Ticker

6/recent/ticker-posts

Ad Code

Responsive Advertisement

ಸೂಕ್ತ ದೈಹಿಕ ಪರೀಕ್ಷಾ ವಿಧಾನ ಅದೇಕೆ ಮುಖ್ಯ ಎನ್ನುವ ಕುರಿತು ಡಾ ವಿನೋಧ್ ಕುಮಾರ್ ಅಭಿಪ್ರಾಯ

ಪರೀಕ್ಷಾ ವರದಿಗಳನ್ನು ಕಣ್ಮುಚ್ಚಿ ಅನುಸರಿಸುವ ಬದಲು ದೈಹಿಕ ಪರೀಕ್ಷೆಯನ್ನೇ ಅವಲಂಬಿಸುವ ಕಾಲ ಈಗ ಬಂದಿದೆ ಮತ್ತು ಇದೇ ಸರಿಯಾದ ಚಿಕಿತ್ಸಾ ವಿಧಾನ ಎಂದು ನಗರದ ಹಲವು ಉನ್ನತ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಅನೇಕ ವೈದ್ಯರುಗಳು ಸ್ಟೆತೊಸ್ಕೋಪ್‌ಗಳನ್ನು ಬಳಸುವುದಿಲ್ಲ ಅಥವಾ ದೈಹಿಕ ಪರೀಕ್ಷೆಯ ವಿಧಾನದ ಬದಲಿಗೆ ಅಲ್ಟ್ರಾಸೌಂಡ್/CT ಸ್ಕ್ಯಾನ್ ಮೇಲೆ ಏಕೆ ಅವಲಂಬಿತರಾಗಿದ್ದಾರೆ ಎಂದಾದರೂ ಯೋಚಿಸಿದ್ದೀರಾ? ಈಗೀಗ ಹೆಚ್ಚುತ್ತಿರುವ ಈ ಪ್ರವೃತ್ತಿ ನಿಜಕ್ಕೂ ಅಪಾಯಕಾರಿ ಎಂದು  ಮೂತ್ರಶಾಸ್ತ್ರಜ್ಞ  ಡಾ. ವಿನೋದ್ ಕುಮಾರ್ ಪಿ (ಸಮಾಲೋಚಕರು ಹಾಗೂ ಮೂತ್ರಶಾಸ್ತ್ರಜ್ಞ, NU ಆಸ್ಪತ್ರೆಗಳು) ಹೇಳಿದರು.

ಇತ್ತೀಚಿನ ಹಲವಾರು ಸಂಶೋಧನೆಗಳ ಪ್ರಕಾರ ಆಧುನಿಕ ವೈದ್ಯರಲ್ಲಿ ದೈಹಿಕ ಪರೀಕ್ಷೆ ಕೌಶಲ್ಯvu  ಗಮನಾರ್ಹವಾಗಿ ಕ್ಷೀಣಿಸುತ್ತಿದೆ. ದೈಹಿಕ ಪರೀಕ್ಷೆಯನ್ನು ಮಾಡದಿರುವುದು ರೋಗಿಯ ಸುರಕ್ಷತೆಗೆ ಅಡ್ಡಿಯಾಗಬಹುದು. ಏಕೆಂದರೆ ವೈದ್ಯರು ದೈಹಿಕ ಪರೀಕ್ಷೆ ಮಾಡದೇ ಇರುವುದರಿಂದ ತಪ್ಪಾಗಿ ರೋಗನಿರ್ಣಯ ಮಾಡಬಹುದು, ಇದರಿಂದಾಗಿ ಚಿಕಿತ್ಸೆಗಳ ಸಕಾಲಿಕ ಅನುಷ್ಠಾನದಲ್ಲಿ ವಿಳಂಬವಾಗುವ ಸಾಧ್ಯತೆ ಇರುತ್ತದೆ.

