Ticker

6/recent/ticker-posts

Ad Code

Responsive Advertisement

BIG NEWS : ವಿಧಾನಸಭಾ ಸಭಾಧ್ಯಕ್ಷರಾಗಿ ಯು.ಟಿ.ಖಾದರ್ ಫರೀದ್ ut KHADER

ಬೆಂಗಳೂರು, ಮೇ 24, (ಕರ್ನಾಟಕ ವಾರ್ತೆ): ಇಂದು ನಡೆದ 16 ನೇ ವಿಧಾನಸಭೆ ಅಧಿವೇಶನದಲ್ಲಿ ಸಭಾಧ್ಯಕ್ಷರ ಸ್ಥಾನಕ್ಕೆ ಯು.ಟಿ. ಖಾದರ್ ಫರೀದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ಮಾನ್ಯ ಮುಖ್ಯಮಂತ್ರಿಗಳ ಸೂಚನೆಯನ್ನು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಅನುಮೋದಿಸಿದರು.


ಯು.ಟಿ.ಖಾದರ್ ಫರೀಧ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದನ್ನು ಹಂಗಾಮಿ ಸಭಾಧ್ಯಕ್ಷರಾದ ಆರ್. ವಿ. ದೇಶಪಾಂಡೆ ಅವರು ಅಂಗೀಕರಿಸಿದರು.

ಮುಖ್ಯಮಂತ್ರಿಗಳಿಂದ ಸಭಾಧ್ಯಕ್ಷರಾಗಿ ಆಯ್ಕೆಯಾದ ಯು.ಟಿ.ಖಾದರ್ ಫರೀದ್ ಅವರಿಗೆ ಅಭಿನಂದನೆ  
 ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರಕಾರದಲ್ಲಿ ಸಭಾಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದ ಯು.ಟಿ. ಖಾದರ್ ಫರೀದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸದನದ ಸದಸ್ಯರು ಅಭಿನಂದನೆ ಸಲ್ಲಿಸಿದರು.  

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಯು.ಟಿ. ಖಾದರ್ ಅವರು ರಾಜಕೀಯ ಕುಟುಂಬದಿಂದ ಬಂದವರು. ಉಲ್ಲಾಳ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದವರಾಗಿದ್ದು ಉತ್ಸಾಹಿ ಮತ್ತು ಸಕ್ರಿಯ ರಾಜಕಾರಣಿ ಎಂದು ಬಣ್ಣಿಸಿದರು. ಶ್ರೀಯುತರು ಶಾಸಕರಾಗಿ, ಸಚಿವರಾಗಿ ಹಾಗೂ ವಿಧಾನಸಭೆಯಲ್ಲಿ ಉಪನಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವವರು. 2012ರಲ್ಲಿ ಸದನದಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿ “ಸದನವೀರ” ಪ್ರಶಸ್ತಿ ಪಡೆದವರು ಹಾಗೂ ತುಂಬಾ ಅನುಭವವ ಹೊಂದಿರುವವರು ಎಂದು ತಿಳಿಸಿದರು.
ವಿರೋಧಪಕ್ಷದಲ್ಲಿ ಕಾರ್ಯನಿರ್ವಹಿಸುವಾಗ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಸಭಾಧ್ಯಕ್ಷರ ಸ್ಥಾನ ಬಹಳ ಉನ್ನತವಾದ ಸ್ಥಾನವಾಗಿದ್ದು, ಪಕ್ಷಾತೀತವಾಗಿ ಕೆಲಸ ಮಾಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವಿಧಾನ ಸಭೆಯ ಘನತೆ ಕಡಿಮೆ ಆಗುತ್ತಿದೆ. ಆ ಭಾವನೆ ಹೊಗಲಾಡಿಸಬೇಕು. ವಿಧಾನ ಸಭೆಯು ಈ ರಾಜ್ಯದ ದೇಗುಲವಿದ್ದಂತೆ. ಏಳು ಕೋಟಿ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಂಡು ಬಗೆಹರಿಸಬೇಕು. ರಾಜ್ಯದ ಹಿತ, ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಜನರ ಸುವ್ಯವಸ್ಥೆ, ಕಾನೂನು ವ್ಯವಸ್ಥೆ ಆಗಬೇಕು. ಕನ್ನಡಿಗರ ಹಿತ ರಕ್ಷಣೆ ಆಗಬೇಕು ಎಂದರು.

ಕಾನೂನು ಸುವ್ಯವಸ್ಥೆ ಆಗದಿದ್ದಲ್ಲಿ ಬಂಡವಾಳ ಬರುವುದಿಲ್ಲ. ಬಂಡವಾಳವಿಲ್ಲದಿದ್ದಲ್ಲಿ ಉದ್ಯೋಗ ಸೃಷ್ಠಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಕಾನೂನು ಹಾಗೂ ನಾಡಿನ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ಸದನದಲ್ಲಿ ಪದ ಬಳಕೆ ತುಂಬಾ ಮುಖ್ಯವಾಗಿದೆ. ಅಸಂವಿಧಾನಿಕ ಪದ ಬಳಕೆಗೆ ಅವಕಾಶ ನೀಡಬಾರದು. ಸಂಸದೀಯ ಪದ ಬಳಕೆ ಆಗಬೇಕು. ರಚನಾತ್ಮಕ ಸಲಹೆಗಳನ್ನು ನೀಡಬೇಕು. ಸದನದ ಘನತೆ ಗಾಂಭೀರ್ಯ ಹಾಗೂ ಗೌರವವನ್ನು ಕಾಪಾಡಬೇಕು ಎಂದು ತಿಳಿಸಿದರು.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಸದಸ್ಯರು ಸದನದಲ್ಲಿ ಭಾಗವಹಿಸಿ 5 ವರ್ಷ ರಾಜ್ಯದ ಅಭಿವೃದ್ಧಿಯ ಕಡೆ ಗಮನ ನೀಡಬೇಕು. ಅದನ್ನು ಮುಂದುವರೆಸುವಂತಹ ಘನತೆ ತಮ್ಮಲ್ಲಿದೆ ತಮಗೆ ತಾಳ್ಮೆ ಇದೆ ನಿಮ್ಮ ಮೇಲೆ ನನಗೆ ವಿಶ್ವಾಸವಿದೆ. ತಮಗೆ ಶುಭವಾಗಲಿ. ಎಲ್ಲ ಸದಸ್ಯರ ಪರವಾಗಿ ತಮಗೆ ಅಭಿನಂದನೆಗಳನ್ನು ಸಲ್ಲಿಸತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಶುಭಾಷಯಗಳನ್ನು ತಿಳಿಸಿದರು.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‍ಗೆ ಶುಭಾಶಯ ಕೋರಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ವಿಧಾನ ಸಭೆಯ ಸಭಾಧ್ಯಕ್ಷರಾಗಿ ಯು.ಟಿ. ಖಾದರ್ ಅವರು ಆಯ್ಕೆಯಾಗಿರುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಾನು ತಮ್ಮ ತಂದೆಯವರ ಜೊತೆ ಕಾರ್ಯ ನಿರ್ವಹಿಸಿದ್ದೇನೆ. ನಿಮ್ಮ ಜೊತೆಯೂ ಕಾರ್ಯ ನಿರ್ವಹಿಸಿದ್ದೇನೆ. ತಾವು ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದೀರಿ. ಈಗ ಸಭಾಧ್ಯಕ್ಷರ ಸ್ಥಾನದಲ್ಲಿದ್ದೀರಿ. ಈ ಹಿಂದೆ ಸಭಾಧ್ಯಕ್ಷರಾದ ರಮೇಶ್‍ಕುಮಾರ್ ಅವರಲ್ಲಿ ಒಂದು ವಿಶೇಷತೆ ಇತ್ತು. ಯುವಕರಿಗೆ ಮೊದಲು ಆದ್ಯತೆ ನೀಡುತ್ತಿದ್ದರು. ಅದೇ ರೀತಿ ತಾವು ಯುವಕರಿಗೆ ಹಾಗೂ ಹೊಸದಾಗಿ ಆಯ್ಕೆಯಾಗಿ ಬಂದವರಿಗೆ ಮೊದಲ ಆದ್ಯತೆ ನೀಡಿ. ಹಿಂದೆ ಹೆಚ್ಚು ಮಾಧ್ಯಮಗಳಿರಲಿಲ್ಲ. ಈಗ ಬಹಳಷ್ಟು ಮಾಧ್ಯಮಗಳಿವೆ, ಸಾಮಾಜಿಕ ಜಾಲತಾಣಗಳಿವೆ. ಆಧುನಿಕತೆ ಹಾಗೂ ಬದಲಾವಣೆಗಳನ್ನು ಇಂದಿನ ದಿನಗಳಲ್ಲಿ ಸದನದಲ್ಲಿಯೂ ಅಳವಡಿಸಿಕೊಳ್ಳಬೇಕಾಗಿದೆ.

ಕೋಮು ಸೌರ್ಹಾದತೆಗೆ ಮತ್ತೊಂದು ಹೆಸರೇ ಯು.ಟಿ.ಖಾದರ್ ಫರೀಧ್. ಎಲ್ಲರೂ ಸಹ ಅವಿರೋಧವಾಗಿ ತಮ್ಮ ಆಯ್ಕೆಯನ್ನು ಒಪ್ಪಿಕೊಂಡಿದ್ದಾರೆ. ತಾವು ಎಲ್ಲರನ್ನು ಸಮಾನವಾಗಿ ತೆಗೆದುಕೊಂಡು ಹೋಗಿ. ಸರ್ಕಾರ ದಿಕ್ಕು ತಪ್ಪದಂತೆ ನೋಡಿಕೊಳ್ಳಬೇಕು. ಸೂಕ್ತ ತಿಳಿವಳಿಕೆಯನ್ನು ನೀಡಬೇಕು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನದೇ ಎಲ್ಲರನ್ನೂ ಸರಿಸಮಾನವಾಗಿ ಕಾಣಬೇಕು. ಅಂತಹ ಮಹತ್ವದ ಸ್ಥಾನ ಸಭಾಧ್ಯಕ್ಷರ ಸ್ಥಾನ. ಸರ್ಕಾರಕ್ಕೆ ಮಾರ್ಗದರ್ಶನ ನೀಡಿ, ನಿಷ್ಪಕ್ಷಪಾತವಾದ ತೀರ್ಮಾನಗಳನ್ನು ನೀಡಿ ಎಂದರು.

ತಮ್ಮ ಕ್ಷೇತ್ರದ ಜನ ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ತಮಗೆ ಸರ್ಕಾರದಿಂದ ಎಲ್ಲ ಸಹಕಾರ ಇರುತ್ತದೆ ಎಂದು ತಿಳಿಸಿದರು
ನಂತರ ಸದನದಲ್ಲಿ ಸಚಿವಾರದ ಜಿ.ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಜಿ.ಟಿ.ದೇವೇಗೌಡ, ಅರಗಜ್ಞಾನೇಂದ್ರ, ಹೆಚ್.ಕೆ. ಪಾಟೀಲ್, ಟಿ.ಬಿ.ಜಯಚಂದ್ರ, ವಿ. ಸುನೀಲ್ ಕುಮಾರ್, ಜನಾರ್ಧನ ರೆಡ್ಡಿ, ಬಿ.ಪಿ. ಹರೀಶ್‍ಕುಮಾರ್, ಶಿವಲಿಂಗೇಗೌಡ, ಬಸವರಾಜ ರಾಯರೆಡ್ಡಿ, ಕೋನರೆಡ್ಡಿ, ಬಿ.ಆರ್. ಪಾಟೀಲ್, ವಿಜಯೇಂದ್ರ ಯಡಿಯೂರಪ್ಪ  ಅವರೂ ಸಹ ಸಭಾಧ್ಯಕ್ಷರಿಗೆ ಶುಭಾಶಯ ಕೋರಿ ಅಭಿನಂದನೆ ಸಲ್ಲಿಸಿದರು.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‍ಗೆ ಶುಭಾಶಯ ಕೋರಿದ ಬಸವರಾಜ ಬೊಮ್ಮಾಯಿ.


ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಆಯ್ಕೆಯಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಕೋರುತ್ತಾ ಸಭಾಧ್ಯಕ್ಷರ ತಕ್ಕಡಿ ಸಮವಾಗಿ ಇರಲಿ ಎಂದು ಹೇಳಿದರು.
ಇಂದು ವಿಧಾನಸಭೆಯ ಅಧಿವೇಶನದ ವೇಳೆ ಮಾತನಾಡಿದ ಅವರು ಕರ್ನಾಟಕ ವಿಧಾನ ಮಂಡಲ ತನ್ನದೇ ಆದ ಘನತೆ ಹೊಂದಿದೆ. ಇಂತಹ ಮಹತ್ವದ ಸದನದ ಸಭಾಧ್ಯಕ್ಷರ ಸ್ಥಾನಕ್ಕೆ ನೀವು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ನಿಮಗೆ ಇಪ್ಪತ್ತು ವರ್ಷದ ಅನುಭವ ಇದೆ. ನೀವು ಶಾಸಕರಾಗಿ ಸಚಿವರಾಗಿ ಕೆಲಸ ಮಾಡುವಾಗ ಯಾವತ್ತೂ ಸಂಯಮ ಕಳೆದುಕೊಳ್ಳದೇ ಕೆಲಸ ಮಾಡಿದ್ದೀರಿ ಎಂದರು.
ವಿರೋಧ ಪಕ್ಷದ ಉಪ ನಾಯಕರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದೀರಿ. ಈ ಹಿಂದೆ ಈ ಹುದ್ದೆ ಅಲಂಕರಿಸಿದವರು ಹುದ್ದೆಯ ಗೌರವ ಹೆಚ್ಚಿಸಿದ್ದರು. ನೀವು ಕೊಡುವ ತೀರ್ಪು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ, ನಿಮ್ಮ ತಕ್ಕಡಿ ಸಮವಾಗಿರಬೇಕು ಎಂದು ತಿಳಿಸಿದರು.
ಸಂವಿಧಾನದಲ್ಲಿ ವಿಶೇಷ ಸ್ಥಾನ ಸಭಾಧ್ಯಕ್ಷರಿಗೆ ಇದೆ. ಸರ್ಕಾರದ ಅಳಿವು ಉಳಿವು ಸಭಾಧ್ಯಕ್ಷರ ತೀರ್ಮಾನದ ಆಗಿದೆ. ಕೆಲವು ತೀರ್ಪುಗಳು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದು ಇವೆ. ತಾವು ನೀಡುವ ತೀರ್ಪು ಲ್ಯಾಂಡ್ ಮಾರ್ಕ್ ಆಗುತ್ತದೆ. ನೀವು ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಪ್ರತಿಪಕ್ಷದಲ್ಲಿ ನಿಮ್ಮ ಸ್ನೇಹಿತರು ಹೆಚ್ಚಿದ್ದಾರೆ. ಆಡಳಿತ ಪಕ್ಷದಲ್ಲಿ ನಿಮ್ಮ ನಿಕಟ ಪೂರ್ವ ಪಕ್ಷದ ಆತ್ಮೀಯರೂ ಇದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮನವಾಗಿ ನೋಡಿ ಎಂದು ಸಲಹೆ ನೀಡಿದರು.
Opposition has way, Government has way   ಹೀಗಾಗಿ ಪ್ರತಿಪಕ್ಷಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು. ಈ ಬಾರಿ ಹೊಸ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದು, ಅವರಿಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಿ ಹೊಸ ವಿಚಾರಗಳು ಹೊರ ಬರಲಿ ಎಂದರು.
ನೀವು ಪ್ರಗತಿಪರರಿದ್ದೀರಿ. ನಿಮ್ಮ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸ ಮಾಡಿದ್ದೀರಿ. ರಾಜ್ಯದ ವಿಚಾರದಲ್ಲಿಯೂ ಒಗ್ಗೂಡಿಸಿಕೊಂಡು ಹೊಗುವ ಶಕ್ತಿ ನಿಮ್ಮಲ್ಲಿದೆ ಆ ಕೆಲಸ ನೀವು ಮಾಡುತ್ತಿರಿ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದರು.  

ಎಲ್ಲಾ ಸದಸ್ಯರಿಗೂ ಧನ್ಯವಾದ ಸಲ್ಲಿಸಿದ ನೂತನ ಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು, ಮೇ 24, (ಕರ್ನಾಟಕ ವಾರ್ತೆ): ನನಗೆ ಸ್ಪೀಕರ್ ಸ್ಥಾನ ನೀಡಿದ್ದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಹಾಗೂ ವಿರೋಧ ಪಕ್ಷದ ನಾಯಕರಿಗೆ, ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರಿಗೆ, ಕಾಂಗ್ರೇಸ್‍ನ ನಾಯಕರಾದ ರಾಹುಲ್ ಗಾಂಧಿ ರವರಿಗೆ, ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೇಸ್‍ನ ರಾಜ್ಯ ಉಸ್ತುವಾರಿಗಳಾದ ಸುರ್ಜೆವಾಲ ರವರಿಗೆ ಧನ್ಯವಾದಗಳನ್ನು ಅರ್ಪಿಸಿ ಈ ಸ್ಥಾನವು ನನಗೆ ದೊರೆತಿರುವುದು ನನ್ನ ಸೌಭಾಗ್ಯವೆಂದು ಸದನದಲ್ಲಿ ತಿಳಿಸಿದರು.

ಅವಿರೋಧವಾಗಿ ಆಯ್ಕೆ ಮಾಡಿದ ಹಿರಿಯ ಹಾಗೂ ಕಿರಿಯ ಸದಸ್ಯರು, ತಂದೆ ತಾಯಿಗಳು, ನನ್ನ ಮತಕ್ಷೇತ್ರದ ಮತದಾರರು, ವಿದ್ಯಾರ್ಥಿ ಜೀವನ, ರಾಜಕೀಯ ಜೀವನ, ರೂಪಿಸಿಕೊಟ್ಟ ಹಲವು ಗಣ್ಯ ವ್ಯಕ್ತಿಗಳಾದ ಜನಾರ್ಧನ್ ಪೂಜಾರಿ, ಆಸ್ಕರ್ ಫನಾರ್ಂಡಿಸ್, ವೀರಪ್ಪ ಮೊಯಲಿ, ವ್ಯಕ್ತಿತ್ವ ರೂಪಿಸಿಕೊಟ್ಟ ಗಜಾನಂದ ಪಂಡಿತ್, ಜಯರಾಮಶೆಟ್ಟಿ ಇನ್ನಿತರ ಗಣ್ಯರು ನನಗೆ ಪ್ರೇರಣೆ ನೀಡಿದ್ದನ್ನು ಸ್ಮರಿಸಿಕೊಳ್ಳುತ್ತಾ ಅವರಿಗೆಲ್ಲ ತಮ್ಮ ಧನ್ಯವಾದಗಳನ್ನು ಅರ್ಪಿಸಿದರು.

