ಬೆಂಗಳೂರು, ಫೆಬ್ರವರಿ 22 (ಕರ್ನಾಟಕ ವಾರ್ತೆ): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಜನವರಿ-2023 ರ ಮಾಹೆಯಲ್ಲಿ ಒಟ್ಟು 16,226 ಟ್ರಿಪ್‍ಗಳನ್ನು ತಪಾಸಿಸಿ 3591 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು ರೂ. 6,77,190/- ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1521 ಪ್ರಕರಣಗಳನ್ನು ದಾಖಲಿಸಿರುತ್ತಾರೆ.
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 322 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 32,200/-ನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ.
ಒಟ್ಟಾರೆಯಾಗಿ ಜನವರಿ-2023 ರ ಮಾಹೆಯಲ್ಲಿ 3913 ಪ್ರಯಾಣಿಕರಿಂದ ಒಟ್ಟು ರೂ 7,09,390/- ದಂಡವನ್ನು ವಸೂಲಿ ಮಾಡಲಾಗಿದೆ.
ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವುದು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments