Ticker

6/recent/ticker-posts

Ad Code

Responsive Advertisement

ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸುವ ಮೂಲಕ ಕೋವಿಡ್ ಹರಡುವುದನ್ನು ತಡೆಯಬೇಕು

 

ಬೆಂಗಳೂರು(ಮಾ.12): ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುವುದನ್ನು ಪರಿಣಾಮಕಾರಿಯಾಗಿ ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ಎಲ್ಲಾ ಅಧಿಕಾರಿಗಳು ಒಂದು ತಂಡದಂತೆ  ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯ ನಿರ್ವಹಿಸುವ ಮೂಲಕ ಕೋವಿಡ್ ಹರಡುವುದನ್ನು ತಡೆಯಬೇಕು ಎಂದು ಆಯುಕ್ತರು ಸೂಚನೆ ನೀಡಿದರು.


ನಗರದಲ್ಲಿ ಇತ್ತೀಚಿನ ಅಂಕಿ-ಅಂಶಗಳನ್ನು ನೋಡಿದಾಗ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿವೆ. ನಗರದಲ್ಲಿ ಸಮಾರಂಭಗಳು, ಕಾರ್ಯಕ್ರಮಗಳು, ಆರ್ಥಿಕ ಚಟುವಟಿಕೆಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿರುವುದರಿಂದ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ 300ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ನಿನ್ನೆ 478 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇನ್ನಿತರೆ ಆಸ್ಪತ್ರೆಗಳಲ್ಲಿ ಸ್ವಾಬ್ ಕಲೆಕ್ಟರ್ಸ್ ಸ್ವಾಬ್ ನೀಡಲು ಬಂದವರ ಬಳಿ ಸರಿಯಾದ ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಪಿನ್ ಕೋಡ್ ಪಡೆಯಬೇಕು. ಸ್ವಾಬ್ ನೀಡಲು ಬಂದವರಿಂದ ಸರಿಯಾದ ಮೊಬೈಲ್ ಸಂಖ್ಯೆ ಪಡೆದು ಆ ಮೊಬೈಲ್‌ಗೆ ಬಂದಿರುವ ಒಟಿಪಿ ಪರಿಶೀಲಿಸಿ ಸಮರ್ಪಕ ವಿಳಾಸ ಪಡೆಯಬೇಕು. ಇದರಿಂದ ಸೋಂಕಿತ ವ್ಯಕ್ತಿಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 
ನಗರದಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೊಬೈಲ್ ಟೆಸ್ಟಿಂಗ್ ತಂಡಗಳು ಸೇರಿದಂತೆ ಸುಮಾರು 500 ತಂಡಗಳಿದ್ದು, ಇರುವ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಬೇಕು. ಅಲ್ಲದೆ ಖಾಸಗಿ ಕ್ಲಿನಿಕ್ ಗಳಲ್ಲಿಯೂ ಸ್ವಾಬ್ ಸಂಗ್ರಹಿಸಲು ಕ್ರಮ ವಹಿಸಬೇಕು. ಖಾಸಗಿ ಕ್ಲಿನಿಕ್‌ಗಳಲ್ಲಿ ಸ್ವಾಬ್ ಸಂಗ್ರಹಕ್ಕಾಗಿ ಕಿಟ್ ಗಳನ್ನು ನೀಡಿ ಸಂಜೆ ಅದನ್ನು ಸಂಗ್ರಹಿಸಿ ಲ್ಯಾಬ್‌ಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿ. ILI, SARI ಹಾಗೂ ರೋಗ ಲಕ್ಷಣಗಳಿರುವವರಿಗೆ ಕೋವಿಡ್ ಪರೀಕ್ಷೆ ಮಾಡಬೇಕು. ಹೆಚ್ಚು ಹೆಚ್ಚು ಪರೀಕ್ಷೆ ಮಾಡುವುದರಿಂದ ಸೋಂಕು ಪತ್ತೆಯಾದವರನ್ನು ಕೂಡಲೆ ಐಸೋಲೇಟ್ ಮಾಡಿ ಸೋಂಕು ಹರಡುವುದನ್ನು ತಡೆಯಬಹುದು ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಕಂಡು ಬಂದವರ ಪ್ರಾಥಮಿಕ  ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ಸರಿಯಾಗಿ ಆಗಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳ ಜೊತೆಗೆ ಕಂದಾಯ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳನ್ನು ಬಳಸಿಕೊಂಡು ಸಮರ್ಪಕವಾಗಿ ಸಂರ್ಪಕ ಪತ್ತೆ ಹಚ್ಚುವ ಕಾರ್ಯವಾಗಬೇಕು. ವಾರ್ಡ್ ನಲ್ಲಿ 2/3 ಪ್ರಕರಣಗಳು ಕಂಡುಬರುತ್ತಿದ್ದು, ಪ್ರಾಥಮಿಕ ಆರೋಗ್ಯ ತಂಡದ ಜೊತೆಗೆ ಸೋಂಕು ಕಂಡು ಬಂದ ವ್ಯಕ್ತಿಯ ಮನೆಗೆ ಭೇಟಿ ನೀಡಿ ಅವರ ಕುಟುಂಬ ಹಾಗೂ ಸೋಂಕಿತ ವ್ಯಕ್ತಿ ಕಳೆದ 15 ದಿನಗಳಲ್ಲಿ ಯಾರ‍್ಯಾರನ್ನು ಭೇಟಿಯಾಗಿದ್ದರು, ಎಲ್ಲೆಲ್ಲಿ ಹೋಗಿದ್ದರು ಎಂಬ ನಿಖರ ಮಾಹಿತಿ ಪಡೆದು ಪ್ರಾಥಮಿಕ  ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆಕಾರ್ಯ ನಡೆಯಬೇಕು ಎಂದು ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕಂಡುಬರುವ ಕೋವಿಡ್ ಪ್ರಕರಣಗಳು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್ಲೋಡ್ ಆದ ಬಳಿಕ ಆಯಾ ವಲಯ ಮಟ್ಟದ ಇಂಡೆಕ್ಸ್  ತಂತ್ರಾಂಶದಲ್ಲಿ ಮಾಹಿತಿ ಲಭ್ಯವಾಗಲಿದೆ. ಇನ್ನು ಮುಂದೆ ಇಂಡೆಕ್ಸ್ ತಂತ್ರಾಂಶದ ಮೂಲಕ ಲಭ್ಯವಾಗುವ ಮಾಹಿತಿಯು ಆಯಾ ವಯಲಗಳ ಜೊತೆಗೆ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಲಭ್ಯವಾಗಬೇಕು. ಆ ಮೂಲಕ ಸಂಪರ್ಕ ಪತ್ತೆಕಾರ್ಯ ತ್ವರಿತವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನಗರದಲ್ಲಿ ಕೋವಿಡ್ ನಿಯಮಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಮಾರ್ಷಲ್‌ಗಳು ಇನ್ನೂ‌ ಹೆಚ್ಚಾಗಿ ಕೆಲಸ ಮಾಡಬೇಕು. ಚಿತ್ರಮಂದಿರ, ಮಾರುಕಟ್ಟೆ, ಮದುವೆ, ಮಾಲ್, ರೆಸ್ಟೋರೆಂಟ್ ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳ ಕಡೆ ಮಾರ್ಷಲ್‌ಗಳನ್ನು ನಿಯೋಜನೆ ಮಾಡಿ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲನೆ ಮಾಡಲು ಸೂಚನೆ ನೀಡಬೇಕು. ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿದ್ದರೆ ನಿಯಮಾನುಸಾರ ದಂಡ ವಿಧಿಸಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಬಗ್ಗೆ ಆಟೋ ಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸೂನಚೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ, ಎರಡನೇ ಹಾಗೂ ಮೂರನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಇದುವರೆಗೆ ಸುಮಾರು 3 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. 320ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡವರು ನೇರವಾಗಿ ಆಸ್ಪತ್ರೆಗಳಿಗೆ ಬಂದು ಲಸಿಕೆ ಪಡೆಯಲಿದ್ದಾರೆ. ಕೊಳಗೇರಿ ಪ್ರದೇಶದಲ್ಲಿ ವಾಸಿಸುವವರಿಗೆ ಎನ್‌ಎಂ, ಆಶಾ ಕಾರ್ಯಕರ್ತರ ಮೂಲಕ ಲಸಿಕೆ ಪಡೆಯಲು ಅರಿವು ಮೂಡಿಸಿ ಎಲ್ಲರಿಗೂ ಲಸಿಕೆ ನೀಡಲು ಕ್ರಮವಹಿಸಬೇಕು ಎಂದರು
ಪಾಲಿಕೆ ವ್ಯಾಪ್ತಿಯಲ್ಲಿ ಕ್ರಮೇಣ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಯುಕ್ತ, ಎನ್.ಮಂಜುನಾಥ್ ಪ್ರಸಾದ್ ರವರು ಪಾಲಿಕೆಯ ವಿಶೇಷ ಆಯುಕ್ತರು, ಎಲ್ಲಾ ವಲಯ ಜಂಟಿ ಆಯುಕ್ತರುಗಳು, ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಸಹಾಯ ಕಂದಾಯ ಅಧಿಕಾರಿಗಳ ಜೊತೆ Zoom ಮುಖಾಂತರ ವರ್ಚ್ಯುಯಲ್ ಸಭೆ ನಡೆಸಿದರು. ಈ ವೇಳೆ ವಿಶೇಷ ಆಯುಕ್ತರುಗಳಾದ ರಾಜೇಂದ್ರ ಚೋಳನ್, ಡಿ.ರಂದೀಪ್, ತುಳಸಿ ಮದ್ದಿನೇನಿ ಸೇರಿದಂತೆ 300ಕ್ಕೂ ಹೆಚ್ಚು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement