38 ಪೈಸೆ ಹಾಗೂ ಫೆಬ್ರವರಿ 27ರಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 25 ಪೈಸೆ ಹೆಚ್ಚಳ ಮಾಡಲಾಗಿದೆ.
ತೈಲಗಳ ಬೆಲೆ ಏರಿಕೆ ಸಾಮಾನ್ಯವಾಗಿ ಇತರೆ ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ನಡುವೆ ಅಡುಗೆ ಅನಿಲದ ಬೆಲೆಯೂ ಗಗನಕ್ಕೇರಿದ್ದು, ಬೆಲೆ ಏರಿಕೆ ಬಿಸಿಯಿಂದ ಜನ ಸಾಮಾನ್ಯರು ತತ್ತರಿಸುವಂತಾಗಿದೆ. ಹೀಗಾಗಿ ಈ ಬಗ್ಗೆ ಸಂಸತ್​ನಲ್ಲಿ ಚರ್ಚೆಗೆ ವಿರೋಧ ಪಕ್ಷಗಳು ಕಳೆದ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದರೂ ಆಡಳಿತ ಪಕ್ಷ ಬಿಜೆಪಿ ಮಾತ್ರ ಇದಕ್ಕೆ ಅವಕಾಶ ನೀಡುತ್ತಿಲ್ಲ. ಬಿಜೆಪಿಯ ಈ ವರ್ತನೆ ಸಾಮಾನ್ಯವಾಗಿ ವಿರೋಧ ಪಕ್ಷಗಳನ್ನು ಕೆರಳಿಸಿರುವುದು ಸುಳ್ಳಲ್ಲ.

Post a Comment

0 Comments

Ad Code

Responsive Advertisement