ಕೇರಳದಲ್ಲಿ ಸುಮಾರು 32 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದು, ಇವರನ್ನು ಮತಾಂತರ ಮಾಡಲಾಗಿದೆ ಎಂಬ ವಿಷಯದ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ತವರೂರಾದ ಗುಜರಾತ್ ನಲ್ಲಿ ಕಳೆದ 5 ವರ್ಷಗಳಲ್ಲಿ 41,321 ಮಹಿಳೆಯರು ನಾಪತ್ತೆಯಾಗಿದ್ದು ಯಾಕೆ ಸುದ್ದಿಯಾಗುತ್ತಿಲ್ಲ..?
ಹೌದು, ಕೇರಳ ಸ್ಟೋರಿ ಸಿನಿಮಾ ಭಾರೀ ವಿವಾದ ಹುಟ್ಟುಹಾಕಿದ್ದು, ಮದುವೆ ನೆಪದಲ್ಲಿ ಮಹಿಳೆಯರನ್ನು ಐಸಿಸ್ ನಂತಹ ಉಗ್ರವಾದಿ ಸಂಘಟನೆಗಳಿಗೆ ಸೇರಿಸುತ್ತಿದ್ದಾರೆ ಎಂಬ ಕಥಾವಸ್ತು ಚಿತ್ರ ಭಾರೀ ಸದ್ದು ಮಾಡುತ್ತಿದೆ. ಇದೇ ವೇಳೆ ನಿರ್ಮಾಪಕ ಕೇರಳದಲ್ಲಿ 32 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ತುಪ್ಪ ಸುರಿದಿದ್ದರು.
ಆದರೆ ರಾಷ್ಟ್ರೀಯ ಅಪರಾಧ ಅಂಕಿ-ಅಂಶಗಳ ಘಟಕ (NCRB) ಸಂಸ್ಥೆಯ ವರದಿಗಳ ಪ್ರಕಾರ ಗುಜರಾತ್ ನಲ್ಲಿ 2016ರಿಂದ 2020ರ ಅವಧಿಯಲ್ಲಿ 41,321 ಮಹಿಳೆಯರು ನಾಪತ್ತೆಯಾಗಿದ್ದು, ಇದುವರೆಗೂ ಅವರ ಸುಳಿವು ಪತ್ತೆಯಾಗಿಲ್ಲ.
ಮಾಧ್ಯಮಗಳ ವರದಿ ವಿವಾದಕ್ಕೆ ಕಾರಣವಾಗುತ್ತಿರುವ ಬೆನ್ನಲ್ಲೇ ಗುಜರಾತ್ ಪೊಲೀಸರು ನಾಪತ್ತೆಯಾದವರ ಪೈಕಿ 39,497 ಮಹಿಳೆಯರು ಮನೆಗೆ ಮರಳಿದ್ದು, ಕುಟುಂಬದ ಜೊತೆ ಇದ್ದಾರೆ ಎಂದು ಸ್ಪಷ್ಟನೆ ನೀಡಿತು.
2021ರ ಹೊಸ ಅಂಕಿ ಅಂಶಗಳ ಪ್ರಕಾರ ಹೊಸದಾಗಿ 9812 ಮಹಿಳೆಯರು ನಾಪತ್ತೆಯಾಗಿದ್ದು, ಒಟ್ಟಾರೆ 6 ವರ್ಷಗಳಲ್ಲಿ 51,433 ಮಹಿಳೆಯರು ಕಾಣೆಯಾಗಿದ್ದಾರೆ. ಇದರಲ್ಲಿ 50,105 ಮಹಿಳೆಯರು ಮನೆಗೆ ಮರಳಿದ್ದು, 1328 ಮಂದಿ ಇನ್ನೂ ಪತ್ತೆಯಾಗಿಲ್ಲ.
ಮಹಿಳೆಯರು ಅದರಲ್ಲೂ ಪ್ರಮುಖವಾಗಿ ಅಪ್ರಾಪ್ತ ಯುವತಿಯರು ಮನೆ ಬಿಟ್ಟು ಹೋಗಲು ಎರಡು ಕಾರಣಗಳಿವೆ. ಒಂದು ತಮ್ಮ ಪ್ರಿಯಕರನ ಜೊತೆ ಮದುವೆ ಒಪ್ಪದೇ ಇರುವುದು ಹಾಗೂ ತಮಗೆ ಇಷ್ಟವಿಲ್ಲದ ಕಡೆ ಮದುವೆ ಮಾಡಿಸಲು ಮುಂದಾಗುವುದು. ಆದರೆ ಹಾಗೆ ಹೋದವರು ಮದುವೆಗೆ 18 ವರ್ಷ ಆಗಿಲ್ಲ ಎಂಬ ಕಾರಣಕ್ಕೆ ಹಾಗೂ ಮನೆಯವರನ್ನು ಬಿಟ್ಟು ತಪ್ಪು ಮಾಡಿದೆವು ಎಂಬ ಕಾರಣಕ್ಕೆ ಮನೆಗೆ ಮರಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ಕುಮಾರ್ ವಿವರಿಸಿದ್ದಾರೆ.
0 Comments