ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸ್ಪರ್ಧಿಸುತ್ತಾ, ಕ್ಷೇತ್ರದ ಶಾಸಕರಾಗಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರು ಸತತವಾಗಿ ನಾಲ್ಕನೇ ಬಾರಿಗೆ ಗೆಲುವನ್ನು ಸಾಧಿಸಿರುವ ಸಲುವಾಗಿ ಭಾನುವಾರ ತಮ್ಮ ಸಹಸ್ರಾರು ಅಭಿಮಾನಿಗಳು ಹಾಗೂ ಬೆಂಬಲಿಗರೊಡನೆ ಸಂಭ್ರಮದ ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವಿಜಯೋತ್ಸವದ ಈ ಮೆರವಣಿಗೆಯು ಅರಮನೆ ನಗರ, ಮತ್ತಿಕೆರೆ ಮತ್ತು ಮಲ್ಲೇಶ್ವರ ವಾರ್ಡ್ ಗಳನ್ನು ಸೇರಿದ ಪ್ರದೇಶಗಳಲ್ಲಿ ಸಂಚರಿಸುವ ಮುನ್ನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಶ್ರೀ ಗಣೇಶ ದೇವಸ್ಥಾನದಲ್ಲಿ ಶ್ರೀ ವಿನಾಯಕ ಸ್ವಾಮಿಗೆ ಶಾಸಕರು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳ ಉಪಸ್ಥಿತಿಯಲ್ಲಿ ಪೂಜೆಯನ್ನು ಸಲ್ಲಿಸಿ, ಅಲ್ಲಿಂದ ಚಿಕ್ಕಮಾರನಹಳ್ಳಿ, ಮತ್ತೀಕೆರೆ, ತ್ರಿವೇಣಿ ರಸ್ತೆಯ ಮೂಲಕ ಯಶವಂತಪುರ ವೃತ್ತದವರೆಗೆ ಸಾಗಿತು. ಈ ಸಡಗರದ ಮೆರವಣಿಗೆಯಲ್ಲಿ ಖ್ಯಾತ ಸಮಾಜ ಸೇವಕರು ಹಾಗೂ ಚಿತ್ರ ನಿರ್ಮಾಪಕರಾದ ಡಿ. ಸುರೇಶ್ ಗೌಡರು, ಸಮಾಜ ಸೇವಕರಾದ ಸಿ. ಎನ್. ಸತೀಶ್, ಮಾಜಿ ಪಾಲಿಕೆ ಸದಸ್ಯರುಗಳಾದ ಮುನಿಸ್ವಾಮಿಗೌಡ, ಎನ್. ಜೈಪಾಲ್, ಶ್ರೀಮತಿ ಸುಮಂಗಲ ಬಿ. ಕೇಶವಮೂರ್ತಿ, ಕ್ಷೇತ್ರದ ಬಿಜೆಪಿ ಮುಖಂಡರುಗಳಾದ ಡಾ. ರಾಜೇಶ್ ಮನ್ನಾರ್ ನಾಯ್ಡು, ಎಂ. ಮುನಿರಾಜಯ್ಯ (ಅಯ್ಯು), ಬಿ. ಸತ್ಯನಾರಾಯಣ (ನಾಣಿ), ಕೆ.ವರದರಾಜು, ಅನಿಲ್, ಎಂ. ಚನ್ನಕೇಶವ, ಸ್ವಾಮಿನಾಥನ್, ಸಂದೀಪ್, ಶ್ರೀನಿವಾಸ್, ಐಐಎಸ್‌ಸಿ ನಾಗರಾಜ್, ಭಾರತಿ, ಭಾಸ್ಕರ್ ನಾಯ್ಡು, ಬಾಬು, ಮಂಜು ಪ್ರಕಾಶ್, ವಿಶ್ವನಾಥ್ (ವಿಶ್ವ), ಶ್ರೀಧರ್ ಯಾಜಿ, ಕೇಬಲ್ ಮಂಜು, ರಾಮಮೂರ್ತಿ, ಕಿಶನ್ ನಾಯ್ಕ ಮೊದಲಾದ ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳ ಜೊತೆಗೂಡಿ, ಮೆರವಣಿಗೆಯ ಮೂಲಕ ಪಾದಯಾತ್ರೆಯಲ್ಲಿ ತೆರಳಿದ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರು ತಮ್ಮ ಗೆಲುವಿಗೆ ಕಾರಣರಾದ ಕಾರ್ಯಕರ್ತರು, ಮಂಡಲ ಅಧ್ಯಕ್ಷರು ಮತ್ತು ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಚಂಡೆ, ಡೊಳ್ಳು, ತಮಟೆ ಹಾಗೂ ಡಿಜೆ ಬ್ಯಾಂಡ್ ವಾದ್ಯಗೋಷ್ಠಿಯ ಜೊತೆಯಲ್ಲಿ ಮೆರವಣಿಗೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಆಯ್ಕೆಯಾದ ಶಾಸಕರಿಗೆ ಬೆಂಬಲಿಗರು ಹೂವಿನ ಹಾರಗಳನ್ನು ಹಾಕಿ, ಅವರನ್ನು ಹೆಗಲ ಮೇಲೆ ಹೊತ್ತು ಕುಣಿದರು. ಸ್ವತಃ ಶಾಸಕರು ಕೂಡ ಕಾರ್ಯಕರ್ತರೊಂದಿಗೆ ನೃತ್ಯಕ್ಕೆ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಹಲವಾರು ಕಡೆಗಳಲ್ಲಿ ಮಹಿಳೆಯರು ಆರತಿ ಬೆಳಗಿದರು. ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಸ್ವಾಗತಿಸಿದ ಸಾರ್ವಜನಿಕರಿಗೆ ಸಚಿವರು, ಹಸ್ತಲಾಘವ ನೀಡಿ ಕೈಮುಗಿದು ತಮ್ಮ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಬಾವುಟಗಳ ಜೊತೆಯಲ್ಲಿ ಹೆಜ್ಜೆ ಹಾಕಿದ ಕಾರ್ಯಕರ್ತರು, ದಾರಿಯ ನಡು ನಡುವೆ ಹೂವಿನ ಪಕಳೆಗಳ ವೃಷ್ಟಿ, ಬಣ್ಣದ ಕಾಗದಗಳ ಸಿಂಚನ ಮೆರವಣಿಗೆಯನ್ನು ಕಳೆಗಟ್ಟಿಸಿದವು.


0 Comments