ಸಂವಿಧಾನ ರಚಿಸಿದ ಡಾ: ಬಿ.ಆರ್. ಅಂಬೇಡ್ಕರ್, ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ, ಮೌಲ್ಯಗಳನ್ನು ಎತ್ತಿ ತೋರಿಸಿದ ಜವಾಹರಲಾಲ ನೆಹರು ಇವರುಗಳನ್ನು ಸದನಲ್ಲಿ ಸ್ಮರಿಸಿ, ಎರಡು ಬಾರಿ ಅಧ್ಯಕ್ಷರಾದ ತುಳುನಾಡಿನ ವೈಕುಂಠ ಬಾಳಿಗ, ವಿಶ್ವೇಶ್ವರ ಹೆಗಡೆ ಕಾಗೇರಿ ಇವರುಗಳು ಮಾಡಿರುವ ಕೆಲಸಗಳನ್ನು ಸ್ಮರಿಸಿ ಕಾರ್ಯ ನಿರ್ವಹಿಸುತ್ತೇನೆಂದು ತಿಳಿಸಿದರು.

12ನೇ ಶತಮಾನದಲ್ಲಿ ಅನುಭವ ಮಂಟಪ ದಿಂದ ಈಗಿನ ಸಂವಿಧಾನ ಕೊಡುವ ಮೌಲ್ಯಗಳು ಮುಖ್ಯ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಕ್ರಮ ಕೈಗೊಳ್ಳುತ್ತೇನೆ. ಸದನದ ನಾಯಕರಿಗೆ, ಉಪನಾಯಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಸದನದಲ್ಲಿ ತಾತ್ವಿಕ ಅಭಿಪ್ರಾಯ ಭೇದ, ಇಲ್ಲಿ ಮಂಡಿಸುವ, ಚರ್ಚಿಸುವ ವಿಷಯಗಳು ನಾಡಿನ ಜನತೆಗೆ ಒಳಿತಾಗಬೇಕು.

ಈ ರಾಜ್ಯದ ಜನತೆ ಆಯ್ಕೆ ಮಾಡಿರುವ ಪ್ರತಿನಿಧಿಗಳು ಸಶಕ್ತವಾಗಿ ಕಾರ್ಯ ನಿರ್ವಹಿಸಿ, ಈ ಸದನದಲ್ಲಿ ಹಿರಿಯ ಸದಸ್ಯರು, ಅನುಭವಿ, ಉತ್ಸಾಹಿ ಯುವಕರು ಹಲವರು ಈ ಸದನದ ಸದಸ್ಯರಾಗಿ ಆಯ್ಕೆಯಾಗಿ ಬಂದಿದ್ದಾರೆ. ಪಕ್ಷಭೇಧ ಮರೆತು ಸಶಕ್ತವಾಗಿ ಕಾರ್ಯನಿರ್ವಹಿಸುವುದಲ್ಲದೇ, ಒಬ್ಬ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸುವುದು ನನ್ನ ಕರ್ತವ್ಯವೆಂದು ತಿಳಿಸಿ ಕಾನೂನು ಪದವಿ ಪಡೆದಿರುವ ನಾನು ಸಂವಿಧಾನ ಬದ್ದವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಹೊಸದಾಗಿ ಆಯ್ಕೆಯಾಗಿ ಬಂದಿರುವ ಕಿರಿಯ ಸದಸ್ಯರು ಹಿರಿಯರ ಅನುಭವದ ಮಾತುಗಳನ್ನು ಆಲಿಸಿ ಗ್ರಹಿಸಬೇಕು. ರೂಲ್ಸ್‍ಬುಕ್ಸ್‍ಗಳನ್ನು ಓದಿ ತಿಳಿದುಕೊಳ್ಳಬೇಕು. ಡಾ: ಬಿ.ಆರ್. ಅಂಬೇಡ್ಕರ್ ರವರು ಹೇಳಿರುವಂತ “ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಸರಿಯಾದ ಭವಿಷ್ಯ ನಿರ್ಮಾಣ ಮಾಡಲು ಇತಿಹಾಸ ಓದಬೇಕು. ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಬೇಕು. ಸಂವಿಧಾನ ಸರ್ವಗ್ರಂಥ. ಈ ಗ್ರಂಥದ ಮೌಲ್ಯಗಳನ್ನು ಅರಿತು ಅದರಂತೆ ಕರ್ತವ್ಯ ನಿರ್ವಹಿಸಲು ಪ್ರಯತ್ನಪಡುವ್ಯದಾಗಿ ತಿಳಿಸಿದರು. ಎಲ್ಲಾ ಪಕ್ಷದ ಅಭಿಪ್ರಾಯಗಳಿಗೆ ಗೌರವ ಕೊಡುತ್ತೇನೆ. ಕರ್ನಾಟಕದ ಸ್ಪೀಕರ್ ಕರ್ನಾಟಕದ ನಾಡಗೀತೆಯಾದ ಕುವೆಂಪು ರಚಿತ “ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ” ಎಂಬ ನಾಣ್ನುಡಿಯಂತೆ ಕರ್ನಾಟಕದ ಪಾಲು ಹೆಚ್ಚಾಗಿರಲಿ ಎಂದು ಬಯಸುತ್ತೇನೆ ಎಂದು ಸದನದಲ್ಲಿ ತಿಳಿಸಿದರು.