ಡಾ ವಿನೋದ್ ಮಾತನಾಡಿ, "ಒಂದು ಕಾಲದಲ್ಲಿ ಹೆಚ್ಚಿನ ವೈದ್ಯರು ಹೆಮ್ಮೆಯಿಂದ ಧರಿಸುತ್ತಿದ್ದ ಸ್ಟೆತೊಸ್ಕೋಪ್ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಕಾಣುಸುತ್ತಿಲ್ಲ. ವಾಸ್ತವವಾಗಿ, ಶಸ್ತ್ರಚಿಕಿತ್ಸಕರು ಮಾತ್ರ ದೈಹಿಕ ಪರೀಕ್ಷೆಗಾಗಿ ತಮ್ಮ ಕೈಗಳ ಬಳಕೆಯನ್ನು ಸೀಮಿತಗೊಳಿಸಿದ್ದಾರೆ. ದೈಹಿಕ ಪರೀಕ್ಷೆಯ ಬದಲು ಅಲ್ಟ್ರಾಸೌಂಡ್ ಮತ್ತು CT ಸ್ಕ್ಯಾನ್ ವರದಿಗಳನ್ನು ಅವಲಂಬಿಸಿದ್ದಾರೆ. ಈ ವಿಧಾನ ಯಾವಾಗಲೂ ವಿಶ್ವಾಸಾರ್ಹವಾಗಿರುವುದಿಲ್ಲ. ಈ ರೂಢಿಯಲ್ಲಿನ ಬದಲಾವಣೆಗೆ ಸಾಮಾನ್ಯ ಕಾರಣಗಳೆಂದರೆ ತಂತ್ರಜ್ಞಾನದಲ್ಲಿನ ಸುಧಾರಣೆಗಳು ಮತ್ತು ಸಮಯದ ಮಿತಿ. ಔಷಧಗಳನ್ನು 'ಲಾಭದಾಯಕ ವ್ಯಾಪಾರ'ವಾಗಿ ಕಾಣುವ ಜನರ ದೃಷ್ಟಿಕೋನದ ಕಾರಣ ವೈದ್ಯರೂ ಸಹ ರೋಗನಿರ್ಣಯದ ತಪಾಸಣೆಯ ವಿಧಾನವನ್ನು ಬದಲಾಯಿಸಿಕೊಂಡಿದ್ದಾರೆ. ವೈದ್ಯಕೀಯ ಕಾನೂನು ತೊಡಕುಗಳ ಕಾರಣದಿಂದ ಪರಿಣಿತ ವೈದ್ಯರೂ ಸಹ ಪೇಪರ್‌ ಮೇಲೆ ಸಹಿ ಹಾಕುವ ಮೊದಲು ಎರಡು ಬಾರಿ ಯೋಚಿಸುತ್ತಾರೆ" ಎಂದರು.

ತಮ್ಮ ನಿಜ ಜೀವನದ ಉದಾಹರಣೆಗಳನ್ನು ಉಲ್ಲೇಖಿಸಿ ಮಾತನಾಡಿದ ಡಾ. ವಿನೋದ್ "ಮಧ್ಯವಯಸ್ಸಿನ ವಿವಾಹಿತ ಮಹಿಳೆಯೊಬ್ಬರು ಮರುಕಳಿಸುವ ಮೂತ್ರನಾಳದ ಸೋಂಕು (UTI) ಹೊಂದಿದ್ದರು. ಕಳೆದ ಎರಡು ವರ್ಷಗಳಿಂದ ಅವರು ಹೊಟ್ಟೆಯ ಕೆಳಭಾಗದ ನೋವು ಹಾಗೂ ಲಘು ಉರಿಯುವಿಕೆಯ ಸಮಸ್ಯೆಯೊಂದಿಗೆ  ನನ್ನನ್ನು ಸಂಪರ್ಕಿಸಿದರು. ಹಿಂದೆ ಈ ಸಮಸ್ಯೆಗೆ ಅವರು ತಮ್ಮ ಸ್ತ್ರೀರೋಗತಜ್ಞರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಪ್ರತಿ ಬಾರಿಯೂ ಸುಮಾರು ಐದರಿಂದ ಏಳು ದಿನಗಳ ಕಾಲ ವಿವಿಧ ಆ್ಯಂಟಿಬಯೋಟಿಕ್‌ಗಳನ್ನು ಪಡೆದರೂ ಸೋಂಕು ಪುನರಾರಂಭವಾಗುತ್ತಿತ್ತು. ಅವರಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಯಿತಾದರೂ ವೈದ್ಯಕೀಯ ವರದಿ ಸಾಮಾನ್ಯವಾಗಿತ್ತು. ವಾಸ್ತವವಾಗಿ,  ಸೋಂಕು  ತಪಾಸಣೆಗಾಗಿ ನಡೆಸಲಾದ ಯೂರಿನ್‌ ಕಲ್ಚರ್‌ ರಿಪೋರ್ಟ್‌ ಸಹ ಹೆಚ್ಚಿನ ಸಮಯ ನೆಗೆಟಿವ್ ಎಂದೇ ತೋರಿಸಿತ್ತು.

