ಬೆಂಗಳೂರು : ನಗರದ ಉತ್ತರ ತಾಲ್ಲೂಕು, ಮಾದನಾಯಕನಹಳ್ಳಿ ಅಂಚೆ, ದಾಸನಪುರ ಹೋಬಳಿ, ನೆಲಮಂಗಲ ಪೂರ್ವ ಬಡಾವಣೆಯ ನಗರೂರು ಗ್ರಾಮದಲ್ಲಿ ವಿಶ್ವ ಗಾಣಿಗರ ಸಮುದಾಯ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಸ್ಥಾಪನೆಯ ಹಾಗೂ ಶ್ರೀ ಶ್ರೀ ಶ್ರೀ ಪೂರ್ಣಾನಂದ ಪುರಿ ಮಹಾಸ್ವಾಮಿಗಳ ಪೀಠಾರೋಹಣ ಹಾಗೂ ಪಟ್ಟಾಭಿಷೇಕ ಮಹೋತ್ಸವದ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶ್ರೀಕ್ಷೇತ್ರದ ಸಮುದಾಯ ಭವನದಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.
ಶಾಸ್ತ್ರೋಕ್ತವಾಗಿ, ವೈಭವೋಪೇತವಾಗಿ ಜರುಗಿದ ಈ ಪಟ್ಟಾಭಿಷೇಕ ಮಹೋತ್ಸವದಲ್ಲಿ, ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಸಂಸ್ಥಾಪಕರಾದ ಪರಮಪೂಜ್ಯ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಸಚ್ಚಿದಾನಂದ ಪ್ರಣವಸ್ವರೂಪ ಪರಮಾಚಾರ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರತ್ನಪುರಿ ಭಗವತ್ಪಾದಾಚಾರ್ಯ ಶ್ರೀ ಶ್ರೀ ಶ್ರೀ ತಿರುಚ್ಚಿ ಮಹಾಸ್ವಾಮಿಗಳವರ ಹಾಗೂ ಅವರ ಪಾದಸೇವಕರಾದ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಸಚ್ಚಿದಾನಂದ ಪ್ರಣವಸ್ವರೂಪ ಆಚಾರ್ಯ ಮಹಾಮಂಡಲೇಶ್ವರ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅವರ ದಿವ್ಯ ಆಶೀರ್ವಾದದೊಂದಿಗೆ, ನೆಲಮಂಗಲದ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಸುಕ್ಷೇತ್ರ ಮಠದ ಜಗದ್ಗುರುಗಳಾದ ಡಾ. ಶ್ರೀ ಬಸವರಮಾನಂದ ಮಹಾಸ್ವಾಮೀಜಿಗಳು, ನೆಲಮಂಗಲದ ದೇವಾಂಗ ಗುರುಪೀಠದ ಜಗದ್ಗುರುಗಳಾದ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಗಳು, ದೊಡ್ಡಬಳ್ಳಾಪುರದ ಶ್ರೀ ಪಪ್ಪಾಂಡಜ ಮಹರ್ಷಿ ಆಶ್ರಮ, ತೊಗಟವೀರ ಕ್ಷತ್ರಿಯ ನೇಕಾರ ಸಮಾಜದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ದಿವ್ಯಜ್ಞಾನಾನಂದಗಿರಿ ಮಹಾಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ, ಭಕ್ತ ಮಹಾಜನರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀಕ್ಷೇತ್ರದ ಹಿನ್ನಲೆ ಹಾಗೂ ಕಾರ್ಯ ಚಟುವಟಿಕೆಗಳು :
'ಗಾಣಿಗ' ಜನಾಂಗದ ಇತಿಹಾಸದ ಪುಟದಲ್ಲಿ ಮೊದಲನೇ ಬಾರಿಗೆ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠವನ್ನು ಸ್ಥಾಪಿಸಿ, ದೈವಾನುಗ್ರಹದಂತೆ ದಿನಾಂಕ: 06-05-2022 ರಂದು ಶ್ರೀ ಶ್ರೀ ಶ್ರೀ ಪೂರ್ಣಾನಂದ ಪುರಿ ಮಹಾಸ್ವಾಮಿಗಳು (ಪೂರ್ವಾಶ್ರಮದಲ್ಲಿ ಬಿ.ಜೆ.ಪುಟ್ಟಸ್ವಾಮಿ) ತಮ್ಮ ಗೃಹಸ್ಥಾಶ್ರಮವನ್ನು ತ್ಯಜಿಸಿ, ಸನ್ಯಾಸಾಶ್ರಮವನ್ನು ಸ್ವೀಕಾರ ಮಾಡಿ, ದಿನಾಂಕ: 15-05-2022 ರಂದು ಶ್ರೀಕ್ಷೇತ್ರದ ಮೊದಲನೇ ಪೀಠಾಧಿಪತಿಗಳಾಗಿ ಪೀಠಾರೋಹಣ ಸ್ವೀಕಾರ ಮಾಡಿ ಇದೀಗ ಒಂದು ವರ್ಷ ತುಂಬಿರುತ್ತದೆ. ಗಾಣಿಗ ಜನಾಂಗದ ಅಭಿವೃದ್ಧಿಗಾಗಿ ಆಧ್ಯಾತ್ಮಿಕ ಕಾರ್ಯಕ್ರಮಗಳು, ವಿದ್ಯಾದಾಸೋಹ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಶ್ರೀ ಶ್ರೀ ಶ್ರೀ ಪೂರ್ಣಾನಂದ ಪುರಿ ಮಹಾ ಸ್ವಾಮಿಗಳು ತಮ್ಮ ತನು-ಮನ-ಧನ ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಜನಾಂಗದ ಗಣ್ಯರು ನೀಡಿದ ಅನುದಾನ ಮತ್ತು ಸರ್ಕಾರದಿಂದ ಪಡೆದ ಅನುದಾನದಿಂದ ಸಮುದಾಯ ಭವನ, ಗುರುಪೀಠ ಮತ್ತು ವಿಧ್ಯಾರ್ಥಿನಿಲಯವನ್ನು ಸ್ಥಾಪಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸಂಸ್ಥೆಯ ಶಾಲೆಗೆ ಐ.ಸಿ.ಎಸ್.ಸಿ ಪಠ್ಯಕ್ರಮದ ಅನುಸಾರ ಬೋಧನೆಯ ಅನುಮತಿಯನ್ನು ದೆಹಲಿಯಿಂದ ಪಡೆದು, ಇದೇ 2023-24ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಶಾಲೆಯನ್ನೂ ಸಹ ಪ್ರಾರಂಭ ಮಾಡಲಾಗಿದೆ, ಇದೊಂದು ಮಹತ್ವದ ಸಾಧನೆಯಾಗಿದೆ. ಸದರಿ ಸಂಸ್ಥೆಯ ಜಾಗವನ್ನು ಕಾಪಾಡುವ ದೃಷ್ಟಿಯಿಂದ ಕಾಂಪೌಂಡ್ ಗೋಡೆ ನಿರ್ಮಾಣ ಮತ್ತು ಐ.ಸಿ.ಎಸ್.ಸಿ ನಿಯಮದಂತೆ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದನ್ನು ಜನಾಂಗಕ್ಕೆ ಒಂದು ಶಾಶ್ವತ ಕಲ್ಪವೃಕ್ಷವನ್ನಾಗಿ ಬೆಳೆಸಿ ಗಾಣಿಗ ಸಮುದಾಯಕ್ಕೆ ಸಮರ್ಪಿಸುವ ಶ್ರೀಗಳ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಪ್ರಯತ್ನಕ್ಕೆ, ಪೂರಕವಾಗಿ ಹಾಗೂ ಸಕಾರಾತ್ಮಕವಾಗಿ ಕುಲಬಾಂಧವರು ಕೈಜೋಡಿಸಬೇಕಿದೆ ಹಾಗೂ ಈ ಮಠವನ್ನು ಭವಿಷ್ಯದಲ್ಲಿ ಧಾರ್ಮಿಕ, ಆದ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಮುನ್ನಡೆಸಿಕೊಂಡು ಹೋಗಲು ಮಹಾಸಂಸ್ಥಾನಕ್ಕೆ ಮರಿಸ್ವಾಮಿಗಳಾಗಲು ಅಪೇಕ್ಷೆ ಉಳ್ಳವರು ಮುಂದೆ ಬಂದು, ಈ ವಿಚಾರವಾಗಿ ಗುರುಗಳನ್ನು ಸಂಪರ್ಕಿಸಬಹುದಾಗಿ ಈಗಾಗಲೇ ಕರೆಯನ್ನು ಸಹ ನೀಡಲಾಗಿದ್ದು, ಸಮುದಾಯಕ್ಕೆ ಸೇವೆ ಸಲ್ಲಿಸಲು ಸೂಕ್ತ ಅಭ್ಯರ್ಥಿಯನ್ನು ನೇಮಿಸಲು ಪ್ರಯತ್ನಗಳು ನಡೆಯುತ್ತಿದೆ.