ಜನಪ್ರತಿನಿಧಿಗಳಿಗೆ ಸರ್ಕಾರದ ಸ್ಥಿತಿಗತಿಗಳನ್ನು ಮುಟ್ಟಿಸುವಲ್ಲಿ ಪತ್ರಿಕಾರಂಗದ ಕಾರ್ಯ ಕೂಡ ಅತ್ಯವಶ್ಯ. ಮಾಧ್ಯಮ ವಲಯ ವೀವ್ಸ್ ಅಲ್ಲದೇ ಜನತೆಗೆ ನೀವ್ಸ್ ಮುಟ್ಟುವಂತೆ ಕರ್ತವ್ಯ ನಿರ್ವಹಿಸಬೇಕು, ಜನಪರ ಕಾರ್ಯದಲ್ಲಿ ಪತ್ರಿಕಾ ರಂಗದ ಜವಬ್ದಾರಿ ಹೆಚ್ಚು ಇದೆ. ಸರ್ಕಾರದ ಜನಪರ ಕಾರ್ಯಗಳನ್ನು ಸರಿಯಾದ ಸಮಯದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯವನ್ನು ಮಾಧ್ಯಮ ರಂಗ ನಿರ್ವಹಿಸಬೇಕು ಎಂದು ಸದನದಲ್ಲಿ ಹೇಳಿದರು.

ದಿನಾಂಕ: 24-05-2023ರಂದು 16ನೇ ವಿಧಾನಸಭೆಯಲ್ಲಿ ನನ್ನನ್ನು ಸಭಾಧ್ಯಕ್ಷನನ್ನಾಗಿ ಮಾಡಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿ, ಸದನ ನಡೆಸಲು ಅವಕಾಶ ಕಲ್ಪಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ, ವಿರೋಧ ಪಕ್ಷದ ನಾಯಕರಿಗೆ, ಹಿರಿಯ ಕಿರಿಯ ಸದಸ್ಯರಿಗೆ, ಮಾಧ್ಯಮ ಮಿತ್ರರಿಗೆ, ಸಚಿವಾಲಯದ ಸಿಬ್ಬಂದಿಗಳಿಗೆ ವಂದನೆಗಳನ್ನು ಸಲ್ಲಿಸಿ, ಸದನವನ್ನು  ಮುಂದೂಡಿದರು.


Post a Comment

0 Comments

Ad Code

Responsive Advertisement