ಅಂತಿಮವಾಗಿ, ಅವರು ನಮ್ಮ ಬಳಿಗೆ ಪರಿಣಿತ ಅಭಿಪ್ರಾಯ ಪಡೆದುಕೊಳ್ಲಲು ಬಂದರು. ಆಕೆಯ ಹಿಂದಿನ ಸಮಾಲೋಚನೆಗಳ ಸಮಯದಲ್ಲಿ ಅವರು ಒಮ್ಮೆಯೂ ಯಾವುದೇ ರೀತಿಯ ದೈಹಿಕ ಪರೀಕ್ಷೆಗೆ ಒಳಗಾಗಿರಲಿಲ್ಲ ಎನ್ನುವುದನ್ನು ತಿಳಿದು ನನಗೆ ತೀವ್ರ ಆಶ್ಚರ್ಯವಾಯಿತು. ನಾನು ನನ್ನ ಸಹೋದ್ಯೋಗಿ-ಸ್ತ್ರೀರೋಗತಜ್ಞರನ್ನು ಚರ್ಚಿಸಿ, ಸರಿಯಾದ ಸ್ಪೆಕ್ಯುಲಮ್ ಪರೀಕ್ಷೆಯ ನಂತರ  ಅವರಿಗೆ ಪಿಐಡಿ (ಪೆಲ್ವಿಕ್ ಇನ್‌ಫ್ಲಮೇಟರಿ ಡಿಸೀಸ್ - ಗರ್ಭಕೋಶದ  ಸೋಂಕು) ಇದೆ ಎಂದು ಪರೀಕ್ಷಿಸಿ ತೀರ್ಮಾನಿಸಿದೆವು. ನಂತರ ಆಕೆಗೆ ಸೂಕ್ತ ಚಿಕಿತ್ಸೆ ನೀಡಲಾಯಿತು ಮತ್ತು ಅವರ ಸಮಸ್ಯೆ ಪುನಃ ಮರುಕಳಿಸಲಿಲ್ಲ.

ಇನ್ನೊಂದು ಉದಾಹರಣೆಯೆಂದರೆ, 55 ವರ್ಷದ ಪುರುಷ ರೋಗಿಯೊಬ್ಬರು ಮೂತ್ರ ವಿಸರ್ಜಿಸುವಾಗ ತೀವ್ರವಾದ ಉರಿಯುವಿಕೆ ಸಮಸ್ಯೆ ಹೊಂದಿದ್ದರು. ಮೂತ್ರ ವಿಸರ್ಜನೆಯ ನಂತರ ನೋವು ಸಹ ಅವರನ್ನು ಬಾಧಿಸುತ್ತಿತ್ತು. ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಅನುಭವಿಸುತ್ತಿದ್ದ ಅವರು ಈ ಮೊದಲು ಇಬ್ಬರು ಮೂತ್ರಶಾಸ್ತ್ರಜ್ಞರನ್ನು ಭೇಟಿಯಾಗಿದ್ದರು, ಅವರಿಗೆ ಮಾಡಿಸಲಾಗಿದ್ದ ಎಲ್ಲಾ ರೀತಿಯ ಪರೀಕ್ಷೆಗಳಲ್ಲೂ ನಾರ್ಮಲ್‌ ರಿಪೋರ್ಟ್‌ ಬಂದಿತ್ತು. ಪ್ರಾಸ್ಟೇಟ್ ಸಮಸ್ಯೆಗಳಿಗೆ (ಅವರದ್ದು ಪ್ರಾಸ್ಟೇಟ್ ಸಮಸ್ಯೆ ಕಂಡುಬರುವ ಸಾಮಾನ್ಯ ವಯಸ್ಸಾಗಿದ್ದ ಕಾರಣ) ಔಷಧಗಳನ್ನು ತೆಗೆದುಕೊಳ್ಳುವಂತೆ ಅವರಿಗೆ ಸಲಹೆ ನೀಡಲಾಗಿತ್ತು. ಆದರೂ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಅವರು ಮಸಾಲೆಯುಕ್ತ ಆಹಾರ ಮತ್ತು ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸಿದ್ದರು, ಏಕೆಂದರೆ ಈ ಹವ್ಯಾಸದ ಕಾರಣದಿಂದಲೇ   ಮೂತ್ರ ಉರಿಯುತ್ತಿದೆ ಎಂದು ಅವರು ಭಾವಿಸಿದ್ದರು.

