ಬೆಂಗಳೂರು 26.02.2023: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳ ಮೂಲಕ ದಿವ್ಯಾಂಗರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
ಸಮರ್ಥನಂ ಟ್ರಸ್ಟ್ ನ 26 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶೇಷ ಚೇತನರು ಮಾನವ ಸಂಪನ್ಮೂಲದ ಅವಿಭಾಜ್ಯ ಅಂಗವಾಗಿದ್ದು, ಅವರನ್ನು ಸಮಾಜದ ಮುಖ್ಯ ವಾಹಿನಿಯೊಂದಿಗೆ ಸಂಪರ್ಕಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳ ದಕ್ಷ ನಾಯಕತ್ವದಲ್ಲಿ “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಮಂತ್ರವನ್ನು ಅರಿತುಕೊಂಡು, ಭಾರತ ಸರ್ಕಾರವು ಎಲ್ಲರನ್ನೂ ಒಳಗೊಳ್ಳುವ ಸಮಾಜದ ನಿರ್ಮಾಣಕ್ಕಾಗಿ ಮತ್ತು ದಿವ್ಯಾಂಗರ ಸಬಲೀಕರಣಕ್ಕಾಗಿ ಅಭೂತಪೂರ್ವ ಮತ್ತು ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ ಎಂದರು.
ಭಾರತ ಸರ್ಕಾರದ ವಿಕಲಚೇತನರ ಸಬಲೀಕರಣ ಇಲಾಖೆಯ ಎಡಿಐಪಿ ಯೋಜನೆಯಡಿ ಸ್ಮಾರ್ಟ್ ಫೋನ್, ಡಿಜಿಪ್ಲೇಯರ್ ಮತ್ತು ವಾಕಿಂಗ್ ಸ್ಟಿಕ್ ಮತ್ತು ಸ್ಮಾರ್ಟ್ ಕೇನ್ ಮುಂತಾದ ಪರಿಕರಗಳು ದೃಷ್ಟಿಹೀನರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಸಂಕೇತ ಭಾಷೆ ಮತ್ತು ತರಬೇತಿ ಕೇಂದ್ರದಿಂದ 10,000 ಕ್ಕೂ ಹೆಚ್ಚು ಸಂಕೇತ ಪದಗಳ ನಿಘಂಟನ್ನು ಸಿದ್ಧಪಡಿಸಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ರೂ.171.00 ಕೋಟಿ ವೆಚ್ಚದಲ್ಲಿ ಅಂಗವಿಕಲರ ಕ್ರೀಡಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಮಧ್ಯಪ್ರದೇಶದ ಸೆಹೋರ್‌ನಲ್ಲಿ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮರ್ಥನಂ ಸಂಸ್ಥೆಯು ಕಳೆದ 26 ವರ್ಷಗಳಲ್ಲಿ ಸಮಾಜದ ಉನ್ನತಿಗಾಗಿ ಮತ್ತು ದಿವ್ಯಾಂಗರ ಸಬಲೀಕರಣಕ್ಕಾಗಿ ಮಾಡಿದ ಕಾರ್ಯ ಖಂಡಿತವಾಗಿಯೂ ಶ್ಲಾಘನೀಯ. ಸರ್ಕಾರದ ಜೊತೆಗೆ ಕಾರ್ಪೊರೇಟ್ ಜಗತ್ತು ಮತ್ತು ಅನೇಕ ಸ್ವಯಂಸೇವಾ ಸಂಸ್ಥೆಗಳು ದಿವ್ಯಾಂಗಜನರ ಸಬಲೀಕರಣಕ್ಕಾಗಿ ಶ್ರಮಿಸುತ್ತಿವೆ. ಅದರಲ್ಲಿ ಸಮರ್ಥನಂ ಟ್ರಸ್ಟ್ ಕೂಡ ಒಂದಾಗಿದೆ ಎಂದು ಶ್ಲಾಘಿಸಿದರು.
ಸಮರ್ಥನಂ ಟ್ರಸ್ಟ್ ಮೂಲಕ ಅಂಗವಿಕಲರ ವಿದ್ಯಾಭ್ಯಾಸಕ್ಕೆ ಶಾಲೆಯ ನಿರ್ವಹಣೆ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಮರ್ಥನಂ ಯುಪಿಎಸ್‌ಸಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌ಗಾಗಿ ವಿಕಲಚೇತನರಿಗೆ ಉಚಿತ ವಸತಿ ತರಬೇತಿಯನ್ನು ಏರ್ಪಡಿಸುತ್ತಿದೆ. ಸಮರ್ಥನಂ ಕ್ರೀಡಾ ಕ್ಷೇತ್ರದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತದ ಅಂಧರ ಕ್ರಿಕೆಟ್ ತಂಡ 5 ವಿಶ್ವಕಪ್ ಗೆದ್ದು ವಿಶ್ವ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಭಾರತವು ಮೂರನೇ ಬಾರಿಗೆ T-20 ವಿಶ್ವಕಪ್ ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿತು. ಪ್ಯಾರಾಒಲಂಪಿಕ್ ನಲ್ಲಿಯೂ ಅನೇಕ ಪದಕಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಸಮರ್ಥನಂ ಅವರು ದಿವ್ಯಾಂಗರ ಜೊತೆಗೆ ಇತರ ಎಲ್ಲಾ ವರ್ಗಗಳಿಗೆ ಸಹ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳ ಮೂಲಕ ಅಂಗವಿಕಲ ಮಕ್ಕಳು ಮಾತ್ರವಲ್ಲದೆ ಸಾಮಾನ್ಯ ಮಕ್ಕಳೂ ಪ್ರಯೋಜನ ಪಡೆಯುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಈ ಟ್ರಸ್ಟ್ ಅನೇಕ ಸೇವಾ ಕಾರ್ಯಗಳನ್ನು ಮಾಡಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಊಟ ಮತ್ತು ಆಶಾ ಕಾರ್ಯಕರ್ತೆಯರಿಗೆ ಪಿಪಿ ಕಿಟ್‌ಗಳನ್ನು ಒದಗಿಸುವುದರ ಜೊತೆಗೆ, ಸಮರ್ಥನಂ ಬೆಂಗಳೂರಿನ 32 ವಾರ್ಡ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಅಭಿಯಾನವನ್ನು ನಡೆಸುವ ಮೂಲಕ ಸ್ವಚ್ಛ ಭಾರತ್ ಮಿಷನ್ ಅಭಿಯಾನವನ್ನು ಬೆಂಬಲಿಸುತ್ತಿದೆ ಎಂದು ಹೇಳಿದರು.
ನಂತರ ಸಮರ್ಥನ ಟ್ರಸ್ಟ್ ನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಕಾರ್ಯವೈಖರಿ ವೀಕ್ಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಮರ್ಥನಂ ಟ್ರಸ್ಟ್‌ನ ಸಂಸ್ಥಾಪಕರು ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಶ್ರೀ.ಮಹಾಂತೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
0 Comments