ವಿಧಾನಸೌಧದ ಎದುರು ಸಿಎಂ ಬೊಮ್ಮಾಯಿರಿಂದ ಹಸಿರು ನಿಶಾನೆ
ಕೆಎಸ್ಆರ್ ಟಿಸಿಗೆ 25 ಎಲೆಕ್ಟ್ರಿಕ್ ಬಸ್‍ಗಳನ್ನು ಯಶಸ್ವಿಯಾಗಿ ಪೂರೈಸಿದ ಓಲೆಕ್ಟ್ರಾ
ಭಾರತದ ಮೂರನೇ ಮಾದರಿಯ 25 ಅಂತರ್ ನಗರ ಕೋಚ್‍ಗಳ ಬಸ್
65,000 ಟನ್ ಗಿಂತ ಕಡಿಮೆ ಇಂಗಾಲದ ಹೊರಸೂಸುವಿಕೆ ಗುರಿ
ಬೆಂಗಳೂರು, ಮಾರ್ಚ್ 20: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಹತ್ವಾಕಾಂಕ್ಷಿ ಅಂತರ್ ನಗರ ಐಶಾರಾಮಿ ಎಲೆಕ್ಟ್ರಿಕ್ ಬಸ್‍ಗಳ ಸೇವೆಗೆ ಇನ್ನೂ 25 ಒಲೆಕ್ಟ್ರಾ ಬಸ್‍ಗಳು ಸೇರ್ಪಡೆಗೊಂಡಿದ್ದು, ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವಿಧಾನಸೌಧದ ಎದುರು ‘ಪವರ್ ಪ್ಲಸ್’ ಬಸ್‍ಗಳ ಸೇವೆಗೆ ಹಸಿರು ನಿಶಾನೆ ತೋರಿಸಿದರು.
ಭಾರತದ ಪ್ರಮುಖ ಎಲೆಕ್ಟ್ರಿಕ್ ಬಸ್ ತಯಾರಕರಾದ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್ಆರ್ ಟಿಸಿ) 25 ಶುದ್ಧ ಎಲೆಕ್ಟ್ರಿಕ್ ಅಂತರ್ ನಗರ ಬಸ್‍ಗಳನ್ನು ಯಶಸ್ವಿಯಾಗಿ ಸರಬರಾಜು ಮಾಡಿದ್ದು, ದೇಶದ ಸಾರ್ವಜನಿಕ ವಲಯದಲ್ಲಿ ಈ ಪ್ರಮಾಣದ ಅಂತರ್ ನಗರ ಬಸ್ ಗಳ ಸೇವೆಗೆ ಚಾಲನೆ ಸಿಕ್ಕಿದ್ದು ಇದೇ ಮೊದಲಾಗಿದೆ.
ಎಲ್ಲಿಲ್ಲಿಗೆ ‘ಈ ಬಸ್’ ಸೇವೆ?
ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿಯ ಜನನಿಭೀಡ ಮಾರ್ಗಗಳಲ್ಲಿ ಇ-ಬಸ್ಸುಗಳು ಶೀಘ್ರದಲ್ಲೇ ಸಂಚರಿಸಲಿವೆ.
ಅದ್ಭುತ ವಿನ್ಯಾಸ- ಅತ್ಯಾಧುನಿಕ ಸೌಲಭ್ಯ:
12 ಮೀಟರ್ ಉದ್ದದ ಸಂಪೂರ್ಣ ಹವಾನಿಯಂತ್ರಿತ ಟೈಪ್-3 ಇಂಟರ್ ಸಿಟಿ ಇ-ಬಸ್ ಗಳು ಒಂದು ಚಾರ್ಜ್‍ನಲ್ಲಿ 300 ಕಿ.ಮೀ ಸಂಚರಿಸಲಿದೆ. ಇದು ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆಂಷನ್, ಇಬಿಎಸ್ ನೊಂದಿಗೆ ಡಿಸ್ಕ್ ಬ್ರೇಕ್ ಗಳು, 5 ಕ್ಯೂಮೆಟ್ ಲಗೇಜ್ ಸ್ಪೇಸ್, ವೈವಿಧ್ಯ ವಿನ್ಯಾಸದ ಒಳಾಂಗಣ, ಪುಶ್-ಬ್ಯಾಕ್ ಐಷಾರಾಮಿ ಸೀಟುಗಳು, ವೈ-ಫೈ ಸೌಲಭ್ಯ, ಸಿಸಿ ಕ್ಯಾಮರಾ ಕಣ್ಗಾವಲು ಮತ್ತು ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಯುಎಸ್ ಬಿ ಪೋರ್ಟ್ ಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಆರಾಮದಾಯಕ ಸವಾರಿಯನ್ನು ಒದಗಿಸುವ ಜತೆಗೆ ರಾಜ್ಯದ ವಾಯುಮಾಲಿನ್ಯ ತಡೆ ಗುರಿಗಳನ್ನು ಪೂರೈಸಲು ಸಹಕಾರಿಯಾಗಲಿದೆ.
“ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ವಿದ್ಯುದ್ದೀಕರಣದಲ್ಲಿ ಒಲೆಕ್ಟ್ರಾ ಮಹತ್ವದ ಪಾತ್ರ ವಹಿಸುತ್ತಿದೆ. ಈ 25 ಇಂಟರ್ ಸಿಟಿ ಎಲೆಕ್ಟ್ರಿಕ್ ಕೋಚ್ ಬಸ್‍ಗಳ ಮೂಲಕ ಕರ್ನಾಟಕವು ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಒಪ್ಪಂದದ ಅವಧಿಯಲ್ಲಿ ಇಂಗಾಲದ ಹೊರಸೂಸುವಿಕೆಯನ್ನು 65,000 ಟನ್‍ಗಳಷ್ಟು ಕಡಿಮೆ ಮಾಡಲು ಕಂಪನಿ ಸಹಾಯ ಮಾಡುತ್ತಿದೆ” ಎಂದು ಒಲೆಕ್ಟ್ರಾ ಗ್ರೀನ್ ಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಪ್ರದೀಪ್ ಸಂತಸ ಹಂಚಿಕೊಂಡಿದ್ದಾರೆ.
“ಎಲೆಕ್ಟ್ರಿಕ್ ವಾಹನಗಳ ಮೂಲಕ ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ಒದಗಿಸಲು ಒಲೆಕ್ಟ್ರಾ ಗ್ರೀನ್ ಟೆಕ್ ಬದ್ಧವಾಗಿದೆ ಮತ್ತು ಭಾರತದ ಹೆಚ್ಚಿನ ರಾಜ್ಯಗಳು ತಮ್ಮ ಹಸಿರು (ಮಾಲಿನ್ಯ ನಿಯಂತ್ರಣ) ಗುರಿ ಸಾಧಿಸಲು ಎಲೆಕ್ಟ್ರಿಕ್ ಬಸ್ ಗಳನ್ನು ಅಳವಡಿಸಿಕೊಳ್ಳುವಲ್ಲಿ ಕರ್ನಾಟಕವನ್ನು ಅನುಸರಿಸುತ್ತವೆ ಎಂದು ನಾವು ಭಾವಿಸುತ್ತೇವೆ” ಎಂದು ಪ್ರದೀಪ್ ಹೇಳಿದರು.
ಇ-ಬಸ್ಸುಗಳ ವ್ಯವಸ್ಥಿತ ಸಂಚಾರ ನಿರ್ವಹಿಸಲು ಇ-ಟ್ರಾನ್ಸ್ ದೃಢವಾದ ಮೂಲಸೌಕರ್ಯವನ್ನು ಸ್ಥಾಪಿಸಿದೆ, ಇದರಲ್ಲಿ ಕರ್ನಾಟಕದ ಏಳು ನಗರಗಳಾದ ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಮೂಲಸೌಕರ್ಯಗಳ ಸುಸ್ಥಾಪಿತ ಜಾಲವನ್ನು ಸ್ಥಾಪಿಸಿದೆ.
ಒಲೆಕ್ಟ್ರಾ ದೇಶದ ಒಂಬತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ 1,100 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳನ್ನು ನಿಯೋಜಿಸಿದೆ. ಈ ಇ-ಬಸ್ಸುಗಳು 10 ಕೋಟಿ ಕಿ.ಮೀ.ಗೂ ಹೆಚ್ಚು ಪ್ರಯಾಣಿಸಿದ್ದು, ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ. ಹೆಚ್ಚುವರಿಯಾಗಿ, ಒಲೆಕ್ಟ್ರಾ ಹೈದರಾಬಾದ್ ಹೊರವಲಯದಲ್ಲಿ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುತ್ತಿದೆ. ನಿರ್ಮಾಣ ಮತ್ತು ವಸ್ತು ನಿರ್ವಹಣಾ ವಲಯಕ್ಕೆ ಅನುಕೂಲವಾಗುವಂತೆ ಭಾರತದ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಅನ್ನು ಅಭಿವೃದ್ಧಿಪಡಿಸಿದೆ. ಇದಲ್ಲದೆ, ಒಲೆಕ್ಟ್ರಾದ ಹೈಡ್ರೋಜನ್ ಬಸ್ ಉತ್ಪಾದನೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.

0 Comments