ಅವರು ನನ್ನ ಬಳಿಗೆ ಬಂದಾಗ, ನಾನು ಕೂಲಂಕೂಷವಾಗಿ ಅವರ ದೈಹಿಕ ಪರೀಕ್ಷೆ ನಡೆಸಿದೆ. ಅವರು ವಾಸ್ತವದಲ್ಲಿ ಗಂಭೀರ ಫಿಮೊಸಿಸ್ ಸಮಸ್ಯೆ ಹೊಂದಿದ್ದರು (ಅಂದರೆ ಶಿಶ್ನದ ಬಿಗಿಯಾದ ಮುಂದೊಗಲು) ಇದು ಅವರ ಸಮಸ್ಯೆಯ ನಿಜವಾದ ಕಾರಣವಾಗಿತ್ತು. ಇದೊಂದು  ಅತ್ಯಂತ ಕ್ಷುಲ್ಲಕ ಹಾಗೂ ಸುಲಭವಾಗಿ ನಿವಾರಿಸಬಹುದಾದ ಸಮಸ್ಯೆಯಾಗಿತ್ತು. ಸರಳವಾದ ದೈಹಿಕ ಪರೀಕ್ಷೆ ನಡೆಸಿ ರೋಗಿಯ ಚಿಂತೆ ಮತ್ತು ಆತಂಕವನ್ನು ತಪ್ಪಿಸಬಹುದಾಗಿತ್ತು. ಸೂಕ್ತ ದೈಹಿಕ ಪರೀಕ್ಷೆ ನಡೆಸಿದ್ದರೇ ರೋಗಿಯ ಸಾಕಷ್ಟು ಸಮಯವನ್ನು ಉಳಿಸಬಹುದು. ಆ ರೋಗಿಯು ಈಗ ಸುನ್ನತಿಗೆ ಒಳಗಾಗಿದ್ದಾರೆ (ಅಂದರೆ ಬಿಗಿಯಾದ ಮುಂದೊಗಲ ಚರ್ಮವನ್ನು ತೆಗೆಯುವುದು) ಹಾಗೂ ಈಗ ಮೊದಲಿನ ಸಮಸ್ಯೆಗಳಿಂದ ಮುಕ್ತರಾಗಿದ್ದಾರೆ.

ಡಾ ವಿನೋದ್ ಮತ್ತೆ ಮುಂದುವರದು ಮಾತನಾಡಿ, " ಹಿಂದಿನ ಅನೇಕ ಅಧ್ಯಯನಗಳಲ್ಲಿ ದೈಹಿಕ ಪರೀಕ್ಷೆಯಲ್ಲಿನ ನ್ಯೂನತೆಗಳನ್ನು ದಾಖಲಿಸಲಾಗಿದೆ. ರೋಗ ನಿರ್ಣಯಿಸುವ ಕುತೂಹಲ ಕಡಿಮೆಯಾದ ಕಾರಣ ಮತ್ತು ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಹೀಗಾಗುತ್ತಿದೆ. ಜೊತೆಗೆ ಅನಗತ್ಯ ತಪಾಸಣೆಗಳು ಹಾನಿಕಾರಕವಾಗಿ ಪರಿಣಮಿಸುತ್ತಿದೆ. ಅತಿಯಾಗಿ ಆರೋಗ್ಯ ಸಂಪನ್ಮೂಲಗಳನ್ನು ಬಳಸುತ್ತಿರುವ ಕಾಲದಲ್ಲಿ ನಾವಿದ್ದೇವೆ. ಇದರಿಂದ ಅನಗತ್ಯ ವೈದ್ಯಕೀಯ ಚಿಕಿತ್ಸಾ ವೆಚ್ಚಗಳು ಹಚ್ಚಾಗುತ್ತಿವೆ. ಕಳಪೆ ದೈಹಿಕ ಪರೀಕ್ಷೆಗಳಿಂದ ರೋಗಿಗಳ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಂತಾಗುತ್ತದೆ ಹಾಗೂ ಹೆಚ್ಚುವರಿ ವೆಚ್ಚಗಳಿಗೂ ಕಾರಣವಾಗುತ್ತದೆ.  

