೨೦೨೩ರ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಆಡಳಿತ ಪಕ್ಷವಾದ ಬಿಜೆಪಿ, ವಿರೋಧ ಪಕ್ಷವಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕೊನೆ ಹಂತದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಹಾಗೂ ಬಹುತೇಕ ಕಡೆ ಈ ಮೂರು ಪಕ್ಷಗಳಿಂದಲೂ ಆಮೀಷಗಳ ಮಹಾಪೂರವೇ ಹರಿದು ಬರುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇಂತಹ ಪಕ್ಷಗಳ ನಡುವೆ ನೈತಿಕತೆ, ಪ್ರಾಮಾಣಿಕ ಹಾಗೂ ಸ್ಚಚ್ಚ ರಾಜಕಾರಣ ಮಾಡುವ ಸಲುವಾಗಿಯೇ ಹಾಗೂ ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಲಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಚುನಾವಣಾ ಕಣಕ್ಕೆ ಇಳಿದಿದ್ದು, ತನ್ನದೇ ಆದ ವಿಭಿನ್ನ ಶೈಲಿ, ಮತದಾರರಿಂದಲೇ ದೇಣಿಗೆ ಪಡೆದು ಚುನಾವಣಾ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಾ ಕೆಆರ್‌ಎಸ್ ಅಭ್ಯರ್ಥಿಗಳು ಪರ್ಯಾಯ ರಾಜಕಾರಣವನ್ನು ಮಾಡುತ್ತಿದ್ದಾರೆ.
ಈ ಕೆಆರ್‌ಎರಸ್ ಪಕ್ಷದಲ್ಲಿ ಎರಡು ಮೂರು ವರ್ಷಗಳಿಂದಲೂ ಬಸವನಗುಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಜೀವನ್ ಎಂಬುವವರು ಬಸವನಗುಡಿ ವಿಧಾನಸಭಾ ಕ್ಷೇತ್ರದ ಕೆಆರ್‌ಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅವರ ಬೆನ್ನಿಗೆ ಭ್ರಷ್ಟಾಚಾರದ ವಿರುದ್ಧ ಹಾಗೂ ಸಮ ಸಮಾಜದ ಕನಸು ಕಾಣುತ್ತಿರುವ ಹಲವು ಯುವಕರ ಧಂಡು ಕೆಆರ್‌ಎಸ್ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಸವನಗುಡಿ ಕ್ಷೇತ್ರದಲ್ಲಿ ರಾಜಕೀಯ ವಾತಾವರಣ ಹೇಗಿದೆ, ಪರ್ಯಾಯ ರಾಜಕಾರಣಕ್ಕೆ ಮತದಾರರ ನಿರೀಕ್ಷೆಗಳೇನು ಎಂಬುದರ ಬಗ್ಗೆ ಪತ್ರಿಕೆಗೆ ಕೆಆರ್ ಎಸ್ ಅಭ್ಯರ್ಥಿ ಜೀವನ್ ಅವರು ಸಂದರ್ಶನ ನೀಡಿದ್ದಾರೆ.
ಕೆಆರ್ ಎಸ್ ಪಕ್ಷದ ಬಗ್ಗೆ ಕ್ಷೇತ್ರದ ಮತದಾರರು ಏನ್ ಅಂತಾರೆ?
