Ticker

6/recent/ticker-posts

Ad Code

Responsive Advertisement

ದಾವಣಗೆರೆ ಜಿಲ್ಲಾ ಉಸ್ತುವಾರಿಯಾಗಿ ಸಲೀಂ ಅಹಮದ್ ನೇಮಕ: ಡಿ. ಬಸವರಾಜ್ ಹರ್ಷ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‍ರವರಿಗೆ ದಾವಣಗೆರೆ ಜಿಲ್ಲೆಯೂ ಸೇರಿದಂತೆ ತುಮಕೂರು, ಚಿತ್ರದುರ್ಗ, ಹಾವೇರಿ, ಗದಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಾಂಗ್ರೆಸ್ ಉಸ್ತುವಾರಿ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಆಡಳಿತದ ಜವಾಬ್ದಾರಿಯ ಜೊತೆಗೆ ಕಾಂಗ್ರೆಸ್ ಸೇವಾದಳದ ಉಸ್ತುವಾರಿ ಜವಾಬ್ದಾರಿಯನ್ನು ನೀಡಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‍ರವರು ಆದೇಶ ಹೊರಡಿಸಿರುವುದಕ್ಕೆ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಹರ್ಷ ವ್ಯಕ್ತಿಪಡಿಸಿ ಸಲೀಂ ಅಹಮದ್‍ರವರನ್ನು ಅಭಿನಂದಿಸಿದ್ದಾರೆ. 

ಕಾಂಗ್ರೆಸ್ ಪಕ್ಷದ ಹಿರಿಯ ಅನುಭವಿ ರಾಜಕಾರಣಿ ಸಲೀಂ ಅಹಮದ್‍ರವರ ನೇಮಕದಿಂದ ದಾವಣಗೆರೆ ಜಿಲ್ಲಾ ಕಾಂಗ್ರೆಸ್‍ನ ಸಂಘಟನೆಗೆ ಆನೆಬಲ ಬಂದಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಸಲೀಂ ಅಹಮದ್‍ರವರು ಸಂಘಟನಾ ಚತುರರಾಗಿದ್ದು ಕರ್ನಾಟಕ ರಾಜ್ಯದ ವಿದ್ಯಾರ್ಥಿ ಕಾಂಗ್ರೆಸ್‍ನ ಅಧ್ಯಕ್ಷರಾಗಿ, ರಾಷ್ಟ್ರೀಯ ಎನ್‍ಎಸ್‍ಯುಐ ಅಧ್ಯಕ್ಷರಾಗಿ, ಭಾರತೀಯ ಯುವಕ ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಅಖಿತ ಭಾರತ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ತೆಲಂಗಣ ರಾಜ್ಯದ ಉಸ್ತುವಾರಿಗಳಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷದ ಸಂಘಟನೆಯನ್ನು ಮಾಡುತ್ತಿದ್ದು, ಇದೀಗ ಅವರಿಗೆ 6 ಜಿಲ್ಲೆಗಳ ಜವಾಬ್ದಾರಿ ಜೊತೆಗೆ ಪಕ್ಷದ ಸಂಘಟನೆ, ಆಡಳಿತ ಹಾಗೂ ಸೇವಾದಳದ ಜವಾಬ್ದಾರಿ ನೀಡಿರುವುದಕ್ಕೆ ಡಿ. ಬಸವರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. 

ಸಲೀಂ ಅಹಮದ್‍ರವರು ಕರ್ನಾಟಕ ವಿಧಾನ ಪರಿಷತ್‍ಗೆ ಎರಡು ಬಾರಿ 12 ವರ್ಷಗಳ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಹಾಗೂ ಧರ್ಮಸಿಂಗ್ ಇವರುಗಳ ಅವಧಿಯಲ್ಲಿ 7 ವರ್ಷಗಳ ಕಾಲ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಧಾನ ಮಂತ್ರಿ ಡಾ. ಮನಮೋಹನ್‍ಸಿಂಗ್ ಆಡಳಿತದಲ್ಲಿ ಕೇಂದ್ರದ ಯುವಜನ ಸೇವಾ ಇಲಾಖೆಯ ರಾಷ್ಟ್ರೀಯ ನೆಹರು ಯುವ ಸಂಘಟನ್ ಡೈರೆಕ್ಟರ್ ಜನರಲ್ ಆಗಿ ಸಚಿವ ಸ್ಥಾನಮಾನವನ್ನು ಹೊಂದಿ ರಾಷ್ಟ್ರಾದ್ಯಂತ ಯುವ ಸಂಘಟನೆಯನ್ನು ಮಾಡಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸರ್ಕಾರದ ದೆಹಲಿ ಪ್ರತಿನಿಧಿಯಾಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಯೋಜನೆಗಳ ಬಗ್ಗೆ ಶ್ರಮಿಸಿರುತ್ತಾರೆ. 2012ರಲ್ಲಿ ರಾಷ್ಟ್ರದ ಯುವ ಪ್ರತಿನಿಧಿಗಳ ನಾಯಕರ ನಿಯೋಗದ ನೇತೃತ್ವವನ್ನು ವಹಿಸಿ ಸೌತ್‍ಕೋರಿಯ ರಾಷ್ಟ್ರಕ್ಕೆ ಹೋಗಿ ಯುವ ವಿನಿಮಯ ಕಾರ್ಯಕ್ರಮದಲ್ಲಿ  ಭಾಗವಹಿಸಿರುತ್ತಾರೆ. 

ಸಲೀಂ ಅಹ್ಮದ್‍ರವರು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಅಪಾರ ಅನುಭವನ್ನು ಹೊಂದಿದ್ದು, ಇವರ ನಾಯಕತ್ವದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸದೃಡಗೊಳ್ಳಲಿದೆ ಎಂದು ಡಿ. ಬಸವರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. 


Post a Comment

0 Comments

Ad Code

Responsive Advertisement