ಆಧುನಿಕ ವಿಧಾನದಲ್ಲಿ ವೈಜ್ಞಾನಿಕ ರೋಗನಿರ್ಣಯ ಕ್ರಮ, ತಂತ್ರಜ್ಞಾನದ ಪ್ರಚಾರ ಹೆಚ್ಚಾಗುತ್ತಿದೆ. ರೋಗಿಯ ಹಾಸಿಗೆಯ ಪಕ್ಕದಲ್ಲಿ ನಿಂತು ಪರಿಣಿತ ವೈದ್ಯರು ಅರಿವು ಮೂಡಿಸುವ ವಿಧಾನ ಕಡಿಮೆಯಾಗುತ್ತಿದೆ. ಮೊದಲಿನಂತೆ ಆಸಕ್ತಿ ವಹಿಸಿ ತಪಾಸಣೆ ಮಾಡುವ ಪ್ರಕ್ರಿಯೆ ಕಡಿಮೆಯಾಗುತ್ತಿದೆ. ಸಮಯದ ಅಭಾವ ಹಾಗೂ ಕೆಲಸದ ಹೊರೆಯಿಂದಾಗಿ ದೈಹಿಕ ಪರೀಕ್ಷೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ದೈಹಿಕ ಪರೀಕ್ಷೆಯ ಸಾಮರ್ಥ್ಯ ಕುಂಠಿತಗೊಳ್ಳಲು ಸಹ ಇದೇ ಕಾರಣ. ಸಂಪೂರ್ಣ ದೈಹಿಕ ಪರೀಕ್ಷೆ ನಡೆಸುವುದು ಖಂಡಿತವಾಗಿಯೂ ಉತ್ತಮ ವಿಧಾನ; ಇದಾಗದ ಹೊರತು ಸಮರ್ಪಕ ರೋಗನಿರ್ಣಯ ಸಾಧ್ಯವಿಲ್ಲ. ದೈಹಿಕ ಪರೀಕ್ಷೆ ವಿಧಾನ ನಮಗೆ ನಿರ್ದಿಷ್ಟವಾದ ರೋಗನಿರ್ಣಯದ ಕಡೆಗೆ ಮಾರ್ಗದರ್ಶನ ಮಾಡುತ್ತದೆ. ರೋಗಿಯ ಸಂಪೂರ್ಣ ವೈದ್ಯಕೀಯ ಇತಿಹಾಸ ಮತ್ತು ದೈಹಿಕ ಪರೀಕ್ಷೆಯ ನಂತರವೇ ತಾರ್ಕಿಕ ನಿರ್ಧಾರಕ್ಕೆ ಬರಲು ಸಾಧ್ಯ.  ಈ ವಿಧಾನದ ಸಂಭಾವ್ಯ ಪ್ರಯೋಜನಗಳೆಂದರೆ ಉತ್ತಮ ವೈದ್ಯ-ರೋಗಿ ಸಂಬಂಧ, ಸುಧಾರಿತ ರೋಗಿಗಳ ಸುರಕ್ಷತೆ, ಕಡಿಮೆ ರೋಗನಿರ್ಣಯ ದೋಷಗಳು ಮತ್ತು ಕಡಿಮೆ ವೆಚ್ಚ. ಈ ಸಣ್ಣ ಆಲೋಚನೆ ಯುವ ಉದಯೋನ್ಮುಖ ವೈದ್ಯರಲ್ಲಿ ಕ್ಲಿನಿಕಲ್ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುವ ಕ್ಷಮತೆ ಉಂಟುಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಈ ಅಭ್ಯಾಸ ಅವರ ವೃತ್ತಿಜೀವನದ ಕಲಿಕೆಯ ಹಂತದಲ್ಲಿ ಪ್ರಾರಂಭವಾಗಬೇಕು ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ.

Post a Comment

0 Comments

Ad Code

Responsive Advertisement