ಜೀವನ್: ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಧರಿಸುವ ಹಳದಿ-ಕೆಂಪು ಬಣ್ಣದ ಟೀಶರ್ಟ್ ನೋಡುತ್ತಲೆ ಜನತೆಯ ಮುಖದಲ್ಲಿ ಮಂದಹಾಸ ಮೂಡಿದರೆ ಭ್ರಷ್ಟ ಅಧಿಕಾರಿಗಳು, ರಾಜಕೀಯ ಪುಡಾರಿಗಳು ಗುರುಗುಟ್ಟಿಕೊಂಡು ನೋಡುವುದು ಮಾಮೂಲಿ. ಚುನಾವಣೆಯ ಸಂದರ್ಭದಲ್ಲಿ ಮತದಾರರು ನಿಜಕ್ಕೂ ನಮ್ಮ ಪಕ್ಷದ ಮೇಲೆ ಒಳ್ಳೆಯ ಅಭಿಪ್ರಾಯವಿದೆ. ಪರ್ಯಾಯ ರಾಜಕಾರಣ ಬೇಕು ಅಂತ ಬಯಸುವವರೇ ಆಗಿದ್ದಾರೆ. ಆದರೆ, ಹತ್ತಾರು ವರ್ಷಗಳಿಂದ ಒಂದೇ ಪಕ್ಷಕ್ಕೆ ಅಂಟಿಕೊಂಡಿರುವುದರಿಂದ ಆ ಪಕ್ಷಗಳನ್ನು ಬದಿಗಿಟ್ಟು ನಮ್ಮ ಕೆಆರ್‌ಎಸ್ ಪಕ್ಷದ ಮೇಲೆ ಒಲವನ್ನು ತೋರಿಸುವ ದಿನಗಳು ದೂರವಿಲ್ಲ. ಒಂದಂತು ಸತ್ಯ. ನಾವು ಮತದಾರರ ಹೃದಯ ಗೆದಿರುವುದಂತು ನೂರಕ್ಕೆ ನೂರು ಸತ್ಯ.
ನೀವು ಗೆಲುವನ್ನು ಸಾಧಿಸುತ್ತೀರಾ?
ಜೀವನ್: ನೋಡಿ ನೀವು ಗೆಲುವು ಅಂತ ಒಂದೇ ಪದದಲ್ಲಿ ಹೇಳಿ ಬಿಡುತ್ತೀರ. ಸೋಲು-ಗೆಲುವನ್ನು ಸುಲಭವಾಗಿ ಲೆಕ್ಕಚಾರ ಮಾಡುವುದಕ್ಕೆ ಚುನಾವಣೆ ಎನ್ನುವುದು ಕ್ರೀಡೆಯಲ್ಲ. ಕ್ರೀಡಾಪಟು ಆದರೆ ಅವನ ವೈಯಕ್ತಿಕ ಸಾಮರ್ಥ್ಯದ ಮೇಲೆ ಸೋಲು-ಗೆಲುವನ್ನು ನಿರ್ಧರಿಸಬಹುದು. ಆದರೆ, ಇದು ರಾಜಕಾರಣ. ಇದಕ್ಕೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಆಯಾಮಗಳು ಇರುತ್ತವೆ. ಇದು ಒಬ್ಬ ವ್ಯಕ್ತಿ, ಒಂದು ಸಮುದಾಯ ಮೇಲೆ ನಿಂತಿರುವುದಿಲ್ಲ. ಹಾಗೂ ರಾಜಕೀಯ ಅನ್ನುವುದು ಸೋಲು ಹಾಗೂ ಗೆಲುವಿಗೆ ಮಾತ್ರ ಸೀಮಿತವಲ್ಲ. ಸೋಲು-ಗೆಲುವಿನಾಚೆಗೆ ರಾಜಕೀಯ ಇದೆ. ರಾಜಕೀಯ ಅನ್ನುವುದು ಒಂದು ಸಾಮಾಜಿಕ ಪರಿವರ್ತನ ಪ್ರಕ್ರಿಯೆಯಾಗಿದೆ. ಹಾಗಾಗಿ ನಾನು ಅಂತಹ ಸಾಮಾಜಿಕ ಪರಿವರ್ತನಾ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇನೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಗೆಲುವೊಂದೆ ಮುಖ್ಯವಾಗಿದೆ ಅಲ್ವ?
