ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಗಾಳಿ-ಮಳೆಗೆ 546 ವಿದ್ಯುತ್ ಕಂಬಗಳು ಧರೆಗುರುಳಿವೆ. 64 ವಿದ್ಯುತ್ ಪರಿವರ್ತಕಗಳು ಹಾಗೂ 9 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಗೊಂಡ ಪರಿರಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಸತತ ಸುರಿಯುತ್ತಿರುವ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಮುರಿದಿದ್ದು ದುರಸ್ಥಿ ಕಾರ್ಯ ಭರದಿಂದ ಸಾಗಿದೆ. ಮುರಿದಿರುವ ವಿದ್ಯುತ್ ಕಂಬಗಳನ್ನು ಬದಲಿಸಲಾಗಿದ್ದು, ಹಾನಿಯ ಅಂದಾಜು ಮಾಡಲಾಗುತ್ತಿದೆ.
ಭಾರೀ ಮಳೆ-ಗಾಳಿಗೆ ವಿದ್ಯುತ್ ಮೂಲಸೌಕರ್ಯಗಳು ಹಾನಿಗೊಂಡಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿರುವ ಪ್ರದೇಶಗಳಲ್ಲಿ ವಿದ್ಯುತ್ ಮರು ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದರು.
ಮೇ 20 (ಶನಿವಾರ) ರಂದು ಸುರಿದ ಭಾರೀ ಮಳೆಗೆ ಬೆಂಗಳೂರು ನಗರ ಸೇರಿ ಬೆಸ್ಕಾಂ ವ್ಯಾಪ್ತಿಯ ಹಲವು ಭಾಗಗಳಲ್ಲಿ 142 ಕಂಬಗಳು ಮುರಿದ್ದಿದ್ದು ಹಾಗು 20 ಟಿಸಿಗಳು ಹಾನಿಗೊಳಗಾಗಿವೆ.
ಹಾಗೆಯೇ ಮೇ 21 (ಭಾನುವಾರ) ರಂದು ಸುರಿದ ಗಾಳಿ- ಮಳೆಗೆ 404 ಕಂಬಗಳು ಮುರಿದ್ದಿದ್ದು, 44 ಟಿಸಿಗಳು ಹಾಗೂ 9 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಗೊಳಗಾಗಿವೆ.
ಈಗಾಗಲೇ ಬೆಸ್ಕಾಂ ಅಭಿಯಂತರರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದು, ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲ ಪ್ರದೇಶದಲ್ಲಿ ಭಾರೀ ಗಾಳಿಗೆ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಅವುಗಳ ತೆರವು ಕಾರ್ಯ ಮಾಡಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.
ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು ತೆರವುಗೊಳಿಸಲಾಗಿದ್ದು, ವಿದ್ಯುತ್ ಮರುಸ್ಥಾಪನೆ ಮಾಡಲಾಗಿದೆ. ಮುರಿದಿರುವ ಕಂಬಗಳ ಬದಲಾವಣೆ ಮಾಡಿ ಶೀಘ್ರ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ.
ವಿದ್ಯುತ್ ವ್ಯತ್ಯಯಗೊಂಡಿರುವ ಪ್ರದೇಶಗಳು: ಬೆಂಗಳೂರು ನಗರ ವ್ಯಾಪ್ತಿಯ ಹೆಬ್ಬಾಳ, ಮಲ್ಲೇಶ್ವರಂ, ಯಲಹಂಕ, ವಿಜಯನಗರದ, ನಾಗರಭಾವಿ, ಮಹಾಲಕ್ಷ್ಮಿ ಬಡಾವಣೆ, ಹೆಸರಘಟ್ಟ, ಕೋರಮಂಗಲ, ರಾಜನಕುಂಟೆ, ಜಯನಗರ, ಶಿವಾಜಿನಗರ, ಇಂದಿರಾನಗರ, ಕೆಂಗೇರಿ, ಆರ್. ಆರ್. ನಗರ, ಪೀಣ್ಯ ಸೇರಿದಂತೆ ಮತ್ತಿತ್ತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಹಾಗೆಯೇ ಬೆಸ್ಕಾಂನ ಗ್ರಾಮಾಂತರ ವ್ಯಾಪ್ತಿಯ ತುಮಕೂರು, ಮಾಲೂರು, ಸರ್ಜಾಪುರ, ಚಂದಾಪುರ, ಶೀಡ್ಲಘಟ್ಟ, ಕೆಜಿಎಫ್, ಕೈವಾರ, ಮಧುಗಿರಿ, ಪಾವಗಡ, ಹಿರಿಯೂರು, ಚಿಂತಾಮಣಿ, ತಿಪಟೂರು, ರಾಮನಗರ ಸೇರಿದಂತೆ ಮತ್ತಿತರ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಸಹಾಯವಾಣಿಗೆ ದೂರುಗಳ ಸುರಿಮಳೆ: ಭಾನುವಾರ ಒಟ್ಟು 44,784 ಕರೆಗಳು ಬೆಸ್ಕಾಂ ಸಹಾಯವಾಣಿ 1912 ಕ್ಕೆ ಬಂದಿದ್ದು, ಈ ಪೈಕಿ 22,249 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಹಾಗೆಯೇ ಪ್ರತಿ 1 ಗಂಟೆ ಅವಧಿಯಲ್ಲಿ ಸರಾಸರಿ 1691 ಕರೆಗಳು ಬಂದಿದ್ದು, 779 ದೂರುಗಳು ದಾಖಲಾಗಿವೆ. ಹೆಚ್ಚಿನ ಕರೆಗಳು ಗಾಳಿ- ಮಳೆಯಿಂದಾಗಿ ವಿದ್ಯುತ್ ವ್ಯತ್ಯಯಕ್ಕೆ ಸಂಬಂದಿಸಿದ್ದಾಗಿದೆ. ವಿದ್ಯುತ್ ಅವಘಡ ಮತ್ತು ಅಪಘಾತ ತಡೆಗೆ ಸಹಾಯವಾಣಿ ಎಚ್ಚರದಿಂದ ಕಾರ್ಯನಿರ್ವಹಿಸುತ್ತಿದ್ದು, ದೂರುಗಳನ್ನು ದಾಖಲಿಸಿಕೊಂಡು ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸುತ್ತಿದೆ.
.jpeg)







0 Comments