ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣರವರ ಪರಿಕಲ್ಪನೆಯ 'ಗುಣಮಟ್ಟದ ಶಿಕ್ಷಣ'ದ ಚಿಂತನೆಯ ಫಲವಾಗಿ, ಸರ್ಕಾರಿ ಶಾಲೆಗಳಿಗೆ ದಾನಿಗಳಿಂದ 70 ಸ್ಮಾರ್ಟ್ ಟಿವಿಗಳ ಪ್ರಾಯೋಜಕತ್ವ
ಬೆಂಗಳೂರು : ಮಾದರಿ ಮಲ್ಲೇಶ್ವರ, ಓದು ಮಲ್ಲೇಶ್ವರ ಘೋಷವಾಕ್ಯವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಚಿವರಾದ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ದೂರಗಾಮಿ ಪರಿಕಲ್ಪನೆ ಹಾಗೂ ಸರಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಶಿಕ್ಷಣ ಮಟ್ಟವನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ಅನೇಕ ಪ್ರಗತಿಶೀಲ ಯೋಜನೆಗಳೊಟ್ಟಿಗೆ ಡಾ. ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ ಹಾಗೂ ಶಿಕ್ಷಣ ಫೌಂಡೇಶನ್ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಟಿವಿಗಳನ್ನು ಪೂರೈಸುವ ಕಾರ್ಯಕ್ರಮಕ್ಕೆ ಗುರುವಾರದಂದು ಮತ್ತೀಕೆರೆ ಬಿಬಿಎಂಪಿ ವಾರ್ಡ್ ನಂ. 36 ರಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಚಿವರು ಇಂಡೋ-ಮಿಮ್ ಕಂಪನಿಯ ವತಿಯಿಂದ ಪ್ರಾಯೋಜಿಸಲಾದ 70 ಸ್ಮಾರ್ಟ್ ಟಿವಿಗಳ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. 55 ಇಂಚಿನ ಪ್ರತಿ ಸ್ಮಾರ್ಟ್ ಟಿವಿಯು ಸುಮಾರು 58 ಸಾವಿರ ರೂಪಾಯಿಗಳ ಮೌಲ್ಯದ್ದಾಗಿದ್ದು, ಇವುಗಳನ್ನು ಕ್ಷೇತ್ರದ 13 ಸರ್ಕಾರಿ ಶಾಲೆಗಳಿಗೆ ವಿತರಿಸುವ ಮೂಲಕ ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ಪೂರಕವಾಗಿ ಬಳಸಲು ಅನುವು ಮಾಡಿಕೊಡಲಾಗುತ್ತಿದೆ.
ಈ ಸಂದರ್ಭದಲ್ಲಿ ಇಂಡೋ-ಮಿಮ್ ಕಂಪನಿಯ ಮುಖ್ಯಸ್ಥರು ಹಾಗೂ ಸ್ಮಾರ್ಟ್ ಟಿವಿಗಳನ್ನು ಕೊಡುಗೆಯಾಗಿ ನೀಡಿರುವ ದಾನಿಗಳಾದ ಜಯರಾಮ್ ಮೇಲುಕೋಟೆರವರು ಮಾತನಾಡುತ್ತಾ, ಸಚಿವರು ತಮ್ಮ ಕಂಪನಿಯ ವತಿಯಿಂದ ಕೊಡಲು ಮುಂದಾದ ಟಿವಿಗಳಿಗೆ 3 ವರ್ಷಗಳ ಗ್ಯಾರಂಟಿಯೊಂದಿಗೆ, ಅವುಗಳಿಗೆ ವಿಮೆ ಸೌಲಭ್ಯವನ್ನು ಸಹ ಒದಗಿಸಿ ಕೊಡುಗೆಯಾಗಿ ನೀಡಬೇಕೆಂದು ತಾಕೀತು ಮಾಡಿದ ಸಚಿವರ ಕಾಳಜಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಸಚಿವರ ಈ ಮುಂದಾಲೋಚನೆ ಹಾಗೂ ಸಾಮಾಜಿಕ ಕಳಕಳಿ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಚಿವರು ಮಾತನಾಡುತ್ತಾ ಪ್ರತಿಯೊಬ್ಬರಿಗೂ ಸಮಾಜ ಅನೇಕ ವಿಧಗಳಲ್ಲಿ ಅವಕಾಶಗಳನ್ನು ಕಲ್ಪಿಸಿ, ಸಾಮಾಜಿಕವಾಗಿ ಆರ್ಥಿಕವಾಗಿ ಬೆಳವಣಿಗೆಗೆ ಆಸ್ಪದ ನೀಡುವಾಗ, ನಾವೆಲ್ಲರೂ ಈ ಸಮಾಜಕ್ಕೆ ಯವುದಾದರೂ ರೀತಿಯಲ್ಲಿ ನಮ್ಮ ಕಡೆಯಿಂದಲೂ ಉಪಯುಕ್ತತೆ ಆಗುವಂತಹ ಸಾರ್ಥಕ ಕೆಲಸಕಾರ್ಯಗಳನ್ನು ಮಾಡುವ ಮುಖೇನ ನಮ್ಮೀ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿ, ಜಯರಾಮ್ ಮೇಲುಕೋಟೆರವರ ಈ ಕೊಡುಗೆ ಅನ್ಯರಿಗೂ ಮಾದರಿ ಹಾಗೂ ಸ್ಪೂರ್ತಿದಾಕವಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಮುನಿಸ್ವಾಮಿಗೌಡರು, ಎಂ.ಸಿ.ಜಯಪ್ರಕಾಶ್, ಎನ್.ಜೈಪಾಲ್, ಪದ್ಮಶ್ರೀ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿ.ಎನ್.ಸತೀಶ್, ಬಿಜೆಪಿ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯ ಡಾ. ಜಿ.ಎಸ್. ಚೌಧರಿ, ಬೆಂಗಳೂರು ವಿಶ್ವವಿದ್ಯಾಲಯದ ಪರಿಷತ್ ಸದಸ್ಯರು ಎಂ.ಚನ್ನಕೇಶವ, ವಾರ್ಡ್ ಅಧ್ಯಕ್ಷ ಕೆ.ವರದರಾಜು, ಸ್ಥಳೀಯ ಮುಖಂಡರುಗಳಾದ ಎಂ.ಮುನಿರಾಜಯ್ಯ (ಅಯ್ಯು), ಬಿ. ಸತ್ಯನಾರಾಯಣ (ನಾಣಿ), ಶಿವಣ್ಣ, ಕೆ.ವಿಶ್ವನಾಥ್, ಆರ್. ಎಸ್ ಎಸ್.ಬಾಬು, ಸುಬ್ಬಣ್ಣ, ಭಾಸ್ಕರ್, ಲಲಿತಮ್ಮ, ಎಂ. ರಾಮಮೂರ್ತಿ, ಅಬ್ದುಲ್ ಸಮದ್ ಮುಂತಾದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

0 Comments