Ticker

6/recent/ticker-posts

Ad Code

Responsive Advertisement

'ವಿಶ್ವ ತಂಬಾಕುರಹಿತ ದಿನ ' ಜನಜಾಗೃತಿ ಸೆಮಿನಾರ್‍

ಮೇ ತಿಂಗಳ 31 ನ್ನು ‘ವಿಶ್ವ ತಂಬಾಕು ರಹಿತ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ‘ನಮಗೆ ತಂಬಾಕು ಬೇಡ, ಆಹಾರ ಬೇಕು’ ಎಂಬ ಈ ವರ್ಷದ ಧ್ಯೇಯವಾಕ್ಯದಡಿ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕನ್ಸಾರ್ಟಿಯಂ ಫಾರ್ ಟೊಬ್ಯಾಕೊ ಫ್ರೀ ಕರ್ನಾಟಕ’ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸೆಮಿನಾರ್ ಹಮ್ಮಿಕೊಳ್ಳಲಾಗಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ ‘ತಂಬಾಕು ಮುಕ್ತ ಕರ್ನಾಟಕಕ್ಕಾಗಿ ಒಕ್ಕೂಟ’ದ ಸಂಚಾಲಕರಾದ ಶ್ರೀ ಎಸ್.ಜೆ.ಚಂದರ್ ಅವರು “ತಂಬಾಕು ಬೆಳೆಗಾರರಿಗೆ ಪರ್ಯಾಯ ಕೃಷಿಯ ಸಲಹೆ ನೀಡುವುದರೊಂದಿಗೆ ಅವರಿಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸಿಕೊಟ್ಟರೆ ಆಗ ಈ ಉದ್ದೇಶ ಸಫಲವಾಗುವುದು” ಎಂದರು.

ಕಾರ್ಯಕ್ರಮವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಉಪಕುಲಪತಿ ಡಾ.ಎಸ್.ವಿ.ಸುರೇಶ ಅವರು ಉದ್ಘಾಟಿಸಿ “ತಂಬಾಕು ಕೃಷಿಗೆ ಉತ್ತೇಜನ ನೀಡದೇ ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ತಾಂತ್ರಿಕ ಸಹಕಾರಗಳ ಅಗತ್ಯವಿದ್ದು ಅದನ್ನು ಪೂರೈಸಲು ಕೃಷಿ ವಿವಿ ಸಿದ್ಧವಿದೆ” ಎಂದು ತಿಳಿಸಿದರು. ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಇಕೋವಾಚ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುರೇಶ್ ಹೆಬ್ಳೀಕರ್ ಅವರು “ಬ್ರಿಟಿಷರಿಂದ ಪರಿಚಯ ಮಾಡಿಸಲ್ಪಟ್ಟ ತಂಬಾಕು ಒಂದು ವ್ಯಸನವಾಗಿ ಬೆಳೆಯಲು ಮನಃಸ್ಥಿತಿ ಕಾರಣ. ಸಿಗರೇಟ್ ಬಳಸುವುದಿಲ್ಲ ಎಂಬ ಮನಃಸ್ಥಿತಿ ಹೊಂದಿದಾಗ ತಂಬಾಕು ಸೇವನೆಯಿಂದ ಯುವಜನರು ಮುಕ್ತರಾಗಬಹುದು. ಇದರಿಂದ ಮಣ್ಣು ನಾಶ, ಭೂತಾಪಮಾನ, ಹವಾಮಾನ ವೈಪರೀತ್ಯದಂಥ ಸಮಸ್ಯೆಗಳೂ ಬಗೆಹರಿಯುತ್ತವೆ” ಎಂದು ಆಶಯಾತ್ಮಕವಾಗಿ ಮಾತನಾಡಿದರು.

ನಿಮ್ಹಾನ್ಸ್ ನ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ ಮಾತನಾಡಿ “ನೂರು ಜನ ತಂಬಾಕು ಬಳಸುತ್ತಿದ್ದರೆ ಅವರಲ್ಲಿ ಐವತ್ತು ಜನರ ಸಾವು ಸಣ್ಣ ವಯಸ್ಸಿನಲ್ಲೇ ಖಚಿತ” ಎಂದರು. ಫೌಂಡೇಶನ್ ಫಾರ್ ಸಸ್ಟೇನಬಲ್ ಹೆಲ್ತ್ ಇಂಡಿಯಾದ ಅಧ್ಯಕ್ಷರಾದ ಡಾ. ರಮೇಶ್ ಬಿಳಿಮಗ್ಗ ಮಾತನಾಡಿ ತಂಬಾಕು ಕೃಷಿಯ ಬದಲಾಗಿ ಪರ್ಯಾಯ ಬೆಳೆ ಬೆಳೆದರೂ ಅದು ಅನೇಕ ಗಂಭೀರ ಸವಾಲುಗಳನ್ನು ಎದುರಿಸಬೇಕಾದ ಸ್ಥಿತಿಯಿದೆ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಕೃಷಿ ವಿವಿ ವಿದ್ಯಾರ್ಥಿಗಳಿಂದ ‘ತಂಬಾಕಿನ ಸಮಸ್ಯೆಗಳು’ ಎಂಬ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಡಾ.ಪುರುಷೋತ್ತಮ್ ಚವಾಣ್ ಮಾತನಾಡಿ ತಂಬಾಕಿನಿಂದ ಆಗುವ ವಿವಿಧ ಕ್ಯಾನ್ಸರ್ ಬಗ್ಗೆ ವಿವರವಾಗಿ ತಿಳಿಸಿದರು. ಮೈಸೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕುಮಾರ್ ಅವರು ಮಾತನಾಡಿ “ಸರ್ಕಾರವೇ ನಮ್ಮನ್ನು ತಂಬಾಕು ಕೃಷಿ ಮಾಡಲು ಉತ್ತೇಜನ ನೀಡಿದ್ದು ಈಗ ಅದನ್ನು ಬಿಟ್ಟು ಪರ್ಯಾಯ ಬೆಳೆ ಅಳವಡಿಸಿಕೊಳ್ಳಬೇಕಾದಲ್ಲಿ ಸರ್ಕಾರವು ಅದಕ್ಕೆ ತಕ್ಕ ಆರ್ಥಿಕ ಸಹಾಯ ಸಹಕಾರ ನೀಡಿ ರೈತರಿಗೆ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ತಜ್ಞರು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಹುಣಸೂರು, ನಿಪ್ಪಾಣಿ, ಪಿರಿಯಾಪಟ್ಟಣಗಳಿಂದ ಬಂದ ತಂಬಾಕು ಬೆಳವ ರೈತರು ಸೆಮಿನಾರ್‍ ನಲ್ಲಿ ಭಾಗಿಯಾಗಿದ್ದರು.

Post a Comment

0 Comments

Ad Code

Responsive Advertisement