ಶ್ರೀ ಕ್ಷೇತ್ರ ಸ್ಥಾಪನೆಯ ಮತ್ತು ಗುರುಗಳ ಪೀಠಾರೋಹಣ ಮಹೋತ್ಸವದ ಮೊದಲನೇಯ ವರ್ಷದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಪಾಲ್ಗೊಂಡು ಸಂಭ್ರಮ ಸಂತೋಷದಿಂದ ಆಚರಿಸಿದರು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅನ್ನದಾಸೋಹದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು.
ಪೂಜ್ಯ ಶ್ರೀಗಳ ಆದೇಶದ ಮೇರೆಗೆ, ಅವರ ಆಶೀರ್ವಾದಬಲದಿಂದ ಶ್ರೀಕ್ಷೇತ್ರದ ಅಧ್ಯಕ್ಷರು, ಸಾಂಸ್ಕೃತಿಕ ಕಾರ್ಯಕ್ರಮ ಮಂಡಳಿಯ ಸದಸ್ಯರು, ಮಹಾಸಂಸ್ಥಾನದ ಗೌರವಾನ್ವಿತ ಟ್ರಸ್ಟಿಗಳು ಮತ್ತು ಧರ್ಮದರ್ಶಿಗಳಾದ ಟಿ.ರಂಗರಾಜುರವರ ಮೇಲುಸ್ತುವಾರಿಯಲ್ಲಿ, ಸನ್ನಿಧಾನದಲ್ಲಿ ಪುರೋಹಿತರಾಗಿರುವ ವಿ. ಶ್ರೀನಿವಾಸ್, ಬಾಗೇಪಲ್ಲಿ ಶ್ರೀ ಶನಿದೇವರ ದೇವಸ್ಥಾನದ ಅರ್ಚಕರಾದ ವಿ. ಬಸವರಾಜ್, ಯಶವಂತಪುರದ ದೇವರಾಜ್, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಯುವ ಮುಖಂಡ ವಿ ಶ್ರೀನಿವಾಸ್, ಶಿವು ಮುಂತಾದವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರೊಂದಿಗೆ, ಯಶಸ್ಸಿಗಾಗಿ ಶ್ರಮಿಸಿರುತ್ತಾರೆ.
ಶ್ರೀಕ್ಷೇತ್ರ ಮಹಾಸಂಸ್ಥಾನ ಮಠದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣ ಗೊಳಿಸಲು, ಸಹಕಾರ ನೀಡುವ ಇಚ್ಛೆಯುಳ್ಳ ಜನಾಂಗದವರ ವತಿಯಿಂದ ಸಹಾಯ ಹಸ್ತವನ್ನು ಕೋರಲಾಗಿರುತ್ತದೆ.
ವರದಿ : ಕೆ. ಸುಕುಮಾರ್ ರಾಜು.

0 Comments