ಜೀವನ್: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಚುನಾವಣಾ ರಾಜಕೀಯಕ್ಕಾಗಿ ಬದುಕುತ್ತಿವೆ. ಹಣ ಹಂಚ ಬೇಕು. ಚುನಾವಣೆಯಲ್ಲಿ ಗೆಲ್ಲಬೇಕು. ದುಡ್ಡು ಮಾಡಬೇಕು. ಆ ಪಕ್ಷಗಳು ಪವಿತ್ರವಾದ ರಾಜಕಾರಣವನ್ನು ಆ ಸ್ಥಿತಿಗೆ ತಂದಿಟ್ಟಿವೆ. ಅಂತಹ ಮನಃಸ್ಥಿತಿಯಿಂದ ರಾಜಕೀಯ ಕ್ಷೇತ್ರವನ್ನು ಹೊರ ತರಬೇಕು. ಜನತೆಗೆ ನಿಜವಾದ ರಾಜಕಾರಣ ಏನು ಎಂಬುದರ ಕುರಿತು ಅರಿವು ಮೂಡಿಸಬೇಕು. ನಾಡಿನ ಪ್ರತಿಯೊಬ್ಬ ಪ್ರಜೆಯು ರಾಜಕಾರಣ ಕುರಿತು ಆಸಕ್ತನಾಗಬೇಕು. ಆ ಮೂಲಕ ಪ್ರತಿಯೊಬ್ಬ ವ್ಯಕ್ತಿ, ಪ್ರತಿ ಮನೆ, ಪ್ರತಿ ಹಳ್ಳಿ, ನಗರ, ಜಿಲ್ಲೆ, ರಾಜ್ಯ ಸರ್ವತೋಮುಖ ಅಭಿವೃದ್ಧಿಯತ್ತ ದಾಪುಗಾಲು ಇಡಬೇಕೆಂಬ ಸದುದ್ದೇಶದಿಂದ ಕೆಆರ್‌ಎಸ್ ಪಕ್ಷದಲ್ಲಿ ಒಬ್ಬ ಸೈನಿಕನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.
ಬಸವನಗುಡಿ ಕ್ಷೇತ್ರದ ಮತದಾರರಿಗೆ ನಿಮ್ಮ ಸಂದೇಶ ವೇನು?
ಜೀವನ್: ನಾನು ಬಸವನಗುಡಿ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಕ್ಷೇತ್ರದ ಬಗೆಗೆ ಅಪಾಯ ಪ್ರೀತಿಯನ್ನು ಇಟ್ಟುಕೊಂಡಿದ್ದೇನೆ. ಕ್ಷೇತ್ರದ ಜನತೆಗೆ ಸಂದೇಶ ನೀಡುವಷ್ಟು ನಾನು ದೊಡ್ಡವನಲ್ಲ. ಆದರೆ, ನನ್ನ ಕ್ಷೇತ್ರದ ಮತದಾರರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, ಕಳೆದ ಹತ್ತು ಹಲವು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿರುವ, ಪ್ರಾದೇಶಿಕತೆಗೆ, ಕನ್ನಡ ನಾಡು, ನುಡಿಗೆ ಧಕ್ಕೆ ತರುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ನೀಡಿದರೆ ನಮ್ಮನ್ನು ನಾವೇ ಕೊಂದುಕೊಂಡಂತೆ ಹಾಗೂ ನಾಡು, ನುಡಿಗೂ ದ್ರೋಹ ಬಗೆದಂತೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಒಳ್ಳೆಯದು, ಕೆಟ್ಟದ್ದು ಎಂಬುದರ ಬಗ್ಗೆ ಯೋಚಿಸಲು ನಮ್ಮ ಮನಸಿಗಿಂತ ಬುದ್ದಿವಂತರು ಯಾರು ಇಲ್ಲ. ಹಾಗಾಗಿ ಕೆಆರ್‌ಎಸ್ ಪಕ್ಷಕ್ಕೆ ಒಮ್ಮೆ ಅವಕಾಶ ನೀಡುವುದರ ಮೂಲಕ ಕ್ಷೇತ್ರದಲ್ಲಿ ಪರ್ಯಾಯ ರಾಜಕಾರಣಕ್ಕೆ ಮುನ್ನುಡಿ ಬರೆಯಿರಿ ಎಂದು ಕ್ಷೇತ್ರದ ಮತದಾರರಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇನೆ.




.jpeg)

0 Comments