
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 22 (ಕರ್ನಾಟಕ ವಾರ್ತೆ): ಭಾರತ ಸ್ವಾತಂತ್ರ್ಯ ಗಳಿಸಿ 2022ಕ್ಕೆ 75 ವರ್ಷ ತುಂಬುತ್ತಿರುವ ಸ್ಮಾರಕಾರ್ಥವಾಗಿ “ಸ್ವಾತಂತ್ರ್ಯದ ಅಮೃತ ಮಹೋತ್ಸವ”ದ ಕಾರ್ಯಕ್ರಮದಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಹಾಗೂ ಹೋಬಳಿಗಳಲ್ಲಿ 75 ವಾರಗಳ ಕಾಲ ಚಾರಿತ್ರಿಕ ಮಹತ್ವ ಹೊಂದಿರುವ ಸ್ಥಳಗಳಲ್ಲಿ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಮಾ.23 ರಂದು ಬೆಳಿಗ್ಗೆ ದೇವನಹಳ್ಳಿಯ ಐತಿಹಾಸಿಕ ಕೋಟೆ ಆವರಣದಲ್ಲಿ “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಕಾರ್ಯಕ್ರಮದ ಪ್ರಾರಂಭೋತ್ಸವವನ್ನು ಆಯೋಜಿಸಲಾಗಿದೆ.
ಕಾಲೇಜು ವಿದ್ಯಾರ್ಥಿಗಳಿಂದ ಮಾರ್ಚ್ 23 ರಂದು ಬೆಳಿಗ್ಗೆ 8.00 ಗಂಟೆಗೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕೋಟೆಯವರೆಗೆ ಓಟ, ನಂತರ ದೇವನಹಳ್ಳಿಯ ಕೋಟೆಯಲ್ಲಿ ಸ್ವಚ್ಛತಾ/ಶ್ರಮದಾನ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ಜಗದೀಶ.ಕೆ.ನಾಯಕ ಸೇರಿದಂತೆ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ, ಪುರಸಭೆ/ ನಗರಸಭೆ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
0 Comments